ದೇಶದ ಅತಿದೊಡ್ಡ ಐಟಿ ಕಂಪನಿ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್)(Tata Consultancy Services) ತನ್ನ ಉದ್ಯೋಗಿಗಳಿಗೆ (Employees)ಭಾರಿ ಬಂಪರ್ ವೇತನ ನೀಡಿದೆ. ಸಿಬ್ಬಂದಿಗಳಿಗೆ ವೇತನ ಹೆಚ್ಚಿಸುವುದಾಗಿ ಈ ವರ್ಷ ಅಕ್ಟೋಬರ್ನಲ್ಲಿ ಘೋಷಿಸಿತ್ತು.
ಟಿಸಿಎಸ್ ಉದ್ಯೋಗಿಗಳಿಗೆ 20% ವೇತನ ಹೆಚ್ಚಳ
ಪ್ರಸ್ತುತ ಟಿಸಿಎಸ್ ತನ್ನ 70% ಉದ್ಯೋಗಿಗಳಿಗೆ ಕ್ರಿಸ್ಮಸ್ ಆಫರ್ ನೀಡಿದ್ದು, 20% ವೇತನ ಹೆಚ್ಚಳವನ್ನು ನೀಡಿದೆ. ಹಾಗೆಯೇ ಇನ್ನುಳಿದ ಉದ್ಯೋಗಿಗಳಿಗೆ ಅವರ ಕಾರ್ಯಕ್ಷಮತೆಯ ಆಧಾರದ ಮೇಲೆ ವೇತನ ಹೆಚ್ಚಳವನ್ನು ನೀಡಲು ನಿರ್ಧರಿಸಲಾಗಿದೆ.
ಹೊಸ ವರ್ಷಕ್ಕೆ ಬಂಪರ್ ಗಿಫ್ಟ್
ಟಿಸಿಎಸ್ ಏಕೀಕೃತ ಸಂಸ್ಥೆಯಲ್ಲಿ 6 ಲಕ್ಷ ಉದ್ಯೋಗಿಗಳಿದ್ದು, ಹೊಸ ವರ್ಷಕ್ಕೆ ಕಂಪನಿಯಿಂದ ಒಂದೊಳ್ಳೆ ಉಡುಗೊರೆ ಸಿಕ್ಕಿದೆ ಎನ್ನಬಹುದು.
ಲಾಭದಲ್ಲಿ ಟಿಸಿಎಸ್ ಸಂಸ್ಥೆ
ಟಿಸಿಎಸ್ ದೇಶದ ಅತ್ಯುತ್ತಮ ಸಂಸ್ಥೆಯಾಗಿದ್ದು, ಲಾಭದಾಯಕವಾಗಿ ಮುಂದುವರೆಯುತ್ತಿದೆ. ಹಿಂದಿನ ತ್ರೈಮಾಸಿಕದಲ್ಲಿ ಕಂಪನಿಯ ನಿವ್ವಳ ಲಾಭವು 8% ರಷ್ಟು ಏರಿಕೆಯಾಗಿದ್ದು, 10,000 ಕೋಟಿಗಳಿಗಿಂತ ಹೆಚ್ಚು ಲಾಭ ಪಡೆದುಕೊಂಡಿದೆ. ಭಾರಿ ಲಾಭ ಗಳಿಕೆಯಲ್ಲಿರುವ ಕಂಪನಿ ಸದ್ಯ ಉದ್ಯೋಗಿಗಳಿಗೆ ಭಾರಿ ವೇತನ ಹೆಚ್ಚಳವನ್ನು ನೀಡಲು ಕೂಡ ಯೋಜನೆ ರೂಪಿಸಿದೆ.
ಇದನ್ನೂ ಓದಿ: Career Tips: 2023ರಲ್ಲಿ ಪ್ರಮೋಷನ್, ಹೈಕ್ ಸಿಗಬೇಕೆಂದರೆ ವರ್ಷದ ಕೊನೆಯಲ್ಲಿ ಈ ದಾಖಲೆಗಳನ್ನು ಸಂಗ್ರಹಿಸಿ
ಕಂಪನಿಯ ತ್ರೈಮಾಸಿಕ ಫಲಿತಾಂಶಗಳನ್ನು ಸಾರ್ವಜನಿಕಗೊಳಿಸಿದ ನಂತರ ಕಂಪನಿಯ ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿ ಮಿಲಿಂದ್ ಲಕ್ಕರ್ ಸೋಮವಾರ ಈ ಘೋಷಣೆ ಮಾಡಿದ್ದಾರೆ. ಪ್ರಸಕ್ತ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ ಕಂಪನಿಯು ತನ್ನ 70% ಉದ್ಯೋಗಿಗಳಿಗೆ ಎಲ್ಲಾ ವೇರಿಯೇಬಲ್ಗಳನ್ನು ಪಾವತಿಸಲಿದೆ ಎಂದು ಅವರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಉದ್ಯೋಗಿಗಳಿಗೆ 100% ವೇರಿಯಬಲ್ ಪೇ
ಟಿಸಿಎಸ್ ಕೆಲವು ಉದ್ಯೋಗಿಗಳಿಗೆ ಜೂನ್ ವೇರಿಯಬಲ್ ಪೇ ಪಾವತಿಯನ್ನು ಒಂದು ತಿಂಗಳ ಕಾಲ ವಿಳಂಬಗೊಳಿಸಿದೆ ಎಂದು ವರದಿಯಾಗಿತ್ತು. ಆ ವರದಿಗಳ ಬೆನ್ನಲ್ಲೇ ಆಗಸ್ಟ್ನಲ್ಲಿ ತನ್ನ 4,00,000 ಉದ್ಯೋಗಿಗಳಿಗೆ ಶೇ. 100ರಷ್ಟು ವೇರಿಯಬಲ್ ಪೇಯನ್ನು ಪಾವತಿಸುವುದಾಗಿ ಹೇಳಿತ್ತು. ಈಗಲೂ ಟಿಸಿಎಸ್ ಉದ್ಯೋಗಿಗಳಿಗೆ 100% ವೇರಿಯಬಲ್ ಪರಿಹಾರ ಯೋಜನೆಯನ್ನು ಜಾರಿಗೆ ತಂದಿದೆ.
ಈ ವರ್ಷದ ಮೊದಲ ತ್ರೈಮಾಸಿಕದಲ್ಲಿ ಐಟಿ ಕಂಪನಿಗಳಾದ ಟಿಸಿಎಸ್, ವಿಪ್ರೋ ಮತ್ತು ಇನ್ಫೋಸಿಸ್ ಎಲ್ಲಾ ತಮ್ಮ ಉದ್ಯೋಗಿಗಳಿಗೆ ವೇರಿಯಬಲ್ ವೇತನವನ್ನು ಕಡಿಮೆಗೊಳಿಸಿದ್ದವು. ವಿಪ್ರೋದಲ್ಲಿ ಪ್ರವೇಶ ಮಟ್ಟದ ಉದ್ಯೋಗಿಗಳು ಹಿರಿಯ ಸಿಬ್ಬಂದಿ ಪಡೆಯುವ ವೇರಿಯಬಲ್ ಸಂಭಾವನೆಯ 70% ಅನ್ನು ಮಾತ್ರ ಪಡೆಯುತ್ತಿದ್ದರು. ಇನ್ಫೋಸಿಸ್ ಕೂಡ ಇದೇ ಹಾದಿಯನ್ನು ಅನುಸರಿಸಿತು ಮತ್ತು ಒಟ್ಟು ಉದ್ಯೋಗಿ ಸಂಭಾವನೆಯ ಮೇಲಿನ ಮಿತಿಯನ್ನು ಜೂನ್ ತ್ರೈಮಾಸಿಕದಲ್ಲಿ ಸರಾಸರಿ ಶೇ. 70ರಷ್ಟು ವೇರಿಯಬಲ್ ಪೇಯನ್ನು ನಿಗದಿಪಡಿಸಿದೆ.
2022ರಲ್ಲಿ 35,000 ನೇಮಕಾತಿ
ಇನ್ನೂ ಟಿಸಿಎಸ್ ಕಳೆದ ಕೆಲ ತಿಂಗಳಲ್ಲಿ ಭಾರಿ ನೇಮಕಾತಿಯನ್ನು ಸಹ ಮಾಡಿಕೊಂಡಿದೆ. ಜುಲೈ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ, 20,000 ಉದ್ಯೋಗಿಗಳನ್ನು ನೇಮಿಸಿಕೊಂಡಿದೆ. ಈ ಮೂಲಕ 2022ರ ಒಟ್ಟು ಹೊಸ ನೇಮಕಗಳ ಸಂಖ್ಯೆ 35,000 ಕ್ಕೆ ಏರಿಕೆಯಾಗಿದೆ. ಈ ಹಿಂದೆ ಸಂಸ್ಥೆಯು 40,000 ಹೊಸ ಪದವೀಧರರನ್ನು ನೇಮಿಸಿಕೊಳ್ಳುವುದಾಗಿ ಘೋಷಣೆ ಮಾಡಿತ್ತು.
ಫ್ರೆಶರ್ಗಳಿಗೆ ಅವಕಾಶ
ಇನ್ನು ಸಹ 10,000-12,000 ಹೊಸ ಉದ್ಯೋಗಿಗಳನ್ನು ಟಿಸಿಎಸ್ ನೇಮಿಸಿಕೊಳ್ಳಲಿದೆ ಎಂದು ಕಂಪನಿ ಬಹಿರಂಗಪಡಿಸಿದೆ. "ನಾವು ಆನ್ಬೋರ್ಡಿಂಗ್ ಫ್ರೆಶರ್ಗಳನ್ನು ಪ್ರಾರಂಭಿಸಿದ್ದೇವೆ ಮತ್ತು ನಮ್ಮ ನೇಮಕಾತಿಯನ್ನು ಜಾಗತಿಕವಾಗಿ ಕ್ಯೂ 2 ನಲ್ಲಿ ಹೆಚ್ಚಿಸಿದ್ದೇವೆ'' ಎಂದು ಮಾನವ ಸಂಪನ್ಮೂಲ ಜಾಗತಿಕ ಮುಖ್ಯಸ್ಥ ಮಿಲಿಂದ್ ಲಕ್ಕಾಡ್ ಈ ಹಿಂದೆ ಹೇಳಿದ್ದರು. ಐಟಿ ವಲಯದಲ್ಲಿ ಆಟ್ರಿಷನ್ ದರ ಇಳಿಮುಖವಾಗಿರುವುದರಿಂದ ನೇಮಕಾತಿ ಕುಂಠಿತವಾಗಿದೆ.
ಇದನ್ನೂ ಓದಿ: IT Certifications: ಐಟಿ ಉದ್ಯೋಗಿಗಳೇ, 2023ರಲ್ಲಿ ಈ 7ರಲ್ಲಿ ಒಂದಾದರೂ ಕೋರ್ಸ್ ಮಾಡಿದ್ರೆ ಮಾತ್ರ ಡಿಮ್ಯಾಂಡ್
ಒಟ್ಟಾರೆಯಾಗಿ ಐಟಿ ಕ್ಷೇತ್ರವು ಹೊಸ ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ಹೆಣಗಾಡುತ್ತಿರುವ ಹೊರತಾಗಿಯೂ ಟಿಸಿಎಸ್ ತಾಜಾ ಪದವೀಧರರನ್ನು ನೇಮಿಸಿಕೊಳ್ಳಲು ಮುಂದಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ