“ದೇವರ ನಾಡು” ಅಂತಲೇ ಕರೆಯಿಸಿಕೊಳ್ಳುವ ಕೇರಳಕ್ಕೆ (Kerala) ಪ್ರತಿವರ್ಷ ಅನೇಕಾನೇಕ ಪ್ರವಾಸಿಗರು (Tourists) ಭೇಟಿ ನೀಡುತ್ತಾರೆ. ಇಲ್ಲಿನ ಪ್ರಶಾಂತವಾದ ಹಿನ್ನೀರು, ಕಡಲತೀರಗಳು, ಗಿರಿಧಾಮಗಳು ಮತ್ತು ಅಭಯಾರಣ್ಯಗಳನ್ನು ನೋಡಲು ಪ್ರಪಂಚದ (World) ವಿವಿಧೆಡೆಗಳಿಂದ ಆಗಮಿಸುತ್ತಾರೆ. ಇಲ್ಲಿನ ಕೆಲವಷ್ಟು ಪ್ರವಾಸಿ ತಾಣಗಳು (Tourist Places) ಬಹಳ ಜನಪ್ರಿಯವಾಗಿವೆ. ಹಾಗಾಗಿ ಅಂಥ ಸ್ಥಳಗಳಲ್ಲಿ ಹೆಚ್ಚಿನ ಜನಸಂದಣಿ ಇರುವುದು ಸಾಮಾನ್ಯ.
ಆದರೆ ಕೇರಳವು ಅನೇಕ ಅಸಾಮಾನ್ಯ ಸ್ಥಳಗಳಿಗೆ ನೆಲೆಯಾಗಿದೆ. ಇಲ್ಲಿನ ಸಾಕಷ್ಟು ಪ್ರದೇಶಗಳು ಹೆಚ್ಚಿನ ಜನರಿಗೆ ಚಿರಪರಿಚಿತವಲ್ಲ. ಹೌದು, ಕೇರಳ ಬಹುಮಟ್ಟಿಗೆ ಅನ್ವೇಷಿಸದ ಹಲವಾರು ಅಸಾಮಾನ್ಯ ಸ್ಥಳಗಳನ್ನು ಒಳಗೊಂಡಿದೆ. ಅಂಥ ಪ್ರಮುಖ ಆಫ್‌ಬೀಟ್ ಸ್ಥಳಗಳ ಬಗ್ಗೆ ನಾವು ಮಾಹಿತಿ ನೀಡುತ್ತಿದ್ದೇವೆ. ಮುಂದಿನ ಬಾರಿ ನೀವು ಕೇರಳಕ್ಕೆ ಹೋದಾಗ ಈ ಸುಂದರವಾದ ಸ್ಥಳಗಳಿಗೆ ಭೇಟಿ ನೀಡೋದನ್ನು ಮರೆಯಬೇಡಿ.
1.ಸೈಲೆಂಟ್ ವ್ಯಾಲಿ ನ್ಯಾಷನಲ್ ಪಾರ್ಕ್, ಪಲ್ಲಕಾಡ್: ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿರುವ ಈ ರಾಷ್ಟ್ರೀಯ ಉದ್ಯಾನವನವು ರಾಜ್ಯದ ಅತ್ಯುತ್ತಮ ತಾಣಗಳಲ್ಲಿ ಒಂದಾಗಿದೆ. ಇದು ವಿವಿಧ ವನ್ಯಜೀವಿಗಳಿಗೆ ಆಶ್ರಯ ತಾಣವಾಗಿದೆ. ಸೈಲೆಂಟ್ ವ್ಯಾಲಿಯು ಅಲ್ಲಿನ ಅಪರೂಪದ ಪ್ರಾಣಿಗಳು, ಸೊಂಪಾದ ಸಸ್ಯವರ್ಗ ಮತ್ತು ಕಡಿಮೆ ಪ್ರವಾಸಿಗರ ದಟ್ಟಣೆಯಿಂದಾಗಿ ನಿಜವಾಗಿಯೂ ವಿಶಿಷ್ಟವಾಗಿದೆ.
ಈ ಸ್ಥಳ 164 ಜಾತಿಯ ಚಿಟ್ಟೆಗಳು, 400 ವಿಧದ ಪತಂಗಗಳು, 211 ಪಕ್ಷಿಗಳು, 49 ಸರೀಸೃಪಗಳು, 12 ಮೀನುಗಳು ಮತ್ತು 49 ಉಭಯಚರಗಳಿಗೆ ನೆಲೆಯಾಗಿದೆ.
2.ಅಷ್ಟಮುಡಿ ಸರೋವರ: ಕೊಲ್ಲಂನಲ್ಲಿರುವ ಅಷ್ಟಮುಡಿ ಹಿನ್ನೀರು ಕೇರಳದ ಅತ್ಯಂತ ಕಡಿಮೆ ಜನಸಂದಣಿಯನ್ನು ಹೊಂದಿರುವಂತ ಅಪರೂಪದ ತಾಣವಾಗಿದೆ. ಎಂಟು ತೋಳುಗಳು ಅಥವಾ ಕಾಲುವೆಗಳನ್ನು ಒಳಗೊಂಡಿರುವ ಸರೋವರದ ಸ್ಥಳಾಕೃತಿಯಿಂದ ಇದಕ್ಕೆ “ಅಷ್ಟಮುಡಿ” ಎಂಬ ಹೆಸರು ಬಂದಿದೆ.
ನೀವು ಹೌಸ್‌ಬೋಟ್‌ನಲ್ಲಿ ವಿಶ್ರಾಂತಿ ಸಮಯವನ್ನು ಕಳೆಯಲು ಬಯಸಿದರೆ ಈ ಹಿನ್ನೀರು ಸೂಕ್ತವಾದ ಸ್ಥಳವಾಗಿದೆ. ಅಲ್ಲದೇ ಕೊಲ್ಲಂನಲ್ಲಿರುವ ಜಿಲ್ಲಾ ಪ್ರವಾಸೋದ್ಯಮ ಪ್ರಮೋಷನ್ ಕೌನ್ಸಿಲ್ (ಡಿಟಿಪಿಸಿ) ಮೂಲಕ ದೋಣಿಗಳನ್ನು ಬಾಡಿಗೆಗೆ ಪಡೆಯಬಹುದು. ಅನೇಕ ರೆಸಾರ್ಟ್‌ಗಳು ಪ್ರಯಾಣಿಕರಿಗೆ ತೇಲುವ ಗುಡಿಸಲುಗಳಲ್ಲಿ ಉಳಿಯಲು ಅನನ್ಯ ಆಯ್ಕೆಗಳೂ ಇಲ್ಲಿವೆ.
3.ಎಡಕ್ಕಲ್ ಗುಹೆಗಳು, ವಯನಾಡ್: ಎಡಕ್ಕಲ್ ಎಂದರೆ "ಕಲ್ಲಿನ ನಡುವೆ” ಎಂದರ್ಥ. ಇತಿಹಾಸವನ್ನು ಪ್ರೀತಿಸುವ ಜನರಿಗೆ ಇದು ಸ್ವರ್ಗದಂಥ ಸ್ಥಳವಾಗಿದೆ. ಭಾರತದಲ್ಲಿ ಶಿಲಾಯುಗದ ಕೆತ್ತನೆಗಳನ್ನು ಹೊಂದಿರುವ ಏಕೈಕ ಪರಿಚಿತ ಸ್ಥಳ ಎಂದು ಹೇಳಲಾಗುತ್ತದೆ.
ಇಲ್ಲಿ ಪ್ರವಾಸಿಗರು ನವಶಿಲಾಯುಗ ಮತ್ತು ಮಧ್ಯಶಿಲಾಯುಗದ ಕಾಲದ ಕೆತ್ತನೆಗಳನ್ನು ಕಾಣಬಹುದು. ಈ ಗುಹೆಗಳು ಮಾನವ ರೂಪಗಳನ್ನು ಒಳಗೊಂಡಿವೆ. ಅವುಗಳಲ್ಲಿ ಕೆಲವು ಮುಖವಾಡಗಳು ಮತ್ತು ಬೆಳೆದ ಕೂದಲನ್ನು ಹೊಂದಿವೆ. ಅವೆಲ್ಲವೂ ಆಸಕ್ತಿದಾಯಕವಾಗಿದ್ದು, ಪುರಾತತ್ತ್ವ ಶಾಸ್ತ್ರದ ಪ್ರಸ್ತುತತೆಯನ್ನು ಹೊಂದಿವೆ.
4.ಕೊಲುಕುಮಲೈ ಎಸ್ಟೇಟ್, ಇಡುಕ್ಕಿ: ಸಮುದ್ರ ಮಟ್ಟದಿಂದ 7900 ಅಡಿ ಎತ್ತರದಲ್ಲಿರುವ ಕೊಲುಕ್ಕುಮಲೈ ವಿಶ್ವದಲ್ಲೇ ಅತಿ ಎತ್ತರದ ಚಹಾ ತೋಟಗಳಲ್ಲಿ ಒಂದಾಗಿದೆ. ಅಲ್ಲದೇ ಇದು ಕೇರಳದ ಅತ್ಯಂತ ಸುಂದರವಾದ ಸ್ಥಳಗಳಲ್ಲಿ ಒಂದಾಗಿದೆ.
ಅಂದಹಾಗೆ 1900ರ ದಶಕದ ಆರಂಭದಲ್ಲಿ ಸ್ಥಾಪಿಸಲಾದ ಎಸ್ಟೇಟ್, ಚಹಾವನ್ನು ಉತ್ಪಾದಿಸಲು ಸಾಂಪ್ರದಾಯಿಕ ವಿಧಾನವನ್ನು ಬಳಸುತ್ತದೆ. ಇದು ವಸಾಹತುಶಾಹಿ ಪರಂಪರೆಯನ್ನು ಹೊಂದಿದೆ. ಇಲ್ಲಿನ ನೀಲಗಿರಿಯ ಅದ್ಭುತ ನೋಟ ನಿಮ್ಮನ್ನು ಮಂತ್ರಮುಗ್ಧಗೊಳಿಸುತ್ತದೆ.
5.ಅಗಸ್ತ್ಯರಕೂಡಂ, ತಿರುವನಂತಪುರ: ಇದು ಪಕ್ಷಿ ವೀಕ್ಷಕರಿಗೆ ಅತ್ಯಂತ ಸೂಕ್ತ ಸ್ಥಳವಾಗಿದೆ. ಕೇರಳದ ಅತ್ಯುನ್ನತ ಶಿಖರಗಳಲ್ಲಿ ಒಂದೆಂದು ಕರೆಯಲ್ಪಡುವ ಅನೇಕ ಅಪರೂಪದ ಪಕ್ಷಿ ಪ್ರಭೇದಗಳನ್ನು ನೋಡಲು ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. ಅಲ್ಲದೇ ಇಲ್ಲಿ ಸಾಹಸಮಯ ಚಾರಣ ಕೂಡ ಮಾಡಬಹುದು.
ಅಗಸ್ತ್ಯಕೂಡಂನ ಮತ್ತೊಂದು ವಿಶೇಷತೆಯೆಂದರೆ ಈ ಸ್ಥಳವು ಅಪರೂಪದ ಸಸ್ಯ, ವನ್ಯಜೀವಿ ಮತ್ತು ಅಪರೂಪದ ಔಷಧೀಯ ಸಸ್ಯಗಳಿಗೆ ಹೆಸರುವಾಸಿಯಾಗಿದೆ. ಈ ಪ್ರದೇಶದಲ್ಲಿ ಕಲ್ಲುಹೂವುಗಳು, ಆರ್ಕಿಡ್, ಪಾಚಿಗಳು ಮತ್ತು ಜರೀಗಿಡಗಳು ಸೇರಿದಂತೆ ಸುಮಾರು 2000 ಜಾತಿಯ ಸಸ್ಯ ಪ್ರಬೇಧಗಳಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ