Success Story: ಕೃಷಿಯಿಂದ ಕೋಟ್ಯಾಧಿಪತಿಯಾದ ಚಾಯ್​ವಾಲಾ, ಅಲೋವೆರಾ ಬೆಳೆದು ಲಕ್ಷಗಟ್ಟಲೇ ಆದಾಯ

ಸಾಧಕ

ಸಾಧಕ

ಅಂದಹಾಗೆ ಕೃಷಿ ಕುಟುಂಬದಿಂದ ಬಂದಿರದ ಅಜಯ್‌ಗೆ ಅಲೋವೆರಾ ಕೃಷಿ ಮಾಡಲು ಸ್ಪೂರ್ತಿಯಾಗಿದ್ದು ಒಂದು ದಿನಪತ್ರಿಕೆಯಲ್ಲಿ ಬಂದ ಲೇಖನ!

  • Trending Desk
  • 3-MIN READ
  • Last Updated :
  • New Delhi, India
  • Share this:

ಕೆಲವೊಮ್ಮೆ ಸಾಧನೆ(Achievement) ಮಾಡೋಕೆ ಸಣ್ಣ ಘಟನೆಗಳೂ ಕಾರಣವಾಗುತ್ತವೆ. ಮಾಡುವ ಮನಸ್ಸಿದ್ದರೆ ಯಾವುದೂ ಅಸಾಧ್ಯವಲ್ಲ ಎಂಬ ಮಾತನ್ನು ರಾಜಸ್ಥಾನದ(Rajasthan) ವ್ಯಕ್ತಿಯೊಬ್ಬ ನಿಜವಾಗಿಸಿದ್ದಾರೆ. ಅನುಭವವೇ ಇಲ್ಲದ ಕ್ಷೇತ್ರದಲ್ಲಿ ಅಧ್ಯಯನ ಮಾಡಿ, ಸಂಶೋಧನೆ ಮಾಡಿ, ಪರಿಶ್ರಮ ಪಟ್ಟು ಸಾಧನೆ ಮಾಡಿದ್ದು ಇದೀಗ ಲಕ್ಷಾಂತರ ಆದಾಯ(Income) ಗಳಿಸುತ್ತಿದ್ದಾರೆ.


ಹೌದು, ರಾಜಸ್ಥಾನದ ಟೀ ಸ್ಟಾಲ್ ಮಾಲೀಕ ಅಜಯ್ ಸ್ವಾಮಿ ಈ ಸಾಧನೆ ಮಾಡಿದ್ದಾರೆ. ಕೃಷಿ ಕುಟುಂಬದಿಂದ ಬಂದಿರದೇ ಇದ್ದರೂ ಕೃಷಿಯಲ್ಲಿ ಸಾಧನೆ ಮಾಡಿ ಇದೀಗ ಲಕ್ಷಾಂತರ ರೂಪಾಯಿ ಆದಾಯ ಗಳಿಸುತ್ತಿದ್ದಾರೆ. ಗೊತ್ತಿರದ ಕ್ಷೇತ್ರದ ಬಗ್ಗೆ ಸಾಕಷ್ಟು ಸಂಶೋಧನೆ ನಡೆಸಿ, ಶ್ರಮ ಹಾಕಿ ಇದೀಗ ಲಾಭ ಗಳಿಸುತ್ತಿದ್ದಾರೆ. ಸದ್ಯ ಅಲೋವರಾದ 45 ಉತ್ಪನ್ನಗಳನ್ನು ಮಾರಾಟ ಮಾಡುವ ಮೂಲಕ ಲಕ್ಷ ಗಟ್ಟಲೇಗಳಿಸುತ್ತಿದ್ದಾರೆ.


ಅಂದಹಾಗೆ ಕೃಷಿ ಕುಟುಂಬದಿಂದ ಬಂದಿರದ ಅಜಯ್‌ಗೆ ಅಲೋವೆರಾ ಕೃಷಿ ಮಾಡಲು ಸ್ಪೂರ್ತಿಯಾಗಿದ್ದು ಒಂದು ದಿನಪತ್ರಿಕೆಯಲ್ಲಿ ಬಂದ ಲೇಖನ!


ದಿನಪತ್ರಿಕೆಯಿಂದ ಶುರುವಾಯ್ತು ಅಲೋವೆರಾ ಕೃಷಿ


ರಾಜಸ್ಥಾನದ ಹನುಮಾನ್‌ಗಢ ಪ್ರದೇಶದ ಪರ್ಲಿಕಾ ಗ್ರಾಮದ 31 ವರ್ಷದ ಅಜಯ್ ಸ್ವಾಮಿಗೆ ಇದ್ದಿದ್ದು ಎರಡು ಬಿಘಾ ಭೂಮಿ ಮಾತ್ರ. ಒಂದು ಎಕರೆಗೂ ಕಡಿಮೆ ಇದ್ದ ಭೂಮಿಯಲ್ಲಿ ಅಲೋವೆರಾ ಕೃಷಿ ಆರಂಭವಾಗಿದ್ದು ದಿನಪತ್ರಿಕೆಯೊಂದರಿಂದ.


ಹೌದು "ನಾನು ದಿನಪತ್ರಿಕೆಯಲ್ಲಿ ಅಲೋವೆರಾ ಬಗ್ಗೆ ಓದಿದೆ. ಅದನ್ನು ಉತ್ಪಾದಿಸುವುದು ಅದ್ಭುತವಾಗಿದೆ ಎಂದು ಭಾವಿಸಿದೆ” ಎಂಬುದಾಗಿ ಹೇಳುತ್ತಾರೆ ಅಜಯ್.‌


ಅಲೋವೆರಾವನ್ನು ಬೆಳೆಯುವುದು ಒಳ್ಳೆಯದು ಅನಿಸಿದರೂ ಆರಂಭದಲ್ಲಿ ಸಾಕಷ್ಟು ಸಂಪನ್ಮೂಲದ ಕೊರತೆಯನ್ನು ಅವರು ಅನುಭವಿಸಿದರು. ಅಲ್ಲದೇ 8 ನೇ ತರಗತಿಯವರೆಗೆ ತನ್ನ ಶಾಲಾ ಶಿಕ್ಷಣವನ್ನು ಮುಗಿಸಿದ ಅಜಯ್‌ಗೆ ಅವರ ತಂದೆ ತೀರಿಕೊಂಡಿದ್ದರಿಂದ ಓದನ್ನು ಮುಂದುವರೆಸಲು ಸಾಧ್ಯವಾಗಲಿಲ್ಲ.


ಜೊತೆಗೆ ಕುಟುಂಬದ ಜವಾಬ್ದಾರಿ ಬೇರೆ. ಹೀಗಾಗಿ ಚಿಕ್ಕವಯಸ್ಸಿನಲ್ಲೇ ಅವರು ಕುಟುಂಬದವರ ಸಹಾಯಕ್ಕೆ ನಿಲ್ಲಬೇಕಾಯ್ತು. ತಾಯಿಗೆ ಬೆಂಬಲವಾಗಿ ನಿಂತ ಅಜಯ್‌ 1999ರಲ್ಲಿ 10 ರೂ ಗೆ ಒಂದು ಕಪ್‌ನಂತೆ ಚಹಾ ಮಾರಾಟ ಮಾಡಲು ಪ್ರಾರಂಭಿಸಿದರು.


ಟೀ ವ್ಯಾಪಾರವೇನೋ ಚೆನ್ನಾಗಿಯೇ ನಡೆಯುತ್ತಿತ್ತು. ಆದರೆ ಒಳ್ಳೆಯ ಜೀವನ ಹೊಂದುವುದು ಹಾಗೂ ಅಭಿವೃದ್ಧಿ ಕಾಣಬೇಕಾದರೆ ಇನ್ನೂ ಹೆಚ್ಚಿನದವನ್ನು ಸಾಧಿಸಬೇಕು ಎಂಬುದಾಗಿ ಅಜಯ್‌ ಅಂದುಕೊಂಡಿದ್ದರು.


ಇದನ್ನೂ ಓದಿ: Inspiring Story: ಲಕ್ಷ ಲಕ್ಷ ಸಂಬಳದ ಉದ್ಯೋಗ ತೊರೆದು ಕೃಷಿಯಲ್ಲಿ ಸಾಧನೆ; ಆ್ಯಪ್ ಬಳಸಿ ನೀರಾವರಿ


ತನ್ನ ಮನೆಯ ಆರ್ಥಿಕ ಪರಿಸ್ಥಿತಿ ಸುಧಾರಿಸಲು ನಾನು ಏನು ಮಾಡಬೇಕು ಎಂಬುದಾಗಿ ಯೋಚಿಸಿದ್ದರು. ಸ್ವಂತ ಉದ್ಯಮ ಆರಂಭಿಸಿದರೆ ಇದು ಸಾಧ್ಯವಾಗುತ್ತದೆ ಎಂದೂ ಅಂದುಕೊಂಡಿದ್ದರು.


ದಿನಪತ್ರಿಕೆಯೊಂದರಲ್ಲಿ ಅಲೋವೆರಾ ಬಗ್ಗೆ ಸ್ಟೋರಿಯೊಂದನ್ನು ಓದಿದ ಅಜಯ್‌ ತನ್ನ ಅಲ್ಪ ಭೂಮಿಯಲ್ಲಿ ಅಲೋವೆರಾ ಕೃಷಿಯನ್ನು ಯಾಕೆ ಮಾಡಬಾರದು ಅಂದುಕೊಂಡರು.


ಚಹಾ ವ್ಯಾಪಾರದಿಂದ ಬರುವ ಆದಾಯವು ಉತ್ತಮವಾಗಿದ್ದರೂ ಭೂಮಿಯನ್ನು ಖಾಲಿ ಬಿಡಬಾರದು ಎಂಬುದಾಗಿ ಯೋಚಿಸಿದ ಅವರು ಅದರಿಂದ ಪ್ರಯೋಜನ ಪಡೆದುಕೊಳ್ಳಲು ನಿರ್ಧರಿಸಿದರು.


ಅದು ತಂದೆಯ ಭೂಮಿಯಾಗಿದ್ದರಿಂದ ಅದರಲ್ಲಿ ಕೃಷಿ ಮಾಡಿ ಆ ಮೂಲಕ ತಂದೆಗೆ ಗೌರವ ಸೂಚಿಸಬೇಕೆಂದು ಬಯಸುತ್ತಿದ್ದರು. ಅಲ್ಲದೇ ಅಲೋವೆರಾ ಕೃಷಿ ಬಗ್ಗೆ ಓದಿದ್ದು ಅವರಿಗೆ ದಾರಿ ತೋರಿಸಿದಂತಾಯ್ತು.


ಅಲೋವೆರಾ ಕೃಷಿಗೆ ತಯಾರಿ


ಅಜಯ್ ಅವರು ತಮ್ಮ ಸಮುದಾಯದ ರೈತರೊಂದಿಗೆ ಅಲೋವೆರಾ ಸಸ್ಯದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಮತ್ತು ಅದನ್ನು ಹೇಗೆ ಬೆಳೆಸಬೇಕು ಎಂಬುದರ ಕುರಿತು ಮಾಹಿತಿ ಸಂಗ್ರಹಿಸಲು ಪ್ರಾರಂಭಿಸಿದರು.


ಅಲೋವೆರಾವನ್ನು ಬೆಳೆಯಲು ಹೆಚ್ಚಿನ ನೀರಿನ ಅಗತ್ಯವಿಲ್ಲ ಎಂಬುದನ್ನು ಅರಿತುಕೊಂಡರು. ಇದು ಅವರಿಗೆ ಒಳ್ಳೆಯ ವಿಷಯ ಎನಿಸಿತು. ಏಕೆಂದರೆ ರಾಜಸ್ಥಾನದಲ್ಲಿ ಆಗಾಗ್ಗೆ ಬರಗಾಲ ಸಾಮಾನ್ಯವಾಗಿದ್ದು, ನೀರನ್ನು ಹೆಚ್ಚಾಗಿ ಅವಲಂಬಿಸಿರುವ ಬೆಳೆಯನ್ನು ಬೆಳೆಯಲು ಕಷ್ಟವಾಗುತ್ತದೆ ಎಂಬುದು ಅವರಿಗೂ ಗೊತ್ತಿತ್ತು.


ಸಸ್ಯವನ್ನು ಹೇಗೆ ಬೆಳೆಯಬೇಕು ಎಂಬುದರ ಬಗ್ಗೆ ಅಜಯ್‌ ತಿಳಿದುಕೊಂಡರೂ ಅದರ ಬಗ್ಗೆ ಹೆಚ್ಚಿನ ಜ್ಞಾನವಿರಲಿಲ್ಲ. ಅದರ ಬೀಜಗಳು ಅಥವಾ ಸಸಿಗಳು ಎಲ್ಲಿ ಸಿಗುತ್ತವೆ ಅದನ್ನು ಹೇಗೆ ತಂದು ನೆಡಬೇಕು ಎಂಬುದರ ಬಗ್ಗೆ ಮಾಹಿತಿ ಇರಲಿಲ್ಲ.ಸ್ಮಶಾನದಲ್ಲಿ ಬೆಳೆದಿದ್ದ ಸಸಿಗಳನ್ನು ತಂದು ನೆಟ್ಟರು!


ಅಲೋವೆರಾ ಸಸಿಗಳ ಬಗ್ಗೆ ಸಮೀಪದ ಚುರು ಗ್ರಾಮದ ಸ್ಮಶಾನದ ಬಗ್ಗೆ ಜನರು ಅಜಯ್‌ಗೆ ಮಾಹಿತಿ ನೀಡಿದರು. ಅಲ್ಲಿ ಈ ಹಲವಾರು ಸಸಿಗಳಿವೆ ಎಂಬುದಾಗಿ ಹೇಳಿದರು.


"ಆ ಹಳ್ಳಿಯಲ್ಲಿ ಒಬ್ಬ ವ್ಯಕ್ತಿಯನ್ನು ಸಮಾಧಿ ಮಾಡಿದ ನಂತರ, ಅಲ್ಲಿ ಯಾರೋ ಅಲೋವೆರಾ ಸಸಿಯನ್ನು ನೆಟ್ಟರು. ನಂತರದಲ್ಲಿ ಹೆಚ್ಚು ಹೆಚ್ಚು ಅಲೋವೆರಾ ಸಸಿಗಳು ಬೆಳೆದವು" ಎಂಬುದಾಗಿ ಹೇಳಿದರು.


ಆದರೆ ಅಲ್ಲಿ ಗುಂಪು ಗುಂಪಾಗಿ ಬೆಳೆದ ಅಲೋವೆರಾ ಸಸಿಗಳನ್ನು ತೆಗೆದುಹಾಕಿ ಸ್ಮಶಾನವನ್ನು ಸ್ವಚ್ಛಗೊಳಿಸಲು ಊರವರು ನಿರ್ಧರಿಸಿದ್ದರು. ಇದನ್ನು ಕೇಳಿದ ಅಜಯ್‌ ಟ್ರ್ಯಾಕ್ಟರ್‌ ಹಾಗೂ ಟ್ರಾಲಿಗಳಲ್ಲಿ ಆ ಅಲೋವೆರಾ ಗಿಡಗಳನ್ನು ಸ್ಮಶಾನದಿಂದ ತನ್ನ ಹೊಲಗಳಿಗೆ ಸಾಗಿಸಿದರು. ಅಲ್ಲದೇ ಅವುಗಳನ್ನು ತಮ್ಮ‌ ಜಮೀನಿನಲ್ಲಿ ಮರು ನಾಟಿ ಮಾಡಿದರು.


ಅಲೋವೆರಾ ಸಸ್ಯವನ್ನು ಹೇಗೆ ಬೆಳೆಸಬೇಕು... ಹೇಗೆ ಆರೈಕೆ ಮಾಡಬೇಕು ಎಂಬುದಾಗಿ ಅವರು ಆನ್‌ಲೈನ್‌ನಲ್ಲಿ ಸಾಕಷ್ಟು ಸಂಶೋಧನೆ ನಡೆಸಿದ್ದರು.


ಹೀಗಾಗಿ ಸಸ್ಯಗಳಿಗೆ ಉತ್ತಮ ಗುಣಮಟ್ಟದ ಗೊಬ್ಬರ ಮತ್ತು ಮಣ್ಣನ್ನು ಬಳಸಿದರು. ಸಸ್ಯಗಳಿಗೆ ಸಾಕಷ್ಟು ಬಿಸಿಲು ಸಿಗುತ್ತದೆ ಮತ್ತು ಎಲೆಗಳು ನೆಲದ ಮೇಲಿಂದ ಎತ್ತರದಲ್ಲಿದೆ ಎಂಬುದನ್ನು ಖಚಿತಪಡಿಸಿಕೊಂಡಿರುವುದಾಗಿ ಅಜಯ್‌ ಹೇಳುತ್ತಾರೆ.


ಅದ್ಭುತವಾಗಿ ಬೆಳೆದ ಅಲೋವೆರಾ ಸಸ್ಯಗಳು


ಆದರೆ, ಕೃಷಿಯಲ್ಲಿ ಇದು ಅಜಯ್ ಅವರ ಮೊದಲ ಪ್ರಯತ್ನವಾಗಿರುವುದರಿಂದ ಹೆಚ್ಚಿನ ನಿರೀಕ್ಷೆಗಳೇನೂ ಇರಲಿಲ್ಲ. ಇದರ ಜೊತೆ ಜೊತೆಗೆ, ಅವರು ತಮ್ಮ ಚಹಾ ಅಂಗಡಿಯನ್ನು ನಡೆಸುತ್ತಿದ್ದರು.


ಅವರು ತಮ್ಮ ಚಹಾ ಅಂಗಡಿಯಿಂದ ಉಳಿಸಿದ ಹಣವನ್ನು ತಮ್ಮ ಅಲೋವೆರಾ ಬೆಳೆ ಅಭಿವೃದ್ಧಿಪಡಿಸಲು ಬಳಸಿದರು. ಒಂದೂವರೆ ವರ್ಷದ ನಂತರ ಅವರಿಗೇ ಆಶ್ಚರ್ಯವಾಗುವಂತೆ ಅಲೋವೆರಾ ಬೆಳೆ ಅದ್ಭುತವಾಗಿ ಬೆಳೆಯುತ್ತಿತ್ತು.


2002 ರಲ್ಲಿ, ಅವರ ಕೃಷಿಯ ಯಶಸ್ಸು ಸಮೀಪಿಸುತ್ತಿದ್ದಂತೆ ಅವರು ತಮ್ಮ ಚಹಾ ಅಂಗಡಿಯನ್ನು ನಿರ್ವಹಿಸುವುದನ್ನು ನಿಲ್ಲಿಸಿದರು. ಆದರೆ ಅಜಯ್ ಹೇಳುವ ಪ್ರಕಾರ, ಅಲೋವೆರಾವನ್ನು ನೆಟ್ಟು ಬೆಳೆಸುವಾಗಲೂ ಅದನ್ನು ಹೇಗೆ ಮಾರಾಟ ಮಾಡುವುದು ಎಂಬುದರ ಬಗ್ಗೆ ಚಿಂತಿಸುತ್ತಿದ್ದರು. ಪರಿಣಾಮವಾಗಿ, ಅವರು ತನ್ನ ಫಸಲು ಬಂದ ತಕ್ಷಣ ಖರೀದಿದಾರರನ್ನು ಹುಡುಕಲಾರಂಭಿಸಿದರು.


ಇದನ್ನೂ ಓದಿ: Farming Tips: ಹೂವಿನ ತೋಟದಲ್ಲಿ ಕಳೆ ಹೆಚ್ಚಾಗ್ತಿದೆಯೇ? ನಿವಾರಿಸಲು ಈ 4 ಟಿಪ್ಸ್‌ ಫಾಲೋ ಮಾಡಿ!


ಅಲೋವೆರಾ ಒಂದು ಲಾಭದಾಯಕ ಕೃಷಿ


ಅಲೋವೆರಾ ಕೃಷಿಯ ಬಗ್ಗೆ ಅಜಯ್‌ ಹೆಮ್ಮೆ ಪಡುತ್ತಾರೆ. ಅಲೋವೆರಾ ಫಾರ್ಮ್ ಅನ್ನು ನಿರ್ಮಿಸಲು ಮತ್ತು ಅದರ ಪೂರ್ಣ ಪ್ರಮಾಣದ ವ್ಯಾಪಾರವನ್ನು ಆಯ್ಕೆ ಮಾಡಿಕೊಂಡ ತನ್ನ ನಿರ್ಧಾರ ಸರಿಯಾಗಿದೆ ಎಂದು ಅವರು ಹೇಳುತ್ತಾರೆ.


"ಅಲೋವೆರಾವನ್ನು ಸುಲಭವಾಗಿ ಬೆಳೆಯಬಹುದು. ಖರ್ಚೂ ಕಡಿಮೆ. ಅಲ್ಲದೇ ಇದು ಮರಳು ಮಣ್ಣಿನಲ್ಲಿಯೂ ಉತ್ತಮ ಫಸಲು ನೀಡುತ್ತದೆ. ಇದಕ್ಕೆ ಕಡಿಮೆ ನೀರು ಸಾಕು.


ಒಂದು ಸಣ್ಣ ಜಮೀನಿನಲ್ಲಿ ಸುಮಾರು 800 ಅಲೋವೆರಾ ಗಿಡಗಳನ್ನು ಬಿತ್ತಬಹುದು ಎಂಬುದಾಗಿ ಅವರು ವಿವರಿಸುತ್ತಾರೆ. ಅಲ್ಲದೇ ಇತ್ತೀಚಿಗೆ ಹೆಚ್ಚಿನ ಜನರು ಅಲೋವೆರಾದ ಮೌಲ್ಯವನ್ನು ಗುರುತಿಸಲು ಪ್ರಾರಂಭಿಸಿದ್ದಾರೆ ಎಂದು ತಮ್ಮ ಸಂತೋಷವನ್ನು ವ್ಯಕ್ತಪಡಿಸುತ್ತಾರೆ.


"ನಮ್ಮ ಹಿರಿಯರು ಹಲವಾರು ವರ್ಷಗಳ ಹಿಂದಿನಿಂದಲೂ ಇದನ್ನು ಬೆಳೆಯುತ್ತಿದ್ದಾರೆ. ಮೊದಲಿನಿಂದಲೂ ಅಲೋವೆರಾ ಅದರ ಆರೋಗ್ಯ ಪ್ರಯೋಜನಗಳಿಗೆ ಹೆಸರುವಾಸಿಯಾಗಿದೆ" ಎಂಬುದಾಗಿ ಅವರು ಹೇಳುತ್ತಾರೆ.


ಅಲೋವೆರಾ ಲಡ್ಡುಗಳ ಮಾರಾಟ


ಬಾಲ್ಯದಲ್ಲಿ ಅಲೋವೆರಾ ಲಡ್ಡುಗಳನ್ನು ತಿನ್ನುವುದನ್ನು ನೆನಪಿಸಿಕೊಳ್ಳುವ ಅಜಯ್, ಲಾಕ್‌ಡೌನ್ ಸಮಯದಲ್ಲಿ ನಾನು ಅವುಗಳನ್ನು ಪ್ರಯೋಗಿಸಿದ್ದೇನೆ.


ಅಲ್ಲದೇ ಈಗ ಎರಡು ರೀತಿಯ ಲಡ್ಡುಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದೇನೆ ಎಂದು ಹೇಳಿಕೊಳ್ಳುತ್ತಾರೆ. ಈ ಲಡ್ಡುಗಳು ಪ್ರತಿ ಕಿಲೋಗ್ರಾಂಗೆ 350 ರೂನಂತೆ ಮಾರಾಟ ಮಾಡುತ್ತಾರೆ.


ಅಜಯ್ ಅವರ ಪ್ರಕಾರ, ಉದ್ಯಮದಲ್ಲಿ ಪ್ರತಿಯೊಬ್ಬ ರೈತನ ಯಶಸ್ಸಿಗೆ ಹೊಸತನವು ಮುಖ್ಯವಾಗಿದೆ. "ನೀವು ಹೊಸದನ್ನು ಪ್ರಯತ್ನಿಸದಿದ್ದರೆ, ನೀವು ನಿಧಾನವಾಗಿ ಹಿಂದೆ ಸರಿಯಲು ಪ್ರಾರಂಭಿಸುತ್ತೀರಿ." ಎಂಬುದಾಗಿ ಅವರು ಹೇಳುತ್ತಾರೆ.


ಇನ್ನು ಚಳಿಗಾಲದಲ್ಲಿ ಈ ಸಸ್ಯಗಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವಂತೆ ಅಜಯ್ ಹೇಳುತ್ತಾರೆ. ಏಕೆಂದರೆ ಚಳಿ ಹವಾಮಾನವು ಸಸ್ಯದ ಬೆಳವಣಿಗೆಗೆ ಪ್ರತಿಕೂಲವಾಗಿರುತ್ತದೆ ಎಂಬುದಾಗಿ ಅಲೋವೆರಾ ಬೆಳೆಯಲು ಬಯಸುವವರಿಗೆ ಅಜಯ್‌ ಸಲಹೆ ನೀಡುತ್ತಾರೆ.


ಒಟ್ಟಾರೆ… ಮನಸ್ಸಿದ್ದಲ್ಲಿ ಮಾರ್ಗ ಅನ್ನೋದನ್ನು ಅಜಯ್‌ ಸಾಬೀತು ಮಾಡಿದ್ದಾರೆ. ಬದುಕಿನಲ್ಲಿ ಬಂದಂಥ ಅನಿರೀಕ್ಷಿತ ಘಟನೆಗಳಿಂದ ಹೇಗೋ ಟೀ ಸ್ಟಾಲ್‌ ಇಟ್ಟುಕೊಂಡು ಜೀವನ ನಡೆಸುತ್ತಿದ್ದ ಅಜಯ್‌ ಇಂದು ಲಾಭದಾಯಕ ಕೃಷಿ ಮಾಡುತ್ತಿದ್ದಾರೆ.


ಬದುಕನ್ನು ಒಳ್ಳೆಯ ರೀತಿಯಲ್ಲಿ ನಡೆಸಬೇಕು… ಅಭಿವೃದ್ಧಿ ಹೊಂದಬೇಕು… ಉನ್ನತ ಮಟ್ಟದ ಜೀವನಶೈಲಿಯನ್ನು ಅನುಭವಿಸಬೇಕು ಎಂಬ ಕನಸು ಕಂಡಿದ್ದು ಮಾತ್ರವಲ್ಲ… ಅದನ್ನು ಕಷ್ಟಪಟ್ಟು ನನಸು ಮಾಡಿಕೊಂಡಿದ್ದಾರೆ. ಕೃಷಿಯಲ್ಲಿ ಲಾಭ ಗಳಿಸಬೇಕು ಎಂಬುವವರಿಗೆಲ್ಲ ಅಜಯ್‌ ಮಾದರಿಯಾಗಿದ್ದಾರೆ.

Published by:Latha CG
First published: