2023-24ನೇ ಸಾಲಿನ ಕೇಂದ್ರ ಬಜೆಟ್ (Union Budget) ಗೆ ಕ್ಷಣಗಣನೆ ಶುರುವಾಗಿದೆ. ರೈಲ್ವೆ ಬಜೆಟ್ (Railway Budget) ಒಳಗೊಂಡಂತೆ ಕೇಂದ್ರ ಬಜೆಟ್ ಫೆಬ್ರವರಿ 1 ರಂದು ಸಂಸತ್ತಿನಲ್ಲಿ ಮಂಡನೆಯಾಗಲಿದೆ. ರೈಲ್ವೆ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡುತ್ತಿರುವ ಕೇಂದ್ರ ಸರ್ಕಾರ (Central Government) ಈ ಬಾರಿ ರೈಲ್ವೆ ಇಲಾಖೆಯಲ್ಲಿ ಏನೆಲ್ಲಾ ಬದಲಾವಣೆಗಳನ್ನು ತರಬಹುದು, ಜನಸಾಮಾನ್ಯರಿಗೆ ಏನು ಪ್ರಯೋಜನ ನೀಡಬಹುದು ಎಂದು ಎಲ್ಲರೂ ಕಾತುರದಿಂದ ಕಾಯುತ್ತಿದ್ದಾರೆ. 2023-24 ರಲ್ಲಿ, ಮೋದಿ (Modi) ಸರ್ಕಾರದ ಸಂಪೂರ್ಣ ಒತ್ತು ಮೂಲಸೌಕರ್ಯ ಅಭಿವೃದ್ಧಿಯ ಮೇಲೆ ಇರುತ್ತದೆ ಎಂದು ತಜ್ಞರು ಅಭಿಪ್ರಾಯ ಪಡುತ್ತಿದ್ದಾರೆ. ಅದರಲ್ಲೂ ವಿಶೇಷವಾಗಿ ರೈಲ್ವೆಗೆ ಸಂಬಂಧಿಸಿದ ಯೋಜನೆಗಳು ಮತ್ತು ಹೈಸ್ಪೀಡ್ ರೈಲುಗಳನ್ನು (Highspeed Train) ಸಾಧ್ಯವಾದಷ್ಟು ಬೇಗ ಕಾರ್ಯಗತಗೊಳಿಸುವುದು ಕೇಂದ್ರದ ಉದ್ದೇಶವಾಗಿದೆ.
ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಕೇಂದ್ರದ ಒತ್ತು
ವಿಶೇಷವಾಗಿ ಭಾರತದಲ್ಲಿ ಶತಾಬ್ದಿ ರೈಲಿಗೆ ಪರ್ಯಾಯವಾಗಿ ಪರಿಚಯಿಸಲಾಗಿರುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಹೊಸ ಯೋಜನೆಗಳನ್ನು ಘೋಷಿಸುವ ಹೆಚ್ಚಿನ ಸಾಧ್ಯತೆಗಳಿವೆ. ಪ್ರಧಾನಿ ನರೇಂದ್ರ ಮೋದಿ ಕನಸಿನ 'ಮೇಕ್ ಇನ್ ಇಂಡಿಯಾ' ಪರಿಕಲ್ಪನೆಯಲ್ಲಿ ತಯಾರಾಗಿರುವ ವಂದೇ ಭಾರತ್ ರೈಲಿಗೆ ಸಂಬಂಧಿಸಿದಂತೆ 2023-24ನೇ ಸಾಲಿನ ರೈಲ್ವೆ ಬಜೆಟ್‌ನ ನಿರೀಕ್ಷೆಗಳೇನು ಎಂಬುದನ್ನು ಇಲ್ಲಿ ನೋಡೋಣ.
ವಂದೇ ಭಾರತ್ ರೈಲುಗಳು ಹೆಚ್ಚಳ
ಮೊದಲಿಗೆ 2019ರಲ್ಲಿ ಭಾರತದಲ್ಲಿ ಪರಿಚಯಿಸಲಾದ ವಂದೇ ಭಾರತ್ ರೈಲಿಗೆ ಕೆಲ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸುವ ನಿರೀಕ್ಷೆ ಇದೆ. ಈ ಬಜೆಟ್‌ನಲ್ಲಿ ಹೊಸದಾಗಿ ಇನ್ನೂ ಕೆಲ ವಂದೇ ಭಾರತ್ ರೈಲನ್ನು ಆರಂಭಿಸುವ ಘೋಷಣೆ ಮಾಡುವ ನಿರೀಕ್ಷೆಯಿದೆ. ಭಾರತೀಯ ರೈಲ್ವೇ ವಲಯದಲ್ಲಿ ಶತಾಬ್ದಿ ಎಕ್ಸ್‌ಪ್ರೆಸ್ ರೈಲುಗಳನ್ನು ಬದಲಿಸುವ ಉದ್ದೇಶದಿಂದ ಇವುಗಳನ್ನು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಪರಿಚಯಿಸುವ ಸಾಧ್ಯತೆ ಇದೆ.
8 ಕೋಚ್ ಇರುವ ವಂದೇ ಭಾರತ್ ರೈಲು
ವಂದೇ ಭಾರತ್ ರೈಲುಗಳಿಗೆ ಹೆಚ್ಚಿನ ಬೇಡಿಕೆ ಇದ್ದು, ಈ ನಿಟ್ಟಿನಲ್ಲಿ 8-ಕೋಚ್ ವಂದೇ ಭಾರತ್ ರೈಲುಗಳನ್ನು ಪರಿಚಯಿಸಲು ಭಾರತೀಯ ರೈಲ್ವೆ ಚಿಂತನೆ ನಡೆಸುತ್ತಿದೆ ಎಂದು ರೈಲ್ವೆ ಮೂಲಗಳು ತಿಳಿಸಿವೆ. ಈ ಕುರಿತಾಗಿ ಬಜೆಟ್‌ನಲ್ಲಿ ಮಹತ್ವದ ಘೋಷಣೆಯಾಗುವ ಸಾಧ್ಯತೆ ಇದೆ.
ಇದನ್ನೂ ಓದಿ: ಈ ಬಾರಿ ಬಜೆಟ್‌ನಲ್ಲಿ ಹೆಲ್ತ್ ಸೆಕ್ಟರ್ ಹಾಗೂ ಮ್ಯಾನ್ಯುಫಾಕ್ಟರಿಂಗ್ ಸೆಕ್ಟರ್‌ಗೆ ಸಿಗುವುದೇನು?
ವಂದೇ ಭಾರತ್ ಸ್ಲೀಪರ್ ವ್ಯವಸ್ಥೆ
ಪ್ರಮುಖ ಮಾರ್ಗಗಳಲ್ಲಿ ರಾತ್ರಿಯ ರೈಲು ಪ್ರಯಾಣಕ್ಕಾಗಿ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ವಂದೇ ಭಾರತ್ ರೈಲುಗಳ ಸ್ಲೀಪರ್ ಆವೃತ್ತಿಗಳನ್ನು ತಯಾರಿಸಲು ಆದ್ಯತೆ ನೀಡುವ ಅಗತ್ಯವನ್ನು ತಜ್ಞರು ಕೇಂದ್ರಕ್ಕೆ ತಿಳಿಸಿದ್ದರು. ತಜ್ಞರ ಈ ವರದಿಗಳನ್ನು ಪರಿಗಣನೆಗೆ ತೆಗೆದುಕೊಂಡ ಕೇಂದ್ರ ವಂದೇ ಭಾರತ್ ರೈಲುಗಳ 200 ಸ್ಲೀಪರ್ ಆವೃತ್ತಿಗಳಿಗೆ ತಯಾರಕರನ್ನು ಅಂತಿಮಗೊಳಿಸುವ ಪ್ರಕ್ರಿಯೆಯಲ್ಲಿದೆ.
ಆಯ್ಕೆಯಾದ ಬಿಡ್ಡುದಾರರು ಒಪ್ಪಂದದ ದಿನಾಂಕದಿಂದ ಎರಡು ವರ್ಷಗಳಲ್ಲಿ ಸ್ಲೀಪರ್ ವ್ಯವಸ್ಥೆ ಇರುವ ಮೊದಲ ವಂದೇ ಭಾರತ್ ಸ್ಲೀಪರ್ ರೈಲನ್ನು ಹೊರತರಲಿದ್ದಾರೆ.
ವೇಗದ ರೈಲು
ಅತೀ ವೇಗದ ರೈಲಿನ ರೈಲು ಆರಂಭದ ನಿರೀಕ್ಷೆಯೂ ಇದೆ. ರಾಜಧಾನಿ, ಶತಾಬ್ಧಿಗಳಿಗಿಂತ ಅಧಿಕ ವೇಗದ, 160 kmph ಅಧಿಕ ವೇಗದ ರೈಲು ಪರಿಚಯಿಸುವ ನಿರೀಕ್ಷೆಯಿದೆ
ರೈಲ್ವೆ ಹಳಿಗಳ ನವೀಕರಣ
ಮುಂದಿನ ಬಜೆಟ್‌ನಲ್ಲಿ ಕೇಂದ್ರ ಸರ್ಕಾರವು ಹೊಸ ರೈಲು ಹಳಿಯ ಬಗ್ಗೆ ಘೋಷಣೆ ಮಾಡುವ ನಿರೀಕ್ಷೆಯಿದೆ. ಮುಂದಿನ 25 ವರ್ಷದಲ್ಲಿ 100,000 ಕಿಲೋ ಮೀಟರ್ ದೂರದ ರೈಲು ಹಳಿಯ ನಿರ್ಮಾಣದ ಘೋಷಣೆ ಸಾಧ್ಯತೆಯಿದೆ.
ರೈಲ್ವೆ ಬಜೆಟ್
2023-24ರ ಕೇಂದ್ರ ಬಜೆಟ್‌ನಲ್ಲಿ ಭಾರತೀಯ ರೈಲ್ವೆಗೆ 1.9 ಲಕ್ಷ ಕೋಟಿ ರೂ. ಮೊತ್ತದ ಬಜೆಟ್ ಮಂಡಿಸುವ ನಿರೀಕ್ಷೆಯಿದೆ. ಇದು ರೈಲುಗಳು, ವಿದ್ಯುದೀಕರಣ, ಸುರಕ್ಷತೆ ಮತ್ತು ನಿವ್ವಳ ಶೂನ್ಯ ಇಂಗಾಲದ ಹೊರಸೂಸುವಿಕೆಯ ಗುರಿ ಸೇರಿದಂತೆ ಹೊಸ ಯೋಜನೆಗಳಿಗೆ ಅನ್ವಯವಾಗಲಿದೆ.
ಇಡೀ ರೈಲ್ವೇ ವ್ಯವಸ್ಥೆಯ ಮೂಲಸೌಕರ್ಯವನ್ನು ಬಲಪಡಿಸಲು ಮೋದಿ ಸರ್ಕಾರವು ರೈಲ್ವೆ ಬಜೆಟ್ ಅನ್ನು ಶೇಕಡಾ 20-25 ರಷ್ಟು ಹೆಚ್ಚಿಸಲು ಕೆಲಸ ಮಾಡುತ್ತಿದೆ. ರೈಲ್ವೇ ಸಚಿವಾಲಯದ ಮೂಲಗಳ ಪ್ರಕಾರ, 2022-23ರಲ್ಲಿ 1.4 ಲಕ್ಷ ಕೋಟಿಯಷ್ಟಿದ್ದ ರೈಲ್ವೆ ಬಜೆಟ್ 2023-24ರಲ್ಲಿ ಸುಮಾರು 1.8 ಲಕ್ಷ ಕೋಟಿ ರೂ.ಗಳಿಗೆ ಹಂಚಿಕೆಯಾಗುವ ಸಾಧ್ಯತೆಯಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ