ಈ ಬ್ಯಾಂಕ್​ನ ಗ್ರಾಹಕರು 10 ಸಾವಿರಕ್ಕಿಂತ ಹೆಚ್ಚು ಹಣ ವಿತ್​ಡ್ರಾ ಮಾಡುವಂತಿಲ್ಲ: ಆರ್​ಬಿಐ ಆದೇಶ

Nagar Urban Co-operative Bank- ಮಹಾರಾಷ್ಟ್ರದ ಅಹ್ಮದ್​ನಗರ್​ನಲ್ಲಿರುವ ನಗರ್ ಅರ್ಬನ್ ಸಹಕಾರ ಬ್ಯಾಂಕ್ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಹಿನ್ನೆಲೆಯಲ್ಲಿ ಆರು ತಿಂಗಳ ಕಾಲ ಹಲವು ನಿರ್ಬಂಧಗಳನ್ನ ವಿಧಿಸಿ ಆರ್​ಬಿಐ ಆದೇಶಿಸಿದೆ.

ಆರ್​ಬಿಐ

ಆರ್​ಬಿಐ

 • News18
 • Last Updated :
 • Share this:
  ಮುಂಬೈ, ಡಿ. 7: ಭಾರತದಲ್ಲಿ ನಷ್ಟಗೊಳ್ಳುತ್ತಿರುವ ಬ್ಯಾಂಕ್​ಗಳ ಸಂಖ್ಯೆ ಏರುತ್ತಿದೆ. ಈ ಪಟ್ಟಿಗೆ ಈಗ ಮಹಾರಾಷ್ಟ್ರದ ಸಹಕಾರ ಬ್ಯಾಂಕ್​ವೊಂದು ಸೇರಿದೆ. ಅಹ್ಮದ್​ನಗರ್ ಜಿಲ್ಲೆಯ ನಗರ್ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ (Nagar Urban Co-operative Bank in Ahmednagar) ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಆರ್​ಬಿಐ (Reserve Bank of India) ಕೆಲ ನಿರ್ಬಂಧಗಳನ್ನ ಹೇರಿದೆ. ಆ ಬ್ಯಾಂಕ್​ನ ಗ್ರಾಹಕರು 10 ಸಾವಿರ ರೂ ಗಿಂತ ಹೆಚ್ಚು ಹಣ ಹಿಂಪಡೆಯುವಂತಿಲ್ಲ ಎಂದು ಆದೇಶಿಸಲಾಗಿದೆ. 1949ರ ಬ್ಯಾಂಕಿಂಗ್ ರೆಗ್ಯುಲೇಶನ್ ಕಾಯ್ದೆ ಅಡಿಯಲ್ಲಿ ವಿಧಿಸಲಾಗಿರುವ ಈ ನಿರ್ಬಂಧಗಳು ಆರು ತಿಂಗಳ ಅವಧಿಯವರೆಗೆ ಚಾಲನೆಯಲ್ಲಿರಲಿವೆ. ಜುಲೈ ತಿಂಗಳಲ್ಲಿ ಇದರ ಪರಾಮರ್ಶೆ ನಡೆಸಿ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಭಾರತೀಯ ರಿಸರ್ವ್ ಬ್ಯಾಂಕ್ ತಿಳಿಸಿದೆ.

  ನಗರ್ ಸಹಕಾರ ಬ್ಯಾಂಕ್​ನ ಗ್ರಾಹಕರಿಗೆ ಮಾತ್ರ ನಿರ್ಬಂಧ ವಿಧಿಸಲಾಗಿಲ್ಲ. ಬ್ಯಾಂಕ್ ಕೂಡ ಆರ್​ಬಿಐ ಅನುಮತಿ ಇಲ್ಲದೇ ಈ ಅವಧಿಯಲ್ಲಿ ಯಾವುದೇ ಸಾಲವಾಗಲೀ, ಮುಂಗಡವಾಗಲೀ ನೀಡುವಂತಿಲ್ಲ. ಸಾಲದ ರಿನಿವಲ್ ಕೂಡ ಮಾಡುವಂತಿಲ್ಲ. ಹಾಗೆಯೇ, ಬ್ಯಾಂಕ್​ನ ಹಣದಲ್ಲಿ ಎಲ್ಲಿಯೂ ಹೂಡಿಕೆ ಮಾಡುವುದಾಗಲೀ, ಆಸ್ತಿ ಖರೀದಿ ಮಾಡುವುದಾಗಲೀ, ಖರೀದಿಸಿದ ಆಸ್ತಿಗೆ ಹಣ ಸಂದಾಯ ಮಾಡುವುದಾಗಲೀ ಇರಬಾರದು ಎಂದು ಆರ್​ಬಿಐ ತನ್ನ ನೋಟೀಸ್​ನಲ್ಲಿ ಸ್ಪಷ್ಟವಾಗಿ ಸೂಚಿಸಿದೆ.

  ಇದನ್ನೂ ಓದಿ: ಝೂಮ್ ಕಾಲ್​ನಲ್ಲಿ 900 ಉದ್ಯೋಗಿಗಳಿಗೆ ಗೇಟ್ ಪಾಸ್ ಕೊಟ್ಟ ಬೆಟರ್ ಸಿಇಒ; ವಿಡಿಯೋ ವೈರಲ್

  ಭಾರತೀಯ ರಿಸರ್ವ್ ಬ್ಯಾಂಕ್​ನ ಆದೇಶದ ಪ್ರತಿಯನ್ನ ನಗರ್ ಬ್ಯಾಂಕ್​ನ ಕಚೇರಿಯಲ್ಲಿ ಹಾಕಲಾಗಿದೆ. ಇದೇ ವೇಳೆ, ಬ್ಯಾಂಕ್ ಮೇಲೆ ವಿಧಿಸಿರುವ ನಿರ್ಬಂಧದಿಂದ ಆ ಬ್ಯಾಂಕ್​ನ ಪರವಾನಗಿ ರದ್ದುಗೊಳಿಸುವ ಸಾಧ್ಯತೆಯನ್ನ ಆರ್​ಬಿಐ ತಳ್ಳಿಹಾಕಿದೆ.

  ಆರ್​ಬಿಐ ವಿಧಿಸಿರುವ ನಿರ್ಬಂಧಗಳೊಂದಿಗೆ ನಗರ್ ಬ್ಯಾಂಕ್ ವ್ಯವಹಾರ ನಡೆಸಲು ಅಡ್ಡಿ ಇಲ್ಲ. ಬ್ಯಾಂಕ್​ನ ಹಣಕಾಸು ಪರಿಸ್ಥಿತಿ ಸುಧಾರಿಸಿದರೆ ನಿರ್ಬಂಧಗಳನ್ನ ಸಡಿಲಿಸುವ ಸಾಧ್ಯತೆ ಇದೆ.

  ಇದನ್ನೂ ಓದಿ: ಈ ಸರ್ಕಾರಿ ಯೋಜನೆಯಲ್ಲಿ ಸಿಗಲಿದೆ ಮಾಸಿಕ 10 ಸಾವಿರ ರೂ. ಪಿಂಚಣಿ: ನೀವೂ ಅಪ್ಲೈ ಮಾಡಬಹುದು

  ಇದೇ ವೇಳೆ, ಮಹಾರಾಷ್ಟ್ರದ ಮತ್ತೊಂದು ಸಹಕಾರ ಬ್ಯಾಂಕ್​ಗೆ ಆರ್ ಬಿ ಐ ದಂಡ ವಿಧಿಸಿರುವುದು ತಿಳಿದುಬಂದಿದೆ. ಪುಣೆ ಪೀಪಲ್ಸ್ ಕೋ ಆಪರೇಟಿವ್ ಬ್ಯಾಂಕ್ ಕೆವೈಸಿ ನಿಯಮಗಳನ್ನ ಉಲ್ಲಂಘಿಸಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಆರ್​ಬಿಐ 2 ಲಕ್ಷ ರೂ ಪೆನಾಲ್ಟಿ ಹೇರಿದೆ.
  Published by:Vijayasarthy SN
  First published: