ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರ (NDA Government) ದ ಕೊನೆಯ ಪೂರ್ಣ ಪ್ರಮಾಣದ ಬಜೆಟ್ (Union Budget 2023) ಗೆ ಕೌಂಟ್‌ಡೌನ್ ಶುರುವಾಗಿದೆ. ಯಾವ ಕೇತ್ರಕ್ಕೆ, ಯಾರಿಗೆ, ಯಾವ ವಲಯಕ್ಕೆ ಬಂಪರ್ ಹೊಡೆಯುತ್ತೆ ಎನ್ನುವ ನೂರಾರು ನಿರೀಕ್ಷೆಗಳು ಈಗಾಗ್ಲೇ ಹುಟ್ಟಿಕೊಂಡಿವೆ. ಅದರಲ್ಲೂ ಮುಂದಿನ ವರ್ಷ ಲೋಕಸಭೆ ಚುನಾವಣೆ (Lok Sabha Election) ಇರುವುದರಿಂದ ಈ ಭಾರಿ ಬಜೆಟ್ ಮತ್ತಷ್ಟು ವಿಶೇಷವಾಗಿದೆ. ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಜನಕ್ಕೆ ಏನೆಲ್ಲಾ ಪ್ರಯೋಜನಗಳನ್ನು ನೀಡಬಹುದು ಎನ್ನುವ ಲೆಕ್ಕಾಚಾರ ಈಗ ಪ್ರತಿವಲಯದಲ್ಲೂ ಆರಂಭವಾಗಿದೆ.
ಈ ಲೆಕ್ಕಾಚಾರ, ಕೂತೂಹಲ, ಅಂದಾಜುಗಳಿಗೆ ತೆರೆ ಬೀಳುವ ಸಮಯ ಇನ್ನೇನೂ ಬಂದೇ ಬಿಡ್ತು. ಫೆಬ್ರವರಿ 1ರಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆ ಮಾಡಲಿದ್ದಾರೆ. ಬಜೆಟ್ ಮೇಲೆ ಬೆಟ್ಟದಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡವರಿಗೆ ಬಜೆಟ್ ಮಂಡನೆ ಸಮಯ, ಎಲ್ಲಿ ವೀಕ್ಷಿಸಬಹುದು, ಜನರ ನಿರೀಕ್ಷೆಗಳೇನು ಎನ್ನುವ ಹೆಚ್ಚಿನ ಮಾಹಿತಿಯನ್ನು ನಾವಿಲ್ಲಿ ನೀಡುತ್ತಿದ್ದೇವೆ.
ಬಜೆಟ್ ಮಂಡನೆ ದಿನಾಂಕ ಮತ್ತು ಸಮಯ
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2023ರ ಕೇಂದ್ರ ಬಜೆಟ್ ಅನ್ನು ಫೆಬ್ರವರಿ 1 ರಂದು (ಬುಧವಾರ) ಬೆಳಿಗ್ಗೆ 11 ಗಂಟೆಗೆ ಮಂಡಿಸಲಿದ್ದಾರೆ. ಇದು ಏಪ್ರಿಲ್ 1 ರಿಂದ ಪ್ರಾರಂಭವಾಗುವ ಆರ್ಥಿಕ ವರ್ಷಕ್ಕೆ ಸೀತಾರಾಮನ್ ಅವರ ಐದನೇ ನೇರ ಬಜೆಟ್ ಆಗಿರುತ್ತದೆ. ಹಿಂದಿನ ಎರಡರಂತೆ, 2023-24 ರ ಕೇಂದ್ರ ಬಜೆಟ್ ಅನ್ನು ಸಹ ಕಾಗದರಹಿತ ರೂಪದಲ್ಲಿ ವಿತರಿಸಲಾಗುತ್ತದೆ. 2024ರ ಲೋಕಸಭೆ ಚುನಾವಣೆಗೆ ಮುನ್ನ ಮೋದಿ ಸರ್ಕಾರದ ಕೊನೆಯ ಪೂರ್ಣ ಬಜೆಟ್ ಇದಾಗಿರುತ್ತದೆ.
ಬಜೆಟ್ 2023 ಲೈವ್ ಅನ್ನು ಎಲ್ಲಿ ವೀಕ್ಷಣೆ ಮಾಡಬಹುದು?
2023-2024 ರ ಆರ್ಥಿಕ ವರ್ಷದ ನಿರ್ಮಲಾ ಸೀತಾರಾಮನ್ ಅವರ ಬಜೆಟ್‌ನ ಲೋಕಸಭಾ ಟಿವಿ, ರಾಜ್ಯಸಭಾ ಟಿವಿ, ದೂರದರ್ಶನ (ಡಿಡಿ ನ್ಯೂಸ್) ಹಾಗೂ ಇತರ ಸುದ್ದಿ ವಾಹಿನಿಗಳಲ್ಲಿ ವೀಕ್ಷಿಸಬಹುದಾಗಿದೆ. ಸಂಸದ್ ಟಿವಿ ಮತ್ತು ಸಂಸತ್ನ ಟ್ವಿಟರ್ ಖಾತೆಗಳಲ್ಲಿಯೂ ಬಜೆಟ್ ಮಂಡನೆಯ ನೇರ ಪ್ರಸಾರ ದೊರೆಯಲಿದೆ. ದೂರದರ್ಶನ ಮತ್ತು ಲೋಕಸಭೆಯ ಅಧಿಕೃತ ಯೂಟ್ಯೂಬ್ ಚಾನೆಲ್ಗಳಲ್ಲೂ ಬಜೆಟ್ ನೇರ ಪ್ರಸಾರ ಲಭ್ಯವಾಗಲಿದೆ. ಪತ್ರಿಕಾ ಮಾಹಿತಿ ಬ್ಯೂರೋ (PIB) ಕೂಡ ತಮ್ಮ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಬಜೆಟ್ 2023 ಅನ್ನು ಸ್ಟ್ರೀಮ್ ಮಾಡುತ್ತದೆ. ಜನರು ಇತರ ಸುದ್ದಿ ಚಾನಲ್‌ಗಳು ಮತ್ತು ಯೂಟ್ಯೂಬ್‌ನಲ್ಲಿಯೂ ಕೇಂದ್ರ ಬಜೆಟ್ ಅನ್ನು ವೀಕ್ಷಿಸಬಹುದು.
ಯೂನಿಯನ್ ಬಜೆಟ್ ಮೊಬೈಲ್ ಅಪ್ಲಿಕೇಶನ್
ನಿರ್ಮಲಾ ಸೀತಾರಾಮನ್ ಅವರ ಬಜೆಟ್ ಭಾಷಣದ ನಂತರ ಸಂಪೂರ್ಣ ಬಜೆಟ್ ವಿವರವನ್ನು 'ಯೂನಿಯನ್ ಬಜೆಟ್ ಮೊಬೈಲ್ ಆಪ್' ( Union Budget Mobile App) ಮೂಲಕ ನೋಡಬಹುದಾಗಿದೆ. ಭಾರತದ ಪ್ರತಿಯೊಬ್ಬರು ಅತ್ಯಂತ ಸರಳವಾಗಿ ಬಜೆಟ್‌ನ ಸಂಪೂರ್ಣ ವಿವರಗಳನ್ನು ನೋಡಬಹುದಾಗಿದೆ. ಇನ್ನು ಈ ಬಜೆಟ್ಗೆ ಸಂಬಂಧಿಸಿದ ಅಪ್ಲಿಕೇಶನ್ ಆಂಡ್ರಾಯ್ಡ್ ಮತ್ತು ಐಓಎಸ್ ಸಾಧನಗಳೆರಡರಲ್ಲೂ ಕಾರ್ಯನಿರ್ವಹಿಸುತ್ತದೆ. ಆದ್ದರಿಂದ ತಮಗೆ ಅನುಕೂಲವಾಗುವಂತಹ ಆ್ಯಪ್ ಸ್ಟೋರ್ಗಳಲ್ಲಿ ಡೌನ್‌ಲೋಡ್ ಮಾಡಿಟ್ಟುಕೊಳ್ಳಬಹುದು.
ಈ ಅಪ್ಲಿಕೇಶನ್ ದ್ವಿಭಾಷೆ (ಇಂಗ್ಲಿಷ್ ಮತ್ತು ಹಿಂದಿ) ಯಲ್ಲಿ ಲಭ್ಯವಿರುತ್ತದೆ. ಇದನ್ನು ಯೂನಿಯನ್ ಬಜೆಟ್ ವೆಬ್ ಪೋರ್ಟಲ್ www.indiabudget.gov.in ನಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು.
ಬಜೆಟ್ ದಾಖಲೆಗಳನ್ನು ಪ್ರವೇಶಿಸುವುದು ಹೇಗೆ?
ಫೆಬ್ರವರಿ 1, 2023 ರಂದು ಸಂಸತ್ತಿನಲ್ಲಿ ಹಣಕಾಸು ಸಚಿವರು ಬಜೆಟ್ ಭಾಷಣವನ್ನು ಪೂರ್ಣಗೊಳಿಸಿದ ನಂತರ ಬಜೆಟ್ ದಾಖಲೆಗಳು ಅಪ್ಲಿಕೇಶನ್‌ನಲ್ಲಿ ಲಭ್ಯವಿರುತ್ತವೆ.
ಮಧ್ಯಮ ವರ್ಗದವರು, ರೈಲ್ವೆ, ಇಂಧನ, ನೌಕರರು, ಶಿಕ್ಷಣ, ಋಯತ ವಲಯ ಹೀಗೆ ಎಲ್ಲಾ ಕ್ಷೇತ್ರಗಳೂ ಮೋದಿ ಎರಡನೇ ಅವಧಿಯ ಸರ್ಕಾರದ ಬಜೆಟ್ ಮೇಲೆ ನಿರೀಕ್ಷೆ ಇಟ್ಟುಕೊಂಡಿದ್ದು, ಇನ್ನೂ ಕೆಲ ದಿನಗಳಲ್ಲಿಯೇ ಉತ್ತರ ಸಿಗಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ