ಈಗಾಗಲೇ ಹಲವು ದಿನಗಳಿಂದ ಎಲ್ಲೆಡೆ ಆಧಾರ್ ಹಾಗೂ ಪ್ಯಾನ್ (Aadhaar-PAN link) ಸಂಖ್ಯೆಯನ್ನು ಜೋಡಿಸುವಂತೆ ಸಾಕಷ್ಟು ಅರಿವು ಮೂಡಿಸಲಾಗಿದೆ. ಅಲ್ಲದೆ ಇದಕ್ಕಾಗಿ ಗಡುವನ್ನು (Last date) ನೀಡಲಾಗಿತ್ತು. ಇದೀಗ ಈ ಗಡುವು ಹತ್ತಿರ ಬರುತ್ತಿದ್ದಂತೆ ಈ ದಿನಾಂಕವನ್ನು ಇನ್ನೊಮ್ಮೆ ವಿಸ್ತರಿಸಬೇಕೆಂಬ ಬೇಡಿಕೆ ಹೆಚ್ಚಾಗ ತೊಡಗಿದೆ. ಆದರೆ ಈ ವರ್ಷ ಈ ದಿನಾಂಕ ಇನ್ನೊಮ್ಮೆ ವಿಸ್ತರಿಸುವ ನಿರೀಕ್ಷೆ ಇಲ್ಲ. ಈಗಾಗಲೇ ಗಮನಿಸಿದರೆ PAN-Aadhaar ಜೋಡಣೆ ಮಾಡುವುದಕ್ಕೆ ಸಂಬಂಧಿಸಿದಂತೆ ಕಳೆದ ವರ್ಷದಿಂದ ಹಲವು ಬಾರಿ ದಿನಾಂಕಗಳನ್ನು ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟ್ಯಾಕ್ಸಸ್ (Central Board of Direct Taxes ) ಇಲಾಖೆಯು ವಿಸ್ತರಿಸಿತ್ತು.
ಈ ಪ್ಯಾನ್-ಆಧಾರ್ ಲಿಂಕ್ ಇಲ್ಲಿಯವರೆಗೂ ಇನ್ನೂ ಲಿಂಕ್ ಮಾಡದೇ ಇರುವವರು ಅದನ್ನು ಈ ತಿಂಗಳು ಅಂದರೆ ಮಾರ್ಚ್ 31ರ ವರೆಗೂ ಮಾಡಬಹುದಾಗಿದೆ. ಈ ಅವಧಿಯೊಳಗೂ ಯಾರೇ ಆಗಲಿ ತಮ್ಮ ಆಧಾರ್ ಹಾಗೂ ಪ್ಯಾನ್ ಸಂಖ್ಯೆಯನ್ನು ಲಿಂಕ್ ಮಾಡದೆ ಹೋದಲ್ಲಿ ಅವರ ಪಾನ್ ಸಂಖ್ಯೆಯು ಬರುವ ಏಪ್ರಿಲ್ 1, 2023 ರಿಂದ ನಿಷ್ಕ್ರಿಯಯವಾಗಲಿದೆ.
ಪ್ಯಾನ್ ಕಾರ್ಡ್ ಮಹತ್ವದ ದಾಖಲೆ
ಶಾಶ್ವತ ಖಾತೆ ಸಂಖ್ಯೆ ಅಥವಾ ಸರಳವಾಗಿ ಹೇಳಬೇಕೆಂದರೆ ಪ್ಯಾನ್ ಕಾರ್ಡ್ ಎಂಬುದು ಬಲು ಮಹತ್ವದ ದಾಖಲೆಯಾಗಿದೆ. ಪ್ರತಿಯೊಬ್ಬರ ಬ್ಯಾಂಕಿಂಗ್ ವ್ಯವಹಾರಗಳಿಗೆ ಹಾಗೂ ತೆರಿಗೆ ವಿಧಿ ವಿಧಾನಗಳಿಗೆ ಕಡ್ಡಾಯವಾಗಿ ಬಳಸಲಾಗುವ ದಾಖಲೆಯಾಗಿದೆ. ಹಾಗಾಗಿ ಈಗಾಗಲೇ ನೀಡಿರುವ ಗಡುವು ಮೀರುವುದರೊಳಗೆ ಲಿಂಕ್ ಮಾಡಿಕೊಂಡಲ್ಲಿ ನಿಮಗೆ ಭವಿಷ್ಯದಲ್ಲಿ ಉಂಟಾಗಬಹುದಾದ ಅನಾನುಕೂಲತೆಗಳನ್ನು ತಪ್ಪಿಸಿಕೊಳ್ಳಬಹುದು.
ಈ ಹಿಂದೆ ಫೈನಾನ್ಶಿಯಲ್ ಎಕ್ಸ್ ಪ್ರೆಸ್ ಮಾಧ್ಯಮವು ಹಿರಿಯ ಅಧಿಕಾರಿಯೋರ್ವರನ್ನು ಉಲ್ಲೇಖಿಸಿ ಇನ್ನು ಮುಂದೆ ಪ್ಯಾನ್-ಆಧಾರ್ ಜೋಡಣೆ ದಿನಾಂಕವನ್ನು ಇನ್ನೊಮ್ಮೆ ವಿಸ್ತರಿಸಲಾಗದು ಎಂದು ವರದಿ ಮಾಡಿತ್ತು. ಆದಾಗ್ಯೂ ಸಮಯ ಸಂದರ್ಭ ನೋಡಿಕೊಂಡು ಕಡೆ ಘಳಿಗೆಯಲ್ಲಿ ಆಗಬಹುದಾದ ಬದಲಾವಣೆಯನ್ನು ಹಿರಿಯ ಅಧಿಕಾರಿ ತಳ್ಳಿ ಹಾಕಿರಲಿಲ್ಲ ಎಂದು ವೆಬ್ಸೈಟ್ ವರದಿ ಮಾಡಿತ್ತು.
ಇದನ್ನೂ ಓದಿ: Aadhaar Card: ಇನ್ಮುಂದೆ ಯಾವುದೇ ದಾಖಲೆ ಇಲ್ಲದೇ ಆಧಾರ್ ಕಾರ್ಡ್ ಮಾಡಿಸಬಹುದು!
ಪಾನ್-ಆಧಾರ್ ಜೋಡಣೆ ಏಕೆ ಮಹತ್ವವಾಗಿದೆ?
ಈಗಾಗಲೇ ನಿಮಗೆ ಗೊತ್ತಿರುವಂತೆ ಇಂದಿನ ದಿನಮಾನಗಳಲ್ಲಿ ಯಾವುದೇ ರೀತಿಯ ಬ್ಯಾಂಕಿಂಗ್ ಹಣಕಾಸಿನ ವ್ಯವಹಾರ ಬಂದಾಗ ಕೆವೈಸಿ ಎಂಬುದು ಮಹತ್ವವಾಗಿದೆ. ಹಾಗಾಗಿ ಪ್ರತಿಯೊಬ್ಬರಿಗೂ ನೋ ಯುವರ್ ಕಸ್ಟಮರ್ (ಕೆವೈಸಿ) ಬಗ್ಗೆ ತಿಳಿದೇ ಇದೆ. ಪ್ಯಾನ್ ಜೋಡಣೆಯೂ ಸಹ ಈಗ ಕೆವೈಸಿಯ ಭಾಗವಾಗಿರುವುದರಿಂದ ಇದು ಬಲು ಮಹತ್ವದ್ದಾಗಿದೆ.
ಅಲ್ಲದೆ, ಪ್ಯಾನ್ ದಾಖಲೆಗಳ ನಕಲಿ ಹಾವಳಿಯನ್ನು ತಡೆಯಲೂ ಸಹ ಈ ಜೋಡಣೆ ಪ್ರಕ್ರಿಯೆ ಮುಖ್ಯವಾಗಿದೆ. ಈ ಹಿಂದೆ ಒಬ್ಬ ವ್ಯಕ್ತಿಗೆ ಬಹು ಪ್ಯಾನ್ ಸಂಖ್ಯೆಗಳನ್ನು ನೀಡಿರುವ ಉದಾಹರಣೆಗಳಿವೆ. ಹಾಗಾಗಿ ಇದನ್ನು ತಡೆಯಲೂ ಸಹ ಪ್ಯಾನ್-ಆಧಾರ್ ಜೋಡಣೆ ಮಹತ್ವದ್ದಾಗಿದೆ.
ನಿಷ್ಕ್ರಿಯಗೊಂಡರೆ ಏನು ಸಮಸ್ಯೆ?
ಯಾರದ್ದೇ ಆಗಲಿ ಪಾನ್ ಸಂಖ್ಯೆ ಒಂದೊಮ್ಮೆ ನಿಷ್ಕ್ರಿಯಗೊಂಡರೆ ಆ ವ್ಯಕ್ತಿಗೆ ತೆರಿಗೆ ರಿಟರ್ನ್ ಸಲ್ಲಿಸಲು ಸಾಧ್ಯವಾಗುವುದಿಲ್ಲ. ಈ ರೀತಿ ರಿಟರ್ನ್ ಸಲ್ಲಿಸದೆ ಇದ್ದಾಗ ಆ ವ್ಯಕ್ತಿಯ ಆದಾಯ ತೆರಿಗೆ ಮರುಪಾವತಿ ಪ್ರಕ್ರಿಯೆ ಸಕ್ರಿಯವಾಗುವುದೇ ಇಲ್ಲ. ಅಲ್ಲದೆ ಪ್ಯಾ ನ್ ಇಲ್ಲದೆ ಐಟಿಆರ್ ಸಲ್ಲಿಸಬಯಸುವವರು ಹೆಚ್ಚಿನ ದರ ತೆರಬೇಕಾಗುತ್ತದೆ.
ಈ ಮೇಲಿನ ಅಂಶಗಳನ್ನು ಹೊರತುಪಡಿಸಿ SEBI ನಿಯಮಗಳನುಸಾರವಾಗಿ ಸುರಕ್ಷಿತ ಮಾರುಕಟ್ಟೆಗಳಲ್ಲಿ ತಮ್ಮ ವ್ಯವಹಾರ ನಡೆಸ ಬಯಸಿದಲ್ಲಿ ಅವರು ಕಡ್ಡಾಯವಾಗಿ ಪ್ಯಾನ್ ಹೊಂದಿರಬೇಕಾಗಿರುತ್ತದೆ. ಇದಿಲ್ಲದೆ ಅವರು ಮಾರುಕಟ್ಟೆಯಲ್ಲಿ ಭಾಗವಹಿಸಲಾಗದು. ಪರಿಸ್ಥಿತಿ ಹೀಗಿರುವಾಗ ಅಂಥವರು ಮಾನ್ಯವಾದ ಪ್ಯಾನ್ ಹೊಂದಿರಬೇಕಾಗುತ್ತದೆ ಹಾಗೂ ಪ್ಯಾನ್ ಮಾನ್ಯತೆ ಇರಬೇಕೆಂದಾದಲ್ಲಿ ಅವರು ತಮ್ಮ ಪ್ಯಾನ್ ಅನ್ನು ತಮ್ಮ ಆಧಾರ್ ನೊಂದಿಗೆ ಲಿಂಕ್ ಮಾಡುವುದು ಬಲು ಮಹತ್ವವಾಗಿದೆ.
ಇವರು ಪಾನ್-ಆಧಾರ್ ಲಿಂಕ್ ಮಾಡದೆ ಇರಬಹುದು
ದೇಶದ ಅಸ್ಸಾಂ, ಜಮ್ಮು ಮತ್ತು ಕಾಶ್ಮೀರ, ಮತ್ತು ಮೇಘಾಲಯ ಈ ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ಪ್ಯಾನ್-ಆಧಾರ್ ಲಿಂಕ್ ಮಾಡುವ ಪ್ರಕ್ರಿಯೆಯಿಂದ ವಿನಾಯಿತಿ ನೀಡಲಾಗಿದೆ. ಇವರಲ್ಲದೆ, ಅನಿವಾಸಿ ಭಾರತೀಯರು ಹಾಗೂ 80ಕ್ಕಿಂತಲೂ ಹೆಚ್ಚಿನ ವಯೋಮಾನದವರು ಪ್ಯಾನ್-ಆಧಾರ್ ಲಿಂಕ್ ಮಾಡುವ ಪ್ರಕ್ರಿಯೆಯಿಂದ ವಿನಾಯಿತಿ ಪಡೆದಿರುತ್ತಾರೆ.
ಒಟ್ಟಿನಲ್ಲಿ ಹೇಳಬೇಕೆಂದರೆ ಈಗಲೂ ಪ್ಯಾನ್-ಆಧಾರ್ ಜೋಡಣೆ ಮಾಡಲು ಕೆಲವು ದಿನಗಳು ಅಂದರೆ ಮಾರ್ಚ್ 31 ರ ವರೆಗೆ ಕಾಲಾವಧಿಯಿದ್ದು ಅದನ್ನು ಈಗಲೇ ಮಾಡಿಬಿಡಿ ಹಾಗೂ ಮತ್ತೊಮ್ಮೆ ದಿನಾಂಕ ವಿಸ್ತರಣೆ ಆಗಬಹುದೆಂಬ ಮನಸ್ಥಿತಿಯಿಂದ ಹೊರಬನ್ನಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ