ನಮ್ಮಲ್ಲಿ ಅನೇಕ ಜನರಿಗೆ ತಾವು ಜೀವನದಲ್ಲಿ (Life) ಏನಾಗಬೇಕು ಅನ್ನೋದ್ರ ಬಗ್ಗೆ ಸ್ಪಷ್ಟ ಕಲ್ಪನೆಯಿರುತ್ತದೆ. ಅವರ ಗುರಿ (Goal) ಸ್ಪಷ್ಟವಾಗಿರುತ್ತದೆ. ಅದಕ್ಕಾಗಿ ಅವರು ಸರಿಯಾದ ಯೋಜನೆ ಹಾಕಿಕೊಂಡು ಕನಸನ್ನು ಈಡೇರಿಸಿಕೊಳ್ಳಲು ಪ್ರಯತ್ನ ಪಡುತ್ತಾರೆ. ಪರಿಶ್ರಮದ ಜೊತೆಗೆ ಅದೃಷ್ಟ (Luck) ಕೈಹಿಡಿದರೆ ಸಾಕು, ಅವರು ಸಾಧಿಸಿ ತೋರಿಸುತ್ತಾರೆ. ಹೈದರಾಬಾದ್‌ನ ಸಾಫ್ಟ್‌ವೇರ್ ದಂಪತಿ (Software Couple) ಸಂದೀಪ್ ಮತ್ತು ಕವಿತಾ ಇಂಥದ್ದೊಂದು ಸಾಧನೆ ಮಾಡಿದ್ದಾರೆ.
ಅಂದಹಾಗೆ 30 ವರ್ಷದ ಸಂದೀಪ್ ಜೋಗಿಪರ್ಟಿ ಹಾಗೂ ಅದೇ ವಯಸ್ಸಿನ ಕವಿತಾ ಗೋಪು ಇಬ್ಬರೂ ಅಮೆರಿಕದಲ್ಲಿ ಐದು ವರ್ಷಗಳ ಕಾಲ ಕೆಲಸ ಮಾಡಿ ತಾಯ್ನಾಡಿಗೆ ಮರಳಿ ಬಂದವರು. ಇಲ್ಲಿ ಬಂದ ಬಳಿಕ ತಮ್ಮದೇ ಆದ ಉದ್ಯಮ ಆರಂಭಿಸುವ ಗುರಿ ಹೊಂದಿದ್ದರು. ಹೈದರಾಬಾದ್‌ಗೆ ಬಂದ ಕೆಲವು ತಿಂಗಳುಗಳ ಕಾಲ ಅವರು ಯುಎಸ್ ಮೂಲದ ಸಂಸ್ಥೆಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್‌ಗಳಾಗಿ ತಮ್ಮ ಕೆಲಸವನ್ನು ಮುಂದುವರೆಸಿದರು.
“ನಾನು ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರೂ ಸಹ, ನನ್ನ ಸ್ವಂತ ಉದ್ಯಮವನ್ನು ಪ್ರಾರಂಭಿಸುವ ಬಗ್ಗೆ ನಾನು ಯಾವಾಗಲೂ ಕುಟುಂಬ ಮತ್ತು ಸ್ನೇಹಿತರೊಂದಿಗೆ ಚರ್ಚೆ ಮಾಡುತ್ತಿದ್ದೆ. ಐದು ವರ್ಷಗಳ ಕಾಲ ಅಮೆರಿಕದಲ್ಲಿ ಕೆಲಸ ಮಾಡಿದ ನಂತರ ನಾನು ಇದಕ್ಕಾಗಿ ಸಾಕಷ್ಟು ಹಣವನ್ನು ಉಳಿಸಿದೆ ಎಂಬುದಾಗಿ ಎಂದು ಸಂದೀಪ್ ಹೇಳುತ್ತಾರೆ. ಆದರೆ ಯಾವ ಉದ್ಯಮ ಮಾಡುವುದು ಎಂಬ ಬಗ್ಗೆ ಖಚಿತವಾಗಿಲ್ಲದಿದ್ದರೂ, ಸಿಹಿತಿಂಡಿಗಳಿಗೆ ಸಂಬಂಧಿಸಿದೆ ಎಂಬ ಬಗ್ಗೆ ಅವರು ಸ್ಪಷ್ಟತೆ ಹೊಂದಿದ್ದರು. ಏಕೆಂದರೆ ಅವರಿಗೆ ಸಿಹಿ ಎಂದರೆ ಬಹಳ ಇಷ್ಟವಾಗಿತ್ತು.
“ನನಗೆ ಪ್ರತಿ ಊಟದ ನಂತರ ಸಿಹಿ ತಿನ್ನುವ ಅಭ್ಯಾಸವಿದೆ. ಅದರಲ್ಲೂ ವಿಶೇಷವಾಗಿ ಲಡ್ಡುಗಳನ್ನು. ನಾನು ಯಾವಾಗಲೂ ನನ್ನ ಮನೆಯಲ್ಲಿ ಸಿಹಿತಿಂಡಿಗಳ ಬಾಕ್ಸ್‌ಅನ್ನು ಇಡುತ್ತೇನೆ. ಆದರೆ ನನ್ನ ಕುಟುಂಬದವರು ಯಾವಾಗಲೂ ಸಂಸ್ಕರಿಸಿದ ಸಕ್ಕರೆಯನ್ನು ಸೇವಿಸದಂತೆ ಸಲಹೆ ನೀಡುತ್ತಿದ್ದರು. ಅದರ ಬದಲಿಗೆ ಒಂದು ಚಮಚ ಬೆಲ್ಲವನ್ನು ತಿನ್ನುವಂತೆ ಸಲಹೆ ನೀಡುತ್ತಿದ್ದರು. ಇದು ಆರೋಗ್ಯಕರ ಲಡ್ಡುಗಳನ್ನು ತಯಾರಿಸುವ ಉದ್ಯಮದ ಬಗ್ಗೆ ಯೋಚಿಸಲು ಕಾರಣವಾಯ್ತು ಎಂಬುದಾಗಿ ಸಂದೀಪ್ ವಿವರಿಸುತ್ತಾರೆ.
ನಂತರ 2019 ರಲ್ಲಿ, ಸಂದೀಪ್ ಮತ್ತು ಕವಿತಾ ಲಡ್ಡು ವ್ಯಾಪಾರ ಆರಂಭಿಸಿ ತಮ್ಮ ಬ್ರ್ಯಾಂಡ್‌ಗೆ "ಲಡ್ಡು ಬಾಕ್ಸ್" ಅಂತಾ ಹೆಸರಿಟ್ಟು ಬಿಡುಗಡೆ ಮಾಡಿದರು. ಸಿರಿಧಾನ್ಯ, ಬೆಲ್ಲ ಮುಂತಾದವುಗಳನ್ನು ಒಳಗೊಂಡಂತೆ ಸ್ಥಳೀಯ ಧಾನ್ಯಗಳನ್ನು ಬಳಸಿ ತಯಾರಿಸಲಾದ 11 ವಿಧದ ಲಡ್ಡುಗಳನ್ನು ಬಿಡುಗಡೆ ಮಾಡಲಾಯ್ತು. ಈ ಉದ್ಯಮ ಒಂದು ವರ್ಷದಲ್ಲಿ 55 ಲಕ್ಷ ರೂಪಾಯಿಗಳ ವಹಿವಾಟು ನಡೆಸಿತು ಎಂಬುದಾಗಿ ಸಂದೀಪ್ ಮಾಹಿತಿ ನೀಡುತ್ತಾರೆ.
ಮಾರುಕಟ್ಟೆ ಸಂಶೋಧನೆಯಲ್ಲಿ ಲಡ್ಡುಗಳಿಗೆ ಫುಲ್ ಮಾರ್ಕ್ಸ್
ಸಾಮಾನ್ಯವಾಗಿ ಸಿಹಿತಿಂಡಿಗಳನ್ನು ತಯಾರಿಸುವಾಗ ಸಂಸ್ಕರಿಸಿದ ಸಕ್ಕರೆಯನ್ನು ಬಳಸಲಾಗುತ್ತದೆ. ಇಂಥ ಸ್ವೀಟ್ಸ್ ಗಳನ್ನು ತಿನ್ನುವಾಗ ಸಕ್ಕರೆಯನ್ನು ಹೆಚ್ಚಾಗಿ ಸೇವಿಸುತ್ತಿರುವ ಬಗ್ಗೆ ಹೆಚ್ಚು ಚಿಂತಿತರಾಗುತ್ತೇವೆ. ತಾನು ಮಾತ್ರವಲ್ಲ ಇಂಥ ಸಮಸ್ಯೆಯನ್ನು ಬಹಳಷ್ಟು ಜನರು ಅನುಭವಿಸುತ್ತಾರೆ ಎಂದು ತಿಳಿದುಕೊಂಡ ಸಂದೀಪ್ ಈ ಬಗ್ಗೆ ಸಂಶೋಧನೆ ನಡೆಸಿದರು.
"ಈ ಬಗ್ಗೆ ಮಾರುಕಟ್ಟೆ ಸಂಶೋಧನೆ ನಡೆಸಿದೆ. ಬಹಳಷ್ಟು ಜನರಿಂದ ಸಿಹಿತಿಂಡಿಗಳಿಗೆ ಆರೋಗ್ಯಕರ ಪರ್ಯಾಯಗಳು ಹೇಗೆ ಇರಬೇಕೆಂದು ಬಯಸುತ್ತಾರೆ ಎಂಬುದರ ಬಗ್ಗೆ ತಿಳಿದುಕೊಂಡೆ. ಆದರೆ ಬೆಲ್ಲದಿಂದ ಮಾಡಿದ ನ್ಯೂಟ್ರಿ ಬಾರ್‌ಗಳಿವೆ ಎಂದು ಅವರಿಗೆ ಹೇಳಿದಾಗ ಅವರು ಅಷ್ಟಾಗಿ ಆಸಕ್ತಿ ತೋರಿಸಲಿಲ್ಲ. ಅವರು ಭಾರತೀಯ ಶೈಲಿಯ ಸಿಹಿಗಳನ್ನು ಬಯಸಿದ್ದರು. ಲಡ್ಡುಗಳು ಪ್ರತಿಯೊಬ್ಬರ ಜನಪ್ರಿಯ ಆಯ್ಕೆಯಾಗಿದೆ ಎಂಬುದಾಗಿ ಸಂದೀಪ್ ವಿವರಿಸುತ್ತಾರೆ.
ಸಾಂಪ್ರದಾಯಿಕ ಪಾಕ ವಿಧಾನ
ಸಂದೀಪ್ ಮತ್ತು ಕವಿತಾ ತಮ್ಮ ಕುಟುಂಬಗಳಲ್ಲಿ ತಲೆಮಾರುಗಳಿಂದ ಬಂದ ಸಿಹಿತಿಂಡಿಗಳಿಗಳ ಸಾಂಪ್ರದಾಯಿಕ ಪಾಕವಿಧಾನಗಳ ಬಗ್ಗೆ ತಿಳಿದುಕೊಂಡರು. “ಈ ಪಾಕವಿಧಾನಗಳನ್ನು ನಮ್ಮ ಅಜ್ಜಿಯರು ಸಿಹಿತಿಂಡಿಗಳನ್ನು ತಯಾರಿಸಲು ಬಳಸುತ್ತಿದ್ದರು. ಈ ಮೊದಲು, ಈ ಆಹಾರಗಳ ಮೌಲ್ಯವು ನಮಗೆ ತಿಳಿದಿರಲಿಲ್ಲ. ಆದರೆ ಹೆಚ್ಚಿನ ಅರಿವಿನೊಂದಿಗೆ ಪ್ರತಿಯೊಂದು ಘಟಕಾಂಶವು ಎಷ್ಟು ಮುಖ್ಯ ಎಂದು ನಾವು ಅರಿತುಕೊಂಡೆವು.
ಉದಾಹರಣೆಗೆ, ಉದ್ದಿನಬೇಳೆಯನ್ನು ಬಳಸಿ ತಯಾರಿಸಿದ ಲಡ್ಡುಗಳು ದೇಹದಲ್ಲಿ ಕಬ್ಬಿಣದ ಅಂಶವನ್ನು ಸುಧಾರಿಸಲು ಪ್ರಯೋಜನಕಾರಿಯಾಗಿದೆ. ಹಾಗೆಯೇ ಅಗಸೆ ಬೀಜಗಳಿಂದ ಮಾಡಿದವು ಶಕ್ತಿಯನ್ನು ನೀಡುತ್ತವೆ ಎಂಬುದಾಗಿ ಸಂದೀಪ್ ವಿವರಿಸುತ್ತಾರೆ.
ಪ್ರತಿ ಲಡ್ಡುವಿನಲ್ಲೂ ಆರೋಗ್ಯ ಪ್ರಯೋಜನ
ಸಿರಿಧಾನ್ಯಗಳು, ಸಿರಿಧಾನ್ಯ, ತುಪ್ಪ ಮತ್ತು ಬೆಲ್ಲದಂತಹ ದೇಸೀ ಪದಾರ್ಥಗಳನ್ನು ಮಾತ್ರ ಬಳಸಲಾಗುತ್ತದೆ. ಸಿರಿಧಾನ್ಯ, ಫಾಕ್ಸ್‌ಟೈಲ್ ಮಿಲ್ಲೆಟ್, ಕೊಡೋ ಮಿಲ್ಲೆಟ್ ಮತ್ತು ಫಿಂಗರ್ ಮಿಲ್ಲೆಟ್ ಸೇರಿದಂತೆ 11 ವಿಧದ ಲಡ್ಡುಗಳನ್ನು ತಯಾರಿಸಿದರು.
ಎಲ್ಲಾ ಸಿರಿಧಾನ್ಯಗಳೂ ಪೌಷ್ಟಿಕಾಂಶದ ಪ್ರಯೋಜನಗಳನ್ನು ಹೊಂದಿದ್ದರೂ, ಕೊಡೋ ಮಿಲ್ಲೆಟ್ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ. ಫಿಂಗರ್ ಮಿಲ್ಲೆಟ್ ರಕ್ತದಲ್ಲಿನ ಗ್ಲೂಕೋಸ್ ಅನ್ನು ನಿಯಂತ್ರಿಸುತ್ತವೆ. ಫಾಕ್ಸ್‌ಟೈಲ್ ಮಿಲ್ಲೆಟ್‌ಗಳಲ್ಲಿ ಹೆಚ್ಚಿನ ಉತ್ಕರ್ಷಣ ನಿರೋಧಕಗಳು ಇರುತ್ತವೆ. ಅದು ನೆನಪಿನ ಶಕ್ತಿಯನ್ನು ಹೆಚ್ಚಿಸುತ್ತದೆ. ಅವುಗಳನ್ನು ಶುದ್ಧ ತುಪ್ಪದಿಂದ ಮಾಡಲಾಗಿರುವುದರಿಂದ, ಪ್ರತಿ ಲಡ್ಡು 21 ದಿನಗಳ ಶೆಲ್ಫ್-ಲೈಫ್ ಅನ್ನು ಹೊಂದಿರುತ್ತದೆ.
ಆನ್‌ಲೈನ್‌ನಲ್ಲಿ ಲಡ್ಡುಗಳ ಮಾರಾಟ
ಡಿಸೆಂಬರ್ 2019ರ ಹೊತ್ತಿಗೆ ನಾವು ನಮ್ಮ ಕೆಲಸಕ್ಕೆ ರಾಜೀನಾಮೆ ನೀಡಿ ಅಧಿಕೃತವಾಗಿ “ಲಡ್ಡು ಬಾಕ್ಸ್” ಅನ್ನು ಪ್ರಾರಂಭಿಸಿದೆವು. ನಾವು ವಿವಿಧ ಮೇಳಗಳು ಮತ್ತು ಐಟಿ ಕಂಪನಿಗಳಲ್ಲಿ ಸ್ಟಾಲ್‌ಗಳ ಮೂಲಕ ಸಿಹಿತಿಂಡಿಗಳನ್ನು ಮಾರಾಟ ಮಾಡಿದ್ದೇವೆ. ಈ ಈವೆಂಟ್‌ಗಳಲ್ಲಿ ಮಾರಾಟ ಮಾಡುವುದರ ಹೊರತಾಗಿ, ಬೃಹತ್ ಆರ್ಡರ್‌ಗಳನ್ನು ಮಾಡಲು ನಾವು ಗ್ರಾಹಕರಿಂದ ಕಾಲ್‌ಬ್ಯಾಕ್‌ಗಳನ್ನು ಸ್ವೀಕರಿಸುತ್ತೇವೆ” ಎಂದು ಸಂದೀಪ್ ಹೇಳುತ್ತಾರೆ.
ಆದಾಗ್ಯೂ, ಮಾರ್ಚ್ 2020ರಲ್ಲಿ, COVID-19 ಸಾಂಕ್ರಾಮಿಕ ರೋಗದಿಂದಾಗಿ “ಲಡ್ಡು ಬಾಕ್ಸ್” ಉದ್ಯಮಕ್ಕೆ ವಿರಾಮ ತೆಗೆದುಕೊಳ್ಳಬೇಕಾಯಿತು. ಆ ವೇಳೆ ಇವರು ಆನ್‌ಲೈನ್ ಮಾರಾಟಕ್ಕಾಗಿ ವೆಬ್‌ಸೈಟ್ ಅನ್ನು ಪ್ರಾರಂಭಿಸಿದರು. ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳನ್ನು ರಚಿಸಿದರು.
“ಜೂನ್ 2020 ರ ಹೊತ್ತಿಗೆ, ನಾವು ಆನ್‌ಲೈನ್ ಮಾರಾಟವನ್ನು ಪ್ರಾರಂಭಿಸಿದೆವು. ಆಶ್ಚರ್ಯ ರೀತಿಯಲ್ಲಿ ಇದು ಆಫ್‌ಲೈನ್ ಮಾರಾಟಕ್ಕಿಂತ ಉತ್ತಮವಾಗಿದೆ. ನಾವು ದೇಶಾದ್ಯಂತದ ವಿವಿಧ ನಗರಗಳಿಂದ ಮತ್ತು ಯುಕೆ ಮತ್ತು ಯುಎಸ್‌ಎಯಿಂದ ಆರ್ಡರ್‌ಗಳನ್ನು ಸ್ವೀಕರಿಸಿದ್ದೇವೆ. ಇಲ್ಲಿಯವರೆಗೆ, ವ್ಯವಹಾರವು 55 ಲಕ್ಷ ರೂಪಾಯಿ ವಹಿವಾಟು ನಡೆಸಿದೆ ಮತ್ತು 6,000 ಆರ್ಡರ್‌ಗಳನ್ನು ಸ್ವೀಕರಿಸಿದೆ ಎಂಬುದಾಗಿ ಸಂದೀಪ್ ಮಾಹಿತಿ ನೀಡುತ್ತಾರೆ.
ಚೈತನ್ಯ ನೀಡುವ ಆರೋಗ್ಯಕರ ಲಡ್ಡು!
ಇನ್ನು, ಹೈದರಾಬಾದ್ ಮೂಲದ ಇಂಟೀರಿಯರ್ ಡಿಸೈನರ್ ಅನುಷಾ ವುತಲೂರು ಲಡ್ಡು ಬಾಕ್ಸ್‌ನ ಖಾಯಂ ಗ್ರಾಹಕರು. ತನ್ನ ಆರೋಗ್ಯದ ಬಗ್ಗೆ ಯಾವಾಗಲೂ ಜಾಗೃತರಾಗಿರುವ ಅವರು, ಈ ಲಡ್ಡುಗಳು ಅತ್ಯುತ್ತಮ ಭಾರತೀಯ ಸಿಹಿತಿಂಡಿ ಎಂದು ಹೇಳುತ್ತಾರೆ.
“ಲಡ್ಡು ಬಾಕ್ಸ್‌ನ ಸಿಹಿತಿಂಡಿಗಳು ಬಹುತೇಕ ಸಾಮಾನ್ಯ ಲಡ್ಡುಗಳಂತೆ ರುಚಿಯಾಗಿರುತ್ತವೆ. ಇದನ್ನು ಆರೋಗ್ಯಕರ ತೃಪ್ತಿಯೊಂದಿಗೆ ತಿನ್ನಬಹುದು. ಒತ್ತಡದ ದಿನಗಳಲ್ಲಿ.. ಹಾಗೆಯೇ ನನಗೆ ದಣಿವಾದಾಗಲೆಲ್ಲಾ ನಾನು ಲಡ್ಡುವನ್ನು ರುಚಿಯನ್ನು ಸವಿಯುತ್ತೇನೆ. ಇದರಿಂದ ಕೆಲವೇ ನಿಮಿಷಗಳಲ್ಲಿ ನಾನು ಮತ್ತೆ ಚೈತನ್ಯವನ್ನು ಪಡೆಯುತ್ತೇನೆ ಎಂಬುದಾಗಿ ಅವರು ಹೇಳುತ್ತಾರೆ.
ಪರ್ಫೆಕ್ಟ್ ಲಡ್ಡು ಬಾಕ್ಸ್!
ಅಂದಹಾಗೆ ಈ ಲಡ್ಡು ಬಾಕ್ಸ್ ಪರ್ಫೆಕ್ಟ್ ಆಗಿರುತ್ತದೆ. ಏಕೆಂದರೆಸಂದೀಪ್ ಮತ್ತು ಕವಿತಾ ಅವರು ಪ್ರತಿ ಲಡ್ಡು 28 ಗ್ರಾಂ ಎಂದು ಖಚಿತಪಡಿಸಿಕೊಳ್ಳುತ್ತಾರೆ. "ಸಿಹಿ ಅಂಗಡಿಗಳಲ್ಲಿ ಖರೀದಿಸಿದ ಲಡ್ಡುಗಳನ್ನು ಒಂದೇ ಬಾರಿಗೆ ತಿನ್ನಲು ಸಾಧ್ಯವಿಲ್ಲ. ಜೊತೆಗೆ ಅವು ಬಾಕ್ಸ್‌ನಲ್ಲಿ ವ್ಯರ್ಥವಾಗಬಹುದು ಅಥವಾ ಕೆಲವರು ಕೇವಲ ಅರ್ಧ ತಿನ್ನಬಹುದು. ಇದು ಇತರ ಲಡ್ಡುಗಳು ಹಾಳಾಗಲು ಕಾರಣವಾಗುತ್ತದೆ. ಹಾಗಾಗಿ ಪ್ರತಿ ಲಡ್ಡು ಪರಿಪೂರ್ಣ ಗಾತ್ರದ್ದಾಗಿದೆ ಎಂದು ನಾವು ಖಚಿತಪಡಿಸಿಕೊಂಡಿದ್ದೇವೆ. ಇದರಿಂದಾಗಿ ಒಬ್ಬ ವ್ಯಕ್ತಿಯು ಎರಡು ಲಡ್ಡು ತಿನ್ನಲು ಬಯಸಿದರೂ ಅದು ಹೆಚ್ಚು ಅನಿಸುವುದಿಲ್ಲ ಎಂಬುದಾಗಿ ಕವಿತಾ ಹೇಳುತ್ತಾರೆ.
ಇದನ್ನೂ ಓದಿ: Monthly Income: ತಿಂಗಳಿಗೆ 9,000 ರೂ. ಆದಾಯ ಪಕ್ಕಾ; ಅಂಚೆ ಕಚೇರಿಯ ಈ ಯೋಜನೆ ನಿಜಕ್ಕೂ ಸೇಫ್
ಇನ್ನು ಅವರು ಮೂರು ಲಡ್ಡುಗಳೊಂದಿಗೆ ಬರುವ ಆನ್-ದಿ-ಗೋ ಬಾಕ್ಸ್ ಅನ್ನು ಒದಗಿಸುತ್ತಾರೆ. ಗ್ರಾಹಕರು ತಮ್ಮ ಬ್ಯಾಗ್‌ಗಳಲ್ಲಿ ಇರಿಸಿಕೊಳ್ಳಲು ಸೂಕ್ತವಾಗಿದೆ. ಹಾಗಾಗಿ ದಿನದ ಯಾವುದೇ ಸಮಯದಲ್ಲಿ ತಿಂಡಿ ತಿನ್ನುವ ಬಯಕೆ ಇದ್ದರೆ, ನಿಮ್ಮ ಬ್ಯಾಗ್‌ನಲ್ಲಿ ಯಾವಾಗಲೂ ಏನಾದರೂ ಆರೋಗ್ಯಕರವಾದದ್ದು ಇರುತ್ತದೆ.
ಇತ್ತೀಚೆಗೆ, ಸಂದೀಪ್ - ಕವಿತಾ ಜೋಡಿಯು ಹೊಸ ಲಡ್ಡುಗಳ ಪ್ರಕಾರವನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಫಿಟ್‌ನೆಸ್ ಫ್ರೀಕ್‌ಗಳಿಗಾಗಿ ಪ್ರೋಟೀನ್ ಭರಿತ ಲಡ್ಡುಗಳು, ಮಹಿಳೆಯರ ಆರೋಗ್ಯವನ್ನು ಸುಧಾರಿಸಲು ಕಬ್ಬಿಣಾಂಶವುಳ್ಳ ಲಡ್ಡುಗಳು ಮತ್ತು ಮಕ್ಕಳಿಗೆ ರಾಗಿ ಆಧಾರಿತ ಲಡ್ಡುಗಳು ಸೇರಿವೆ. ಅವರು ಬೆಲ್ಲ ಮತ್ತು ತುಪ್ಪದ ಬದಲಿಗೆ ಖರ್ಜೂರದಿಂದ ತಯಾರಿಸಿದ ಲಡ್ಡುಗಳನ್ನು ಪರಿಚಯಿಸಿದ್ದಾರೆ.
ಹಾಗಾಗಿ ನೀವು ಆರೋಗ್ಯಕರ ಲಡ್ಡುಗಳನ್ನು ಆರ್ಡರ್ ಮಾಡಲು ಅವರ ವೆಬ್‌ಸೈಟ್‌ಗೆ ಭೇಟಿ ನೀಡಬಹುದು ಅಥವಾ ಈ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಅವರ ಇನ್‌ಸ್ಟಾಗ್ರಾಂ ಖಾತೆ ಅನುಸರಿಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ