ಮಾರ್ಚ್ 31ಕ್ಕೆ ಕೊನೆಗೊಂಡ ಹಣಕಾಸು ವರ್ಷದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (RIL) ಕಂಪನಿಯು ಒಟ್ಟು ₹ 7.92 ಲಕ್ಷ ಕೋಟಿ (104.6 ಬಿಲಿಯನ್ ಅಮೆರಿಕನ್ ಡಾಲರ್) ವರಮಾನ ಗಳಿಸಿದೆ. ಭಾರತದ ಕಂಪನಿಯೊಂದು (Indian Company) 100 ಬಿಲಿಯನ್ ಡಾಲರ್‌ಗಿಂತ (Dollar) ಹೆಚ್ಚಿನ ವಾರ್ಷಿಕ ವರಮಾನ ಗಳಿಸಿರುವುದು ಇದೇ ಮೊದಲು. 2021–22ನೇ ಹಣಕಾಸು ವರ್ಷದಲ್ಲಿ ಕಂಪನಿಯ ವರಮಾನವು ಹಿಂದಿನ ಆರ್ಥಿಕ ವರ್ಷದ (Financial year) ವರಮಾನಕ್ಕಿಂತ ಶೇಕಡ 47ರಷ್ಟು ಹೆಚ್ಚು.
2021–22ನೇ ಆರ್ಥಿಕ ವರ್ಷದಲ್ಲಿ ಕಂಪನಿಯು ಒಟ್ಟು ರೂ 67,845 ಕೋಟಿ ನಿವ್ವಳ ಲಾಭ ಗಳಿಸಿದೆ. ಇದು ಹಿಂದಿನ ಆರ್ಥಿಕ ವರ್ಷಕ್ಕೆ ಹೋಲಿಸಿದರೆ ಶೇಕಡ 26.2ರಷ್ಟು ಜಾಸ್ತಿ. ಕಂಪನಿಯ ಪ್ರತಿ ಷೇರಿನ ಗಳಿಕೆಯು (ಇಪಿಎಸ್) 2021–22ರಲ್ಲಿ ರೂ 92.
ರಿಲಯನ್ಸ್ ಸಮೂಹದ ಅಂಗಸಂಸ್ಥೆಯಾಗಿರುವ ಜಿಯೊ ಪ್ಲಾಟ್‌ಫಾರ್ಮ್ಸ್ ಲಿಮಿಟೆಡ್, 2021–22ನೇ ಹಣಕಾಸು ವರ್ಷದಲ್ಲಿ ಒಟ್ಟು ₹ 15,487 ಕೋಟಿ ನಿವ್ವಳ ಲಾಭ ಕಂಡಿದೆ. ಇದು ಹಿಂದಿನ ಹಣಕಾಸು ವರ್ಷದ ಲಾಭದ ಪ್ರಮಾಣಕ್ಕೆ ಹೋಲಿಸಿದರೆ ಶೇಕಡ 23.6ರಷ್ಟು ಹೆಚ್ಚು. ರಿಲಯನ್ಸ್ ರಿಟೇಲ್ ಕಂಪನಿಯ ನಿವ್ವಳ ಲಾಭವು ಮಾರ್ಚ್ 31ಕ್ಕೆ ಕೊನೆಗೊಂಡ ಹಣಕಾಸು ವರ್ಷದಲ್ಲಿ ಶೇಕಡ 28.7ರಷ್ಟು ಹೆಚ್ಚಾಗಿ ರೂ 7,055 ಕೋಟಿಗೆ ತಲುಪಿದೆ.
ರಿಲಯನ್ಸ್ ರಿಟೇಲ್ ಕಂಪನಿಯು 2021–22ರಲ್ಲಿ ಹೊಸದಾಗಿ 2,566 ಮಳಿಗೆಗಳನ್ನು ಆರಂಭಿಸಿದೆ. ಕಂಪನಿಯು ಒಟ್ಟು 15,196 ಮಳಿಗೆಗಳನ್ನು ಹೊಂದಿದೆ.
ಇದನ್ನೂ ಓದಿ: Mahindra scorpio 2022: ಹೊಸ ಅವತಾರದಲ್ಲಿ ಬರಲಿದೆ ಬಿಗ್ ಡ್ಯಾಡಿ ಎಂದು ಕರೆಸಿಕೊಂಡಿರುವ ಮಹೀಂದ್ರಾ ಸ್ಕಾರ್ಪಿಯೊ!
ಮಾರ್ಚ್ 31ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ (2022ರ ಜನವರಿಯಿಂದ ಮಾರ್ಚ್ 31ರವರೆಗಿನ ಅವಧಿ) ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಸಮೂಹವು ಒಟ್ಟು ₹ 18,021 ಕೋಟಿ ನಿವ್ವಳ ಲಾಭ ಕಂಡಿದೆ. ಇದು ಹಿಂದಿನ ವರ್ಷದ ಮಾರ್ಚ್ ತ್ರೈಮಾಸಿಕದಲ್ಲಿ ಕಂಪನಿ ದಾಖಲಿಸಿದ್ದ ಲಾಭಕ್ಕೆ ಹೋಲಿಸಿದರೆ ಶೇಕಡ 20.2ರಷ್ಟು ಜಾಸ್ತಿ.
ಮಾರ್ಚ್ ತ್ರೈಮಾಸಿಕದಲ್ಲಿ ಜಿಯೊ ಪ್ಲಾಟ್‌ಫಾರ್ಮ್ಸ್ ಕಂಪನಿಯು ರೂ 4,313 ಕೋಟಿ ಲಾಭ ಕಂಡಿದೆ. ಇದೇ ಅವಧಿಯಲ್ಲಿ ರಿಲಯನ್ಸ್ ರಿಟೇಲ್ ಕಂಪನಿಯು ರೂ 2,139 ಕೋಟಿ ಲಾಭ ದಾಖಲಿಸಿದೆ.
‘ಕೋವಿಡ್ ಸಾಂಕ್ರಾಮಿಕ ಹಾಗೂ ಜಾಗತಿಕ ಮಟ್ಟದಲ್ಲಿನ ಕೆಲವು ಬಿಕ್ಕಟ್ಟುಗಳಿಂದ ಉಂಟಾಗಿರುವ ಸಮಸ್ಯೆಗಳ ನಡುವೆಯೂ 2021–22ನೇ ಹಣಕಾಸು ವರ್ಷದಲ್ಲಿ ರಿಲಯನ್ಸ್ ಕಂಪನಿಯು ಭಾರಿ ಸಾಧನೆ ತೋರಿದೆ. ನಮ್ಮ ಡಿಜಿಟಲ್ ಸೇವೆಗಳು ಹಾಗೂ ರಿಟೇಲ್ ವಹಿವಾಟಿನಲ್ಲಿ ಗಟ್ಟಿಯಾದ ಬೆಳವಣಿಗೆ ಆಗಿರುವುದನ್ನು ತಿಳಿಸಲು ಸಂತೋಷವಾಗುತ್ತಿದೆ. ಇಂಧನ ಮಾರುಕಟ್ಟೆಯಲ್ಲಿ ಅಸ್ಥಿರತೆ ಇದ್ದರೂ ನಮ್ಮ ತೈಲ–ರಾಸಾಯನಿಕ ವಹಿವಾಟು ಕುಂದಿಲ್ಲ. ಅದು ಭಾರಿ ಚೇತರಿಕೆ ಕಂಡಿದೆ‘ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಕೇಶ್ ಡಿ. ಅಂಬಾನಿ ಹೇಳಿದ್ದಾರೆ.
ಇದನ್ನೂ ಓದಿ: Petrol, Diesel Price: 13 ಜಿಲ್ಲೆಗಳಲ್ಲಿ ಪೆಟ್ರೋಲ್ ಬೆಲೆ ಇಳಿಕೆ: ಟ್ಯಾಂಕ್ ಫುಲ್ ಮಾಡಿಸೋ ಮುನ್ನ ಇವತ್ತಿನ ದರ ನೋಡಿ
‘2021–22ನೆಯ ಹಣಕಾಸು ವರ್ಷದಲ್ಲಿ ರಿಲಯನ್ಸ್ ಕಂಪನಿಯು ಗಣನೀಯ ಸಂಖ್ಯೆಯಲ್ಲಿ ಉದ್ಯೋಗ ಅವಕಾಶಗಳನ್ನು ದೇಶದ ಜನರಿಗಾಗಿ ಸೃಷ್ಟಿಸಿದೆ. ದೇಶದ ಖಾಸಗಿ ವಲಯದ ಅತಿದೊಡ್ಡ ಉದ್ಯೋಗದಾತರ ಪೈಕಿ ಒಂದಾಗಿ ಮುಂದುವರಿದಿದೆ. ನಮ್ಮ ಬೇರೆ ಬೇರೆ ವಹಿವಾಟುಗಳಲ್ಲಿ 2021–22ನೆಯ ಆರ್ಥಿಕ ವರ್ಷದಲ್ಲಿ ಒಟ್ಟು 2.1 ಲಕ್ಷ ಹೊಸ ಉದ್ಯೋಗಿಗಳು ಸೇರಿಕೊಂಡಿದ್ದಾರೆ‘ ಎಂದು ಅಂಬಾನಿ ಅವರು ಹೇಳಿದ್ದಾರೆ.
‘ನಮ್ಮ ರಿಟೇಲ್ ವಹಿವಾಟು 15 ಸಾವಿರ ಮಳಿಗೆಗಳ ಗಡಿಯನ್ನು ದಾಟಿದೆ. ಜಿಯೊ ಫೈಬರ್ ಈಗ ದೇಶದ ಅತಿದೊಡ್ಡ ಬ್ರಾಡ್‌ಬ್ಯಾಂಡ್ ಸೇವಾದಾತ ಕಂಪನಿಯಾಗಿದೆ. ಆರಂಭಗೊಂಡ ಎರಡೇ ವರ್ಷಗದೊಳಗೆ ಇದು ಸಾಧ್ಯವಾಗಿದೆ.ನಮ್ಮ ತೈಲ ಮತ್ತು ಅನಿಲ ವಹಿವಾಟು ದೇಶದ ಶೇಕಡ 20ರಷ್ಟು ಅನಿಲ ಉತ್ಪಾದನೆಗೆ ಕೊಡುಗೆ ನೀಡುತ್ತಿದೆ’ ಎಂದೂ ಅಂಬಾನಿ ಅವರು ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ