Quick Heal- ಕ್ಯಾಲ್ಕುಲೇಟರ್ ರಿಪೇರಿ ಹುಡುಗ ಆ್ಯಂಟಿ-ವೈರಸ್ ಸಾಫ್ಟ್​ವೇರ್ ಕಂಪನಿಯ ಒಡೆಯನಾದ ಕಥೆ

Story of CEO Sanjay Katkar- ಹತ್ತನೇ ತರಗತಿ ಪರೀಕ್ಷೆ ಬರೆಯುವ ಮುನ್ನವೇ ಓದಿಗೆ ತಿಲಾಂಜಲಿ ಹಾಡಿ 400 ರೂ ಸಂಬಳಕ್ಕೆ ರಿಪೇರಿ ಅಂಗಡಿಯಲ್ಲಿ ಕೆಲಸ ಮಾಡುತ್ತಾ ಇದ್ದ ಸಂಜಯ್ ಕಾಟ್ಕರ್ ಎಂಬ ವ್ಯಕ್ತಿ ಈಗ 755 ಕೋಟಿ ರೂ ಮೌಲ್ಯದ ಕಂಪನಿಯ ಒಡೆಯನಾದ ಕಥೆ ರೋಚಕ…

ಕ್ವಿಕ್ ಹೀಲ್ ಕಂಪನಿಯ ಸ್ಥಾಪಕರಾದ ಸಂಜಯ್ ಮತ್ತು ಕೈಲಾಶ್ ಕಾಟ್ಕರ್

ಕ್ವಿಕ್ ಹೀಲ್ ಕಂಪನಿಯ ಸ್ಥಾಪಕರಾದ ಸಂಜಯ್ ಮತ್ತು ಕೈಲಾಶ್ ಕಾಟ್ಕರ್

 • News18
 • Last Updated :
 • Share this:
  ಜೀವನ ಒಂದೇ ರೀತಿ ಇರುವುದಿಲ್ಲ ಎಂಬುದಕ್ಕೆ ಈ ಜಗತ್ತಿನಲ್ಲಿ ಹಲವು ನಿದರ್ಶನಗಳಿಗೆ. ಎಕ್ಸಾಮ್​ನಲ್ಲಿ ಫೇಲ್ ಆದರೆ ಇಡೀ ಜೀವನವೇ ಬರ್ಬಾದ್ ಆಯ್ತು ಅಂತ ಅಂದುಕೊಂಡು ಉತ್ಸಾಹ ಕಳೆದುಕೊಳ್ಳುವ ವಿದ್ಯಾರ್ಥಿಗಳಿಗೆ ಮುಂದೆ ಪ್ರಪಂಚ ಬಹಳ ವಿಶಾಲವಾಗಿದೆ ಎಂದು ಉದಾಹರಣೆ ಸಮೇತ ತೋರಿಸುವ ಅಗತ್ಯ ಇದೆ. ಐಐಟಿಗೆ ಸೇರಿಕೊಂಡರೆ ಸಿಇಒ ಆಗಬಹುದು ಎಂಬುದು ಹೌದಾದರೂ ಐಐಟಿಗೆ ಹೋಗದಿದ್ದರೂ ದೊಡ್ಡ ದೊಡ್ಡ ಕಂಪನಿಗಳ ಒಡೆಯರಾದವರು ಬಹಳ ಮಂದಿ ಇದ್ದಾರೆ. ಕ್ವಿಕ್ ಹೀಲ್ (Quick Heal) ಎಂಬ ಸೈಬರ್ ಸೆಕ್ಯೂರಿಟಿ ಕಂಪನಿ ಹೆಸರು ಕೇಳಿರಬಹುದು. ಭಾರತದ ಅತ್ಯಂತ ಜನಪ್ರಿಯ ಆ್ಯಂಟಿ-ವೈರಸ್ ಸಾಫ್ಟ್​ವೇರ್​ಗಳಲ್ಲಿ ಅದೂ ಒಂದು. ಇದರ ಸಿಇಒ ಆಗಿರುವ 55 ವರ್ಷದ ಕೈಲಾಶ್ ಕಾಟ್ಕರ್ ಅವರ ಜೀವನ ಕಥೆ ಎಲ್ಲರಿಗೂ ಸ್ಫೂರ್ತಿಗೊಡುವಂಥದ್ದು. ಒಬ್ಬ ಸಾಧಾರಣ ಸ್ತರದಿಂದ ಮೇಲೆ ಎತ್ತರಕ್ಕೆ ಬೆಳೆದ ಸಾಧಕನ ಕಥೆ ಅದು.

  ಪರೀಕ್ಷೆಗೆ ಹೆದರಿ ಹತ್ತನೇ ತರಗತಿಯಲ್ಲೇ ಶಾಲೆಯಿಂದ ಹೊರಬಿದ್ದ ಕೈಲಾಶ್ ಕಾಟ್ಕರ್ 755 ಕೋಟಿ ರೂ ಮೌಲ್ಯದ ಕಂಪನಿಯನ್ನ ಕಟ್ಟಿದರು ಎಂಬುದು ನಿಜಕ್ಕೂ ಸೋಜಿಗ ಎನಿಸುತ್ತದೆ. ಆಗಿನ್ನೂ ಎಂಬತ್ತರ ದಶಕ. ಈಗಾಗದೆ ಪದವಿ ಮಾಡಿದರೂ ನೌಕರಿ ಸಿಗುವುದು ದುಸ್ತರ. ಆಗ ಪದವಿ ಪೂರೈಸಿದರೆ ಒಳ್ಳೆಯ ಸಂಬಳದ ಕೆಲಸ ಸಿಗುತ್ತಿತ್ತು. ಆದರೆ, ಕೈಲಾಶ್ ಎಸ್ಸೆಸ್ಸೆಲ್ಸಿ ಬರೆಯದೆಯೇ ಸ್ಕೂಲ್ ಡ್ರಾಪ್ ಔಟ್ ಆದವರು. ಕೆಲಸಕ್ಕಾಗಿ ಅಲೆದು ಅಲೆದು ಕೊನೆಗೆ 1985ರಲ್ಲಿ ಕೈಲಾಶ್ ಅವರು ಕ್ಯಾಲ್ಕುಲೇಟರ್ ಮತ್ತು ರೇಡಿಯೋ ರಿಪೇರಿ ಅಂಗಡಿಯಲ್ಲಿ ಕೆಲಸ ಮಾಡಲು ಆರಂಭಿಸಿದರು. ಆಗ ಅವರಿಗೆ ಬರುತ್ತಿದ್ದ ಸಂಬಳ ತಿಂಗಳಿಗೆ 400 ರೂ ಮಾತ್ರ. ಆಗಿನ ಕಾಲಕ್ಕೆ ಅದು ತೀರಾ ಕೆಟ್ಟ ಸಂಬಳವೇನಲ್ಲ. ಆದರೆ, ಅಷ್ಟಕ್ಕೆ ತೃಪ್ತನಾಗಿ ಕೈಲಾಶ್ ತಿಂಗಳಗೂಲಿಯಾಗಿ ಕೆಲಸ ಮಾಡುತ್ತಾ ಕೂತಿದ್ದರೆ ನಾವು ಕ್ವಿಕ್ ಹೀಲ್ ಹೋಡಲು ಸಾಧ್ಯವಾಗುತ್ತಿರಲಿಲ್ಲ.

  ಸ್ವಂತ ಎಲೆಕ್ಟ್ರಾನಿಕ್ಸ್ ರಿಪೇರಿ ಅಂಗಡಿ: 

  1991ರಲ್ಲಿ ಕೈಲಾಶ್ ಕಾಟ್ಕರ್ ಅವರು ಪುಣೆಯಲ್ಲಿ 15 ಸಾವಿರ ರೂ ಹಣದೊಂದಿಗೆ ತಮ್ಮದೇ ಸ್ವಂತ ರಿಪೇರಿ ಅಂಗಡಿ ಇಟ್ಟುಕೊಂಡರು. ಇದೇ ಸಂದರ್ಭದಲ್ಲಿ ಅವರ ಕಿರಿಯ ಸಹೋದರ ಸಂಜಯ್ ಕಾಟ್ಕರ್ ಅವರೂ ಓದಿಗೆ ತಿಲಾಂಜಲಿ ಹೇಳಿ ಕೆಲಸ ಮಾಡುವ ಉಮೇದಿನಲ್ಲಿದ್ದರು. ಆದರೆ, ಕೈಲಾಶ್ ಯೋಚನೆ ಬೇರೆಯೇ ಇತ್ತು. ತಾನು ಓದಲು ಸಾಧ್ಯವಾಗಲಿಲ್ಲ ಎಂದರೆ ತನ್ನ ತಮ್ಮನಾದರೂ ಸಾಧ್ಯವಾದರೆ ಓದಲಿ ಎಂಬುದು ಅವರ ಇರಾದೆ ಆಗಿತ್ತು. ಆದರೆ, ಆಗ ಹೊಸದಾಗಿ ಆರಂಭಗೊಂಡಿದ್ದ ಕಂಪ್ಯೂಟರ್ ಸೈನ್ಸ್ ಕೋರ್ಸ್​ಗೆ ಸಂಜಯ್ ಸೇರಿಕೊಳ್ಳಬೇಕೆಂದರೆ 5 ಸಾವಿರ ರೂ ಫೀ ಕಟ್ಟಬೇಕಿತ್ತು. ಆಗಿನ ಕಾಲಕ್ಕೆ 5 ಸಾವಿರ ರೂ ಎಂದರೆ ಈಗಿನ ಲಕ್ಷಕ್ಕೆ ಸಮ ಇರಬಹುದು. ಈ ಸಂದರ್ಭದಲ್ಲಿ ಕೈಲಾಶ್ ಹೇಗೋ ಅಷ್ಟು ಹಣ ಹೊಂದಿಸಿದರು. ಇವರ ಈ ನಡೆ ಮುಂದೆ ದೊಡ್ಡ ಪ್ರತಿಫಲವನ್ನೇ ಕೊಡುವುದಾಗಿತ್ತು.

  ಇದನ್ನೂ ಓದಿ: ಝೂಮ್ ಕಾಲ್​ನಲ್ಲಿ 900 ಉದ್ಯೋಗಿಗಳಿಗೆ ಗೇಟ್ ಪಾಸ್ ಕೊಟ್ಟ ಬೆಟರ್ ಸಿಇಒ; ವಿಡಿಯೋ ವೈರಲ್

  ಸ್ವಂತ ಎಲೆಕ್ಟ್ರಾನಿಕ್ಸ್ ರಿಪೇರಿ ಅಂಗಡಿ ಇಟ್ಟುಕೊಂಡಿದ್ದ ಕೈಲಾಶ್ ಕಾಟ್ಕರ್ ಅವರಿಗೆ ನ್ಯೂ ಇಂಡಿಯಾ ಇನ್ಸೂರೆನ್ಸ್ ಕಂಪನಿಯಿಂದ ಮೈಂಟೆನೆನ್ಸ್ ಕಾಂಟ್ರಾಕ್ಟ್ ಸಿಕ್ಕಿತು. ಅದು ಕಂಪ್ಯೂಟರ್ ಮೈಂಟೆನೆನ್ಸ್ ಗುತ್ತಿಗೆ. ಭವಿಷ್ಯದಲ್ಲಿ ಕಂಪ್ಯೂಟರ್ ಜೊತೆಗೆಯೇ ಆಟ ಎಂಬ ವಾಸ್ತವವನ್ನು ಕೈಲಾಶ್ ಬಹಳ ಬೇಗ ಅರಿತುಕೊಂಡರು.

  ಮನೆ ಬದಲು ಕಂಪ್ಯೂಟರ್ ಕೊಂಡ ಕೈಲಾಶ್:

  ಕೈಲಾಶ್ ಕಾಟ್ಕರ್ ಅವರು 22 ವರ್ಷದವರಿದ್ದಾಗ ಮೊದಲ ಬಾರಿಗೆ ಕಂಪ್ಯೂಟರ್ ಅನ್ನ ಕಣ್ಣಾರೆ ಕಂಡರು. ಬ್ಯಾಂಕ್​ವೊಂದರಲ್ಲಿ ಕಂಪ್ಯೂಟರ್ ಕಂಡು ಆವಾಕ್ಕಾಗಿದ್ದರು. ಆವರೆಗೂ ಕೈಲಾಶ್ ಅವರಿಗೆ ತಮ್ಮ ರಿಪೇರಿ ಅಂಗಡಿಯಿಂದ ಬಂದ ಲಾಭದ ಹಣದಲ್ಲಿ ಮನೆಯನ್ನ ಖರೀದಿಸಿ ಫ್ಯಾಮಿಲಿ ಸೆಟಲ್ ಮಾಡುವ ಗುರಿ ಇತ್ತು. ಆದರೆ, ಕಂಪ್ಯೂಟರ್ ಕಂಡಿದ್ದೇ ಅವರಿಗೆ ಬೇರೆ ಯೋಚನೆ ಬಂತು. ತಮ್ಮ ಬಳಿ ಇದ್ದ 50 ಸಾವಿರ ರೂ ಹಣದಲ್ಲಿ ಅವರು ಮನೆ ಬದಲು ಕಂಪ್ಯೂಟರ್ ಖರೀದಿ ಮಾಡಿದರು.

  ಕಂಪ್ಯೂಟರ್​ನಿಂದ ಭಾಗ್ಯದ ಬಾಗಿಲು:

  ಆಗ ತೊಂಬತ್ತರ ದಶಕದ ಆರಂಭದ ಕಾಲ. ಜಾಗತೀಕರಣಕ್ಕೆ ಭಾರತ ತೆರೆದುಕೊಂಡ ಪರ್ವ ಕಾಲ. ಸಾಫ್ಟ್​ವೇರ್ ಉದ್ಯಮ ಬೆಳವಣಿಗೆ ಕಾಣುತ್ತಿದ್ದ ಕಾಲ. ಸರಿಯಾದ ಸಮಯಕ್ಕೆ ಕೈಲಾಶ್ ಕಂಪ್ಯೂಟರ್ ಉದ್ಯಮಕ್ಕೆ ಕಾಲಿಟ್ಟಿದ್ದರು. 1993ರಲ್ಲಿ ಅವರು ಎಲೆಕ್ಟ್ರಾನಿಕ್ಸ್ ರಿಪೇರಿ ಅಂಗಡಿ ಜೊತೆಗೆ ಸಿಎಟಿ ಕಂಟ್ಯೂಟರ್ ಸರ್ವಿಸಸ್ ಎಂಬ ಕಂಪನಿಯನ್ನ ಸ್ಥಾಪಿಸಿ ಕಂಪ್ಯೂಟರ್ ರಿಪೇರಿ ಮತ್ತು ಮೈಂಟೆನೆನ್ಸ್ ಸೇವೆಗಳನ್ನ ನೀಡುತ್ತಿದ್ದರು.

  ಇದನ್ನೂ ಓದಿ: Super Mushrooms: ಪರೀಕ್ಷೆಯಲ್ಲಿ ಫೇಲ್​ ಆಗಿದ್ದಕ್ಕೆ ಅಣಬೆ ಬೆಳದು ಲಕ್ಷಗಟ್ಟಲೆ ಗಳಿಸುತ್ತಿರುವ ಗೆಳೆಯರು, ನೀವೂ ಟ್ರೈ ಮಾಡ್ಬಹುದು!

  ಕ್ವಿಕ್ ಹೀಲ್ ಕುಡಿಯೊಡೆದದ್ದು:

  ತಮ್ಮ ಬಳಿಗೆ ರಿಪೇರಿಗೆ ಬರುತ್ತಿದ್ದ ಕಂಪ್ಯೂಟರ್​ಗಳಲ್ಲಿ ಬಹತೇಕವು ವೈರಸ್​ನಿಂದ ಬಾಧಿತವಾಗಿದ್ದವಾಗಿದ್ದವು. ಅವರ ಮನಸಿಗೆ ಹೊಳೆದದ್ದು ಆ್ಯಂಟಿ-ವೈರಸ್ ಸಾಫ್ಟ್​​ವೇರ್. ಕಂಪ್ಯೂಟರ್ ಸೈನ್ಸ್ ಓದಿದ್ದ ತನ್ನ ಸಹೋದರಿನಿಗೆ ಅವರು ಆ್ಯಂಟಿ-ವೈರಸ್ ವಿಚಾರದ ಬಗ್ಗೆ ಗಮನ ಹರಿಸುವಂತೆ ಹೇಳಿದರು. ಕೈಲಾಶ್ ಮತ್ತು ಸಂಜಯ್ ಇಬ್ಬರೂ ಸೇರಿ ರಿಪೇರಿ ಶಾಪ್​ನಲ್ಲೇ ಕೂತು ಆ್ಯಂಟಿ-ವೈರಸ್ ಪ್ರೋಗ್ರಾಮ್​ಗಳನ್ನ ಅಭಿವೃದ್ಧಿಪಡಿಸಿದರು. ವೈರಸ್ ಇದ್ದ ಕಂಪ್ಯೂಟರ್​ಗಳಲ್ಲಿ ಅದರ ಪ್ರಯೋಗಗಳನ್ನ ಮಾಡತೊಡಗಿದರು.

  ಈ ಕಾರ್ಯ ಸಫಲವಾಗುವ ಸೂಚನೆ ಸಿಗುತ್ತಿದ್ದಂತೆಯೇ ಇವರಿಬ್ಬರು ಬಹಳ ಬೇಗ ತಮ್ಮ ಗಮನವನ್ನು ಕಂಪ್ಯೂಟರ್ ಹಾರ್ಡ್​ವೇರ್​ನಿಂದ ಆ್ಯಂಟಿವೈರಸ್ ಸಾಫ್ಟ್​ವೇರ್​ನತ್ತ ಬದಲಿಸಿದರು. ಎರಡೇ ವರ್ಷದಲ್ಲಿ, ಅಂದರೆ 1995ರಲ್ಲಿ ಅವರು ಆ್ಯಂಟಿವೈರಸ್ ತಂತ್ರಾಂಶವನ್ನ ಅಭಿವೃದ್ಧಿಪಡಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಿದರು. ಆಗಿನ್ನೂ ಅದರ ಹೆಸರು ಕ್ವಿಕ್ ಹೀಲ್ ಆಗಿರಲಿಲ್ಲ. ಬ್ರ್ಯಾಂಡಿಂಗ್ ಆಗಿರಲಿಲ್ಲ ಆದರೆ, ಬಹಳ ಬೇಗ ಇವರು ಮಾರುಕಟ್ಟೆಗೆ ಆಗಮಿಸಿದ ಕಾರಣಕ್ಕೋ ಇವರ ಉತ್ಪನ್ನಕ್ಕೆ ಬೇಡಿಕೆ ಸಿಕ್ಕಿತು. ಮರು ವರ್ಷವೇ ಇವರು ತಮ್ಮೆಲ್ಲಾ ಹಾರ್ಡ್​ವೇರ್ ಸೇವೆಗಳನ್ನ ನಿಲ್ಲಿಸಿ ಸಂಪೂರ್ಣ ಗಮನವನ್ನು ಆ್ಯಂಟಿವೈರಸ್ ಮಾರುಕಟ್ಟೆ ವಿಸ್ತರಿಸುವುದಕ್ಕೆ ಹರಿಸಿದರು.

  ಇದನ್ನೂ ಓದಿ: ಭಾರತದಲ್ಲಿ ಅಸಮಾನತೆ ಬಹಳ ಹೆಚ್ಚು, ಬರಿಗೈಲಿದೆ ಅರ್ಧ ಜನಸಂಖ್ಯೆ: ಡಬ್ಲ್ಯೂಐಎಲ್ ವರದಿ

  ಕ್ವಿಕ್ ಹೀಲ್ ತಂತ್ರಾಂಶದ ತಾಂತ್ರಿಕ ಅಂಶಗಳನ್ನ ತಮ್ಮ ನೋಡಿಕೊಂಡರೆ, ಅದರ ಮಾರ್ಕೆಟಿಂಗ್ ವಿಚಾರದ ಜವಾಬ್ದಾರಿಯನ್ನ ಅಣ್ಣ ವಹಿಸಿಕೊಂಡು ಇಬ್ಬರೂ ಸಹೋದರರು ಮುಂದಡಿ ಇಡುತ್ತಾ ಹೋದರು. ಆರಂಭದಲ್ಲಿ ಅಂದುಕೊಂಡಂತೆ ವ್ಯವಹಾರ ಸುಲಭವಾಗಿರಲಿಲ್ಲ. ವೈಟುಕೆ ಭಯ ಆವರಿಸಿದ 1999ರ ಕಾಲಘಟ್ಟದಲ್ಲಿ ಇವರ ಕಂಪನಿ ಮುಚ್ಚುವ ಪರಿಸ್ಥಿತಿಗೆ ಬಂದಿತ್ತು. ಆದರೆ ನಂತರ ತಮ್ಮ ಪ್ರಯತ್ನ ಬಿಡದೆ ಇವರು ಕಂಪನಿಯನ್ನ ಉಳಿಸಿಕೊಂಡು ಭಾರತದಾದ್ಯಂತ ವಿಸ್ತರಿಸತೊಡಗಿದರು.

  2007ರಲ್ಲಿ ಅವರು ತಮ್ಮ ಕಂಪನಿಯ ಹೆಸರನ್ನ ಕ್ವಿಕ್ ಹೀಲ್ ಎಂದು ಬದಲಿಸಿದರು. ಬಂಡವಾಳ ಕೂಡ ಹರಿದುಬಂತು. 2016ರಲ್ಲಿ ತಮ್ಮ ಕಂಪನಿಯನ್ನ ಐಪಿಒ ಮಾರುಕಟ್ಟೆಗೆ ತೆರೆದರು. ಅಣ್ಣ ಕೈಲಾಶ್ ಕಾಟ್ಕರ್ ಈಗ ಕ್ವಿಕ್ ಹೀಲ್ ಕಂಪನಿಯ ಸಿಇಒ ಮತ್ತು ಎಂಡಿ ಆಗಿದ್ದಾರೆ. ತಮ್ಮ ಸಂಜಯ್ ಕಾಟ್ಕರ್ ಅವರು ಸಿಟಿಒ ಆಗಿದ್ದಾರೆ. ಈ ವರ್ಷ ಇವರ ಕ್ವಿಕ್ ಹೀಲ್ ಕಂಪನಿಯ ಮೌಲ್ಯ 755 ಕೋಟಿ ರೂ ಎಂದು ಅಂದಾಜಿಸಲಾಗಿದೆ.

  ಮಾಹಿತಿ ಕೃಪೆ: DNA
  Published by:Vijayasarthy SN
  First published: