ಆಗಲ್ಲ ಎಂದು ಕೈಕಟ್ಟಿ ಕೂತರೆ ಯಾವುದೂ ಆಗೋದಿಲ್ಲ. ಏನಾದರೂ ಸಾಧನೆ (Achievement) ಮಾಡೋಣ ಎಂದುಕೊಂಡು ಜಡವನ್ನೆಲ್ಲ ಕೊಡವಿಕೊಂಡು ಎದ್ದರೆ ಏನೋ ಒಂದು ದಾರಿ ಕಾಣುತ್ತದೆ. ಹೀಗೆಯೇ ಹಿಮಾಚಲ ಪ್ರದೇಶದ (Himachal Pradesha) ಮಹಿಳೆಯರ ಗುಂಪೊಂದು ಹರ್ಬಲ್ ಕೃಷಿ (Herbal Cultivation) ಯಲ್ಲಿ ಸಾಧನೆ ಮಾಡಿದೆ. ಹಿಮಾಚಲ ಪ್ರದೇಶದ ಕಂಗ್ರಾ ಜಿಲ್ಲೆಯ ಧರ್ಮಶಾಲಾ ಬ್ಲಾಕ್‌ನ ಪಾಧರ್ ಮತ್ತು ಘಿರ್ತೋಲಿ ಗ್ರಾಮಗಳ ಮಹಿಳೆಯರೇ ಇಂಥದ್ದೊಂದು ಕೃಷಿಯನ್ನು ಪ್ರಯತ್ನಿಸಿ ಯಶಸ್ವಿಯಾಗಿದ್ದಾರೆ. ಬಬೂನ್ (ಕ್ಯಾಮೊಮೈಲ್) ಹೂವು ಮತ್ತು ಕಪ್ಪು ತುಳಸಿ ಬೆಳೆದು ಮಾರಾಟ ಮಾಡುತ್ತಿದ್ದಾರೆ.
ಮಹಿಳೆಯರಿಂದ ಹರ್ಬಲ್ ಕೃಷಿ!
ಇದು ಇವರಿಗೆ ಹೊಸ ಉದ್ಯೋಗದ ಮೂಲವಾಗಿದೆ. ಅವರ ಯಶಸ್ಸಿನ ಪರಿಮಳ ಇತರ ಹಳ್ಳಿಗಳಿಗೂ ಹಬ್ಬಿದೆ. ಅಲ್ಲದೇ ಇವರು ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ ಅಡಿಯಲ್ಲಿ ಸ್ವ ಸಹಾಯ ಗುಂಪುಗಳನ್ನು ರಚಿಸಿಕೊಂಡಿದ್ದಾರೆ.
ಕ್ಯಾಮೊಮೈಲ್ ಹಾಗೂ ಕಪ್ಪು ತುಳಸಿ ಆರೋಗ್ಯ ಪ್ರಯೋಜನ
ಅಂದಹಾಗೆ ಒಳ್ಳೆಯ ಪರಿಮಳದ ಜೊತೆಗೆ ಕ್ಯಾಮೊಮೈಲ್ ಮತ್ತು ಕಪ್ಪು ತುಳಸಿ ಹಲವಾರು ಆರೋಗ್ಯ ಪ್ರಯೋಜನಗಳನ್ನು ಸಹ ಹೊಂದಿವೆ. ಕ್ಯಾಮೊಮೈಲ್ ಚಹಾ ಕುಡಿದರೆ ಆರೋಗ್ಯಕ್ಕೂ ಒಳ್ಳೆಯದು. ಅಲ್ಲದೇ ಇದು ನಿದ್ರಾಹೀನತೆಯನ್ನು, ಹೊಟ್ಟೆಯ ಅಸ್ವಸ್ಥತೆ ಮತ್ತು ಯಕೃತ್ತಿನ ಸಮಸ್ಯೆಗಳನ್ನು ನಿವಾರಿಸುತ್ತದೆ. ರಕ್ತದೊತ್ತಡ ಮತ್ತು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುತ್ತದೆ. ಇವು ಕಾಸ್ಮೆಟಿಕ್ ಉತ್ಪನ್ನಗಳ ತಯಾರಿಕೆಯಲ್ಲೂ ಬಳಸಲ್ಪಡುತ್ತವೆ.
ಇದನ್ನೂ ಓದಿ: ದೊಡ್ಡ ದೊಡ್ಡ ಕಂಪನಿಗಳಿಗೆ ಜೈವಿಕ ಇಂಧನ ಪೂರೈಕೆ, ಇದ್ರಿಂದಲೇ ಕೋಟಿ ಕೋಟಿ ಆದಾಯ!
ಅಲ್ಲದೇ ಇಲ್ಲಿನ ಮಹಿಳೆಯರು ಉತ್ಪಾದಿಸುವ ಚಿಯಾ ಸೀಡ್ಸ್ ಕೂಡ ಆರೋಗ್ಯಕ್ಕೆ ಹಲವು ರೀತಿಯಲ್ಲಿ ಪ್ರಯೋಜನಕಾರಿಯಾಗಿದೆ. ಅಜೀರ್ಣ, ಒತ್ತಡ ಮತ್ತು ಅಧಿಕ ಬಿಪಿಗೆ ಚಿಯಾ ಬೀಜಗಳು ಅತ್ಯುತ್ತಮ ಎಂದು ಹೇಳಲಾಗುತ್ತದೆ.
ಹರ್ಬಲ್ ಫಾರ್ಮಿಂಗ್ ಆರಂಭವಾದದ್ದು ಹೇಗೆ ?
ಧರ್ಮಶಾಲಾದಲ್ಲಿನ ಬ್ಲಾಕ್ ಡೆವಲಪ್‌ಮೆಂಟ್ ಕಚೇರಿಯಲ್ಲಿ ನಡೆದ ಶಿಬಿರದ ಸಮಯದಲ್ಲಿ ಕ್ಯಾಮೊಮೈಲ್ ಮತ್ತು ಕಪ್ಪು ತುಳಸಿಯನ್ನು ಬೆಳೆಯುವ ಆಲೋಚನೆ ತನಗೆ ಹೊಳೆಯಿತು ಎಂದು ಪಾಧಾರ್ ಪಂಚಾಯತ್‌ನ ವೈಷ್ಣೋ ಸ್ವ-ಸಹಾಯ ಗುಂಪಿನ ಸುದರ್ಶನಾ ದೇವಿ ಹೇಳುತ್ತಾರೆ.
ಆನಂತರದಲ್ಲಿ ಸಾಂಪ್ರದಾಯಿಕ ಕೃಷಿಯನ್ನು ತೊರೆದ ಸುದರ್ಶನಾ ದೇವಿ, ತಮ್ಮ ಒಂದು ತುಂಡು ಜಮೀನನ್ನೇ ಗಿಡಮೂಲಿಕೆಗಳ ಫಾರ್ಮ್ ಆಗಿ ಪರಿವರ್ತಿಸಿದರು. ಜೋಗಿಂದರ್‌ನಗರ ಮತ್ತು ಸೋಲನ್‌ನಲ್ಲಿ ಸರ್ಕಾರದಿಂದ ಉಚಿತ ತರಬೇತಿಯನ್ನು ಪಡೆದರು. ಆದ್ರೆ ಸ್ವಯಂ ಉದ್ಯಮಕ್ಕಾಗಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ದೈನಂದಿನ ಕೂಲಿಯನ್ನು ಪಡೆಯಬಹುದೆಂದು ಅವರಿಗೆ ತಿಳಿದಿರಲಿಲ್ಲ.
30 ಕೆಜಿ ಕ್ಯಾಮೊಮೈಲ್‌ನಿಂದ ಶುರುವಾದ ಬ್ಯುಸಿನೆಸ್!
ಹೀಗೆಯೇ ವರ್ಷದಲ್ಲಿ ಬೆಳೆದ 30 ಕೆಜಿ ಕ್ಯಾಮೊಮೈಲ್‌ನಿಂದ ಅವರು 14 ಸಾವಿರ ರೂ ಗಳಿಸಿದರು. ಸುದರ್ಶನಾ ದೇವಿ ಅದನ್ನು ಪರಗ್‌ಪುರದ ದೊಡ್ಡ ಗುಂಪೊಂದಕ್ಕೆ ಮಾರಾಟ ಮಾಡುತ್ತಾರೆ. ನಂತರ ಕಪ್ಪು ತುಳಸಿಯನ್ನು ಪರೀಕ್ಷೆಗಾಗಿ ಕಳುಹಿಸಿದರು. ಅವರ ಗುಂಪಿನ ಸದಸ್ಯೆಯಾಗಿರುವ ಆಶಾದೇವಿ ಸಿದ್ ಹೇಳುವ ಪ್ರಕಾರ, “ಈ ಕೃಷಿ ರಾಸಾಯನಿಕ ಮುಕ್ತವಾಗಿದೆ. ಆದ್ದರಿಂದ ಕಾಡು ಪ್ರಾಣಿಗಳು ಸಹ ಇದಕ್ಕೆ ಹಾನಿ ಮಾಡುವುದಿಲ್ಲ.
ಕಪ್ಪು ತುಳಸಿ ಜೊತೆಗೆ ಅಶ್ವಗಂಧ, ಜಟಾಮಸಿ ಬೆಲೆ!
ಹುಳುಗಳಿಗೆ, ನಾವು ಹುಳಿ ಮಜ್ಜಿಗೆ ಅಥವಾ ಇತರ ನೈಸರ್ಗಿಕ ಪದಾರ್ಥಗಳನ್ನೇ ಸಿಂಪಡಿಸುತ್ತೇವೆ. ಜಿಲ್ಲಾಡಳಿತದ ಮಾರುಕಟ್ಟೆ ಸಲಹೆಯ ಆಧಾರದ ಮೇಲೆ ಅವರು ಕ್ಯಾಮೊಮೈಲ್ ಮತ್ತು ಕಪ್ಪು ತುಳಸಿ ಜೊತೆಗೆ ಅಶ್ವಗಂಧ, ಜಟಾಮಸಿ ಮತ್ತು ಚಿಯಾ ಬೀಜದ ಗಿಡಗಳನ್ನು ನೆಟ್ಟಿದ್ದೇವೆ ಎಂದು ಹೇಳುತ್ತಾರೆ.
ಈ ಸಾಹಸೋದ್ಯಮವು ಪಧರ್ ಪಂಚಾಯತ್‌ನ ಅನೇಕರಿಗೆ ಸ್ಪೂರ್ತಿ ನೀಡಿತು. ಇದರಿಂದ ಇಲ್ಲಿ 6 ರಿಂದ 10 ಗುಂಪುಗಳು ಆರಂಭಗೊಂಡವು. ಆಕಾಂಕ್ಷಾ ಗುಂಪಿನ ಲಕ್ಷ್ಮಿ, ಮಿತಾಂಶ್ ಗುಂಪಿನ ಪೂಜಾ, ಮತ್ತು ಕಮಲಾ ಗುಂಪಿನ ಕಮಲಾ ದೇವಿ ಈ ಕೃಷಿಯ ಬಗ್ಗೆ ಸಂತೋಷ ವ್ಯಕ್ತಪಡಿಸುತ್ತಾರೆ. ಇನ್ನು ಧರ್ಮಶಾಲಾದ BDO ಕಚೇರಿಯಿಂದ ಕುಸುಮ್ ಈ ಮಹಿಳೆಯರಿಗೆ ತರಬೇತಿ ಉಪನ್ಯಾಸಗಳನ್ನು ಆಯೋಜಿಸುತ್ತಾರೆ.
ಇನ್ನು, ಕಾಂಗ್ರಾ ಡೆಪ್ಯುಟಿ ಕಮಿಷನರ್ ನಿಪುನ್ ಜಿಂದಾಲ್ “ಈ ಗಿಡಮೂಲಿಕೆ ಕೃಷಿಯಿಂದ ಮಹಿಳೆಯರು ಆತ್ಮವಿಶ್ವಾಸ ಹೊಂದಿದ್ದಾರೆ. ನಾವು ಅವರ ಉತ್ಪನ್ನಗಳಿಗೆ ಮಾರುಕಟ್ಟೆಯನ್ನು ಒದಗಿಸುತ್ತೇವೆ ಎಂದು ಹೇಳುತ್ತಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ