ಕೆಲವೊಬ್ಬರಿಗೆ ಎಲ್ಲಾ ಸೌಲಭ್ಯಗಳಿದ್ದರೂ ಸಹ ಚೆನ್ನಾಗಿ ಓದಿಕೊಂಡು ಒಳ್ಳೆಯ ಕಂಪನಿಯಲ್ಲಿ ದೊಡ್ಡ ಉದ್ಯೋಗವನ್ನು ಗಿಟ್ಟಿಸಲು ಆಗುವುದಿಲ್ಲ. ಇನ್ನೂ ಕೆಲವರು ತಮಗೆ ಯಾವುದೇ ಸೌಲಭ್ಯಗಳು ಇಲ್ಲದೆ ಹೋದರೂ ಸಹ ಚೆನ್ನಾಗಿ ಓದಿಕೊಂಡು, ಒಳ್ಳೆಯ ಅಂಕಗಳನ್ನು ಗಳಿಸಿ ಒಳ್ಳೆಯ ಉದ್ಯೋಗವನ್ನು ಪಡೆದುಕೊಳ್ಳುತ್ತಾರೆ. ಇಲ್ಲಿಯೂ ಸಹ ಒಬ್ಬ ಅಂಗಡಿ ನಡೆಸುವವರ ಮಗ ಚೆನ್ನಾಗಿ ಓದಿಕೊಂಡು ಮೈಕ್ರೋಸಾಫ್ಟ್ (Microsoft) ಅಂತಹ ಹೆಸರಾಂತ ಕಂಪನಿಯಲ್ಲಿ 50 ಲಕ್ಷ ರೂಪಾಯಿಯ ಉದ್ಯೋಗದ ಆಫರ್ ಅನ್ನು ಗಿಟ್ಟಿಸಿದ್ದಾನೆ. ಯಾರಿಗೆ ತಾನೇ ಅಮೆಜಾನ್, ಆಪಲ್, ಗೂಗಲ್ ನಂತಹ ದೊಡ್ಡ ಕಂಪನಿಗಳಲ್ಲಿ ಕೆಲಸ ಗಿಟ್ಟಿಸಬೇಕೆಂದು ಅನ್ನಿಸುವುದಿಲ್ಲ ನೀವೇ ಹೇಳಿ? ಕೆಲವು ಬಡ ಪೋಷಕರ ಮಕ್ಕಳು ತಮ್ಮ ಸ್ವಪ್ರಯತ್ನದಿಂದ ಇಂತಹ ಕಂಪನಿಗಳಲ್ಲಿ ಉದ್ಯೋಗಗಳನ್ನು (Job Opportuniy) ಗಿಟ್ಟಿಸಿಕೊಂಡರೆ ಪೋಷಕರಿಗೆ ಇದಕ್ಕಿಂತ ಹೆಮ್ಮೆಯ ವಿಷಯ ಇನ್ನೊಂದಿರುವುದಿಲ್ಲ ಎಂದು ಹೇಳಬಹುದು.
ಹರಿಯಾಣದ ಅಂಬಾಲಾ ಕಂಟೋನ್ಮೆಂಟ್ ನ ಬಿ.ಟೆಕ್ ವಿದ್ಯಾರ್ಥಿ ಮಧುರ್ ರಖೇಜಾ ಮೈಕ್ರೋಸಾಫ್ಟ್ ನಿಂದ 50 ಲಕ್ಷ ರೂಪಾಯಿಗಳ ಲಾಭದಾಯಕ ಉದ್ಯೋಗದ ಪ್ರಸ್ತಾಪವನ್ನು ಪಡೆಯುವ ಮೂಲಕ ತನ್ನ ಹೆತ್ತವರಿಗೆ ಹೆಮ್ಮೆ ತಂದಿದ್ದಾರೆ. ಇವರ ತಂದೆ ಒಂದು ಅಂಗಡಿ ನಡೆಸುತ್ತಾರೆ ಮತ್ತು ತಾಯಿ ಒಬ್ಬ ಗೃಹಿಣಿ ಆಗಿದ್ದಾರೆ. ಇವರ ಮಗ ಈ ಕೆಲಸವನ್ನು ಪಡೆಯುವ ಮೊದಲು ಅಮೆಜಾನ್, ಕಾಗ್ನಿಜೆಂಟ್ ಮತ್ತು ಆಪ್ಟಮ್ ನಂತಹವುಗಳ ಆಫರ್ ಗಳನ್ನು ತಿರಸ್ಕರಿಸಿದ್ದರು.
ಯುಪಿಇಎಸ್ ನಲ್ಲಿ ಬಿ.ಟೆಕ್ ಅಧ್ಯಯನ
ಮಧುರ್ ರಖೇಜಾ ಅವರು ಯುಪಿಇಎಸ್ ಸ್ಕೂಲ್ ಆಫ್ ಕಂಪ್ಯೂಟರ್ ಸೈನ್ಸ್ ನಿಂದ ಆಯಿಲ್ ಆಂಡ್ ಗ್ಯಾಸ್ ಇನ್ಫೋರ್ಮೇಟಿಕ್ಸ್ ನಲ್ಲಿ ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್ ನಲ್ಲಿ ಪೂರ್ಣಗೊಳಿಸಿದರು. ಯೂನಿವರ್ಸಿಟಿ ಆಫ್ ಪೆಟ್ರೋಲಿಯಂ ಅಂಡ್ ಎನರ್ಜಿ ಸ್ಟಡೀಸ್ (ಯುಪಿಇಎಸ್) ಡೆಹ್ರಾಡೂನ್ ನ ವಿಶ್ವವಿದ್ಯಾಲಯವಾಗಿದೆ.
"ನಾನು ಯಾವಾಗಲೂ ತಂತ್ರಜ್ಞಾನ ಮತ್ತು ಪ್ರಪಂಚದಾದ್ಯಂತದ ಲಕ್ಷಾಂತರ ಜನರ ಜೀವನವನ್ನು ಪರಿವರ್ತಿಸುವ ಮತ್ತು ಪರಿಣಾಮ ಬೀರುವ ಅದರ ಸಾಮರ್ಥ್ಯದ ಬಗ್ಗೆ ಆಸಕ್ತಿ ಹೊಂದಿದ್ದೇನೆ ಮತ್ತು ನಾನು ಯಾವಾಗಲೂ ಈ ರೀತಿಯ ದೊಡ್ಡ ವಿಷಯದ ಭಾಗವಾಗಲು ಬಯಸುತ್ತೇನೆ" ಎಂದು ಮಧುರ್ ಅವರು ಅಂತಹ ವಿಶಿಷ್ಟ ಪರಿಣತಿಯನ್ನು ಏಕೆ ಆರಿಸಿಕೊಂಡರು ಎಂಬುದರ ಬಗ್ಗೆ ಹೇಳುತ್ತಾರೆ.
ಕಂಪ್ಯೂಟರ್ ಸೈನ್ಸ್ ಮಾಡುವುದು ಖಚಿತವಿತ್ತು
ಯಾರೋ ಒಬ್ಬರು ಅವರು ಅಪ್ಸ್ಟ್ರೀಮ್ ಪೆಟ್ರೋಲಿಯಂ ಎಂಜಿನಿಯರಿಂಗ್ ಗೆ ಹೋಗಲು ಸಲಹೆ ನೀಡಿದ್ದರು. ಆದರೆ ವೃತ್ತಿಜೀವನದ ಹಾದಿಯಾಗಿ ಅದರ ಬಗ್ಗೆ ಅವರಿಗೆ ಅಷ್ಟೊಂದು ಆಸಕ್ತಿ ಇರಲಿಲ್ಲ. ಆದರೂ ಅವರು ಕಂಪ್ಯೂಟರ್ ಸೈನ್ಸ್ ಮಾಡಲು ಬಯಸುತ್ತಾರೆ ಎಂದು ಅವರಿಗೆ ಖಚಿತವಾಗಿತ್ತು.
"ಕಂಪ್ಯೂಟರ್ ಸೈನ್ಸ್ ನಲ್ಲಿ ಆಯಿಲ್ ಆಂಡ್ ಗ್ಯಾಸ್ ಇನ್ಫೋರ್ಮೇಟಿಕ್ಸ್ ನಲ್ಲಿ ನನಗೆ ಪರಿಣತಿ ಇದೆ ಎಂದು ನಂತರ ನನಗೆ ತಿಳಿಯಿತು. ಆದ್ದರಿಂದ ನಾನು ಇದನ್ನು ಆರಿಸಿಕೊಂಡಿದ್ದೇನೆ" ಎಂದು ಅವರು ಹೇಳುತ್ತಾರೆ. ಅವರು ಯುಪಿಇಎಸ್ ಬೋಧಕ ವರ್ಗ ಮತ್ತು ಒದಗಿಸಿದ ಸೌಲಭ್ಯಗಳನ್ನು ಶ್ಲಾಘಿಸಿದರು.
ಅದ್ಭುತ ಅವಕಾಶ ಸಿಕ್ಕಿತು
"ವಿಶೇಷವಾಗಿ ಪ್ರೋಗ್ರಾಮಿಂಗ್ ನಲ್ಲಿ ಥಿಯರಿ ತರಗತಿಯಲ್ಲಿ ನಮಗೆ ಪರಿಕಲ್ಪನೆಗಳನ್ನು ಕಲಿಸಲಾಯಿತು ಮತ್ತು ಅವುಗಳನ್ನು ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸಲು ಪ್ರಯೋಗಾಲಯಗಳು ಇದ್ದವು. ಇದಲ್ಲದೆ, ಯುಪಿಇಎಸ್ ಈ ಪ್ಲೇಸ್ಮೆಂಟ್ ಋತುವಿನಲ್ಲಿ ನಮಗೆ ಅದ್ಭುತ ಅವಕಾಶಗಳನ್ನು ಒದಗಿಸಿತು" ಎಂದು ಅವರು ಹೇಳುತ್ತಾರೆ.
"ನನ್ನ ಮನಸ್ಸಿನಲ್ಲಿ ನಾನು ಆಯ್ಕೆಯಾಗಲು ಬಯಸುವ ಕಂಪನಿಗಳ ಪಟ್ಟಿ ಇತ್ತು. ಮೈಕ್ರೋಸಾಫ್ಟ್ ಆ ಪಟ್ಟಿಯಲ್ಲಿತ್ತು ಮತ್ತು ನಾನು ಇತರ ಜನರ ಸಂದರ್ಶನದ ಅನುಭವಗಳ ಬಗ್ಗೆ ಓದುವ ಮೂಲಕ ಮತ್ತು ಅಗತ್ಯವಿರುವ ಕೌಶಲ್ಯಗಳನ್ನು ಕಲಿಯುವ ಮೂಲಕ ಆಯ್ಕೆ ಪ್ರಕ್ರಿಯೆಗೆ ಸಿದ್ಧನಾದೆ. ಇದು ಕ್ಯಾಂಪಸ್ ಪ್ಲೇಸ್ ಮೆಂಟ್ ಆಗಿತ್ತು" ಎಂದು ಮಧುರ್ ವಿವರಿಸುತ್ತಾರೆ.
ಇದನ್ನೂ ಓದಿ: Success Story: ನಿವೃತ್ತಿ ಬಳಿಕ ದಾಳಿಂಬೆ ಹಣ್ಣು ಬೆಳೆದು 7 ಲಕ್ಷ ಗಳಿಕೆ! ಮೂಗಿನ ಮೇಲೆ ಬೆರಳಿಡುವಂಥಾ ಸುದ್ದಿ ಇದು!
ಮೈಕ್ರೋಸಾಫ್ಟ್ ಹೊರತುಪಡಿಸಿ, ಅಮೆಜಾನ್, ಆಪ್ಟಮ್, ಕಾಗ್ನಿಜೆಂಟ್, ಇನ್ಫೋಸಿಸ್ ಮತ್ತು ಇನ್ನೂ ಹೆಚ್ಚಿನ ಕಂಪನಿಗಳಲ್ಲಿ ಕ್ಯಾಂಪಸ್ ಮತ್ತು ಆಫ್-ಕ್ಯಾಂಪಸ್ ಎರಡರಲ್ಲೂ ಮಧುರ್ ಅರ್ಜಿ ಸಲ್ಲಿಸಿದ್ದರು.
ಭರ್ಜರಿ ಆಫರ್
"ಇವುಗಳಲ್ಲಿ ನಾನು ಮೈಕ್ರೋಸಾಫ್ಟ್, ಆಪ್ಟಮ್ ಮತ್ತು ಕಾಗ್ನಿಜೆಂಟ್ ನಿಂದ ಪೂರ್ಣ ಸಮಯದ ಆಫರ್ ಗಳನ್ನು ಸ್ವೀಕರಿಸಿದ್ದೇನೆ. ಕ್ಯಾಂಪಸ್ ಪ್ಲೇಸ್ಮೆಂಟ್ ಗಳ ಭಾಗವಾಗಿ ಅಮೆಜಾನ್ ನಿಂದ ಇಂಟರ್ನ್ಶಿಪ್ ನ ಆಫರ್ ಅನ್ನು ಸಹ ಸ್ವೀಕರಿಸಿದ್ದೇನೆ. ಇಂಟರ್ನ್ಶಿಪ್ ನಲ್ಲಿ ನನ್ನ ಕೆಲಸದ ಆಧಾರದ ಮೇಲೆ, ಅಮೆಜಾನ್ ನಲ್ಲಿ ನನಗೆ ಪೂರ್ಣ ಸಮಯದ ಆಫರ್ ಸಹ ಸಿಕ್ಕಿದೆ" ಎಂದು ಅವರು ಹೇಳುತ್ತಾರೆ.
ಉದ್ಯೋಗಿಗಳನ್ನು ಚೆನ್ನಾಗಿ ನೋಡ್ಕಳ್ತಾರೆ
ಹಾಗಾದರೆ ಮಧುರ್ ತನ್ನ ಇತರ ಉದ್ಯೋಗ ಅವಕಾಶಗಳಲ್ಲಿ ಮೈಕ್ರೋಸಾಫ್ಟ್ ಅನ್ನೇ ಏಕೆ ಆರಿಸಿಕೊಂಡನು ಅಂತ ಕೇಳಿದಾಗ, ಅವರು ಅಲ್ಲಿರುವ ಸವಲತ್ತುಗಳ ಬಗ್ಗೆ ಹೇಳಿದರು. ಕೆಲಸದ ಸಮಯ ತುಂಬಾನೇ ಫ್ಲೇಕ್ಸಿಬಲ್ ಆಗಿದೆ. ಅಲ್ಲಿ ಎಂಜಿನಿಯರ್ ಗಳು ಮಾಡುವ ಕೆಲಸವು ತುಂಬಾ ಪ್ರಭಾವಶಾಲಿಯಾಗಿದೆ ಮತ್ತು ಉದ್ಯೋಗಿಗಳನ್ನು ಚೆನ್ನಾಗಿ ನೋಡಿಕೊಳ್ಳಲಾಗುತ್ತದೆ. ಮೈಕ್ರೋಸಾಫ್ಟ್ ತನ್ನ ಉದ್ಯೋಗಿಗಳು ತಮ್ಮ ಹವ್ಯಾಸಗಳು ಮತ್ತು ಆಸಕ್ತಿಗಳನ್ನು ಮುಂದುವರಿಸಲು ಇಷ್ಟಪಡುತ್ತದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: Bank Loan: ಸಾಲ ಪಡೆದವರೇ ತೀರಿಕೊಂಡರೆ ಲೋನ್ ತೀರಿಸುವವರು ಯಾರಪ್ಪ? ಈ ಬಗ್ಗೆ ಬ್ಯಾಂಕ್ ನಿಯಮ ಏನಿದೆ?
ಸಂಬಳವು ತುಂಬಾ ಉತ್ತಮವಾಗಿದೆ ಮತ್ತು ಮೈಕ್ರೋಸಾಫ್ಟ್ ಷೇರುಗಳನ್ನು ಸಹ ಉದ್ಯೋಗಿಗಳಿಗೆ ನೀಡಲಾಗುತ್ತದೆ ಎಂದು ಹೇಳಿದರು. ಮಧುರ್ ಬೆಂಗಳೂರಿನ ಮೈಕ್ರೋಸಾಫ್ಟ್ ಕಚೇರಿಗೆ ಸೇರಲು ತಯಾರಿ ನಡೆಸುತ್ತಿದ್ದಾರೆ. ಉತ್ತಮ ಜನರೊಂದಿಗೆ ಸೇರಿ ಕೆಲಸವನ್ನು ಕಲೆತು ಉತ್ತಮ ಸಾಫ್ಟ್‌ವೇರ್ ಡೆವಲಪರ್ ಆಗುವ ಗುರಿಯನ್ನು ಹೊಂದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ