ಭಾರತದ ಪ್ರಸಿದ್ಧ ಪಾಕೇಜ್ಡ್ ವಾಟರ್ ಬಾಟಲ್ ಕಂಪನಿ ಬಿಸ್ಲೆರಿಯನ್ನು (Bisleri) ಪ್ರಸಿದ್ಧ ಟಾಟಾ ಕನ್ಸ್ಯೂಮರ್ ಪ್ರಾಡಕ್ಟ್ ಲಿಮಿಟೆಡ್ (TCPL) ಸ್ವಾಧೀನ ಪಡಿಸಿಕೊಂಡಿದೆ ಎಂದು ವರದಿಯಾಗಿದೆ. 82 ವರ್ಷ ವಯಸ್ಸಿನ ರಮೇಶ್ ಜೆ ಚೌಹಾಣ್ (ಅವರು ತಮ್ಮ ಬಿಸ್ಲೆರಿ ಕಂಪನಿಯನ್ನು (Ramesh Chauhan) ಟಾಟಾ ಗ್ರೂಪ್ಗೆ (TATA Group) ಮಾರಾಟ ಮಾಡುತ್ತಿದ್ದಾರೆ. ಸುಮಾರು 6 ರಿಂದ 7 ಸಾವಿರ ಕೋಟಿ ರೂಪಾಯಿಗೆ ಈ ಡೀಲ್ ನಡೆದಿದೆ. ಈ ಮೊದಲು ತಮ್ಮ ಥಮ್ಸ್ ಅಪ್, ಗೋಲ್ಡ್ ಸ್ಪಾಟ್, ಲಿಮ್ಕಾ ಸಾಫ್ಟ್ ಡ್ರಿಂಕ್ಸ್ ಬ್ರಾಂಡ್ ಗಳನ್ನು ಕೋಕಾಕೋಲಾ ಕಂಪನಿಗೆ ಮಾರಾಟ ಮಾಡಿದ ಸುಮಾರು 30 ವರ್ಷದ ಗಳ ಬಳಿಕ ಚೌಹಾಣ್ ಅವರು ಈ ಬಹುದೊಡ್ಡ ನಿರ್ಧಾರ ಕೈಗೊಂಡಿದ್ದಾರೆ.
ಭಾರತದ ಅತಿದೊಡ್ಡ ಪ್ಯಾಕೇಜ್ಡ್ ವಾಟರ್ ಕಂಪನಿಯಲ್ಲಿ ಸದ್ಯದ ಮ್ಯಾನೇಜ್ ಮೆಂಟ್ ಮುಂದಿನ ಎರಡು ವರ್ಷಗಳ ಕಾಲ ವ್ಯವಹಾರವನ್ನು ನೋಡಿಕೊಳ್ಳಲಿದೆ. ಅಷ್ಟಕ್ಕೂ ಚೌಹಾಣ್ ಅವರಿಗೆ 82 ವರ್ಷವಾಗಿದ್ದು, ಸದ್ಯ ಆರೋಗ್ಯ ಸಮಸ್ಯೆಗಳೂ ಕೂಡ ಇದೆ ಎನ್ನಲಾಗಿದೆ. ಈ ಮಧ್ಯೆ ಚೌಹಾಣ್ ಅವರ ಮಗಳು ಜಯಂತಿಗೆ ಈ ವ್ಯವಹಾರದಲ್ಲಿ ಅಷ್ಟಾಗಿ ಆಸಕ್ತಿ ಇಲ್ಲದ ಕಾರಣ ಚೌಹಾಣ್ ಈ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಗಣಿತದ ಸೂತ್ರಗಳನ್ನು ಎಷ್ಟು ಸುಲಭವಾಗಿ ಕಲಿಸಿದ್ದಾರೆ ನೋಡಿ ಈ ಶಿಕ್ಷಕ!
“ನೋವಿನ ನಿರ್ಧಾರವಾದರೂ ಟಾಟಾ ಸಂಸ್ಕೃತಿಯನ್ನು ಇಷ್ಟಪಡುತ್ತೇನೆ”
ಇನ್ನು ಬಿಸ್ಲೆರಿ ಮಾರಾಟವು ನೋವಿನ ನಿರ್ಧಾರವಾಗಿದೆ ಎಂದಿರುವ ಉದ್ಯಮಿ ಚೌಹಾಣ್ ಟಾಟಾ ಗ್ರೂಪ್ ಅನ್ನು ಬಹುವಾಗಿ ಮೆಚ್ಚಿಕೊಂಡಿದ್ದಾರೆ. ಆ ಕಂಪನಿ ನಮ್ಮ ಕಂಪನಿಯನ್ನು ಇನ್ನಷ್ಟು ಚೆನ್ನಾಗಿ ನೋಡಿಕೊಳ್ಳುತ್ತದೆ ಎಂಬ ಭರವಸೆ ತಮಗಿದೆ ಎಂದಿದ್ದಾರೆ. ನಾನು ಮೌಲ್ಯಗಳನ್ನು ಹೊಂದಿರುವ ಟಾಟಾ ಸಂಸ್ಕೃತಿಯನ್ನು ಇಷ್ಟಪಡುತ್ತೇನೆ. ಅದಕ್ಕಾಗಿಯೇ ನಾನು ಅವರಿಗೆ ಮಾರಾಟ ಮಾಡಿರುವುದಾಗಿ ಚೌಹಾಣ್ ಹೇಳಿದ್ದಾರೆ.
ಇನ್ನು ಕಳೆದ ಎರಡು ವರ್ಷಗಳಿಂದ ಟಾಟಾ ಕಂಪನಿ ಜೊತೆ ಮಾತುಕತೆ ನಡೆಯುತ್ತಿತ್ತು. ಕೆಲ ತಿಂಗಳ ಹಿಂದೆ ಟಾಟಾ ಸನ್ಸ್ ಅಧ್ಯಕ್ಷ ಎನ್.ಚಂದ್ರಶೇಖರನ್ ಮತ್ತು ಟಾಟಾ ಗ್ರಾಹಕ ಸಿಇಒ ಸುನಿಲ್ ಡಿಸೋಜಾ ಅವರನ್ನು ಭೇಟಿ ಮಾಡಿದ ನಂತರ ಚೌಹಾಣ್ ಈ ನಿರ್ಧಾರಕ್ಕೆ ಬಂದಿದ್ದಾರೆ. ಅಲ್ಲದೇ ನಾನು ಅವರನ್ನು ಇಷ್ಟಪಡುತ್ತೇನೆ. ಅವರು ಒಳ್ಳೆಯ ವ್ಯಕ್ತಿ ಎಂಬುದಾಗಿ ಅವರು ಅಭಿಪ್ರಾಯ ಪಟ್ಟಿದ್ದಾರೆ.
ಒಪ್ಪಂದವು ಕೇವಲ ಹಣಕ್ಕೆ ಸಂಬಂಧಿಸಿದ್ದಲ್ಲ
ಈ ಒಪ್ಪಂದವು ಕೇವಲ ಹಣಕ್ಕೆ ಸಂಬಂಧಿಸಿದ್ದಲ್ಲ ಎಂದು ಹೇಳಿರುವ ಚೌಹಾಣ್, ನಾನೇ ಕಟ್ಟಿ ಬೆಳೆಸಿದ ಕಂಪನಿಗಾಗಿ ನನ್ನಷ್ಟೇ ಚೆನ್ನಾಗಿ ನೋಡಿಕೊಳ್ಳುವ ಮನೆಯನ್ನು ಹುಡುಕುವ ಬಗ್ಗೆ ಆತಂಕಗೊಂಡಿದ್ದೆ ಎಂಬುದಾಗಿ ಹೇಳಿದ್ದಾರೆ. ತಾವು ಅತ್ಯಂತ ಇಷ್ಟಪಟ್ಟು ಉತ್ಸಾಹದಿಂದ ಕಟ್ಟಿದ ಕಂಪನಿಯಿದು. ಇಲ್ಲಿ ಅಷ್ಟೇ ಉತ್ಸಾಹದಿಂದ ಕೆಲಸ ಮಾಡುವ ಉದ್ಯೋಗಿಗಳಿದ್ದಾರೆ ಎಂಬುದಾಗಿಯೂ ಅವರು ನುಡಿದಿದ್ದಾರೆ.
ಇನ್ನು, ಚೌಹಾಣ್ ಅವರು ಸದ್ಯ ಸಿಇಒ ಏಂಜೆಲೊ ಜಾರ್ಜ್ ನೇತೃತ್ವದ ವೃತ್ತಿಪರ ತಂಡಕ್ಕೆ ಬಿಸ್ಲೆರಿಯ ದಿನನಿತ್ಯದ ನಿರ್ವಹಣೆಯನ್ನು ವಹಿಸಿಕೊಟ್ಟಿದ್ದಾರೆ. ಚೌಹಾಣ್ ಪ್ರಕಾರ, 220 ಕೋಟಿ ರೂಪಾಯಿ ಲಾಭದೊಂದಿಗೆ ಬಿಸ್ಲೆರಿ ಬ್ರ್ಯಾಂಡ್ನ ವಹಿವಾಟು ಸುಮಾರು 2,500 ಕೋಟಿ ರೂಪಾಯಿ ಎಂಬುದಾಗಿ ಅಂದಾಜಿಸಲಾಗಿದೆ.
ಇದನ್ನೂ ಓದಿ: ಚಂದ್ರ ರೂಪಗೊಂಡಿದ್ದು ಗಂಟೆಗಳಲ್ಲಿ, ಶತಮಾನಗಳ ಅವಧಿಯಲಲ್ಲ ಅಂದ್ರೆ ನಂಬ್ತೀರಾ?
ಮೂಲತಃ ಇಟಾಲಿಯನ್ ಬ್ರಾಂಡ್
ಇನ್ನು, ಬಿಸ್ಲೆರಿಯನ್ನು ಮಾರಾಟ ಮಾಡಿದ ನಂತರ ಚೌಹಾಣ್ ಅವರು, ನೀರು ಕೊಯ್ಲು, ಪ್ಲಾಸ್ಟಿಕ್ ಮರುಬಳಕೆ ಮತ್ತು ಬಡವರಿಗೆ ವೈದ್ಯಕೀಯ ಚಿಕಿತ್ಸೆಗೆ ಸಹಾಯ ಮುಂತಾದ ಪರಿಸರ ಮತ್ತು ದತ್ತಿ ಉದ್ದೇಶಗಳಿಗಾಗಿ ಹಣವನ್ನು ಬಳಸಲು ಮತ್ತು ಹೂಡಿಕೆ ಮಾಡಲು ಯೋಜಿಸಿದ್ದಾರೆ.
ಅಂದಹಾಗೆ ಬಿಸ್ಲೆರಿ ಪ್ಯಾಕೇಜ್ಡ್ ವಾಟರ್ ಕಂಪನಿಯು ಮೂಲತಃ ಇಟಾಲಿಯನ್ ಬ್ರಾಂಡ್ ಆಗಿದ್ದು, ಅದು ಭಾರತಕ್ಕೆ ಬಂದಿದ್ದು 1965 ರಲ್ಲಿ. ಅದು ಮುಂಬೈಗೆ ಬಂದು ನಾಲ್ಕು ವರ್ಷಗಳ ನಂತರ ಅಂದರೆ 1969 ರಲ್ಲಿ ಚೌಹಾಣ್ ಅದನ್ನು ಸ್ವಾಧೀನಪಡಿಸಿಕೊಂಡರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ