ಭಾರತ (India) ಹಲವಾರು ವಿಶೇಷವಾದ ಮೂಲಿಕೆ, ಔಷಧಿ (Medicine) ಸಸ್ಯ, ಮಸಾಲೆಗಳ (Masala) ಉತ್ಪಾದನೆಗೆ ಪ್ರಪಂಚದಲ್ಲಿಯೇ ಅಗ್ರಪಂಕ್ತಿಯಲ್ಲಿದೆ. ಅದರಲ್ಲಿ ಒಂದು ವಿಶೇಷವಾದ ಪದಾರ್ಥ ಎಂದರೆ ಕೇಸರಿ (Kesar). ಕೆಂಪು ಚಿನ್ನ ಎನ್ನುವ ಈ ಪದಾರ್ಥಕ್ಕೆ ಎಲ್ಲಿಲ್ಲದ ಬೇಡಿಕೆ ಇದೆ. ಭಾರತೀಯ ಮನೆಗಳಲ್ಲಿ ಹಬ್ಬದ ಸಮಯದಲ್ಲಿ ಸಿಹಿತಿಂಡಿಗಳನ್ನು ಮಾಡಲು ಬಳಸಲಾಗುತ್ತದೆ. ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ಕೇಸರಿ ವಿಶ್ವದ ಅತ್ಯಂತ ದುಬಾರಿ ಮಸಾಲೆಗಳಲ್ಲಿ ಒಂದಾಗಿದೆ ಅಂತಾ ನಮಗೆಲ್ಲಾ ಗೊತ್ತು. ಕೇಸರಿ (Saffron) ಭಾರತದಲ್ಲಿ ಎಲ್ಲಾ ಕಡೆ ಬೆಳೆಯಲಾಗುವುದಿಲ್ಲ. ಸೀಮಿತ ಭೂಪ್ರದೇಶ, ವಾತಾವರಣ (Climate), ಹೆಚ್ಚಿನ ನಿರ್ವಹಣೆ ಕಾರಣದಿಂದಲೂ ಇದು ಕೆಲವೇ ಪ್ರದೇಶದಲ್ಲಿ ಬೆಳೆಯುವಂತಹ ಬೆಳೆ. ಭಾರತದಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ (Kashmir) ಕೇಸರಿಯನ್ನು ಬೆಳೆಯಲಾಗುತ್ತದೆ.
ಶಿಪ್ಪಿಂಗ್ ಕಂಟೇನರ್‌ನಲ್ಲಿಯೇ ಬೆಳೆದ ಬೆಳೆ
ಇಲ್ಲೊಬ್ಬ ಇಂಜಿನಿಯರ್ ಸೀಮಿತ ಪ್ರದೇಶದಲ್ಲಿ ಮಾತ್ರ ಕೇಸರಿಯನ್ನು ಬೆಳೆಯಬಹುದು ಎಂಬ ಪರಿಕಲ್ಪನೆಯನ್ನು ಸುಳ್ಳು ಮಾಡಿದ್ದಾರೆ ನೋಡಿ. ವಿಶೇಷ ಕೃಷಿ ವಿಧಾನವನ್ನು ಬಳಸಿಕೊಂಡು ಬೇಡಿಕೆ ಹೊಂದಿರುವ ದುಬಾರಿಯಾದ ಮಸಾಲೆಯನ್ನು ಶಿಪ್ಪಿಂಗ್ ಕಂಟೇನರ್‌ನಲ್ಲಿಯೇ ಬೆಳೆಸಿದ್ದಾರೆ.
ಸಾಫ್ಟ್‌ವೇರ್ ಇಂಜಿನಿಯರ್ ಶೈಲೇಶ್ ಮೋದಕ್ ಎಂಬಾತ ತಮ್ಮ 13 ವರ್ಷಗಳ ವೃತ್ತಿಜೀವನವನ್ನು ತೊರೆದು ಮಣ್ಣನ್ನು ಬಳಸದೆ, ನೀರಿನಲ್ಲಿ ಖನಿಜ ಪುಷ್ಟಿಕಾರಿ ದ್ರಾವಣವನ್ನು ಬಳಸಿಕೊಂಡು ಹೈಡ್ರೋಪೋನಿಕ್ಸ್ ಸಸ್ಯಗಳನ್ನು ಬೆಳೆಸುವ ವಿಧಾನ ಬಳಸಿ ಕೃಷಿ ಮಾಡಲು ನಿರ್ಧರಿಸಿದರು. ಪ್ರಸ್ತುತ ಹೈಡ್ರೋಪೋನಿಕ್ಸ್ ಕೃಷಿ ಪದ್ಧತಿ ಮೂಲಕ ಶಿಪ್ಪಿಂಗ್ ಕಂಟೈನರ್‌ನಲ್ಲಿ ಕೇಸರಿ ಬೆಳೆದು ಉತ್ತಮ ಸಂಪಾದನೆಯಲ್ಲಿ ಮಾಡುತ್ತಿದ್ದಾರೆ.
ಹೇಗಿತ್ತು ಇವರ ಕೃಷಿ ಜರ್ನಿ, ಕೇವಲ ಜಮ್ಮು ಮತ್ತು ಕಾಶ್ಮೀರ ಭಾಗಗಳಿಗೆ ಮಾತ್ರ ಸೀಮಿತವಾಗಿದ್ದ ಕೇಸರಿ ಬೆಳೆಯನ್ನು ದೊಡ್ಡ ಬಾಕ್ಸ್‌ಗಳಲ್ಲಿ ಬೆಳೆದಿದ್ದು ಹೇಗೆ ಎಂಬುದನ್ನು ಇಲ್ಲಿ ನೋಡೋಣ.
ಪುಣೆಯಲ್ಲಿ ಕೇಸರಿ ಬೆಳೆದ ಸಾಫ್ಟ್‌ವೇರ್ ಇಂಜಿನಿಯರ್
ಕೇವಲ ಜಮ್ಮು ಮತ್ತು ಕಾಶ್ಮೀರ ಭಾಗದಲ್ಲಿ ಮಾತ್ರ ಕೇಸರಿ ಬೆಳೆಯಲು ಸಾಧ್ಯ ಎಂಬ ಸತ್ಯವನ್ನು ಹುಸಿ ಮಾಡಿದ ಶೈಲೇಶ್ ದೊಡ್ಡ ಶಿಪ್ಪಿಂಗ್ ಕಂಟೇನರ್‌ಗಳನ್ನು ಬಳಸಿಕೊಂಡು ಪುಣೆಯಲ್ಲಿಯೇ ಕೇಸರಿ ಕೃಷಿ ಮಾಡಿದ್ದಾರೆ.
ಮೊದಲ ಕೊಯ್ಲಿನಲ್ಲಿ 875 ಗ್ರಾಂ ಬೆಳೆದ ಶೈಲೇಶ್ 500 ರೂಪಾಯಿಯನ್ನು ಪಡೆದುಕೊಂಡಿದ್ದರು. ಇದೇ ಅವರ ಕೇಸರಿ ಬೆಳೆಯಲ್ಲಿನ ಮೊದಲ ಸಂಪಾದನೆ.
ಆದರೆ ನಂತರದ ದಿನಗಳಲ್ಲಿ ಒಳ್ಳೆಯ ಇಳುವರಿ ಪಡೆದ ಶೈಲೇಶ್ ಈವರೆಗೂ 5 ಲಕ್ಷ ರೂಪಾಯಿ ಆದಾಯ ಗಳಿಸಿದ್ದಾರೆ. ಸಂಶೋಧನೆಗೆ ಮತ್ತು ಲ್ಯಾಬ್ ಸ್ಥಾಪನೆಗೆ 10 ಲಕ್ಷ ರೂಪಾಯಿ ಹೂಡಿಕೆ ಮಾಡಿದ ಇವರು, ಈಗಾಗಲೇ 5 ಲಕ್ಷ ರೂಪಾಯಿ ಆದಾಯ ಗಳಿಸಿದ್ದಾರೆ.
ಉದ್ಯೋಗ ತೊರೆದು ಉದ್ಯಮದ ಕಡೆ ಒಲವು
ನಾಸಿಕ್‌ನಲ್ಲಿ ಮಧ್ಯಮ ವರ್ಗದ ಕುಟುಂಬದಲ್ಲಿ ಬೆಳೆದ ಶೈಲೇಶ್‌ಗೆ ತಮ್ಮದೇ ಉದ್ಯಮ ಆರಂಭಿಸಿ ಸ್ಥಿರವಾದ ಆದಾಯ ಪಡೆಯಬೇಕು ಎಂಬ ಗುರಿ ಇತ್ತು.
ಪುಣೆ ವಿಶ್ವವಿದ್ಯಾನಿಲಯದಿಂದ ಕಂಪ್ಯೂಟರ್ ಸೈನ್ಸ್‌ನಲ್ಲಿ ಪದವಿಯನ್ನು ಪೂರ್ಣಗೊಳಿಸಿದ ನಂತರ, ಅವರು ಇಸಿಎಸ್ ಪುಣೆಯಲ್ಲಿ ಉದ್ಯೋಗ ಪಡೆದುಕೊಂಡರು.
ವಿದೇಶಕ್ಕೆ ಹೋಗುವ ಅವಕಾಶ ಸಿಕ್ಕಿತು. ಒಳ್ಳೆಯ ಕೆಲಸ, ಕೈತುಂಬಾ ಸಂಬಳ ಇದ್ದರೂ ಶೈಲೇಶ್ ಮನಸ್ಸು ಮಾತ್ರ ಅವರ ಗುರಿಯತ್ತ ಸೆಳೆಯುತ್ತಿತ್ತು.
ಹೈಡ್ರೋಪೋನಿಕ್ಸ್ ಕೃಷಿ ವಿಧಾನದ ಮೂಲಕ ಶಿಪ್ಪಿಂಗ್ ಕಂಟೈನರ್‌ನಲ್ಲಿ ಕೇಸರಿ ಬೆಳೆದ ಶೈಲೇಶ್
ಶೈಲೇಶ್ ಇಷ್ಟಪಟ್ಟ ಕೆಲಸ ಮಾಡಲು ಮನೆಯವರು ವಿರೋಧ ವ್ಯಕ್ತಪಡಿಸಿದರೂ ಸಹ ಪತ್ನಿ ಬೆಂಬಲ ನೀಡಿದರು. ಮೊದಲಿಗೆ ಉದ್ಯಮಿಗಳಿಗಾಗಿ ವೆಬ್‌ಸೈಟ್‌ಗಳನ್ನು ಮಾಡುವ ಪ್ರಯತ್ನಕ್ಕೆ ಕೈಹಾಕಿದರು.
ನಂತರ ಜೇನು ನೊಣ ಬಾಡಿಗೆ ನೀಡುವ ಉದ್ಯಮ ಆರಂಭಿಸಿದರು. ಇದು ಕೈಹಿಡಿಯದಿದ್ದಾಗ ಹೈಡ್ರೋಪೋನಿಕ್ಸ್ ಕೃಷಿಯತ್ತ ಒಲವು ತೋರಿದರು.
ಹೀಗೆ ಈ ಬಗ್ಗೆ ಎಲ್ಲಾ ಚಿಂತನೆಗಳನ್ನು ನಡೆಸುವಾಗ 2016 ರಲ್ಲಿ, ಶೈಲೇಶ್ ಬಿಟ್ಟು ಹೈಡ್ರೋಪೋನಿಕ್ಸ್ ಕೃಷಿ ವಿಧಾನ ಬಳಸಿಕೊಂಡು ಶಿಪ್ಪಿಂಗ್ ಕಂಟೈನರ್‌ನಲ್ಲಿ ಕೇಸರಿ ಬೆಳೆಯುವ ಪ್ರಯತ್ನಕ್ಕೆ ಮುಂದಾದರು.
ಶೈಲೇಶ್ ಅವರು 2018 ರಲ್ಲಿ ಹೈಡ್ರೋಪೋನಿಕ್ಸ್ ಕಲ್ಪನೆಯನ್ನು ಸಂಶೋಧಿಸಲು ಪ್ರಾರಂಭಿಸಿದರು. "ನಾನು ಈ ತಂತ್ರಜ್ಞಾನದ ಬಗ್ಗೆ ಕೇಳಿದ್ದೆ, ಆದರೆ ಅದನ್ನು ನಿಜವಾಗಿಯೂ ಅರ್ಥಮಾಡಿಕೊಳ್ಳಲು ನನಗೆ ಸಾಕಷ್ಟು ಸಮಯ ಬೇಕಾಯಿತು.
ಕೆಲವು ಸ್ನೇಹಿತರು ನನ್ನ ಸಂಶೋಧನೆಯಲ್ಲಿ ನನಗೆ ಸಹಾಯ ಮಾಡಿದರು. ಹೈಡ್ರೋಪೋನಿಕ್ಸ್ ಕೃಷಿ ವಿಧಾನ ತಿಳಿಯಲು ಮತ್ತು ಅದರ ಕುರಿತು ಸಂಶೋಧನೆ ಮಾಡಲು ನನಗೆ ಒಂದು ವರ್ಷಕ್ಕಿಂತ ಹೆಚ್ಚು ಸಮಯ ಬೇಕಾಯಿತು" ಎಂದು ಶೈಲೇಶ್ ತಮ್ಮ ಪ್ರಯಾಣವನ್ನು ವಿವರಿಸಿದರು.
ನಂತರ ಅಂತಿಮವಾಗಿ ಹೈಡ್ರೋಪೋನಿಕ್ಸ್ ಮೂಲಕ ಕೇಸರಿ ಬೆಳೆಯಲು ನಿರ್ಧರಿಸಿದೆ. ಇವುಗಳನ್ನು ಶಿಪ್ಪಿಂಗ್ ಕಂಟೇನರ್‌ಗಳಲ್ಲಿ ಬೆಳೆಯಲು ಸಹ ಯೋಜನೆ ಹಾಕಿಕೊಂಡೆ.
ಅಲ್ಲಿ ಬೆಳೆಗಳನ್ನು ಬೆಳೆಯಲು ಮುಂಬೈಗೆ ಹೋಗಿ 5 ಲಕ್ಷ ರೂ.ಗೆ ಶಿಪ್ಪಿಂಗ್ ಕಂಟೈನರ್ ಖರೀದಿಸಿ ಪುಣೆಗೆ ರವಾನಿಸಿದ್ದೆ. ಶಿಪ್ಪಿಂಗ್ ಕಂಟೇನರ್ ಅನ್ನು ಬಳಸುವುದರ ಹಿಂದಿನ ಕಾರಣವೆಂದರೆ ಅವು ಉತ್ತಮ ಅವಾಹಕಗಳಾಗಿವೆ, ”ಎಂದು ಅವರು ವಿವರಿಸುತ್ತಾರೆ.
ಹೈಡ್ರೋಪೋನಿಕ್ಸ್ ಕೃಷಿಯಲ್ಲಿ ಮೊದಲಿಗೆ ಶೈಲೇಶ್ ಲೆಟಿಸ್, ಸ್ಟ್ರಾಬೆರಿ, ಟೊಮೇಟೊ ಮುಂತಾದ ಬೆಳೆಗಳನ್ನು ಬೆಳೆದಿದ್ದರು. ನಂತರ ಕೇಸರಿ ಬೆಳೆಯನ್ನು ಬೆಳೆಯಲು ನಿರ್ಧರಿಸಿದರು.
ಕೇಸರಿ ಬೆಳೆಗಳ ಬೀಜಗಳನ್ನು ಕಾಶ್ಮೀರದಿಂದ ಆರ್ಡರ್ ಮಾಡಿ ತರಿಸಿಕೊಂಡರು. ಅಂತಿಮವಾಗಿ 160 ಚದರ ಅಡಿ ವಿಸ್ತೀರ್ಣದ ಕಂಟೇನರ್‌ನಲ್ಲಿ ಕೇಸರಿ ಬೆಳೆಯಲು ಮುಂದಾದರು ಶೈಲೇಶ್.
“ಮೊದಲ ಬಾರಿಗೆ ಕೇಸರಿ ಹೂವಿನ ಮೊಗ್ಗುಗಳನ್ನು ನೋಡಿದಾಗ ನನ್ನ ಖುಷಿಗೆ ಪಾರವೆ ಇಲ್ಲ ಎನ್ನುವಂತಾಗಿತ್ತು. ನಾನು ಹೆಚ್ಚು ಸೂಕ್ಷ್ಮ ಕ್ಯಾಮೆರಾಗಳ ಮೂಲಕ ಸಸ್ಯಗಳ ಪ್ರತಿಯೊಂದು ಚಲನೆ ಮತ್ತು ಬೆಳವಣಿಗೆಯನ್ನು ತೀವ್ರವಾಗಿ ಟ್ರ್ಯಾಕ್ ಮಾಡುತ್ತಿದ್ದೆ. ಕೇಸರಿ ಹೂವು ಮೊದಲ ಬಾರಿಗೆ ಅರಳಿದಾಗ ನನ್ನ ಕೆಲಸ ಸಾರ್ಥಕವಾಗುವ ಭರವಸೆ ಮೂಡಿತು" ಎಂದು ಹೇಳಿದರು ಶೈಲೇಶ್.
ಈಗಾಗ್ಲೇ ಕೇಸರಿ ಬೆಳೆಗಳನ್ನು ಬೆಳೆದು ಮಾರಾಟ ಮಾಡಿರುವ ಶೈಲೇಶ್ ಇಲ್ಲಿಯವರೆಗೂ 5 ಲಕ್ಷ ರೂಪಾಯಿ ಆದಾಯ ಗಳಿಸಿದ್ದಾರೆ. ಇನ್ನೂ ಸಹ ಕೃಷಿಯಲ್ಲಿ ಬೆಳವಣಿಗೆ ಬಯಸುತ್ತಿರುವ ಇವರು ಹೆಚ್ಚಿನ ಮತ್ತು ಗರಿಷ್ಠ ಮಟ್ಟದ ಬೆಳೆ ತಪಡೆಯಲು ಯೋಜಿಸುತ್ತಿದ್ದಾರೆ.
ಒಟ್ಟಾರೆ ಕೇಸರಿ ಅಂದರೆ ಕೆಲ ಪ್ರದೇಶಕ್ಕೆ ಮೀಸಲಾದ ಬೆಳೆ ಎಂಬುದನ್ನು ಹುಸಿ ಮಾಡಿ ಕೇವಲ ಕಂಟೇನರ್‌ನಲ್ಲಿ ಬೆಳೆದು ಸಾಧಿಸಿ ತೋರಿದ್ದಾರೆ ಶೈಲೇಶ್.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ