ವಿದ್ಯುತ್ ವಾಹನಗಳಿಗೆ ಬೆಂಕಿ ಹೊತ್ತಿಕೊಳ್ಳುತ್ತಿರುವ ಪುನರಾವರ್ತಿತ ದೂರುಗಳ ನಂತರ ಮತ್ತೊಬ್ಬ ಗ್ರಾಹಕ ಓಲಾ ಕಂಪನಿ (Ola Customer) ವಿರುದ್ಧ ಕಿಡಿಕಾರಿದ್ದಾರೆ. ಓಲಾ ಕಂಪನಿ ಕಡೆಯಿಂದ ತನ್ನ ಸ್ಕೂಟರ್ಗೆ ಸಂಬಂಧಿಸಿದ ಸಮಸ್ಯೆಗೆ ತೃಪ್ತಿಕರ ಪ್ರತಿಕ್ರಿಯೆ ಪಡೆಯಲು ವಿಫಲವಾದ ವ್ಯಕ್ತಿಯೊಬ್ಬ (Angry Ola Customer) ಕಂಪನಿ ವಿರುದ್ಧ ವಿಚಿತ್ರ ಮತ್ತು ವಿನೂತನವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಓಲಾ ಕಂಪನಿಯ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಿದ ಮಹಾರಾಷ್ಟ್ರದ (Maharashtra) ಗ್ರಾಹಕರೊಬ್ಬರು ಕಂಪನಿಯ ಪ್ರತಿಕ್ರಿಯೆಗೆ ಬೇಸತ್ತು ತನ್ನ ಸ್ಕೂಟರ್ಗೆ ಕತ್ತೆಯೊಂದನ್ನು (Donkey) ಕಟ್ಟಿ ಅದನ್ನು ನಗರದ ಸುತ್ತ ಸುತ್ತಾಡಿಸಿ ಪ್ರತಿಭಟನೆ ನಡೆಸಿದ್ದಾರೆ. ಇದು ವೈರಲ್ ಆಗಿದೆ.
ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಸಚಿನ್ ಗಿಟ್ಟೆ, ಓಲಾ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಿದ ಆರು ದಿನಗಳ ನಂತರ ಸ್ಕೂಟರ್ ಕೆಟ್ಟು ಹೋಗಿದೆ. ಈ ಬಗ್ಗೆ ಪದೇ ಪದೇ ದೂರು ನೀಡಿದರೂ, ಓಲಾದಿಂದ ಯಾವುದೇ ತೃಪ್ತಿಕರ ಪ್ರತಿಕ್ರಿಯೆ ಪಡೆಯಲು ಸಚಿನ್ ವಿಫಲರಾಗಿದ್ದರು.
ಕತ್ತೆ ಹಾಗೂ ಸ್ಕೂಟರ್ ಮೆರವಣಿಗೆ ಇದರಿಂದ ಬೇಸತ್ತ ಖರೀದಿದಾರ ಸಚಿನ್ ಅವರು ತಮ್ಮ ದ್ವಿಚಕ್ರ ವಾಹನವನ್ನು ಕತ್ತೆಗೆ ಕಟ್ಟಿ ಓಲಾ ಕಂಪನಿಯನ್ನು ನಂಬಬೇಡಿ ಎಂದು ಜನರನ್ನು ಒತ್ತಾಯಿಸುವ ಭಿತ್ತಿ ಪತ್ರ ಮತ್ತು ಬ್ಯಾನರ್ಗಳೊಂದಿಗೆ ಪಟ್ಟಣದಲ್ಲಿ ಕತ್ತೆ ಹಾಗೂ ಸ್ಕೂಟರ್ ಮೆರವಣಿಗೆ ಮಾಡಿದ್ದಾರೆ.
ಸರಿಪಡಿಸಲು ಯಾರೂ ಮುಂದಾಗಿಲ್ಲ ಸುದ್ದಿ ಮೂಲಗಳ ಪ್ರಕಾರ, ಮಹಾರಾಷ್ಟ್ರದ ಪರ್ಲಿಯ ವ್ಯಾಪಾರಿ ಸಚಿನ್ ಗಿಟ್ಟೆ ಅವರು ಸೆಪ್ಟೆಂಬರ್ 2021ರಲ್ಲಿ ಸ್ಕೂಟರ್ ಅನ್ನು ಬುಕ್ ಮಾಡಿದ್ದಾರೆ. ಅದನ್ನು ಮಾರ್ಚ್ 24 ರಂದು ಸ್ವೀಕರಿಸಿದ್ದಾರೆ. ಸಚಿನ್ ಕೈಗೆ ಸ್ಕೂಟರ್ ತಲುಪಿದ ಆರು ದಿನಗಳ ನಂತರ, ಓಲಾ ಸ್ಕೂಟರ್ ಕೆಲಸ ಮಾಡುವುದನ್ನು ನಿಲ್ಲಿಸಿತು. ನಂತರ ಅವರು ಕಂಪನಿಯನ್ನು ಸಂಪರ್ಕಿಸಿದರು, ಓಲಾ ಮೆಕ್ಯಾನಿಕ್ ಅವರ ಸ್ಕೂಟರ್ ಅನ್ನು ಪರಿಶೀಲಿಸಿದರು. ಆದರೆ ಅದನ್ನು ಸರಿಪಡಿಸಲು ಯಾರೂ ಮುಂದಾಗಿಲ್ಲ ಎಂದು ವರದಿಗಳು ತಿಳಿಸಿವೆ.
ಓಲಾ ಕಂಪನಿಯ ಗ್ರಾಹಕ ಸೇವೆಗೆ ಸಚಿನ್ ಅನೇಕ ಕರೆಗಳನ್ನು ಮಾಡಿದರೂ ನಿರ್ದಿಷ್ಟ ಪರಿಹಾರದ ನೀಡದೇ ಬೇಕಾಬಿಟ್ಟಿ ಪ್ರತಿಕ್ರಿಯೆ ನೀಡಿದರೆಂದು ಸಚಿನ್ ಗಿಟ್ಟೆ ಕಿಡಿ ಕಾರಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಈ ಎಲ್ಲಾ ಬೆಳವಣಿಗೆಯಿಂದ ಕೋಪಗೊಂಡ ಮಹಾರಾಷ್ಟ್ರದ ವ್ಯಾಪಾರಿ ಪ್ರತಿಭಟನೆಯ ಸಂಕೇತವಾಗಿ ತನ್ನ ಓಲಾ ಸ್ಕೂಟರ್ ಅನ್ನು ಕತ್ತೆಗೆ ಕಟ್ಟಲು ನಿರ್ಧರಿಸಿದ್ದಾರೆ. ಸ್ಥಳೀಯ ಸುದ್ದಿ ವಾಹಿನಿ ಹಂಚಿಕೊಂಡಿರುವ ದೃಶ್ಯಾವಳಿಗಳು ಕತ್ತೆಯು ಸ್ಕೂಟರ್ ಅನ್ನು ಎಳೆಯುತ್ತಿರುವುದನ್ನು ತೋರಿಸಿದೆ, ಭಾನುವಾರ ನಡೆದ ಈ ಪ್ರತಿಭಟನೆಯು ಪರ್ಲಿ ಪಟ್ಟಣದಲ್ಲಿ ಸಂಚಲನ ಮೂಡಿಸಿತು. ಅಂದಿನಿಂದ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ.
"ಸಾವಿರಾರು ಕೋಟಿ ರೂಪಾಯಿ ವ್ಯವಹಾರ ನಡೆಸುವ ಓಲಾ ಕಂಪನಿಯಿಂದ ಗ್ರಾಹಕರಿಗೆ ಯಾವುದೇ ಆರ್ಥಿಕ ರಕ್ಷಣೆ ಇಲ್ಲ" ಎಂದು ಗಿಟ್ಟೆ ಓಲಾ ಕಂಪನಿಯ ದ್ವಿಚಕ್ರ ವಾಹನಗಳನ್ನು ಖರೀದಿಸಬೇಡಿ ಎಂದು ಇತರರನ್ನು ಒತ್ತಾಯಿಸಿದರು.
ವಾಹನಗಳಿಗೆ ಬೆಂಕಿ ತಗುಲಿರುವ ವರದಿಗಳ ನಂತರ, ಓಲಾ ಎಲೆಕ್ಟ್ರಿಕ್ ತನ್ನ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ 1,441 ಘಟಕಗಳನ್ನು ಏಪ್ರಿಲ್ 24 ರಂದು ಹಿಂಪಡೆಯುವುದಾಗಿ ಘೋಷಿಸಿತು, ಈ ಸ್ಕೂಟರ್ಗಳನ್ನು ಕಂಪನಿಯ ಸೇವಾ ಎಂಜಿನಿಯರ್ಗಳು ಮೌಲ್ಯಮಾಪನ ಮಾಡುತ್ತಾರೆ ಮತ್ತು ಎಲ್ಲಾ ಬ್ಯಾಟರಿ ವ್ಯವಸ್ಥೆಗಳು, ಥರ್ಮಲ್ ಸಿಸ್ಟಮ್ಗಳು ಮತ್ತು ಸುರಕ್ಷತಾ ವ್ಯವಸ್ಥೆಗಳನ್ನು ಸಂಪೂರ್ಣವಾಗಿ ಪರಿಶೀಲಿಸಲಾಗುತ್ತದೆ ಎಂದು ಕಂಪನಿ ಹೇಳಿದೆ.
ಪುಣೆಯಲ್ಲಿ ಮಾರ್ಚ್ 26 ರಂದು ಸಂಭವಿಸಿದ ಬೆಂಕಿಯ ತನಿಖೆಯು ಇನ್ನೂ ಮುಂದುವರೆದಿದೆ ಎಂದು ಸಂಸ್ಥೆ ತಿಳಿಸಿದೆ. ಪ್ರಾಥಮಿಕ ಮೌಲ್ಯಮಾಪನದ ಪ್ರಕಾರ ಇದು ಒಂದು ಪ್ರತ್ಯೇಕ ಘಟನೆ ಎಂದು ಹೇಳಿದೆ.
ಬೇಗ ನ್ಯಾಯ ಒದಗಿಸಿ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಳ್ಳಲಾದ ವಿಡಿಯೋಗೆ ಜವಾಬ್ದಾರಿಯುತ ಉತ್ತರವನ್ನು ಪಡೆಯುವ ಭರವಸೆಯಲ್ಲಿ ಅನೇಕ ಕಾಮೆಂಟರ್ಗಳು ಓಲಾ ಕಂಪನಿಯನ್ನು ಟ್ಯಾಗ್ ಮಾಡಿದ್ದಾರೆ. ಅನೇಕ ಜನರು ಎಲೆಕ್ಟ್ರಿಕ್ ವಾಹನಗಳ ಗುಣಮಟ್ಟವನ್ನು ಪ್ರಶ್ನಿಸಿದ್ದಾರೆ, ಇತರರು ಗಿಟ್ಟೆ ಅವರ ಪುನರಾವರ್ತಿತ ವಿನಂತಿಗಳಿಗೆ ಪ್ರತಿಕ್ರಿಯೆಯನ್ನು ವಿಳಂಬಗೊಳಿಸುವುದಕ್ಕಾಗಿ ಕಂಪನಿಯನ್ನು ದೂಷಿಸಿದ್ದಾರೆ. ಬೇಗ ಅವರಿಗೆ ನ್ಯಾಯ ಒದಗಿಸುವಂತೆ ಒತ್ತಡ ಹಾಕಿದ್ದಾರೆ.
Published by:guruganesh bhat
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ