ಕೃಷಿ, ವ್ಯವಸಾಯ ಎಂದರೆ, ಎಲ್ಲರೂ ಮೂಗು ಮುರಿಯುತ್ತಿದ್ದ ಕಾಲವೊಂದಿತ್ತು. ಬೆಳೆದ ಬೆಳೆಗೆ ಫಲವಿಲ್ಲ, ಮಳೆಯನ್ನೇ ನಂಬಿ ಕೂತರೇ ರೈತನಿಗೆ ಆತ್ಮಹತ್ಯೆಯೇ ಗತಿ ಎಂದು ಎಲ್ಲರೂ ಕೃಷಿಯಿಂದ ವಿಮುಖರಾಗುತ್ತಿದ್ದರು. ಆದರೆ, ಇತ್ತೀಚಿಗೆ ಈ ಪ್ರವೃತ್ತಿ ಬದಲಾಗುತ್ತಿದ್ದು, ಬಹುರಾಷ್ಟ್ರೀಯ ಕಂಪೆನಿಗಳಲ್ಲಿ (Company) ಲಕ್ಷ-ಲಕ್ಷ ಸಂಬಳ ಪಡೆಯುತ್ತಿದ್ದ ಮಂದಿ ಸಹ ವ್ಯವಸಾಯಕ್ಕೆ (Farming) ಇಳಿಯುತ್ತಿದ್ದಾರೆ. ತಂತ್ರಜ್ಞಾನದ ಪ್ರಗತಿ ಹಾಗೂ ಉತ್ತಮ ನೀರಾವರಿಯ ವ್ಯವಸ್ಥೆಯು ಸಹ ಜನರು ಕೃಷಿಯತ್ತ ಮತ್ತೆ ಮುಖ ಮಾಡಲು ಕಾರಣಗಳಲ್ಲೊಂದು ಎಂದು ಹೇಳಬಹುದು. ಇನ್ನು, ಒತ್ತಡದ ಜೀವನ ಸಾಕಾಗಿ, ‘ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆ ಮೇಲು’ ಎಂದು ಕೆಲವರು ಕೃಷಿಗೆ ಮರಳುತ್ತಿದ್ದರೆ, ಮತ್ತೆ ಕೆಲವರು ವ್ಯವಸಾಯದೆಡೆಗಿನ ಪ್ರೀತಿಯಿಂದಲೇ ಆರಂಭಕ್ಕೆ ಕಾಲಿಡುತ್ತಿದ್ದಾರೆ. ಇದೊಂದು ಒಳ್ಳೆಯ ಬೆಳೆವಣಿಗೆಯೇ ಹೌದು. ಏಕೆಂದರೆ, ಪ್ರಾಚೀನ ಕಾಲದಿಂದಲೂ ನಮ್ಮ ಭಾರತವನ್ನು ಕೃಷಿ (Farming) ದೇಶವೆಂದು ಪರಿಗಣಿಸಲಾಗಿದೆ.
ನಮ್ಮ ದೇಶದಲ್ಲಿ ಕೃಷಿಯ ಇತಿಹಾಸ ಋಗ್ವೇದ ಕಾಲದಷ್ಟು ಹಳೆಯದು. ಇಲ್ಲಿ ಶೇ 60 ಕ್ಕಿಂತ ಹೆಚ್ಚಿನ ಜನರು ಕೃಷಿಯನ್ನು ತಮ್ಮ ಪ್ರಾಥಮಿಕ ವ್ಯಾಪಾರ ಅಥವಾ ಕುಟುಂಬದ ವ್ಯವಹಾರವಾಗಿ ಪರಿಗಣಿಸಿದ್ದಾರೆ. ಇಂದು,ಭಾರತ ಕೃಷಿ ಉತ್ಪಾದನೆಯಲ್ಲಿ ವಿಶ್ವಾದ್ಯಂತ ಎರಡನೇ ಸ್ಥಾನದಲ್ಲಿದೆ. ಹೆಚ್ಚಿನ ಉತ್ಪನ್ನಗಳನ್ನು ಭಾರತದಿಂದ ಇತರ ದೇಶಗಳಿಗೆ ರಫ್ತು ಮಾಡಲಾಗುತ್ತದೆ.
ಕೃಷಿಯತ್ತ ವಾಲುತ್ತಿರುವ ಯುವಕರ ಆಕರ್ಷಣೆ: ಇನ್ನು ಕೋವಿಡ್‌ನಿಂದಾಗಿ, ಬೇರೆಲ್ಲಾ ವ್ಯವಹಾರ ನಿಂತು ಹೋದಾಗಲೂ, ಯಾವುದೇ ವ್ಯತ್ಯಾಸವಿಲ್ಲದೆ ಇದ್ದದ್ದು ಕೃಷಿ ಕ್ಷೇತ್ರವೊಂದೇ. ಹಾಗಾಗಿ, ಇದು ವ್ಯಾಪಾರ ಉದ್ಯಮಗಳಲ್ಲಿ ಅತ್ಯಂತ ವಿಶ್ವಾಸಾರ್ಹ ಕ್ಷೇತ್ರಗಳಲ್ಲಿ ಒಂದು. ಈಗಂತೂ ಈ ವಲಯ ಸಾಕಷ್ಟು ವಿಸ್ತರಿಸಿದೆ. ಇನ್ನೂ ವಿಸ್ತರಿಸುತ್ತಿದೆ.
ಮೊದಲನೆಯದಾಗಿ, ಕೃಷಿ ವ್ಯವಹಾರವನ್ನು ಮೂರು ವಿಶಾಲ ವರ್ಗಗಳಾಗಿ ವಿಂಗಡಿಸಬಹುದು. ಉತ್ಪಾದಕ ಸಂಪನ್ಮೂಲಗಳು: -ಈ ವರ್ಗದಲ್ಲಿ, ಬೀಜ, ಫೀಡ್, ಗೊಬ್ಬರ, ಉಪಕರಣಗಳು, ಶಕ್ತಿ, ಯಂತ್ರೋಪಕರಣಗಳು ಮುಖ್ಯ ಅವಶ್ಯಕತೆಗಳಾಗಿವೆ. ಏಕೆಂದರೆ, ಎಂದರೆ ಅವುಗಳಿಲ್ಲದೆ ಕೃಷಿ ಕ್ಷೇತ್ರದಲ್ಲಿ ಯಾವುದೂ ಸಾಧ್ಯವಿಲ್ಲ.
ಕೃಷಿ ಸರಕುಗಳು: - ಇವುಗಳನ್ನು ಆಹಾರ ಮತ್ತು ನಾರಿನ ಕಚ್ಚಾ ಅಥವಾ ಸಂಸ್ಕರಿಸಿದ ಸರಕುಗಳಾಗಿ ಬಳಸಲು ಮಾರಾಟ ಮಾಡಲಾಗುತ್ತದೆ. ಅನುಕೂಲಕರ ಸೇವೆಗಳು, ಇಲ್ಲಿ ಸಂಗ್ರಹಣೆ, ಸಂಸ್ಕರಣೆ, ಪ್ಯಾಕಿಂಗ್, ಸಾರಿಗೆ, ಮಾರ್ಕೆಟಿಂಗ್, ಕ್ರೆಡಿಟ್, ವಿಮೆಯಂತಹ ಕೆಲವು ಅನುಕೂಲಕರ ಸೇವೆಗಳ ಅಗತ್ಯವಿರುತ್ತದೆ.
ಇದನ್ನೂ ಓದಿ: ಕ್ರೆಡಿಟ್ ಕಾರ್ಡ್ ಬಳಸುವವರಿಗೆ ಬಂಪರ್ ಸುದ್ದಿ, ಮಿಸ್ ಮಾಡ್ದೇ ನೋಡಿ!
ಕೃಷಿಯಲ್ಲಿ ಹೆಚ್ಚು ಲಾಭದಾಯಕ ವ್ಯಾಪಾರಗಳು: ಕೃಷಿಯಲ್ಲಿ ಹೆಚ್ಚು ಬೇಡಿಕೆಯಿರುವ ಮತ್ತು ಲಾಭದಾಯಕ ವ್ಯವಹಾರಗಳು ಇಲ್ಲಿವೆ ನೋಡಿ. ಈ ಯಾವುದರಿಂದಲಾದರೂ ನೀವು ನಿಮ್ಮ ವ್ಯಾಪಾರವನ್ನು ಪ್ರಾರಂಭಿಸಬಹುದು:
ಕೃಷಿ ಭೂಮಿ: - ನೀವು ಫಲವತ್ತಾದ ಕೃಷಿ ಭೂಮಿಯ ಮೇಲೆ ನಿಮ್ಮ ಹಣವನ್ನು ಹೂಡಿಕೆ ಮಾಡಲು ಇಚ್ಛಿಸುವುದಾದರೆ, ಅದೊಂದು ಒಳ್ಳೆಯ ನಿರ್ಧಾರವೇ ಸರಿ. ಹೀಗೆ ಕೃಷಿ ಭೂಮಿಯ ಮೇಲೆ ಹಣ ಹೂಡಿಕೆ ಮಾಡಿ ನೀವು ಸ್ಥಳೀಯವಾಗಿ ಮತ್ತು ದೂರದ ಸ್ಥಳಗಳಲ್ಲಿ ಹೆಚ್ಚು ಬೇಡಿಕೆಯಿರುವ ಕೆಲವು ವಸ್ತುಗಳನ್ನು ಉತ್ಪಾದಿಸಿ ಮಾರಾಟ ಮಾಡಬಹುದು. ಈಗ ತಂತ್ರಜ್ಞಾನವು ಸಾಕಷ್ಟು ಪ್ರಗತಿ ಹೊಂದಿರುವುದರಿಂದ, ನೀವು ನಿಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಊರೂರು ಅಲೆಯಬೇಕಾಗಿಲ್ಲ. ಬದಲಾಗಿ ನೀವಿರುವ ಸ್ಥಳದಿಂದಲೇ ವಿವಿಧ ಸಾಮಾಜಿಕ ಮಾಧ್ಯಮ ಚಾನಲ್‌ಗಳನ್ನು ಬಳಸಿಕೊಂಡು ನಿಮ್ಮ ಉತ್ಪನ್ನಗಳನ್ನು ಆನ್‌ಲೈನ್‌ನಲ್ಲಿ ಪ್ರಚಾರ ಮಾಡಿ ಮಾರಾಟ ಸಹ ಮಾಡಬಹುದು.
ದಿನಸಿ ಶಾಪಿಂಗ್ ಪೋರ್ಟಲ್: - ಈಗೆಲ್ಲಾ ಜನರು ತಮ್ಮ ದಿನನಿತ್ಯದ ದಿನಸಿ ವಸ್ತುಗಳನ್ನು ಖರೀದಿಸಲು ಸಮಯವನ್ನು ವ್ಯರ್ಥ ಮಾಡಲು ಬಯಸುವುದಿಲ್ಲ. ಇಂದಿನ ನಾಗಾಲೋಟದ ಜೀವನದಲ್ಲಿ ಹೆಚ್ಚಿನ ಜನರಿಗೆ ಇವೆಕ್ಕೆಲ್ಲಾ ಸಮಯ ವಿನಿಯೋಗಿಸಲು ವ್ಯವಧಾನವಿರುವುದಿಲ್ಲ. ಬಹುತೇಕರು ದಿನಸಿಗಳನ್ನು ಆನ್ ಲೈನ್ ಮೂಲಕ ಆರ್ಡರ್ ಮಾಡಿ ಪದಾರ್ಥಗಳನ್ನು ಮನೆ ಬಾಗಿಲಿಗೆ ಪಡೆಯಲು ಬಯಸುತ್ತಾರೆ. ಆದ್ದರಿಂದ, ನೀವು ನಿಮ್ಮ ಸ್ವಂತ ಇ-ಶಾಪಿಂಗ್ ಪೋರ್ಟಲ್ ಅನ್ನು ಪ್ರಾರಂಭಿಸಿ, ಈ ಮೂಲಕ ಗರಿಷ್ಠ ಲಾಭವನ್ನು ಸಹ ಪಡೆಯಬಹುದು.
ಟ್ರೀ ಫಾರ್ಮ್: - ಟ್ರೀ ಫಾರ್ಮ್ ಅನ್ನು ಖರೀದಿಸುವ ಮೂಲಕವೂ ಸಹ ಕೃಷಿಯಲ್ಲಿ ನಿಮ್ಮ ವ್ಯವಹಾರವನ್ನು ಪ್ರಾರಂಭಿಸಬಹುದು. ಟ್ರೀ ಫಾರ್ಮ್ ನಲ್ಲಿ ಮರಗಳನ್ನು ಬೆಳಸಿ ಅವನ್ನು ಮಾರಾಟ ಮಾಡಲು ಅವಕಾಶವಿದೆ. ಇದು ಸ್ವಲ್ಪ ಸುದೀರ್ಘ ಪ್ರಕ್ರಿಯೆಯಾದರೂ, ಒಳ್ಳೆಯ ಹೂಡಿಕೆ ಎಂದೇ ಹೇಳಬಹುದು.
ಒಣ ಹೂವಿನ ವ್ಯಾಪಾರ: - ಈ ವ್ಯವಹಾರದ ಕಲ್ಪನೆಯು ಕಳೆದ 10 ವರ್ಷಗಳಿಂದಿಚೇಗಷ್ಟೆ ಹೆಚ್ಚು ಪ್ರಚಲಿತವಾಗುತ್ತಿದೆ. ನಿಮಗೆ ಸ್ವಲ್ಪ ಖಾಲಿ ಭೂಮಿಯಿದ್ದರೆ, ಅಲ್ಲಿ ಹೂವುಗಳನ್ನು ಬೆಳೆಸಬಹುದು. ನಂತರ, ಅವನ್ನು ಒಣಗಿಸಿ ಕರಕುಶಲ ಅಂಗಡಿಗಳು ಅಥವಾ ಹವ್ಯಾಸಿಗಳಿಗೆ ಮಾರಾಟ ಮಾಡಬಹುದು.
ಇದನ್ನೂ ಓದಿ: FASTag ಬರೀ ಸ್ಟಿಕರ್ ಅಲ್ಲ, ನಿಮ್ಮ ಕಾರಿನ ಕಾವಲುಗಾರ ಕೂಡಾ!
ಜೇನುಸಾಕಣೆ: - ಇತ್ತೀಚೆಗೆ ಜನರ ಆರೋಗ್ಯ ಪ್ರಜ್ಞೆಯನ್ನು ಹೆಚ್ಚಾಗುತ್ತಿರುವುದರಿಂದ, ಜೇನುತುಪ್ಪಕ್ಕೆ ಬೇಡಿಕೆಯು ಬಹಳಷ್ಟು ಹೆಚ್ಚಾಗುತ್ತಿದೆ. ಹಾಗಾಗಿ, ಜೇನು ಸಾಕಾಣೆಯ ವ್ಯಾಪಾರವೂ ಸಹ ಒಂದು ಉತ್ತಮ ಆಯ್ಕೆ. ಈ ವ್ಯವಹಾರದಲ್ಲಿ ಬಹಳ ಒಳ್ಳೆಯ ಲಾಭವಿದೆ.
ಹಣ್ಣು ಮತ್ತು ತರಕಾರಿಗಳ ರಫ್ತು: - ನಿಮಗೆ ಅಂತಾರಾಷ್ಟ್ರೀಯ ಮಟ್ಟದ ಆಮದು ರಪ್ತಿನ ಬಗ್ಗೆ ಆಸಕ್ತಿಯಿದ್ದಲ್ಲಿ, ತಾಜಾ ಹಣ್ಣುಗಳು ಮತ್ತು ತರಕಾರಿಗಳ ರಪ್ತು ಒಂದು ಒಳ್ಳೆಯ ವ್ಯವಹಾರವೆಂದೇ ಹೇಳಬಹುದು. ಇದಕ್ಕಾಗಿ ನೀವು ರೈತರಿಂದ ಉತ್ಪನ್ನಗಳನ್ನು ಸಂಗ್ರಹಿಸಬೇಕಾಗುತ್ತದೆ. ಇದಕ್ಕೂ ಮೊದಲು ನೀವು ಆಮದು ಮತ್ತು ರಫ್ತು ನೀತಿಗಳ ಬಗ್ಗೆ ಸಂಪೂರ್ಣ ಜ್ಞಾನವನ್ನು ಬೆಳೆಸಿಕೊಳ್ಳುವುದು ತುಂಬಾನೇ ಅಗತ್ಯ.
ಡೈರಿ ವ್ಯಾಪಾರ: - ಎಲ್ಲರಿಗೂ ತಿಳಿದಿರುವಂತೆ ಹಾಲು ಮತ್ತು ಹಾಲಿನ ಉತ್ಪನ್ನಗಳಿಗೆ ಸದಾ ಬೇಡಿಕೆ ಇದ್ದೇ ಇರುತ್ತದೆ. ಶಿಶುವಿನಿಂದ ಹಿಡಿದು ಮುದುಕರವರೆಗೂ ಹಾಲು ಹಾಗೂ ಹಾಲಿನ ಉತ್ಪನ್ನಗಳು ಬೇಕಾಗುವುದರಿಂದ, ಇದರ ವ್ಯವಹಾರ ಲಾಭದಾಯಕವಾಗಿಯೇ ಇರುತ್ತದೆ. ಆದರೆ, ಇಲ್ಲಿ ನೀವು ಉತ್ತಮ ಮೊತ್ತವನ್ನು ಹೂಡಿಕೆ ಮಾಡಬೇಕಾಗುತ್ತದೆ ಮತ್ತು ವ್ಯಾಪಾರ ಪ್ರಾರಂಭಿಸುವ ಮುನ್ನ ಡೈರಿ ತಜ್ಞರಿಂದ ಗರಿಷ್ಠ ಜ್ಞಾನವನ್ನು ಪಡೆಯಬೇಕು.
ಕಸಪೊರಕೆಯ ಉತ್ಪಾದನೆ: - ನೆಲವನ್ನು ಗುಡಿಸಲು ಮತ್ತು ಅದರಿಂದ ಕೊಳಕು ಮತ್ತು ಧೂಳನ್ನು ತೆಗೆದುಹಾಕಲು ಪೊರಕೆಯನ್ನು ಅನ್ನು ಬಳಸಲಾಗುತ್ತದೆ. ಈ ಯೋಜನೆಯಲ್ಲಿ ನೀವು ಸಣ್ಣ ಬಂಡವಾಳವನ್ನು ಹೂಡಿಕೆ ಮಾಡಿ, ಕಡಿಮೆ ಅವಧಿಯಲ್ಲಿ ಉತ್ತಮ ಲಾಭವನ್ನು ಪಡೆಯಬಹುದು.
ನೆಲಗಡಲೆ ಸಂಸ್ಕರಣೆ: - ಈ ವ್ಯವಹಾರವನ್ನು ಪ್ರಾರಂಭಿಸಲು, ನೀವು ಉತ್ತಮ ಗುಣಮಟ್ಟದ ಕಚ್ಚಾ ವಸ್ತು (ಕಡಲೆಕಾಯಿಗಳು) ಹೊಂದಿರಬೇಕು. ಇದಕ್ಕೆ ಮಧ್ಯಮ ಮಟ್ಟದ ಬಂಡವಾಳವನ್ನು ಇದ್ದರೆ ಸಾಕು. ಸಂಸ್ಕರಿಸಿದ ಕಡಲೆಕಾಯಿಗಳಿಗೆ ಭಾರತ ಮಾತ್ರವಲ್ಲದೆ, ಪ್ರಪಂಚದಾದ್ಯಂತ ಹೆಚ್ಚು ಬೇಡಿಕೆಯಿದೆ.
ಔಷಧೀಯ ಗಿಡಮೂಲಿಕೆಗಳ ಕೃಷಿ: - ಭಾರತವು ವಿವಿಧ ರೀತಿಯ ವಿಶಿಷ್ಟವಾದ ಔಷಧೀಯ ಸಸ್ಯಗಳ ತವರು ಎಂದರೆ ತಪ್ಪಾಗಲಿಕ್ಕಿಲ್ಲ. ರೋಗಗಳಿಗೆ ಚಿಕಿತ್ಸೆ ನೀಡಲು, ಔಷಧ ತಯಾರಿಕೆಯಲ್ಲಿ, ಸುಗಂಧ ದ್ರವ್ಯಗಳ ತಯಾರಿಕೆಯಲ್ಲಿ ಮುಂತಾದವುಗಳಿಗೆ ಗಿಡಮೂಲಿಕೆಗಳನ್ನು ಬಳಸಲಾಗುತ್ತದೆ. ಈ ವ್ಯವಹಾರವನ್ನು ಪ್ರಾರಂಭಿಸಲು, ನೀವು ಗಿಡಮೂಲಿಕೆಗಳ ಬಗ್ಗೆ ಉತ್ತಮ ಜ್ಞಾನ ಮತ್ತು ಸಾಕಷ್ಟು ಭೂಮಿಯನ್ನು ಹೊಂದಿರಬೇಕು. ಔಷಧೀಯ ಗಿಡಮೂಲಿಕೆಗಳನ್ನು ಬೆಳೆಸಿ ಅವುಗಳನ್ನು ಮಾರಾಟ ಮಾಡಬಹುದು. ಆದರೆ ಈ ವ್ಯಾಪಾರಕ್ಕಾಗಿ ಸರ್ಕಾರದ ಕೆಲವು ಪರವಾನಗಿ ಪಡೆಯುವುದು ಅತೀ ಅಗತ್ಯ.
ಇವು ಕೃಷಿ ವ್ಯವಹಾರಗಳಿಗೆ ಸಂಬಂಧಿಸಿದ ಕೆಲವು ವ್ಯವಹಾರಗಳಾಗಿವೆ. ಆದರೆ, ಇವಿಷ್ಟೇ ಅಲ್ಲದೆ, ಕೃಷಿಯಲ್ಲಿ ಇನ್ನೂ ಅನೇಕ ಬಗೆಯ ವ್ಯವಹಾರಗಳುಂಟು. ಆ ಪಟ್ಟಿ ಇನ್ನು ದೊಡ್ಡದಾಗಿಯೇ ಇದೆ. ಅವ್ಯಾವುವು ಎಂಬುದನ್ನು ಮುಂದಿನ ಲೇಖನಗಳಲ್ಲಿ ತಿಳಿಯೋಣ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ