ಪ್ರಪಂಚದಾದ್ಯಂತ ಉದ್ಯೋಗಿಗಳ (Employs) ವಜಾಗೊಳಿಸುವಿಕೆ ಮಹಾಪರ್ವ ಇನ್ನೂ ನಡೆಯುತ್ತಿದೆ. ದೊಡ್ಡ ದೊಡ್ಡ (Large) ಕಂಪನಿಗಳೇ (Company) ಉದ್ಯೋಗಿಗಳನ್ನು ಮುಲಾಜಿಲ್ಲದೆ ಮನೆಗೆ ಕಳುಹಿಸಿವೆ. ಮೆಟಾ (Meta), ಅಮೆಜಾನ್ (Amazon), ಟ್ವಿಟರ್ ( Twitter ), ಮೈಕ್ರೋಸಾಫ್ಟ್ (Microsoft) ಹೀಗೆ ಹತ್ತಾರು ಕಂಪನಿಗಳು ತಮ್ಮ ಅನೇಕ ಉದ್ಯೋಗಿಗಳಿಗೆ ಗೇಟ್ಪಾಸ್ ನೀಡಿದೆ. ಈಗ ಇವರುಗಳ ಸಾಲಿಗೆ ಗೋಲ್ಡ್ಮನ್ ಸ್ಯಾಕ್ಸ್ ಕೂಡ ಸೇರ್ಪಡೆಯಾಗಿದೆ.
3,200 ಉದ್ಯೋಗಿಗಳಿಗೆ ಗೋಲ್ಡ್ಮನ್ ಸ್ಯಾಕ್ಸ್ ಗೇಟ್ಪಾಸ್
ಗೋಲ್ಡ್ಮನ್ ಸ್ಯಾಕ್ಸ್ ತನ್ನ ಉದ್ಯೋಗ ಕಡಿತವನ್ನು ಪ್ರಾರಂಭಿಸಿದ್ದು, ಸುಮಾರು 3,200 ಉದ್ಯೋಗಿಗಳನ್ನು ಅಂದರೆ ಸಂಸ್ಥೆಯು ತನ್ನ 6.5 % ಉದ್ಯೋಗಿಗಳನ್ನು ಕೈಬಿಟ್ಟಿದೆ.
ಈ ಬಗ್ಗೆ ಹಲವು ಉದ್ಯೋಗಿಗಳು ಲಿಂಕ್ಡ್ಇನ್ ಮತ್ತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಮೂಲಕ ಕಂಪನಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಐಐಟಿ-ಖರಗ್ಪುರ ಪದವೀಧರನನ್ನು ಕೈಬಿಟ್ಟ ಸಂಸ್ಥೆ
ಗೋಲ್ಡ್ಮನ್ ಸ್ಯಾಕ್ಸ್ ನ ಬೆಂಗಳೂರು ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದ 23 ವರ್ಷದ ಐಐಟಿ-ಖರಗ್ಪುರ ಪದವೀಧರ ಶುಭಂ ಸಾಹು ಈ ಬಗ್ಗೆ ಲಿಂಕ್ಡ್ಇನ್ ಪೋಸ್ಟ್ ಹಂಚಿಕೊಂಡಿದ್ದಾರೆ.
ವಜಾಗೊಂಡ ಉದ್ಯೋಗಿಗಳಲ್ಲಿ ಶುಭಂ ಸಾಹು ಸಹ ಸೇರಿದ್ದು, ಹೊಸ ವರ್ಷ ಆರಂಭಿಸಲು ವಿಭಿನ್ನ ಮಾರ್ಗ ಸಿಕ್ಕಿದೆ ಎಂದು ಬರೆದುಕೊಂಡಿದ್ದಾರೆ.
ಹುಟ್ಟುಹಬ್ಬದ ಬಳಿಕ ಶುಭಂ ಸಾಹುಗೆ ಶಾಕ್
ಶುಭಂ ಸಾಹು ಸರಿಸುಮಾರು ಆರು ತಿಂಗಳ ಹಿಂದೆ ಸಾಫ್ಟ್ವೇರ್ ಡೆವಲಪರ್ ಆಗಿ ಸಂಸ್ಥೆಯನ್ನು ಸೇರಿಕೊಂಡರು. ಅವರು ತಮ್ಮ ಹುಟ್ಟುಹಬ್ಬದ ನಂತರ ಜನವರಿ 11 ರಂದು ಕಂಪನಿಯಿಂದ ಉದ್ಯೋಗದಿಂದ ವಜಾಗೊಳಿಸಿರುವ ಬಗ್ಗೆ ಮೇಲ್ ಸ್ವೀಕರಿಸಿದರು.
ಪ್ರಸ್ತುತ ಉದ್ಯೋಗ ಕಳೆದುಕೊಂಡುರುವ ಸಾಹು ಲಿಂಕ್ಡ್ಇನ್ನಲ್ಲಿ ಹೊಸ ಉದ್ಯೋಗದ ಹುಡುಕಾಟದಲ್ಲಿದ್ದಾರೆ.
ಕಂಪನಿಗೆ ಕೃತಜ್ಞತೆ ತಿಳಿಸಿದ ಸಾಹು
ಶುಭಂ ಸಾಹು, ತಮ್ಮ ಕೆಲಸ ಕಳೆದುಕೊಂಡ ಬಗ್ಗೆ ಪೋಸ್ಟ್ ಮಾಡಿದ್ದಾರೆ "ವಾವ್, ಇದು ನಿಜವಾಗಿಯೂ ಹೊಸ ವರ್ಷವನ್ನು ಪ್ರಾರಂಭಿಸಲು ವಿಭಿನ್ನ ಮಾರ್ಗವಾಗಿದೆ" ಎಂದು ಬರೆದಿದ್ದಾರೆ.
"ಇದು ನನ್ನ ಮೊದಲ ಕೆಲಸ ಮತ್ತು ಸಾಫ್ಟ್ವೇರ್ ಅಭಿವೃದ್ಧಿಯಲ್ಲಿ ನನ್ನ ಮೊದಲ ಅನುಭವವಾಗಿದೆ. ಜಿಎಸ್ (ಗೋಲ್ಡ್ಮನ್ ಸ್ಯಾಕ್ಸ್) ನಲ್ಲಿ ಕೆಲಸ ಮಾಡಿದ ನನ್ನ ಅವಧಿ ಕಡಿಮೆಯಿದ್ದರೂ, ಅಂತಹ ಅನುಕೂಲಕರ ವಾತಾವರಣದಲ್ಲಿ ಕಲಿಯಲು ಮತ್ತು ಬೆಳೆಯಲು ನನಗೆ ಅವಕಾಶ ಸಿಕ್ಕಿದ್ದಕ್ಕಾಗಿ ನಾನು ಕಂಪನಿಗೆ ಕೃತಜ್ಞನಾಗಿದ್ದೇನೆ" ಎಂದು ಹೇಳಿದ್ದಾರೆ.
ಲಿಂಕ್ಡ್ಇನ್ನಲ್ಲಿ ಹೊಸ ಕೆಲಸ ಹುಡುಕಾಟದಲ್ಲಿ ಗೋಲ್ಡ್ಮನ್ ಸ್ಯಾಕ್ಸ್ ಉದ್ಯೋಗಿಗಳು
ಸಾಹು ಮಾತ್ರವಲ್ಲ, ಅನೇಕ ಗೋಲ್ಡ್ಮನ್ ಸ್ಯಾಕ್ಸ್ ಉದ್ಯೋಗಿಗಳು ಲಿಂಕ್ಡ್ಇನ್ ನಲ್ಲಿ ಹೊಸ ಅವಕಾಶಗಳನ್ನು ಹುಡುಕುತ್ತಿದ್ದಾರೆ. ಭಾರತದ ಸಾಫ್ಟ್ವೇರ್ ಇಂಜಿನಿಯರ್ ಶಿಲ್ಪಿ ಸೋನಿ ಅವರು ಟೆಕ್ಸಾಸ್ನ ಕಂಪನಿಯಲ್ಲಿ 1.7 ವರ್ಷಗಳ ಕೆಲಸ ಮಾಡಿದ್ದು, ಇವರೂ ಸಹ ವಜಾ ಪ್ರಕಿಯೆಗೆ ಒಳಗಾಗಿದ್ದಾರೆ.
ಲಿಂಕ್ಡ್ಇನ್ನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿದ ಅವರು "ಜೀವನವು ಎಷ್ಟು ಬೇಗನೆ ತಲೆಕೆಳಗಾಗಬಹುದು" ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಗೋಲ್ಡ್ಮನ್ ಸ್ಯಾಕ್ಸ್ ನ ಕ್ರಮದಿಂದಾಗಿ ಯುನೈಟೆಡ್ ಸ್ಟೇಟ್ಸ್ನಲ್ಲಿ H-1B ವೀಸಾದಲ್ಲಿರುವ ಭಾರತೀಯ ಉದ್ಯೋಗಿಗಳು ತೊಂದರೆ ಅನುಭವಿಸುವಂತಾಗಿದೆ.
ಇದನ್ನೂ ಓದಿ: Apple Company: ಈ ರೀತಿಯೂ ಆ್ಯಪಲ್ ಕಂಪನಿಗೆ ದೂರು ದಾಖಲಿಸಬಹುದಾ? ಬೆಂಗಳೂರಿನ ವ್ಯಕ್ತಿ ಟ್ವಿಟರ್ನಲ್ಲಿ ಫುಲ್ ವೈರಲ್
"ನನ್ನ ಕುಟುಂಬದಲ್ಲಿ ವಿದೇಶದಲ್ಲಿ ಸ್ನಾತಕೋತ್ತರ ಪದವಿ ಪಡೆದ ಮೊದಲ ವ್ಯಕ್ತಿ ಎಂಬುದಕ್ಕೆ ನಾನು ಹೆಮ್ಮೆ ಪಡುತ್ತೇನೆ. ನಾನು ಗ್ರಾಮೀಣ ಕುಟುಂಬದಿಂದ ಬಂದಿದ್ದೇನೆ.
ಆದ್ದರಿಂದ ಸಾಮಾಜಿಕ ಮತ್ತು ಆರ್ಥಿಕ ನಿರ್ಬಂಧಗಳನ್ನು ನಿವಾರಿಸಿಕೊಂಡು ಇಲ್ಲಿಗೆ ಬರುವುದು ಸವಾಲಾಗಿತ್ತು. ನಾನು ಪಟ್ಟ ಕಷ್ಟಗಳನ್ನು ನೆನಸಿಕೊಂಡರೆ ವಜಾಗೊಳಿಸಿರುವುದು ನೋವುಂಟುಮಾಡುತ್ತದೆ.
ಆದರೆ, ಇದು ಯುಎಸ್ನಲ್ಲಿ ನನ್ನ ಪ್ರಯಾಣದ ಅಂತ್ಯವಲ್ಲ, ನಾನು ಇನ್ನೂ ಭರವಸೆ ಹೊಂದಿದ್ದೇನೆ. ಹಾಗಾಗಿ, ಹೋರಾಟವನ್ನು ಮುಂದುವರಿಸಲು ಮತ್ತು ಹೊಸ ಕೆಲಸ ಹುಡುಕಲು ನಾನು ನಿರ್ಧರಿಸಿದ್ದೇನೆ" ಎಂದಿದ್ದಾರೆ.
ಗೋಲ್ಡ್ಮನ್ ಸ್ಯಾಕ್ಸ್
ಗೋಲ್ಡ್ಮನ್ ಸ್ಯಾಕ್ಸ್ ಗ್ರೂಪ್ ಇಂಕ್ ಅಮೇರಿಕಾದ ಒಂದು ಬಹುರಾಷ್ಟ್ರೀಯ ಸಂಸ್ಥೆಯಾಗಿದ್ದು ಜಾಗತಿಕ ಹೂಡಿಕೆ ಬ್ಯಾಂಕಿಂಗ್, ಹೂಡಿಕೆ ನಿರ್ವಹಣೆ, ಭದ್ರತಾ, ಮತ್ತು ಇತರ ಹಣಕಾಸು ಸೇವೆಗಳು, ಮುಖ್ಯವಾಗಿ ಸಾಂಸ್ಥಿಕ ಗ್ರಾಹಕರೊಂದಿಗೆ ತೊಡಗಿಸಿಕೊಂಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ