• Home
  • »
  • News
  • »
  • business
  • »
  • Kasuti Work: 15ನೇ ಶತಮಾನದ ಕಲೆ ಜೀವಂತವಾಗಿಡಲು ಪಣ: ಕಸೂತಿ ಕಲೆಯಿಂದ ವಿದೇಶಗಳಲ್ಲೂ ಫೇಮಸ್ ಈ ಮಹಿಳೆ

Kasuti Work: 15ನೇ ಶತಮಾನದ ಕಲೆ ಜೀವಂತವಾಗಿಡಲು ಪಣ: ಕಸೂತಿ ಕಲೆಯಿಂದ ವಿದೇಶಗಳಲ್ಲೂ ಫೇಮಸ್ ಈ ಮಹಿಳೆ

ಕಸೂತಿ ಕಲೆ

ಕಸೂತಿ ಕಲೆ

ಕಸೂತಿ ಕಲೆಯು ಚಾಲುಕ್ಯ ರಾಜವಂಶದ ಆಳ್ವಿಕೆಯಲ್ಲಿ ಸುಮಾರು 15 ನೇ ಶತಮಾನದಲ್ಲಿ ಹುಟ್ಟಿಕೊಂಡಿದೆ ಎಂದು ನಂಬಲಾಗಿದೆ.

  • News18 Kannada
  • Last Updated :
  • Hubli-Dharwad (Hubli), India
  • Share this:

ಹುಬ್ಬಳ್ಳಿ: ಭಾರತೀಯರಿಗೆ ಸೀರೆಯ (Traditional Saree) ಮೇಲಿನ ಮೋಹ ಎಂದಿಗೂ ಕಡಿಮೆಯಾಗುವುದಿಲ್ಲ.ಅದರಲ್ಲೂ ಸಾಂಪ್ರದಾಯಿಕ ಸೀರೆಗಳೆಂದರೆ ಎಲ್ಲರಿಗೂ ಅಚ್ಚುಮೆಚ್ಚು. ಸೀರೆಯಲ್ಲಿ ವರ್ಕ್‌ ಮಾಡಿದ್ದರಂತೂ ಅದರ ತೂಕ ಇನ್ನಷ್ಟು ಹೆಚ್ಚು. ಇಂದು ಬೇರೆ ಬೇರೆ ರೀತಿಯ ವರ್ಕ್‌ ಮಾಡಿರುವಂಥ ಸೀರೆಗಳು  (Saree In Market) ನಮಗೆ ಮಾರುಕಟ್ಟೆಯಲ್ಲಿ ಸಿಗುತ್ತವೆ. ಆದರೆ ಸಾಂಪ್ರದಾಯಿಕವಾಗಿ ಕಸೂತಿ ವರ್ಕ್‌  (Kasuthi Work) ಇರುವ ಸೀರೆಗಳ ಆಕರ್ಷಣೆ ಮಾತ್ರ ಬೇರೆಯೇ ಇರುತ್ತದೆ.


ಅಂದಹಾಗೆ ಇದೇ ಜನವರಿ 12 ರಂದು ಪ್ರಧಾನಿ ನರೇಂದ್ರ ಮೋದಿಯವರು 26 ನೇ ಆವೃತ್ತಿಯ ರಾಷ್ಟ್ರೀಯ ಯುವಜನೋತ್ಸವವನ್ನು ಉದ್ಘಾಟಿಸಲು ಹುಬ್ಬಳ್ಳಿಗೆ ಬಂದಿದ್ದರು. ಆಗ ಅವರಿಗೆ ಕಸೂತಿಯಲ್ಲಿ ದೇವಾಲಯದ ಅಲಂಕಾರವನ್ನು ಪ್ರತಿನಿಧಿಸುವ ರೇಷ್ಮೆಶಾಲು ಹೊದಿಸಲಾಗಿತ್ತು. ಆ ವಿಶಿಷ್ಟ ಡಿಸೈನ್‌ ಮೃದುವಾದ ಬಿಳಿಯ ಬಟ್ಟೆಯಲ್ಲಿ ಎದ್ದು ಕಾಣುತ್ತಿತ್ತು. ಅಂದಹಾಗೆ ಈ ಶಾಲು ಆರ್ಟಿಕ್ರಾಫ್ಟ್ಸ್‌ನ ಉತ್ಪನ್ನವಾಗಿದೆ. ಇದು ಕಸೂತಿ ಕಲೆಗಳ ಕರಕುಶಲ ಉದ್ಯಮವಾಗಿದೆ. ಇದನ್ನು ಧಾರವಾಡದ ಆರತಿ ಹಿರೇಮಠ್ ವಿನ್ಯಾಸಗೊಳಿಸಿದ್ದಾರೆ.


1989 ರಲ್ಲೇ ಹುಟ್ಟಿತ್ತು ಕನಸು!
ಆರತಿ ಅವರ ಈ ಸಾಹಸದ ಪರಿಕಲ್ಪನೆ ಹುಟ್ಟಿದ್ದು 1989 ರಲ್ಲಿ. ವಿವಾಹವಾಗಿ ಧಾರವಾಡಕ್ಕೆ ಬಂದ ವರ್ಷ ವಾಣಿಜ್ಯ ಪದವೀಧರರಾಗಿದ್ದ ಆರತಿ ತಮ್ಮ ಹೊಸ ಜೀವನದ ಆರಂಭದ ಜೊತೆಗೆ ತಮ್ಮ ಉದ್ಯಮಶೀಲತೆಯ ಪ್ರಯಾಣವನ್ನೂ ಅದೇ ವರ್ಷ ಆರಂಭಿಸಿದರು. ಈ ಮೂಲಕ ಅದ್ಭುತವಾದ ಇತಿಹಾಸ ಹೊಂದಿರುವ ಕಸೂತಿ ಕಲೆಗೆ ಪುನರುಜ್ಜೀವನ ನೀಡಿದ ಕೀರ್ತಿ ಆರತಿ ಅವರ ಆರ್ಟಿಕ್ರಾಫ್ಟ್ಸ್ಗೆ ಸಲ್ಲುತ್ತದೆ.


ಕಸೂತಿ ಕಥನ
ಕಸೂತಿ ಕಲೆಯು ಚಾಲುಕ್ಯ ರಾಜವಂಶದ ಆಳ್ವಿಕೆಯಲ್ಲಿ ಸುಮಾರು 15 ನೇ ಶತಮಾನದಲ್ಲಿ ಹುಟ್ಟಿಕೊಂಡಿದೆ ಎಂದು ನಂಬಲಾಗಿದೆ. ಇದರಲ್ಲಿ ಕರ್ನಾಟಕದಲ್ಲಿ ಮಹಿಳೆಯರು ನಿಪುಣರಾಗಿದ್ದಾರೆ. ಅವರು ತಮ್ಮ ಬಟ್ಟೆಗಳ ಮೇಲೆ ಕಸೂತಿ ಕೆಲಸ ಮಾಡುತ್ತಾರೆ. ಅಲ್ಲದೇ ಇವುಗಳಲ್ಲಿ ಕೆಲವು ವಿನ್ಯಾಸಗಳು ರಂಗೋಲಿಗಳಿಂದ ಪ್ರೇರಿತವಾಗಿವೆ ಎನ್ನುವುದು ಗಮನಾರ್ಹ.


ಕಸೂತಿ ಕಲೆ ಸುಲಭವಲ್ಲ
ಅಲ್ಲದೇ ಕಸೂತಿ ವಿಶಿಷ್ಟ ಕಲೆಯಾಗಿದೆ. ಇದನ್ನು ಸುಲಭವಾಗಿ ಪೆನ್ಸಿಲ್‌ ಅಚ್ಚಿನಿಂದ ಮಾಡಲಾಗುವುದಿಲ್ಲ. ಬದಲಾಗಿ ಒಬ್ಬ ಕುಶಲಕರ್ಮಿ ಕಸೂತಿಯನ್ನು ಬಟ್ಟೆಯ ಖಾಲಿ ಕ್ಯಾನ್ವಾಸ್‌ನಲ್ಲಿ ಮಾಡುತ್ತಾರೆ. ಈ ಕೆಲಸ ಕ್ಲಿಷ್ಟಕರವಾದದ್ದು. ಆದ್ದರಿಂದಲೇ ವರ್ಷಗಳಿಂದ ಕರಕುಶಲತೆಯನ್ನು ಕರಗತ ಮಾಡಿಕೊಂಡಿರುವ ಕುಶಲಕರ್ಮಿಗಳು ಮಾತ್ರ ಅದನ್ನು ಮಾಡಬಹುದು.


ದೇವಾಲಯಗಳು, ರಥ ಮತ್ತು ಪಲ್ಲಕ್ಕಿ, ಕಮಲ, ನವಿಲುಗಳು ಮುಂತಾದ ನೈಸರ್ಗಿಕ ಅಂಶಗಳಿಂದ ವಿನ್ಯಾಸಗಳನ್ನು ಎರವಲು ಪಡೆಯಲಾಗುತ್ತದೆ. ಒಮ್ಮೆ ಪೂರ್ಣಗೊಂಡ ನಂತರ, ಈ ವಿನ್ಯಾಸವು ಬಟ್ಟೆಯ ಎರಡೂ ಬದಿಗಳಲ್ಲಿ ಒಂದೇ ರೀತಿ ಕಾಣುತ್ತದೆ ಅನ್ನೋದು ವಿಶೇಷ. ಇದು ಈ ಕಸೂತಿ ರೂಪವನ್ನು ಅನನ್ಯಗೊಳಿಸುತ್ತದೆ.


ಮಹಿಳೆಯರಿಗೆ ಸಹಾಯ ಮಾಡಲೆಂದು ಆರಂಭವಾಯ್ತು ಉದ್ಯಮ
ಇನ್ನು ಈ ಉದ್ಯಮ ಆರಂಭಕ್ಕೆ ಕಾರಣವಾಗಿದ್ದು ಒಂದು ಸಾಮಾನ್ಯ ಘಟನೆ. 1990ರಲ್ಲಿ ಆರತಿಯವರನ್ನು ಭೇಟಿ ಮಾಡಲು ಧಾರವಾಡಕ್ಕೆ ಬಂದ ಒಂದಿಬ್ಬರು ಮಹಿಳೆಯರು ಏನಾದರೂ ಕೆಲಸ ನೀಡಬಹುದೇ ಎಂದು ಕೇಳುತ್ತಾರೆ. ಆರತಿಯವರು ಅವರಿಗೆ ಏನಾದರೂ ಸಹಾಯ ಮಾಡಲು ಬಯಸುತ್ತಾರೆ. ಇದೇ ಈ ಉದ್ಯಮ ಆರಂಭವಾಗಲು ಕಾರಣವಾಗುತ್ತದೆ.


“ನನಗೆ ಆ ಮಹಿಳೆಯರು ಪರಿಚಯವಿದ್ದವರೇ ಆಗಿದ್ದರು. ನನ್ನ ತಂದೆ ಧಾರವಾಡದಲ್ಲಿ ಕೆಲಸ ಮಾಡುತ್ತಿದ್ದಾಗ ಅವರು ನನ್ನ ತಾಯಿಯ ಸೀರೆಗಳನ್ನು ಕಸೂತಿ ಮಾಡುತ್ತಿದ್ದರು. ನಂತರ ನಾವು ಬೇರೆ ಊರಿಗೆ ಹೋದ ಬಳಿಕ ಅವರೊಂದಿಗೆ ಅಷ್ಟಾಗಿ ಸಂಪರ್ಕವಿರಲಿಲ್ಲ. ಆದರೆ ನಾನು ಈಗ ಮತ್ತೆ ಧಾರವಾಡಕ್ಕೆ ಹಿಂದಿರುಗಿದ್ದೇನೆ. ಹಾಗಿದ್ದರೆ ನಾನು ಮತ್ತೆ ಅವರಿಗೆ ಕೆಲಸ ನೀಡಬಹುದೆ ಎಂದು ಯೋಚಿಸಿದ್ದಾಗಿ ಆರತಿ ಹೇಳುತ್ತಾರೆ.


ಬ್ಯುಸಿನೆಸ್ ಬೆಳೆಸಿದ ಕಥೆಯೇ ರೋಚಕ
ನಂತರ ಆ ಮಹಿಳೆಯರಿಗೆ ಸಹಾಯ ಮಾಡಲು ಉತ್ಸುಕರಾದ ಆರತಿ ಅವರು ಬೆಂಗಳೂರಿನ ಅಂಗಡಿಗಳೊಂದಿಗೆ ಸಂಪರ್ಕ ಬೆಳೆಸಿದರು. ಈ ಮೂಲಕ ಅವರು ನಿಯಮಿತವಾಗಿ ಆರ್ಡರ್‌ಗಳನ್ನು ಪಡೆಯಲು ಸಾಧ್ಯವಾಯ್ತು. ಸುಮಾರು ಒಂದು ದಶಕದ ಕಾಲ ಇದನ್ನು ಕೆಲಸ ಮಾಡಿದ ನಂತರ, 2000 ರಲ್ಲಿ ಅವರು ಇದನ್ನು ಸಾಹಸೋದ್ಯಮವಾಗಿ ಮಾಡಲು ಅವರು ನಿರ್ಧರಿಸುತ್ತಾರೆ. ಮಕ್ಕಳೂ ದೊಡ್ಡವರಾದ್ದರಿಂದ ತಾವು ಸಂಫೂರ್ಣವಾಗಿ ಈ ಉದ್ಯಮದಲ್ಲೇ ತೊಡಗಿಕೊಳ್ಳಬಹುದು ಎಂದು ಯೋಚಿಸಿದ್ದಾಗಿ ಅವರು ಹೇಳುತ್ತಾರೆ.


ಸಾಹಸೋದ್ಯಮದಲ್ಲಿ ಏರಿಳಿತ
ಆರತಿಯವರ ಸಾಹಸೋದ್ಯಮ ಆಸೆ ಇಡೀ ವಿಶ್ವಕ್ಕೆ ಕೇಳಿಸಿತೆಂದು ತೋರುತ್ತದೆ. 2003ರಲ್ಲಿ ಧಾರವಾಡದ ಸರ್ಕಾರಿ ಸಂಸ್ಥೆಯಿಂದ ಅವರಿಗೆ ಅವಕಾಶ ಸಿಕ್ಕಿತು."ಭಾರತದ ಕುಶಲಕರ್ಮಿಗಳಿಗಾಗಿ ನಾವು ಏನನ್ನಾದರೂ ಮಾಡಬೇಕೆಂದು ಬಯಸಿದ್ದ ಆರತಿ ಅದೇ ವರ್ಷ SEMA (ಕುಶಲಕರ್ಮಿಗಳ ಸಬಲೀಕರಣ ಮತ್ತು ಸಜ್ಜುಗೊಳಿಸುವಿಕೆ) ಅನ್ನು ಪ್ರಾರಂಭಿಸಿದರು.
ನಂತರದಲ್ಲಿ ಕಸೂತಿಯಲ್ಲಿ ತರಬೇತಿ ಪಡೆದ ಧಾರವಾಡದ ಮಹಿಳಾ ಕುಶಲಕರ್ಮಿಗಳ ಮೇಲೆ SEMA ಗಮನಹರಿಸಿತು. ಆದರೆ ಕಡಿಮೆ ಬೇಡಿಕೆಯಿಂದಾಗಿ ಹೆಚ್ಚು ಕೆಲಸ ಸಿಗಲಿಲ್ಲ. ಬಳಿಕ "ಕುಶಲಕರ್ಮಿಗಳಿಗೆ ಆರೋಗ್ಯ ವಿಮೆ, ಅವರ ಮಕ್ಕಳಿಗೆ ಸ್ಕಾಲರ್‌ಶಿಪ್‌ಗಳು, ತರಬೇತಿ ಕಾರ್ಯಕ್ರಮಗಳು ಇತ್ಯಾದಿಗಳನ್ನು ನೀಡುವಂತೆ ನಾವು ಒತ್ತಾಯಿಸಿದ್ದೆವು. ಈ ಕಾರ್ಯಕ್ರಮವು 2010 ರವರೆಗೆ ಸುಗಮವಾಗಿ ನಡೆಯಿತು. ನಂತರ ನಾವು ಅನುದಾನವನ್ನು ಪಡೆಯದ ಕಾರಣ ನಿಲ್ಲಿಸಬೇಕಾಯಿತು" ಎಂದು ಅವರು ವಿವರಿಸುತ್ತಾರೆ.


ನಿರಾಶರಾಗಿದ್ದವರಿಗೆ ಸಹಾಯ ಮಾಡಿದ್ದು ಆನ್‌ಲೈನ್‌ ವೇದಿಕೆ
ಇನ್ನೇನು ಕನಸು ಕೊನೆಗೊಂಡಿತು ಎಂದು ನಿರಾಶೆಗೊಂಡಿದ್ದ ಆರತಿ ಅವರಿಗೆ ಮತ್ತೊಂದು ಆಶಾಭಾವನೆ ಚಿಗುರುವಂತೆ ಮಾಡಿದ್ದು NIFT. 2011ರಲ್ಲಿ ಕ್ಲಸ್ಟರ್‌ಗೆ ಭೇಟಿ ನೀಡಿದ NIFT (ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಫ್ಯಾಶನ್ ಟೆಕ್ನಾಲಜಿ) ವಿದ್ಯಾರ್ಥಿಗಳು ಅವರ ನೆರವಿಗೆ ಬಂದರು. ಆರತಿ ಹೇಳುವಂತೆ ಈ ಕಾರ್ಯಕ್ರಮವು ಅವರಲ್ಲಿ ಕುಶಲಕರ್ಮಿಗಳನ್ನು ಸಬಲೀಕರಣಗೊಳಿಸುವ ಉತ್ಸಾಹವನ್ನು ಇನ್ನಷ್ಟು ಹೆಚ್ಚಿಸಿತು.


ಆನ್​ಲೈನ್ ಮಾರುಕಟ್ಟೆಯ ಹುಡುಕಾಟ
“ಆ ಯುವಕರು ತಮ್ಮ ಪದವಿ ವರ್ಷದಲ್ಲಿದ್ದರು. ಬ್ಯುಸಿನೆಸ್‌ನಲ್ಲಿ ತಮ್ಮ ಇಂಟರ್ನ್‌ಶಿಪ್ ಮಾಡುತ್ತಿದ್ದರು. ಅವರು ಫೇಸ್‌ಬುಕ್ ಪೇಜ್‌ ತೆರೆಯಲು ಮುಂದಾದರು. ಕಸೂತಿ ಮಾಡಿದ ಸೀರೆಗಳನ್ನು ಮಾರಾಟ ಮಾಡುವ ಆನ್‌ಲೈನ್ ಮಾರುಕಟ್ಟೆಯನ್ನು ರಚಿಸಿದ್ದು ಮಹತ್ವದ ತಿರುವು ನೀಡಿತು ಎಂಬುದಾಗಿ ಆರತಿ ಹೇಳುತ್ತಾರೆ.


2012ರ ಬಳಿಕ ಜನರು ಇದ್ದಕ್ಕಿದ್ದಂತೆ ಸಾಂಪ್ರದಾಯಿಕ ಕರಕುಶಲ ವಸ್ತುಗಳ ಬಗ್ಗೆ ಹೆಚ್ಚು ಆಸಕ್ತಿ ತೋರತೊಡಗಿದರು. ಹೊಸ ಹೊಸ ಡಿಸೈನ್‌ಗಳನ್ನು ಖರೀದಿಸತೊಡಗಿದರು. ಇದು ನಮ್ಮ ಉದ್ಯಮದ ಮೇಳೆ ಸಾಕಷ್ಟು ಪ್ರಭಾವ ಬೀರಿತು ಎಂಬುದಾಗಿ ಅವರು ಹೇಳುತ್ತಾರೆ.


ಯಶಸ್ಸಿನ ಪಯಣ ಆರಂಭ
ಆರ್ಟಿಕ್ರಾಫ್ಟ್‌ನ ಉತ್ಪನ್ನಗಳು ಶಾಲುಗಳು, ಸೀರೆ, ದುಪಟ್ಟಾ, ಮತ್ತು ದೇವಾಲಯದ ವಾಸ್ತುಶಿಲ್ಪ, ಪಕ್ಷಿಗಳು, ಭೌಗೋಳಿಕ ವಿನ್ಯಾಸಗಳು, ದೇವತೆಗಳ ಆಕೃತಿಗಳು ಮತ್ತು ಹೆಚ್ಚಿನವುಗಳಂತಹ ಮೋಟಿಫ್‌ಗಳೊಂದಿಗೆ ಕಸೂತಿ ಮಾಡಿದ ಚೀಲಗಳನ್ನು ಒಳಗೊಂಡಿವೆ.


 4 ವಿಧದ ಹೊಲಿಗೆ


*ಗವಂತಿ (ಡಬಲ್ ರನ್ನಿಂಗ್ ಸ್ಟಿಚ್)


*ಮುರ್ಗಿ (ಜಿಗ್ ಜಾಗ್ ಸ್ಟಿಚ್)


*ನೇಗಿ (ರನ್ನಿಂಗ್ ಸ್ಟಿಚ್)


*ಮೆಂತಿ (ಕ್ರಾಸ್ ಸ್ಟಿಚ್)


ತಿಂಗಳುಗಟ್ಟಲೆ ಅಭ್ಯಾಸ ಬೇಕು
"ಕುಶಲಕರ್ಮಿಗಳು ಪ್ರತಿ ಮಾದರಿಯ ಎಳೆಗಳನ್ನು ಎಣಿಸುತ್ತಾರೆ. ಅವರು ಈ ಕಸೂತಿ ಚೆನ್ನಾಗಿ ಕೈಕೂರಬೇಕೆಂದರೆ ಅದಕ್ಕೂ ಮೊದಲು ತಿಂಗಳುಗಟ್ಟಲೆ ಅಭ್ಯಾಸ ಮಾಡಬೇಕಾಗುತ್ತದೆ ಎಂಬುದಾಗಿ ಆರತಿ ಹೇಳುತ್ತಾರೆ.


ಇದನ್ನೂ ಓದಿ: Bengaluru: ಸರ್ಕಾರದ ವಿರುದ್ಧ ಸಿಡಿದೆದ್ದ ಸಾರಿಗೆ ನೌಕರರು; ರಾಜ್ಯದಲ್ಲಿ ಮತ್ತೆ ಸ್ತಬ್ಧವಾಗುತ್ತಾ ಸಾರಿಗೆ ಸಂಚಾರ?


"ನಾವು ಇಲ್ಲಿಯವರೆಗೆ 850 ಕುಶಲಕರ್ಮಿಗಳಿಗೆ ತರಬೇತಿ ನೀಡಿದ್ದೇವೆ ಮತ್ತು 200 ಸಕ್ರಿಯ ಕುಶಲಕರ್ಮಿಗಳನ್ನು ಹೊಂದಿದ್ದೇವೆ" ಎಂದು ಅವರು ಹೇಳುತ್ತಾರೆ. ಆರ್ಟಿಕ್ರಾಫ್ಟ್‌ ಫ್ಯಾಬ್‌ ಇಂಡಿಯಾ, ಐಟೋಕ್ರಿ, ಇತ್ಯಾದಿ ಬ್ರ್ಯಾಂಡ್‌ಗಳಿಗೆ ರಿಟೇಲ್‌ ಮಾರಾಟ ಮಾಡುತ್ತವೆ. ನಮ್ಮ ದೇಶದಲ್ಲಿ ಮಾತ್ರವಲ್ಲದೇ ಯುಎಸ್, ಯುಕೆ, ಕೆನಡಾ, ಆಸ್ಟ್ರೇಲಿಯಾ ಮತ್ತು ಸಿಂಗಾಪುರಕ್ಕೂ ಸಹ ಉತ್ಪನ್ನಗಳನ್ನು ರಫ್ತು ಮಾಡಲಾಗುತ್ತದೆ.


40 ಲಕ್ಷ ರೂಪಾಯಿ ವಹಿವಾಟು
ಸದ್ಯ ಈ ಬ್ರ್ಯಾಂಡ್ ಅನ್ನು 8 ಜನರ ತಂಡವು ನಿರ್ವಹಿಸುತ್ತದೆ. 3,000 ಚದರ ಅಡಿ ಜಾಗವನ್ನು ಹೊಂದಿದ್ದು ಅಲ್ಲಿಯೇ ಉತ್ಪಾದನೆಯನ್ನು ಮಾಡಲಾಗುತ್ತದೆ. ಆರ್ಟಿಕ್ರಾಫ್ಟ್ಸ್ ಸುಮಾರು 50 ಸೀರೆಗಳ ಮಾಸಿಕ ಆರ್ಡರ್‌ಗಳನ್ನು ಪಡೆಯುತ್ತದೆ. ಅಲ್ಲದೇ ವರ್ಷಕ್ಕೆ ಸುಮಾರು 40 ಲಕ್ಷ ರೂಪಾಯಿಗಳ ವಹಿವಾಟನ್ನು ನಡೆಸುವುದಾಗಿ ಆರತಿ ಹೇಳುತ್ತಾರೆ.


ಕೆಲಸದ ಬಗ್ಗೆ ಹೆಮ್ಮೆ
ಅಲ್ಲದೇ ಅವರು ರೂ 3,000 ಕ್ಕೆ ಐದು ದಿನಗಳ ಅವಧಿಯ ತರಬೇತಿ ಕಾರ್ಯಕ್ರಮಗಳನ್ನು ಸಹ ನಡೆಸುತ್ತಾರೆ. ಅದರಲ್ಲಿ ಅವರು ಆಸಕ್ತರಿಗೆ ವಸ್ತುಗಳನ್ನು ಒದಗಿಸುತ್ತಾರೆ."ನಾನು ಈ ಪರಂಪರೆಯ ಕಸೂತಿ ರೂಪವನ್ನು ಪುನರುಜ್ಜೀವನಗೊಳಿಸುವ ಭಾಗವಾಗಿದ್ದೇನೆ. ಹಾಗಾಗಿ ನನ್ನ ಕೆಲಸದ ಬಗ್ಗೆ ನನಗೆ ಹೆಮ್ಮೆಯಿದೆ. ನಾನು ಅದೃಷ್ಟಶಾಲಿ ಎಂದು ಭಾವಿಸುವುದಾಗಿ ಆರತಿ ಹೇಳುತ್ತಾರೆ.


ಇದನ್ನೂ ಓದಿ: Employees: ಸರ್ಕಾರಿ ನೌಕರರಿಗೆ ಸಿಹಿಸುದ್ದಿ, ಜನವರಿ 31ರ ನಂತರ ಮಹತ್ವದ ಘೋಷಣೆ!


ಒಟ್ಟಾರೆ ಆಧುನಿಕತೆಯಿಂದಾಗಿ ಒಂದು ಕಾಲದಲ್ಲಿ ಮಂಕಾಗಿದ್ದ ಕಲೆಯನ್ನು ಮತ್ತೆ ಪುನರುಜ್ಜೀವನಗೊಳಿಸಿ ಅವರಕ್ಕೆ ಮತ್ತೆ ಬೇಡಿಕೆ ತರುವಲ್ಲಿ ಆರತಿಯವರ ಶ್ರಮ ದೊಡ್ಡವು. ವಾಣಿಜ್ಯೋದ್ಯಮಿ ಆರತಿ ಹಿರೇಮಠ ಕಸೂತಿಯನ್ನು ಜೀವಂತವಾಗಿಡಲು ಸಾಕಷ್ಟು ಶ್ರಮಿಸಿದ್ದಾರೆ. ಅವರ ಸಾಹಸೋದ್ಯಮ ಆರ್ಟಿಕ್ರಾಫ್ಟ್ಸ್ ಈ ಪ್ರಾಚೀನ ಕಸೂತಿಯನ್ನು ಪ್ರಪಂಚದಾದ್ಯಂತ ಮಾರಾಟ ಮಾಡುತ್ತಿದೆ. ಪ್ರತಿ ವರ್ಷವೂ ಲಕ್ಷಗಳ ವಹಿವಾಟು ನಡೆಸುತ್ತಿದೆ. ಈ ಮೂಲಕ ಅನೇಕ ಕುಶಲಕರ್ಮಿಗಳಿಗೆ ಆಸರೆಯಾಗಿದ್ದಾರೆ.

Published by:ಗುರುಗಣೇಶ ಡಬ್ಗುಳಿ
First published: