ಬೆಂಗಳೂರು(ಜ.25): ಕೆಫೆ ಕಾಫಿ ಡೇ (Cafe Coffee Day)ನಡೆಸುತ್ತಿರುವ ಕಾಫಿ ಡೇ ಎಂಟರ್ಪ್ರೈಸಸ್ಗೆ ಷೇರು ಮಾರುಕಟ್ಟೆ ನಿಯಂತ್ರಕ ಸೆಬಿ (SEBI) ಬರೋಬ್ಬರಿ ₹ 26 ಕೋಟಿ ($ 3.2 ಮಿಲಿಯನ್) ದಂಡ ವಿಧಿಸಿದೆ. ಅಲ್ಲದೇ ಈ ದಂಡದ ಮೊತ್ತವನ್ನು 45 ದಿನಗಳೊಳಗೆ ಪಾವತಿಸುವಂತೆ ಕಂಪನಿಗೆ ಸೂಚಿಸಲಾಗಿದೆ ಎಂದು ಸೆಕ್ಯುರಿಟೀಸ್ ಮತ್ತು ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ (The Securities and Exchange Board of India ) ಆದೇಶದಲ್ಲಿ ತಿಳಿಸಿದೆ.
ದಂಡ ವಿಧಿಸಲು ಕಾರಣವೇನು?
ಪ್ರವರ್ತಕರಿಗೆ ಸಂಬಂಧಿಸಿದ ಕಂಪನಿಗೆ ಕಾಫಿ ಡೇ ಎಂಟರ್ಪ್ರೈಸಸ್ ಅಂಗಸಂಸ್ಥೆಗಳ ಮೂಲಕ ಹಣವನ್ನು ವರ್ಗಾವಣೆ ಮಾಡಿದ್ದಕ್ಕಾಗಿ ದಂಡ ವಿಧಿಸಲಾಗಿದೆ ಎಂದು ಸೆಬಿ ತಿಳಿಸಿದೆ.
ಸೆಬಿಯ ತನಿಖೆಯಲ್ಲಿ 3,535 ಕೋಟಿ ರೂ. ಮೊತ್ತದ ಹಣವನ್ನು ಕಾಫಿ ಡೇ ಎಂಟರ್ಪ್ರೈಸಸ್ನ 7 ಅಂಗಸಂಸ್ಥೆಗಳಿಂದ ಸಂಸ್ಥೆಯ ಮಾಲೀಕರಿಗೆ ಸಂಬಂಧಿಸಿದ ಒಂದು ಕಂಪನಿಯಾದ ಮೈಸೂರು ಅಮಲ್ಗಮೇಟೆಡ್ ಕಾಫಿ ಎಸ್ಟೇಟ್ಸ್ ಲಿಮಿಟೆಡ್ (ಎಂಎಸಿಇಎಲ್)ಗೆ ವರ್ಗಾಯಿಸಲಾಗಿದೆ ಎಂದು ತಿಳಿದು ಬಂದಿದೆ.
₹3,535 ಕೋಟಿ ಸಂಪೂರ್ಣ ಬಾಕಿ ಹಣ ವಸೂಲಿಗೆ ಆದೇಶ
ಹೀಗಾಗಿ ಸೆಬಿ, ಮೈಸೂರು ಅಮಲ್ಗಮೇಟೆಡ್ ಕಾಫಿ ಎಸ್ಟೇಟ್ಸ್ ಲಿಮಿಟೆಡ್ (MACEL) ಮತ್ತು ಸಂಬಂಧಿತ ಘಟಕಗಳಿಗೆ ನೀಡಿರುವ ಸಂಪೂರ್ಣ ಬಾಕಿ ಹಣವನ್ನು ವಸೂಲಿ ಮಾಡಿಕೊಳ್ಳಲು ಅಗತ್ಯ ಕ್ರಮ ಕೈಗೊಳ್ಳುವಂತೆ ಕಾಫಿ ಡೇ ಎಂಟರ್ಪ್ರೈಸಸ್ಗೆ ಸೂಚಿಸಿದೆ.
ಇದಲ್ಲದೆ, ಕಂಪನಿಯು, ಎನ್ಎಸ್ಇ (NSE)ಯೊಂದಿಗೆ ಸಮಾಲೋಚಿಸಿ, ಬಾಕಿ ಇರುವ ಮೊತ್ತವನ್ನು ಹಿಂಪಡೆಯಲು ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳಲು ಸ್ವತಂತ್ರ ಕಾನೂನು ಸಂಸ್ಥೆಯನ್ನು ನೇಮಕ ಮಾಡಿಕೊಳ್ಳುವಂತೆ ನಿರ್ದೇಶಿಸಿದೆ.
ಇದನ್ನೂ ಓದಿ: Coffee: ನೀವು ಕಾಫಿ ಪ್ರಿಯರಾ? ಹಾಗಾದ್ರೆ ಇಲ್ಲಿದೆ ನೋಡಿ ನಿಮಗೆ ಸಂತಸದ ಸುದ್ದಿ!
ಈ ಹಣವನ್ನು ಕಾಫಿ ಡೇ ಎಂಟರ್ಪ್ರೈಸಸ್ ಕಂಪನಿ ಮತ್ತು ಅದರ ಏಳು ಅಂಗಸಂಸ್ಥೆಗಳಿಂದ ಬೇರೆಡೆಗೆ ವರ್ಗಾಯಿಸಿದ್ದರಿಂದ ಕಂಪನಿಯ ಷೇರುದಾರರಿಗೆ ನಷ್ಟ ಉಂಟಾಗಿದೆ ಎಂದು ಸೆಕ್ಯೂರಿಟೀಸ್ ಆಂಡ್ ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ ಹೇಳಿದೆ.
7 ಅಂಗಸಂಸ್ಥೆಗಳು
ಸೆಬಿ ತನ್ನ 43 ಪುಟಗಳ ಆದೇಶದಲ್ಲಿ ತಿಳಿಸಿರುವ ಪ್ರಕಾರ, ಕಾಫಿ ಡೇ ಎಂಟರ್ಪ್ರೈಸಸ್ನ 7 ಅಂಗಸಂಸ್ಥೆಗಳ ಮೂಲಕ ಕಂಪನಿಯ ಪ್ರವರ್ತಕರಿಗೆ ಸಂಬಂಧಿಸಿದ ಮೈಸೂರು ಅಮಲ್ಗಮೇಟೆಡ್ ಕಾಫಿ ಎಸ್ಟೇಟ್ ಲಿಮಿಟೆಡ್ಗೆ 3,535 ಕೋಟಿ ರೂ. ವರ್ಗಾವಣೆ ಮಾಡಿರುವುದು ತಿಳಿದು ಬಂದಿದೆ.
ಕಾಫಿ ಡೇ ಗ್ಲೋಬಲ್, ಟಂಗ್ಲಿಂನ್ ರಿಟೇಲ್ ರಿಯಲ್ಟಿ ಡೆವಲಪ್ಮೆಂಟ್ಸ್, ಟಂಗ್ಲಿಂನ್ ಡೆವಲಪ್ಮೆಂಟ್ಸ್, ಗಿರಿ ವಿದ್ಯುತ್ (ಇಂಡಿಯಾ) ಲಿಮಿಟೆಡ್, ಕಾಫಿ ಡೇ ಹೋಟೆಲ್ಸ್ ಆ್ಯಂಡ್ ರೆಸಾರ್ಟ್ಸ್, ಕಾಫಿ ಡೇ ಟ್ರೇಡಿಂಗ್ ಆ್ಯಂಡ್ ಕಾಫಿ ಡೇ ಎಕಾನ್ ಸೇರಿ ಈ ಏಳು ಕಂಪನಿಗಳ ಮೂಲಕ ಹಣ ವರ್ಗಾವಣೆ ಮಾಡಲಾಗಿತ್ತು ಎಂದು ಸೆಬಿ ಆದೇಶದಲ್ಲಿ ಉಲ್ಲೇಖಿಸಿದೆ.
"ಹಣವು ವೈಯಕ್ತಿಕ ಖಾತೆಗಳಿಗೆ ವರ್ಗಾವಣೆಯಾಗಿದೆ"
"ಏಳು ಅಂಗಸಂಸ್ಥೆಗಳಿಂದ ಮೈಸೂರು ಅಮಲ್ಗಮೇಟೆಡ್ ಕಾಫಿ ಎಸ್ಟೇಟ್ ಲಿಮಿಟೆಡ್ಗೆ ವರ್ಗಾಯಿಸಲಾದ ಹಣವು VGS (VG ಸಿದ್ಧಾರ್ಥ) ಅವರ ಕುಟುಂಬ ಮತ್ತು ಸಂಬಂಧಿತ ಘಟಕಗಳ ವೈಯಕ್ತಿಕ ಖಾತೆಗಳಿಗೆ ಹೋಗಿದೆ" ಎಂದು ಸೆಬಿ ಹೇಳಿದೆ.
CDEL ಮತ್ತು ಅದರ ಅಂಗಸಂಸ್ಥೆಗಳ ನಿರ್ದೇಶಕರು ಮತ್ತು ಪ್ರಮುಖ ನಿರ್ವಹಣಾ ಸಿಬ್ಬಂದಿಯನ್ನು (ಹಿಂದಿನ ಮತ್ತು ಪ್ರಸ್ತುತ) ಕೃತ್ಯಗಳು ಮತ್ತು ಲೋಪಗಳ ವಿವರವಾದ ಪರೀಕ್ಷೆಯಲ್ಲಿ ಕಡ್ಡಾಯವಾಗಿ ಒಳಪಡಿಸಬೇಕೆಂದು ಸೆಬಿ ಹೇಳಿದೆ.
ಸಿದ್ಧಾರ್ಥ ನಿಧನದ ಬಳಿಕ ಬಯಲಾಗಿತ್ತು ವಿಚಾರ
ಸಿದ್ಧಾರ್ಥ ಅವರ ನಿಧನದ ನಂತರ, ಸಿಡಿಇಎಲ್ ಮಂಡಳಿಯು ಕಂಪನಿಯ ಖಾತೆಗಳ ಪುಸ್ತಕಗಳು ಮತ್ತು ಅದರ ಅಂಗಸಂಸ್ಥೆಗಳನ್ನು ತನಿಖೆ ಮಾಡಲು ಸೆಪ್ಟೆಂಬರ್ 2019 ರಲ್ಲಿ ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್ನ ನಿವೃತ್ತ ಡಿಐಜಿ ಅಶೋಕ್ ಕುಮಾರ್ ಮಲ್ಹೋತ್ರಾ ಮತ್ತು ಅಗಸ್ತ್ಯ ಲೀಗಲ್ ಎಲ್ಎಲ್ಪಿ ಅವರನ್ನು ನೇಮಿಸಲಾಗಿದೆ.
ವಂಚನೆಯ ಮತ್ತು ಅನ್ಯಾಯದ ವ್ಯಾಪಾರ ಅಭ್ಯಾಸಗಳಿಗೆ ಸಂಬಂಧಿಸಿದ ಉಲ್ಲಂಘನೆಗಳಿಗಾಗಿ ಸೆಬಿ 25 ಕೋಟಿ ರೂ. ದಂಡವನ್ನು ವಿಧಿಸಿದೆ ಮತ್ತು LODR (ಪಟ್ಟಿ ಮಾಡುವ ಹೊಣೆಗಾರಿಕೆಗಳು ಮತ್ತು ಬಹಿರಂಗಪಡಿಸುವಿಕೆಯ ಅಗತ್ಯತೆಗಳು) ನಿಯಮಗಳಿಗೆ ಸಂಬಂಧಿಸಿದ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ 1 ಕೋಟಿ ರೂ. ದಂಡ ಹಾಕಿದ್ದು, ಒಟ್ಟು ದಂಡ ₹ 26 ಕೋಟಿ ಆಗಿದೆ.
ಇದನ್ನೂ ಓದಿ: Weight Loss with Coffee: ತೂಕ ಇಳಿಸೋದು ಹೇಗೆ ಎನ್ನುವ ಚಿಂತೆನಾ? ಟೆನ್ಶನ್ ಬಿಡಿ, ಒಂದ್ ಕಪ್ ಕಾಫಿ ಕುಡಿ!
ಕಾಫಿ ಡೇ ಎಂಟರ್ಪ್ರೈಸಸ್ ಅನ್ನು ವಿ.ಜಿ. ಸಿದ್ಧಾರ್ಥ್ ಸಾವಿನ ಬಳಿಕ ಅವರ ಪತ್ನಿ ಮಾಳವಿಕಾ ಹೆಗ್ಡೆ ಮುನ್ನಡೆಸುತ್ತಿದ್ದಾರೆ.
2019ರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ವಿ.ಜಿ. ಸಿದ್ಧಾರ್ಥ್
ಕಾಫಿ ಡೇ ಸಂಸ್ಥಾಪಕ ವಿ.ಜಿ. ಸಿದ್ಧಾರ್ಥ್ (ವಿಜಿ ಸಿದ್ಧಾರ್ಥ) 2019 ರಲ್ಲಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರ ಚಾಲಕ ಕೊಟ್ಟ ಹೇಳಿಕೆ ಮೇಲೆ ನದಿಯಲ್ಲಿ ಬರೋಬ್ಬರಿ ಎರಡು ದಿನಗಳವರೆಗೆ ತೀವ್ರ ಶೋಧ ನಡೆಸಿದ ಬಳಿಕ ಅವರ ಮೃತದೇಹ ಪತ್ತೆಯಾಗಿತ್ತು. ಆತ್ಮಹತ್ಯೆಗೂ ಮುನ್ನ ಬರೆದಿದ್ದ ಪತ್ರದಲ್ಲಿ ಸುದೀರ್ಘ ಹೋರಾಟ ನಡೆಸಿ ಈಗ ಸೋಲನ್ನು ಒಪ್ಪಿಕೊಳ್ಳುತ್ತಿರುವುದಾಗಿ ತಿಳಿಸಿದ್ದರು.
ಕಾಫಿ ಡೇ ಮೇಲೆ 7200 ಕೋಟಿ ಸಾಲವಿತ್ತು
ಕಾಫಿ ಡೇ ಎಂಟರ್ಪ್ರೈಸಸ್ ಕೂಡ 7200 ಕೋಟಿ ರೂ. ಆಸ್ತಿ ಮಾರಾಟ ಮಾಡುವ ಮೂಲಕ ಕಡಿಮೆ ಪಾವತಿಸಿತ್ತು. ಬೆಂಗಳೂರಿನಲ್ಲಿ ಟೆಕ್ ಪಾರ್ಕ್ ಮಾರಾಟ ಮಾಡುವ ಮೂಲಕ ಕಂಪನಿಯು 2700 ಕೋಟಿ ರೂ. ಮತ್ತು ಟೆಕ್ ಕಂಪನಿ ಮೈಂಡ್ ಟ್ರೀ ಷೇರುಗಳನ್ನು ಮಾರಾಟ ಮಾಡುವ ಮೂಲಕ 1800 ಕೋಟಿ ರೂ.ಗಳನ್ನು ಸಂಗ್ರಹಿಸಿತ್ತು. ಇದನ್ನೇ ಸಾಲವನ್ನು ಮರುಪಾವತಿಸಲು ಬಳಸಿತ್ತು. ಈಗ ಕಾಫಿ ಡೇ ಮೇಲೆ ಸುಮಾರು 3200 ಕೋಟಿ ರೂ.ಗಳ ಸಾಲ ಉಳಿದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ