ಸಿರಿಧಾನ್ಯಗಳು ಸಾಕಷ್ಟು ಆರೋಗ್ಯ (Health) ಪ್ರಯೋಜನಗಳನ್ನು ಹೊಂದಿವೆ. ಇತ್ತೀಚಿಗೆ ಅಪಾರ ಸಂಖ್ಯೆಯ ಪ್ರಜ್ಞಾವಂತರು ಸಿರಿಧಾನ್ಯಗಳ, ರಾಗಿಯ ಪ್ರಯೋಜನ ತಿಳಿದು ಅವುಗಳನ್ನು ಹೆಚ್ಚು ಹೆಚ್ಚು ಉಪಯೋಗಿಸುತ್ತಿದ್ದಾರೆ. ಅಲ್ಲದೇ ಈ ಬಾರಿಯ ಬಜೆಟ್‌ನಲ್ಲಿ ಕೂಡ ಸಿರಿಧಾನ್ಯಗಳ ಉತ್ತೇಜನಕ್ಕೆ ಸಾಕಷ್ಟು ಯೋಜನೆಗಳನ್ನು ಘೋಷಿಸಲಾಗಿದೆ. ಈ ಮಧ್ಯೆ ಬುಡಕಟ್ಟು ಸಮುದಾಯದ ಮಹಿಳೆಯೊಬ್ಬಳು (Women) ಅಪರೂಪದ ಸಿರಿಧಾನ್ಯ ತಳಿಗಳನ್ನು ಸಂರಕ್ಷಿಸುವ ಕೆಲಸ ಮಾಡುತ್ತಿದ್ದಾರೆ. ಅದರ ಆರೋಗ್ಯ ಪ್ರಯೋಜನಗಳ (Benifits) ಬಗ್ಗೆ ತನ್ನ ಅಜ್ಜಿಯಿಂದ ಪಾಠಗಳನ್ನು ಕಲಿತ ಈ ಮಹಿಳೆ ಕಣ್ಮರೆಯಾಗುತ್ತಿರುವ ಸಿರಿಧಾನ್ಯಗಳ ಅಪರೂಪದ ತಳಿಗಳ ಬೀಜಗಳನ್ನು (Seeds) ಸಂಗ್ರಹಿಸಲು ತನ್ನ ಜೀವನವನ್ನೇ ಮುಡಿಪಾಗಿಟ್ಟಿದ್ದಾರೆ. 150ಕ್ಕೂ ಹೆಚ್ಚು ಸಿರಿಧಾನ್ಯ ಬೀಜಗಳನ್ನು ಸಂಗ್ರಹಿಸಿ ಬೀಜ ಬ್ಯಾಂಕ್ ಆಗಿ ಪರಿವರ್ತನೆ ಮಾಡಿದ್ದಾರೆ.
ಅಂದಹಾಗೆ ಆಕೆಯ ಹೆಸರು ಲಹರಿಬಾಯಿ ಅಂತ. ಆಕೆ ಮಧ್ಯಪ್ರದೇಶದ ಬೈಗಾ ಬುಡಕಟ್ಟು ಸಮುದಾಯಕ್ಕೆ ಸೇರಿದವರು. ಈ ಬುಡಕಟ್ಟಿನ ಜನರು ತಮ್ಮ ಪರಿಸರ ಮತ್ತು ಅದರ ಜೀವವೈವಿಧ್ಯತೆಯ ಬಗ್ಗೆ ಆಳವಾದ ಜ್ಞಾನವನ್ನು ಹೊಂದಿದ್ದಾರೆ.
ಅವರು ಮೌಖಿಕ ಸಂಪ್ರದಾಯಗಳ ಮೂಲಕ ಆ ಜ್ಞಾನವನ್ನು ಒಂದು ಪೀಳಿಗೆಯಿಂದ ಮುಂದಿನ ಪೀಳಿಗೆಗೆ ರವಾನಿಸುತ್ತಾರೆ ಎನ್ನಲಾಗುತ್ತದೆ.
18ನೇ ವಯಸ್ಸಿನಿಂದ ಮಿಲ್ಲೆಟ್ ಬೀಜಗಳ ಸಂಗ್ರಹಣೆ
ಮಧ್ಯಪ್ರದೇಶದ ದಿಂಡೋರಿ ಜಿಲ್ಲೆಯ ಸಿಲ್ಪಾಡಿ ಎಂಬ ದೂರದ ಹಳ್ಳಿಯ ಲಹರಿ ಬಾಯಿ ತನ್ನ ಅಜ್ಜಿಯ ಮಾತುಗಳಿಂದ ಪ್ರೇರಿತರಾಗಿ 18 ನೇ ವಯಸ್ಸಿನಲ್ಲಿ ಸಿರಿಧಾನ್ಯಗಳ ಬೀಜಗಳನ್ನು ಸಂಗ್ರಹಿಸಲು ಪ್ರಾರಂಭಿಸಿದರು. ಅವರು ಈಗಲೂ ಹತ್ತಿರದ ಹಳ್ಳಿಗಳಲ್ಲಿ ಅಲೆದಾಡಿ, ಕಾಡುಗಳು ಮತ್ತು ಜಮೀನುಗಳಿಂದ ಬೀಜಗಳನ್ನು ಸಂಗ್ರಹಿಸುತ್ತಾರೆ.
"ಬೀಜಗಳನ್ನು ಸಂಗ್ರಹಿಸುವುದು ನನಗೆ ಸಂತೋಷವನ್ನು ನೀಡುತ್ತದೆ. ಮೊದಲೆಲ್ಲ ಈ ಬೀಜಗಳನ್ನು ಯಾಕೆ ಸಂಗ್ರಹಿಸುತ್ತಿದ್ದೀಯಾ ಅಂತ ಜನರು ನನ್ನನ್ನು ಅಪಹಾಸ್ಯ ಮಾಡುತ್ತಿದ್ದರು.
ಇದನ್ನೂ ಓದಿ: Electric Scooters: ಅತೀ ವೇಗದ ಎಲೆಕ್ಟ್ರಿಕ್ ಸ್ಕೂಟರ್ಗಳಿವು, ಗಂಟೆಗೆ 115 ಕಿಲೋ ಮೀಟರ್ ಹೋಗಬಹುದು!
ಹಾಗಾಗಿ ಕೆಲವೊಮ್ಮೆ, ಯಾರೂ ಇಲ್ಲದಿದ್ದಾಗ ನಾನು ಬೀಜಗಳನ್ನು ಹುಡುಕಲು ಹೋಗುತ್ತಿದ್ದೆ. ಅಲ್ಲದೇ ನನ್ನ ಸಮುದಾಯದ ಹಿರಿಯ ಜನರು ಸ್ಥಳೀಯ ಬೀಜಗಳನ್ನು ಗುರುತಿಸಲು ನನಗೆ ಸಹಾಯ ಮಾಡುತ್ತಾರೆ” ಎಂದು ಲಹರಿ ಹೇಳುತ್ತಾರೆ.
27 ವರ್ಷ ವಯಸ್ಸಿನ ಲಹರಿಬಾಯಿ ಕಳೆದ ಒಂದು ದಶಕದಿಂದ ಈ ಕೆಲಸ ಮಾಡುತ್ತಿದ್ದು ಕೊಡೋ, ಕುಟ್ಕಿ, ಸಿಕಿಯಾ, ಸಲ್ಹಾರ್, ಸಾವಾ ಮತ್ತು ಚೆನಾ ಸೇರಿದಂತೆ 150 ಕ್ಕೂ ಹೆಚ್ಚು ಅಪರೂಪದ ಮಿಲ್ಲೆಟ್ ಬೀಜಗಳನ್ನು ಸಂಗ್ರಹಿಸಿದ್ದಾರೆ. “ಈ ಸ್ಥಳೀಯ ಬೀಜಗಳು ನಶಿಸಿ ಹೋಗುತ್ತಿವೆ. ನಾನು ಅವುಗಳನ್ನು ಮತ್ತೆ ಬಳಕೆಗೆ ತರಲು ಬಯಸುತ್ತೇನೆ” ಎಂಬುದಾಗಿ ಲಹರಿ ಅವರು ಹೇಳುತ್ತಾರೆ.
ಈ ರಾಗಿ ಬೀಜಗಳನ್ನು ರೈತರಿಗೆ ವಿತರಿಸಲಾಗುತ್ತದೆ. ಪ್ರತಿಯಾಗಿ, ಅವರು ಬೆಳೆ ಕೊಯ್ಲು ಮಾಡಿದ ನಂತರ ಉತ್ಪನ್ನದ ಸ್ವಲ್ಪ ಭಾಗವನ್ನು ಲಹರಿಗೆ ಉಡುಗೊರೆಯಾಗಿ ನೀಡುತ್ತಾರೆ. ಅಂದರೆ ಆಕೆ ನೀಡುವ ಒಂದು ಕಿಲೋ ಬೀಜಗಳಿಗೆ, ರೈತರು ಅದೇ ತಳಿಯ 1.5 ಕೆಜಿ ಬೀಜಗಳನ್ನು ಆಕೆಗೆ ನೀಡುತ್ತಾರೆ.
“ತಾನು ಹಣ ಸಂಪಾದಿಸಲು ಇದನ್ನು ಮಾಡುತ್ತಿಲ್ಲ ಬದಲಾಗಿ ಹೆಚ್ಚು ಬೀಜಗಳನ್ನು ಸಂಗ್ರಹಿಸುವುದು ನನ್ನ ಉದ್ದೇಶ” ಎಂಬುದಾಗಿ ಅವರು ಹೇಳುತ್ತಾರೆ.
ಲಹರಿ ಈ ಬೀಜಗಳನ್ನು ಕೊಡೋ ಮತ್ತು ಕುಟ್ಕಿ ಬೀಜಗಳಿಂದ ಪೇಜ್ (ಒಂದು ರೀತಿಯ ಪಾನೀಯ) ತಯಾರಿಸಲು ಸಹ ಬಳಸುತ್ತಾರೆ. ತಕೊಡೆ ಕಿ ಭಜಿ (ಕಾಡಿನ ತರಕಾರಿ) ಜೊತೆಗೆ ಆ ಪಾನೀಯವನ್ನು ಕುಡಿಯುತ್ತಾರೆ.
ಸಿರಿಧಾನ್ಯಗಳ ಆರೋಗ್ಯ ಪ್ರಯೋಜನಗಳು ಅನೇಕ
ಈ ಸಿರಿಧಾನ್ಯಗಳು ಪೌಷ್ಟಿಕಾಂಶದ ಉಗ್ರಾಣವಾಗಿದೆ ಅಂದರೆ ತಪ್ಪಾಗೋದಿಲ್ಲ. ರಾಗಿಯು ಪ್ರೋಟೀನ್, ಫೈಬರ್ ಮತ್ತು ಹೇರಳವಾದ ಜೀವಸತ್ವಗಳಿಂದ ಸಮೃದ್ಧವಾಗಿದೆ.
ಅವುಗಳ ಸೇವನೆಯು ಹೃದಯರಕ್ತನಾಳದ ಆರೋಗ್ಯವನ್ನು ರಕ್ಷಿಸಲು, ಮಧುಮೇಹವನ್ನು ತಡೆಗಟ್ಟಲು ಮತ್ತು ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ. ಆದ್ರೆ ಎಂದಿಗೂ ಶಾಲೆಗೆ ಹೋಗದ ಈ ಬುಡಕಟ್ಟು ಮಹಿಳೆ, ಈ ಬೀಜಗಳ ಸಂರಕ್ಷಣೆಯ ಮಹತ್ವವನ್ನು ಬಹಳ ಹಿಂದೆಯೇ ಅರ್ಥಮಾಡಿಕೊಂಡಿದ್ದಾರೆ ಎನ್ನುವುದು ವಿಶೇಷ. ಮಿಲ್ಲೆಟ್ ಪೌಷ್ಠಿಕಾಂಶದ ಶಕ್ತಿ ಕೇಂದ್ರ. ಅದರ ನಿಯಮಿತ ಸೇವನೆಯ ನಂತರ ಜನರು ಅನಾರೋಗ್ಯಕ್ಕೆ ಒಳಗಾಗುವುದಿಲ್ಲ. ಇದು ಔಷಧಿಗಳ ವೆಚ್ಚವನ್ನೂ ಉಳಿಸುತ್ತದೆ ಎಂದು ಅವರು ಹೇಳುತ್ತಾರೆ.
ಚಿಕ್ಕ ಮಣ್ಣಿನ ಮನೆಯಲ್ಲಿ ವಾಸ
ಬೈಗಾ ಸಮುದಾಯದ ಈ ಮಹಿಳೆ ವಾಸವಿರುವ ಹಳ್ಳಿಯಲ್ಲಿ ಯಾವುದೇ ನೆಟ್‌ವರ್ಕ್ ಇಲ್ಲ. ಚಿಕ್ಕದಾದ ಎರಡು ಕೋಣೆಗಳನ್ನು ಹೊಂದಿರುವ ಮಣ್ಣಿನ ಮನೆಯಲ್ಲಿ ಪೋಷಕರೊಂದಿಗೆ ಈಕೆ ವಾಸ ಮಾಡುತ್ತಾರೆ.
ಒಂದು ಕೋಣೆಯನ್ನು ಹಾಲ್ ಹಾಗೂ ಅಡುಗೆ ಕೋಣೆಯಾಗಿ ಬಳಸುತ್ತಾರೆ. ಒಂದು ಮೂಲೆಯಲ್ಲಿ ಬಟ್ಟೆಗಳನ್ನು ನೇತುಹಾಕಲಾಗಿದ್ದರೆ ಇನ್ನೊಂದು ಮೂಲೆಯಲ್ಲಿ ಪಾತ್ರೆಗಳು, ಒಲೆ ಮುಂತಾದ ಸಾಮಾನುಗಳನ್ನು ಜೋಡಿಸಲಾಗಿದೆ. ಇರುವ ಇನ್ನೊಂದು ಕೋಣೆಯಲ್ಲಿ ವಿವಿಧ ಬಗೆಯ ಬೀಜಗಳನ್ನು ಸಂಗ್ರಹಿಸಲು ಮೀಸಲಾಗಿರಿಸಲಾಗಿದೆ. ಲಹರಿ ತನ್ನ ಬೀಜ ಬ್ಯಾಂಕ್‌ನಲ್ಲಿ ವಿವಿಧ ಬೀಜ ಪ್ರಭೇದಗಳ ಹೆಸರನ್ನು ಬರೆದಿರುವಂತಹ ಅನೇಕ ದೊಡ್ಡ ಮಣ್ಣಿನ ಪಾತ್ರೆಗಳನ್ನು ಇಟ್ಟಿದ್ದಾರೆ. ಅಲಂಕಾರಿಕವಾಗಿ ಕಾಣುವ ವಿವಿಧ ರಾಗಿ ಬೀಜಗಳು ಛಾವಣಿಯ ಮೇಲೆ ನೇತು ಹಾಕಲಾಗಿದೆ.
ಲಹರಿಯವರು ಈ ಬೀಜಗಳನ್ನು ಉಚಿತವಾಗಿ ವಿತರಿಸುವುದಲ್ಲದೆ, ಕಾರ್ಮಿಕ ಕೆಲಸಗಳನ್ನು ಮಾಡುತ್ತಾರೆ. ಜೀವನೋಪಾಯಕ್ಕಾಗಿ ಅರಣ್ಯ ಉತ್ಪನ್ನಗಳು ಮತ್ತು ಉರುವಲುಗಳನ್ನು ಮಾರಾಟ ಮಾಡುತ್ತಾರೆ. ಈ ಮೂಲಕ ತಿಂಗಳಿಗೆ 3,000 ರೂ.ವರೆಗೆ ಸಂಪಾದಿಸುತ್ತಾರೆ.
ಮಿಲ್ಲೆಟ್ ರಾಯಭಾರಿಯಾಗುತ್ತಿರುವ ಬುಡಕಟ್ಟು ಮಹಿಳೆ
ಈ ವರ್ಷ ಭಾರತ ಸರ್ಕಾರವು ಭಾರತವನ್ನು ಸಿರಿಧಾನ್ಯಗಳ ಕೃಷಿ ಮತ್ತು ಸಂಶೋಧನೆಯ ಜಾಗತಿಕ ಕೇಂದ್ರವನ್ನಾಗಿ ಮಾಡಲು ಶ್ರಮಿಸುತ್ತಿದೆ. ಕೇಂದ್ರ ಬಜೆಟ್ ಭಾಷಣದ ಸಮಯದಲ್ಲಿ, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಿರಿಧಾನ್ಯಗಳನ್ನು ಎಲ್ಲ ಧಾನ್ಯಗಳ ತಾಯಿ ಎಂದು ಉಲ್ಲೇಖಿಸಿದ್ದಾರೆ. ಜಿಲ್ಲಾಧಿಕಾರಿ ವಿಕಾಸ್ ಮಿಶ್ರಾ ಅವರು ಲಹರಿಯವರನ್ನು ಮಿಲ್ಲೆಟ್ ಬ್ರಾಂಡ್ ಅಂಬಾಸಿಡರ್ ಆಗಿ ಆಯ್ಕೆ ಮಾಡಲು ನಿರ್ಧರಿಸಿರುವುದಾಗಿ ಹೇಳಿದ್ದಾರೆ.
“ನಾನು ಆ ಹಳ್ಳಿಗೆ ಹೋದಾಗ ಈಕೆಯನ್ನು ಭೇಟಿಯಾದೆ. ರಾಗಿ ಬೀಜಗಳನ್ನು ಸಂರಕ್ಷಿಸುವ ಅವರ ಕಾರ್ಯದಿಂದ ನಾನು ಪ್ರಭಾವಿತನಾಗಿದ್ದೇನೆ. ಭಾರತ ಸರ್ಕಾರವು ‘ಇಂಟರ್‌ನ್ಯಾಷನಲ್ ಇಯರ್ ಆಫ್ ದಿ ಮಿಲ್ಲೆಟ್’ ಕಾರ್ಯಕ್ರಮವನ್ನು ನಡೆಸಲು ಯೋಜಿಸುತ್ತಿದ್ದು ನಾವು ಲಹರಿ ಬಾಯಿ ಅವರನ್ನು ಬ್ರಾಂಡ್ ಅಂಬಾಸಿಡರ್ ಆಗಿ ಆಯ್ಕೆ ಮಾಡಲು ನಿರ್ಧರಿಸಿದ್ದೇವೆ" ಎಂದು ತಿಳಿಸಿದ್ದಾರೆ.
ಅಲ್ಲದೇ ಇತ್ತೀಚೆಗಷ್ಟೇ ಇಲ್ಲಿನ ದಿಂಡೂರಿನಲ್ಲಿ ನಡೆದ ಗಣರಾಜ್ಯೋತ್ಸವ ಪರೇಡ್‌ಗೆ ಮುಖ್ಯ ಅತಿಥಿಯಾಗಿ ಜಿಲ್ಲಾಧಿಕಾರಿ, ಲಹರಿಬಾಯಿ ಅವರನ್ನು ಆಹ್ವಾನಿಸಿದ್ದರು. ಲಹರಿ ವೇದಿಕೆಯ ಮೇಲೆ ನಿಂತಿದ್ದು ಅದೇ ಮೊದಲ ಸಲ. “ಅಷ್ಟೊಂದು ಜನರು ನನ್ನತ್ತ ನೋಡುತ್ತಿದ್ದರು. ಇಷ್ಟೊಂದು ಜನಮನ್ನಣೆ ಸಿಕ್ಕಿರುವುದು ಸಂತಸ ತಂದಿದೆ. ಈಗ ನನ್ನನ್ನು ಅಪಹಾಸ್ಯ ಮಾಡಿದ ಅದೇ ಗ್ರಾಮಸ್ಥರು ಅಸೂಯೆಪಡುತ್ತಾರೆ” ಎಂದು ಲಹರಿ ಹೇಳುತ್ತಾರೆ.
ಆದಿವಾಸಿ ಮಹಿಳೆಯನ್ನು ಮುಖ್ಯ ಅತಿಥಿಯಾಗಿ ಆಯ್ಕೆ ಮಾಡಿದ್ದ ಜಿಲ್ಲಾಧಿಕಾರಿ ಮಿಶ್ರಾ, “ಈ ಸಮುದಾಯದ ಜನರು ಪರಿಸರದ ಬಗ್ಗೆ ವ್ಯಾಪಕ ಜ್ಞಾನವನ್ನು ಹೊಂದಿದ್ದಾರೆ. ಕೊಡೋ ಕುಟ್ಕಿ [ಮಿಲ್ಲೆಟ್] ಅರ್ಧದಷ್ಟು ಉತ್ಪಾದನೆಯನ್ನು ಬೈಗಾ ಸಮುದಾಯದವರು ಮಾಡುತ್ತಾರೆ. ಲಹರಿ ತನ್ನ ಕೆಲಸದ ಬಗ್ಗೆ ತುಂಬಾ ಉತ್ಸುಕರಾಗಿದ್ದಾರೆ. ಅವರ ಬೀಜ್ ಬ್ಯಾಂಕ್ ಶ್ಲಾಘನೀಯವಾಗಿದೆ ಎಂದು ಹೇಳಿದ್ದಾರೆ.
ಅಲ್ಲದೇ ಅಡುಗೆ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಸಿರಿಧಾನ್ಯವನ್ನು ಉತ್ತೇಜಿಸಲಾಗುತ್ತಿದೆ. ಅಲ್ಲಿ ಮಹಿಳೆಯರು ಮಿಲ್ಲೆಟ್‌ನಿಂದ ಕೇಕ್, ಪೇಸ್ಟ್ರಿ ಮತ್ತು ಬಿಸ್ಕತ್ತುಗಳನ್ನು ತಯಾರಿಸಿದ್ದಾರೆ. ಅಲ್ಲದೇ ಅವುಗಳನ್ನು ಆರೋಗ್ಯಕರ ಸೂಪ್‌ಗಳಾಗಿ ಸಂಸ್ಕರಿಸಲಾಗುತ್ತಿದೆ ಎಂದೂ ಅವರು ಹೇಳಿದ್ದಾರೆ.
ಜೋಧ್‌ಪುರ ಮೂಲದ ಐಸಿಎಆರ್‌ನಿಂದ ರೂ 10 ಲಕ್ಷ ವಿದ್ಯಾರ್ಥಿವೇತನಕ್ಕೆ ಆಯ್ಕೆ
ಅವರು ಜೋಧ್‌ಪುರ ಮೂಲದ ಐಸಿಎಆರ್‌ನಿಂದ ರೂ 10 ಲಕ್ಷ ವಿದ್ಯಾರ್ಥಿವೇತನಕ್ಕೆ ಲಹರಿಯನ್ನು ನಾಮನಿರ್ದೇಶನ ಮಾಡಿದ್ದಾರೆ. "ಅವರು ಈ ವಿದ್ಯಾರ್ಥಿವೇತನವನ್ನು ಪಡೆಯುವಲ್ಲಿ ಯಶಸ್ವಿಯಾದರೆ, ಅವರು ಪಿಎಚ್‌ಡಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುತ್ತಾರೆ" ಎಂದು ಹೇಳಿದ್ದಾರೆ. ಅಲ್ಲದೇ ಸರ್ಕಾರವು ಲಹರಿಯವರಿಗೆ ಮನೆಯನ್ನು ಸಹ ಮಂಜೂರು ಮಾಡಿದೆ.
ಇನ್ನು, ಗಣರಾಜ್ಯೋತ್ಸವದ ನಂತರ, ಲಹರಿಬಾಯಿಯವರು ರಾಜ್ಯ ರಾಜಧಾನಿ ಭೋಪಾಲ್ ಮತ್ತು ರಾಷ್ಟ್ರ ರಾಜಧಾನಿ ನವದೆಹಲಿಯ 100 ಕ್ಕೂ ಹೆಚ್ಚು ಪತ್ರಕರ್ತರಿಗೆ ಸಂದರ್ಶನಗಳನ್ನು ನೀಡಿದ್ದಾರೆ.
ಈ ಬುಡಕಟ್ಟು ಮಹಿಳೆ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಪಡೆದಿಲ್ಲ
ಅವರ ಬಳಿ ಕೇವಲ ಎರಡು ಜೊತೆ ಬಟ್ಟೆಗಳಿವೆಯಂತೆ. ಆದರೆ ಅವರು ಸಂದರ್ಶನಕ್ಕೆ ಹೋದಾಗಲೆಲ್ಲಾ ಅದನ್ನೇ ಅಚ್ಚುಕಟ್ಟಾಗಿ ಧರಿಸುತ್ತಾರೆ. ಒಟ್ಟಾರೆ, ಈ ಬುಡಕಟ್ಟು ಮಹಿಳೆ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಪಡೆದಿಲ್ಲವಾದರೂ ಅದಕ್ಕೂ ಮಿಗಿಲಾದ ಇಂಥದ್ದೊಂದು ಜ್ಞಾನ ಹೊಂದಿದ್ದಾರೆ. ಅಲ್ಲದೇ ಬೀಜ ಬ್ಯಾಂಕ್‌ನಂತಹ ಶ್ಲಾಘನೀಯ ಕೆಲಸ ಮಾಡುತ್ತಿದ್ದಾರೆ. ಈ ಮೂಲಕ ಮುಂದಿನ ಪೀಳಿಗೆಗೂ ಅಪರೂಪದ ಸಿರಿಧಾನ್ಯಗಳನ್ನು ತಲುಪಿಸುವ ಕೆಲಸ, ಉದ್ದೇಶ ಹೊಂದಿದ್ದಾರೆ. ಇನ್ನು ಅವರು ಮಿಲ್ಲೆಟ್ ಬ್ರಾಂಡ್ ಅಂಬಾಸಿಡರ್ ಆಗಿ ಆಯ್ಕೆಯಾಗಿರುವುದು ಈ ಕಾರ್ಯಕ್ಕೆ ಸಿಕ್ಕ ಪ್ರತಿಫಲ ಎಂದೇ ಹೇಳಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ