ವಾಲ್ಮಾರ್ಟ್ (walmart) ಇಂಕ್ ಒಡೆತನದ ಡಿಜಿಟಲ್ ಪಾವತಿಗಳ ಕಂಪನಿ ಫೋನ್ ಪೇ ತನ್ನ ಪ್ರಧಾನ ಕಚೇರಿ ಭಾರತಕ್ಕೆ ಸ್ಥಳಾಂತರಗೊಂಡಾಗ, ವಾಲ್ಮಾರ್ಟ್ ಸುಮಾರು $1 ಬಿಲಿಯನ್ ತೆರಿಗೆಯನ್ನು ಪಾವತಿಸಬೇಕಾಗಿರುವುದಾಗಿ ಬಲ್ಲ ಮೂಲಗಳು ತಿಳಿಸಿವೆ. ಫೋನ್ ಪೇ ಹೆಚ್ಚಿನ ಮೌಲ್ಯ ಹೊಂದಿದ್ದು ಫ್ಲಿಪ್ ಕಾರ್ಟ್ ಸಂಸ್ಥೆಯ ಭಾಗವಾಗಿತ್ತು. ಆದರೆ ಫ್ಲಿಪ್ಕಾರ್ಟ್ ಆನ್ಲೈನ್ ಸರ್ವೀಸ್ ಪ್ರೈವೇಟ್ ಲಿಮಿಟೆಡ್ನ ಹೆಚ್ಚಿನ ಮಾಲೀಕತ್ವವನ್ನು (Wonership) ವಾಲ್ಮಾರ್ಟ್ ಸ್ವಾಧೀನಪಡಿಸಿಕೊಂಡಿತು ಹಾಗೂ ತದನಂತರ ಫೋನ್ ಪೇ (Phonepe And Walmart) ಕಚೇರಿಯನ್ನು ಸ್ಥಳಾಂತರಿಸುವ ವಿಷಯ ಎದ್ದಿದೆ. ಇದರಿಂದಾಗಿಯೇ ತೆರಿಗೆಯ ಶುಲ್ಕ ಅಧಿಕವಾಗಿದೆ ಎನ್ನಲಾಗಿದೆ.
ಸಿಂಗಾಪುರದಿಂದ ಫೋನ್ ಪೇ ಯ ಪ್ರಧಾನ ಕಚೇರಿ ಭಾರತಕ್ಕೆ ಸ್ಥಳಾಂತರ
ಇದೀಗ ಫ್ಲಿಪ್ಕಾರ್ಟ್ನಿಂದ ಬೇರ್ಪಟ್ಟು ಸಿಂಗಾಪುರ್ನಿಂದ ಭಾರತದಲ್ಲಿ ಮರುನೆಲೆಸಿರುವ ಫಿನ್ಟೆಕ್ ಸಂಸ್ಥೆಯು (Phone Pe) ಜನರಲ್ ಅಟ್ಲಾಂಟಿಕ್, ಕತಾರ್ ಇನ್ವೆಸ್ಟ್ಮೆಂಟ್ ಅಥಾರಿಟಿ ಮತ್ತು ಇತರ ಸಂಸ್ಥೆಗಳಿಂದ $12 ಬಿಲಿಯನ್ನಷ್ಟು ಫಂಡ್ಗಳನ್ನು ಸಂಗ್ರಹಿಸುತ್ತಿದ್ದು ಇದು ಭಾರೀ ತೆರಿಗೆ ಶುಲ್ಕಕ್ಕೆ ಕಾರಣವಾಗಿದೆ ಎಂದು ವರದಿಯಾಗಿದೆ.
ಪ್ರಸ್ತುತ ಷೇರುದಾರರಿಗೆ ಹೆಚ್ಚಿನ ತೆರಿಗೆ ಕಂಟಕ
ಟೈಗರ್ ಗ್ಲೋಬಲ್ ಮ್ಯಾನೇಜ್ಮೆಂಟ್ ಸೇರಿದಂತೆ ಹೆಚ್ಚಿನ ಹೂಡಿಕೆದಾರರು ಇದೀಗ ಭಾರತದಲ್ಲಿ ಫೋನ್ಪೇ ಷೇರುಗಳನ್ನು ಹೊಸ ಬೆಲೆಗೆ ಖರೀದಿಸಿದ್ದಾರೆ. ಇದರಿಂದ ಅಸ್ತಿತ್ವದಲ್ಲಿರುವ ಷೇರುದಾರರು ಸುಮಾರು 80 ಶತಕೋಟಿ ರೂಪಾಯಿಗಳ ತೆರಿಗೆಯನ್ನು ಪಾವತಿಸಬೇಕಾಗುತ್ತದೆ ಎಂಬುದಾಗಿ ವರದಿ ಉಲ್ಲೇಖಿಸಿದೆ.
ತಾಯ್ನಾಡಿಗೆ ಮರಳಲಿರುವ ಸಂಸ್ಥೆ
ವಾಲ್ಮಾರ್ಟ್, ಫ್ಲಿಪ್ಕಾರ್ಟ್, ಟೈಗರ್ ಗ್ಲೋಬಲ್ ಈ ಕುರಿತು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆನ್ಲೈನ್ ಚಿಲ್ಲರೆ ವ್ಯಾಪಾರಿ ಮತ್ತು ಮಾಜಿ ಪೋಷಕ ಕಂಪನಿ ಫ್ಲಿಪ್ಕಾರ್ಟ್ನಂತೆಯೇ ಫೋನ್ಪೇ ತನ್ನ ಪ್ರಧಾನ ಕಚೇರಿಯನ್ನು ಬೆಂಗಳೂರಿಗೆ ಬದಲಾಯಿಸುತ್ತಿದೆ. ಭಾರತೀಯ ಸ್ಟಾರ್ಟಪ್ ಮರಳಿ ತನ್ನ ದೇಶಕ್ಕೆ ಹಿಂತಿರುಗುತ್ತಿದೆ.
ಭಾರತೀಯ ಸ್ಟಾರ್ಟಪ್ ಕಂಪನಿಗಳು ಸಿಂಗಾಪುರದಲ್ಲಿ ತಳವೂರಲು ಕಾರಣಗಳೇನು?
ಸರಳ ತೆರಿಗೆ ಪ್ರಕ್ರಿಯೆ, ಸುಲಭವಾಗಿ ವಿದೇಶಿ ಹೂಡಿಕೆಗಳನ್ನು ಪಡೆಯುವುದು ಹಾಗೂ ವಿದೇಶಿ ವಿನಿಮಯ ವ್ಯವಸ್ಥೆಯ ಕಾರಣದಿಂದ ಭಾರತದಲ್ಲಿರುವ ಹೆಚ್ಚಿನ ತಂತ್ರಜ್ಞಾನ ಕಂಪನಿಗಳು, ಸ್ಟಾರ್ಟಪ್ಗಳು ಸಿಂಗಾಪೂರದಲ್ಲಿ ಹೆಚ್ಚಿನ ಕಾರ್ಯಾಚರಣೆಗಳನ್ನು ನಡೆಸುತ್ತಿವೆ. ಈ ಪ್ರಕ್ರಿಯೆ ವರ್ಷಗಳಿಂದ ನಡೆದುಕೊಂಡು ಬರುತ್ತಿದೆ. ಇಂಡಿಯಾ ಬ್ರೀಫಿಂಗ್ ನೀಡಿರುವ ವರದಿಯ ಪ್ರಕಾರ 2000 ನೇ ವರ್ಷದಿಂದ ಸಿಂಗಾಪುರದಲ್ಲಿ 8,000ಕ್ಕೂ ಹೆಚ್ಚು ಭಾರತೀಯ ಸ್ಟಾರ್ಟ್ಅಪ್ಗಳು ಕಾರ್ಯಾಚರಣೆ ನಡೆಸುತ್ತಿವೆ.
ಫೋನ್ಪೇಯ ಮೂರು ಪ್ರಮುಖ ಕ್ರಮಗಳಾವುವು
ಫೋನ್ಪೇಯ ಮೂರು ಪ್ರಮುಖ ಕ್ರಮಗಳು – ಭಾರತಕ್ಕೆ ಸ್ಥಳಾಂತರಗೊಳ್ಳುವುದು, ಫ್ಲಿಪ್ಕಾರ್ಟ್ನಿಂದ ಪ್ರತ್ಯೇಕಗೊಂಡು ಸ್ವತಂತ್ರ ಸಂಸ್ಥೆಯಾಗಿ ರೂಪುಗೊಳ್ಳುವುದು, ಹೆಚ್ಚಿನ ಮೌಲ್ಯಮಾಪನದಲ್ಲಿ ಹಣ ಸಂಗ್ರಹಿಸುವುದಾಗಿದೆ. ಹೆಚ್ಚಿನ ಸ್ಟಾರ್ಟಪ್ಗಳು ನಿಧಿ ಸಂಗ್ರಹಣೆಯಲ್ಲಿ ವಿಫಲತೆಗಳನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ಹಾಗೂ ಹಣದುಬ್ಬರದ ಸಮಸ್ಯೆಗಳಿಂದ ಬಳಲುತ್ತಿರುವ ಸಮಯದಲ್ಲಿ ಫೋನ್ಪೇ ಫಂಡ್ ರೈಸಿಂಗ್ ಕ್ರಿಯೆಗೆ ಮುಂದಾಗಿದೆ.
ಭಾರತದ ಹಣಕಾಸು ಮತ್ತು ಬ್ಯಾಂಕಿಂಗ್ ನಿಯಂತ್ರಕ, ಭಾರತೀಯ ರಿಸರ್ವ್ ಬ್ಯಾಂಕ್ನ ಪರವಾನಗಿಯನ್ನು ಪಡೆಯಲು ಸಂಸ್ಥೆಗೆ ಕಷ್ಟವಾಗಬಹುದು ಎಂಬುದು ಮೂಲಗಳಿಂದ ತಿಳಿದುಬಂದಿರುವ ಮಾಹಿತಿಯಾಗಿದೆ.
ಭಾರತ ವಿಶ್ವದ ಮೂರನೇ-ಅತಿದೊಡ್ಡ ಸ್ಟಾರ್ಟಪ್ ಜಾಲ
ಪ್ರಸ್ತುತ ಭಾರತ ಪ್ರಧಾನ ಕಚೇರಿ ಹೊಂದಿರುವ ಕಂಪನಿಗಳು ಸಾಗರೋತ್ತರ ವಿನಿಮಯ ಕೇಂದ್ರಗಳಲ್ಲಿ ನೇರವಾಗಿ ಲಿಸ್ಟಿಂಗ್ ಮಾಡುವುದನ್ನು ಸರಕಾರ ನಿಷೇಧಿಸಿದೆ. ಭಾರತವು 26,000 ಕ್ಕೂ ಹೆಚ್ಚು ಸ್ಟಾರ್ಟ್ಅಪ್ಗಳನ್ನು ಹೊಂದಿದ್ದು, ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್ ಪ್ರಕಾರ ದೇಶವು ವಿಶ್ವದ ಮೂರನೇ-ಅತಿದೊಡ್ಡ ಸ್ಟಾರ್ಟಪ್ ಜಾಲವಾಗಿ ರೂಪುಗೊಂಡಿದೆ. ಈ ಸ್ಟಾರ್ಟಪ್ಗಳಲ್ಲಿ 100 ಕ್ಕೂ ಹೆಚ್ಚು ಸಂಸ್ಥೆಗಳು $1 ಬಿಲಿಯನ್ ಮೌಲ್ಯವನ್ನು ಹೊಂದಿದ್ದು ಯುನಿಕಾರ್ನ್ ಸ್ಥಾನಮಾನಗಳಿಸಿವೆ.
ಡಿಜಿಟಲ್ ಪಾವತಿ ಸಂಸ್ಥೆಗಳ ನಡುವೆ ಹೆಚ್ಚುತ್ತಿರುವ ಪೈಪೋಟಿ
ಫೋನ್ಪೇ, ಪೇಟಿಎಮ್, ಗೂಗಲ್ ಪೇ, ಅಮೆಜಾನ್ ಪೇ ನಡುವೆ ತೀವ್ರ ಸ್ಪರ್ಧೆ ಇದ್ದು ಪೈಪೋಟಿ ಏರಿಕೆಯಾಗುತ್ತಲೇ ಇದೆ. ಫ್ಲಿಪ್ಕಾರ್ಟ್ನ ಮಾಜಿ ಕಾರ್ಯನಿರ್ವಾಹಕರಾದ ಸಮೀರ್ ನಿಗಮ್, ರಾಹುಲ್ ಚಾರಿ ಮತ್ತು ಬರ್ಜಿನ್ ಇಂಜಿನಿಯರ್ರಿಂದ 2015 ರಲ್ಲಿ ಫೋನ್ ಪೇ ಪ್ರಾರಂಭಗೊಂಡಿತು. ಫೋನ್ ಪೇ ಯನ್ನು ಫ್ಲಿಪ್ಕಾರ್ಟ್ ಶೀಘ್ರವೇ ಸ್ವಾಧೀನಪಡಿಸಿಕೊಂಡಿತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ