ಖರ್ಚು-ವೆಚ್ಚ ನಿಭಾಯಿಸಲು ಎಲ್ಲಾ ಟೆಕ್ ಕಂಪೆನಿಗಳಂತೆ (Tech Company) ಇ- ಕಾಮರ್ಸ್ ದೈತ್ಯ ಅಮೆಜಾನ್ (Amazon) ಉದ್ಯೋಗಿಗಳ ವಜಾವನ್ನು ಘೋಷಿಸಿದೆ. ಈಗ ಇದರ ಬೆನ್ನಲ್ಲೇ ಮತ್ತೊಂದು ಸುದ್ದಿ ಕೂಡ ಹೊರಬಿದ್ದಿದೆ. ಅದೇನೆಂದರೆ ಅಮೆಜಾನ್ ಸುಮಾರು ಎರಡು ದಶಕಗಳ ಕಾಲ ಅಸಿತ್ವದಲ್ಲಿದ್ದ ತನ್ನ ಜಾಗತಿಕ ಆನ್‌ಲೈನ್ ಬುಕ್ ಸ್ಟೋರ್ ಬುಕ್ ಡಿಪಾಸಿಟರಿಯನ್ನು (Online Book Store) ಸಹ ಮುಚ್ಚಲು ನಿರ್ಧರಿಸಿದೆಯಂತೆ. ಅಮೆಜಾನ್, ಶಾಪಿಂಗ್ ಪ್ರಿಯರ ನೆಚ್ಚಿನ ಇ-ಕಾಮರ್ಸ್ ವೇದಿಕೆ. ಬಟ್ಟೆ-ಬರೆ, ಚಪ್ಪಲಿ, ಮನೆಗೆ ಬೇಕಾದ ವಸ್ತುಗಳವರೆಗೆ ಎಲ್ಲವನ್ನೂ ಒಂದೇ ಸೂರಿನಡಿ ಇದು ಒದಗಿಸುತ್ತದೆ.
ಅಮೆಜಾನ್‌ನಲ್ಲಿ ಬಟ್ಟೆ, ಸೌಂದರ್ಯ ವರ್ಧಕಗಳಿಗಿಂತ ಗ್ರಾಹಕರಿಗೆ ಈ ವೇದಿಕೆ ಒದಗಿಸುವ ಮನೆಗೆ ಬೇಕಾದ ವಸ್ತು, ಉಪಕರಣಗಳು ಅಚ್ಚು-ಮೆಚ್ಚು. ಇವುಗಳ ಜೊತೆಗೆ ಅಮೆಜಾನ್‌ನ ಆನ್‌ಲೈನ್ ಬುಕ್ ಸ್ಟೋರ್ ಕೂಡ ಹೆಚ್ಚು ಜನಪ್ರಿಯತೆ ಗಳಿಸಿತ್ತು.
ಅಮೆಜಾನ್ ಆನ್‌ಲೈನ್ ಬುಕ್ ಸ್ಟೋರ್‌ಗೆ ಬೀಗ
ಸುಮಾರು ಎರಡು ದಶಕಗಳ ಕಾಲ ಜನ-ಮನ ಗೆದ್ದ ಆನ್‌ಲೈನ್ ಬುಕ್ ಸ್ಟೋರ್ ಬುಕ್ ಡಿಪಾಸಿಟರಿಗೆ ಅಮೆಜಾನ್ ಇದೀಗ ಬೀಗ ಹಾಕಲು ಸಿದ್ಧತೆ ನಡೆಸಿದೆ. ಈ ಬಗ್ಗೆ ಯುಕೆ ಮೂಲದ ಪುಸ್ತಕ ಮಾರಾಟಗಾರರು ಬುಧವಾರ ಹೇಳಿದ್ದು, ವಿಷಯವನ್ನು ಖಚಿತಪಡಿಸಿದ್ದಾರೆ.
ಇದನ್ನೂ ಓದಿ: ಪ್ರೀತಿಯ ಹೆಸರಲ್ಲಿ ಸೈಬರ್ ವಂಚನೆ, ಈ ಆ್ಯಪ್ನಿಂದ ಕಳೆದುಕೊಂಡ ಹಣವೆಷ್ಟು ಗೊತ್ತಾ?
26 ಏಪ್ರಿಲ್ 2023ರಿಂದ ಸ್ಥಗಿತ
ಅಮೆಜಾನ್ ಬುಕ್ ಡಿಪಾಸಿಟರಿ ಕೂಡ ಈ ಬಗ್ಗೆ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದೆ. “ಪುಸ್ತಕ ಮಳಿಗೆಯು 26 ಏಪ್ರಿಲ್ 2023 ರಂದು ಮುಚ್ಚಲಿದೆ.
ಗ್ರಾಹಕರು ಕೇವಲ ಏಪ್ರಿಲ್ 26 ರ ಮಧ್ಯಾಹ್ನದವರೆಗೆ ಮಾತ್ರ ತಮಗೆ ಬೇಕಾದ ಪುಸ್ತಕಗಳನ್ನು ಆರ್ಡರ್ ಮಾಡಬಹುದು. ಅಲ್ಲಿಯವರೆಗೆ ಆರ್ಡರ್ ಮಾಡಿದ ಎಲ್ಲಾ ಪುಸ್ತಕಗಳನ್ನು ಗ್ರಾಹಕರಿಗೆ ತಲುಪಿಸಲು ನಾವು ಬದ್ಧರಾಗಿರುತ್ತೇವೆ. ಜೂನ್ 2023ರವರೆಗೆ ಯಾವುದೇ ಆರ್ಡರ್ ಸಮಸ್ಯೆ ಇದ್ದರೂ ನಾವು ಅದರ ಬಗ್ಗೆ ಗ್ರಾಹಕರ ಜೊತೆ ಸಂಪರ್ಕದಲ್ಲಿದ್ದು, ಎಲ್ಲವನ್ನೂ ಪರಿಹರಿಸುತ್ತೇವೆ" ಎಂದು ಅಮೆಜಾನ್ ಬುಕ್ ಡಿಪಾಸಿಟರಿ ಹೇಳಿಕೆಯಲ್ಲಿ ತಿಳಿಸಿದೆ.
"ಪುಸ್ತಕ ಡಿಪಾಸಿಟರಿಯ ಎಲ್ಲಾ ಗ್ರಾಹಕರಿಗೆ ಹೃದಯಪೂರ್ವಕ ಧನ್ಯವಾದಗಳು. ನಿಮ್ಮ ಮೆಚ್ಚಿನ ಪುಸ್ತಕಗಳನ್ನು ನಿಮಗೆ ತಲುಪಿಸಿರುವ ಖುಷಿ, ತೃಪ್ತಿ ನಮಗಿದೆ" ಎಂದು ಹೇಳಿಕೆ ಸೇರಿಸಲಾಗಿದೆ.
ಅಮೆಜಾನ್ ಆನ್‌ಲೈನ್ ಬುಕ್ ಸ್ಟೋರ್
2004 ರಲ್ಲಿ ಯುನೈಟೆಡ್ ಕಿಂಗ್‌ಡಂನಲ್ಲಿ ಸ್ಥಾಪಿಸಲಾದ ಬುಕ್ ಡಿಪಾಸಿಟರಿಯನ್ನು 4 ಜುಲೈ 2011 ರಂದು ಅಮೆಜಾನ್ ಸ್ವಾಧೀನಪಡಿಸಿಕೊಂಡಿತು. ಇದು 20 ಮಿಲಿಯನ್‌ಗಿಂತಲೂ ಹೆಚ್ಚು ಪುಸ್ತಕಗಳನ್ನು ಮಾರಾಟ ಮಾಡಿದ್ದು, 120 ಕ್ಕೂ ಹೆಚ್ಚು ದೇಶಗಳಿಗೆ ಉಚಿತ ವಿತರಣೆಯನ್ನು ನೀಡುತ್ತದೆ ಎಂದು ಅದರ ವೆಬ್‌ಸೈಟ್‌ನಲ್ಲಿ ತಿಳಿಸಲಾಗಿದೆ.
ಬುಕ್ ಡಿಪಾಸಿಟರಿಯು ಏಪ್ರಿಲ್ 26 ರಂದು ಕಾರ್ಯಾಚರಣೆಯನ್ನು ನಿಲ್ಲಿಸುವುದಾಗಿ ಘೋಷಿಸಿದ್ದು, ಆ ದಿನ ಮಧ್ಯಾಹ್ನದವರೆಗೆ ಬಂದ ಆರ್ಡರ್‌ಗಳನ್ನು ಪೂರೈಸುವುದಾಗಿ ತಿಳಿಸಿದೆ. ಇ-ಕಾಮರ್ಸ್ ದೈತ್ಯ ಅಮೆಜಾನ್‌ನಲ್ಲಿ ಒಂದು ಕಡೆ ಉದ್ಯೋಗಿಗಳ ವಜಾ ನಡೆಯುತ್ತಿದ್ದರೆ ಇನ್ನೊಂದು ಕಡೆ ತನ್ನ ಘಟಕಗಳನ್ನು ಮುಚ್ಚುವ ಘೋಷಣೆ ಕೂಡ ಹೊರ ಬೀಳುತ್ತಿವೆ.
ಅಮೆಜಾನ್ ಸಿಇಒ ಆಂಡಿ ಜಾಸ್ಸಿ ಕಂಪನಿಯ ವ್ಯವಹಾರದಲ್ಲಿ ವೆಚ್ಚವನ್ನು ನಿಯಂತ್ರಿಸುವ ಸಲುವಾಗಿ ಉದ್ಯೋಗ ಕಡಿತಗಳು ನಡೆಯುತ್ತವೆ. ಹಿಂದಿನ ಸುತ್ತಿನ 18,000ಕ್ಕೂ ಹೆಚ್ಚು ಜನರನ್ನು ವಜಾಗೊಳಿಸಲಾಗಿತ್ತು. ಅಲ್ಲದೆ ಕಳೆದ ತಿಂಗಳು ಅಮೆಜಾನ್ ಹೆಚ್ಚುವರಿ 9,000 ಕಾರ್ಮಿಕರನ್ನು ವಜಾ ಮಾಡುವುದಾಗಿ ಬಹಿರಂಗಪಡಿಸಿದೆ. ಹಾಗೆಯೇ ಹೊಸ ನೇಮಕಾತಿಗಳಿಗೂ ಅಮೆಜಾನ್ ಬ್ರೇಕ್ ಹಾಕಿದೆ.
ಇತ್ತೀಚಿನ ಒಂದು ವರದಿಯಲ್ಲಿ ಅಮೆಜಾನ್ ತನ್ನ ವಿಡಿಯೋ ಗೇಮಿಂಗ್ ವಿಭಾಗದಲ್ಲೂ ಸಹ 100ಕ್ಕೂ ಹೆಚ್ಚು ಉದ್ಯೋಗಿಗಳನ್ನು ವಜಾಗೊಳಿಸುತ್ತಿದೆ ಎಂದು ತಿಳಿದು ಬಂದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ