ಮಕ್ಕಳಿ (Childrens) ಗೋಸ್ಕರ ತಾಯಿ (Mother) ಏನೇನೆಲ್ಲ ತ್ಯಾಗ (Sacrifice) ಮಾಡುತ್ತಾಳೆ ಅನ್ನೋದನ್ನು ನೋಡುತ್ತೇವೆ. ಮಕ್ಕಳು ಚೆನ್ನಾಗಿರಬೇಕು, ಚೆನ್ನಾಗಿ ಓದಬೇಕು, ಅವರು ಖುಷಿಯಾಗಿರಬೇಕು, ತಮ್ಮ ಜೀವನದ ಯಾವುದೇ ಕರಾಳ ಚಾಯೆ ಅವರ ಮೇಲೆ ಬೀಳದೇ ಇರಲಿ ಅಂತೆಲ್ಲ ಪ್ರಯತ್ನ ಪಡ್ತಾಳೆ. ಇಂಥ ಸಾಕಷ್ಟು ತಾಯಂದಿರನ್ನ ನಾವು ನಮ್ಮ ಸುತ್ತಮುತ್ತಲೇ ನೋಡುತ್ತೇವೆ. ಅದಕ್ಕೆ ಮತ್ತೊಂದು ಸೇರ್ಪಡೆ ಒಡಿಶಾ (Odisha) ದ ಲಲಿತಾ ಸಿಂಗ್ (Lalitha Sing). ಮಹಿಳೆಯರಿಗೆ ಶಿಕ್ಷಣ ಸಿಗದೇ ಇರುವುದು ಒಂದು ಶಾಪವೇ ಹೌದು. ಓದಿದ ಮಹಿಳೆ ತನ್ನ ಕಾಲ ಮೇಲೆ ನಿಲ್ಲಲು, ಸ್ವಾವಲಂಬಿಯಾಲು ಹಿಂಜರಿಯೋದಿಲ್ಲ.
ಜೀವನ ನಡೆಸೋಕೆ ಕಷ್ಟವಾಗಿತ್ತು!
ಆದ್ರೆ ಶಿಕ್ಷಣವೇ ಇಲ್ಲದೇ ಹೋದರೆ ಜೀವಪೂರ್ತಿ ಯಾರನ್ನಾದರೂ ಅವಲಂಭಿಸಲೇ ಬೇಕು. ಲಲಿತಾ ಜೀವನ ಇದಕ್ಕಿಂತ ಭಿನ್ನವಾಗೇನೂ ಇರಲಿಲ್ಲ. ಬದಲಾಗಿ ಗಂಡ ಕೂಡ ತೀರಿಕೊಂಡಿದ್ದು ಜೀವನ ನಡೆಸೋಕೆ ಕಷ್ಟವಾಗಿತ್ತು. ಆದ್ರೆ ತನ್ನ ಮೂವರು ಮಕ್ಕಳಿಗಾಗಿ ಆಕೆ ದುಡಿಯೋಕೆ ಆರಂಭಿಸಿದಳು ಈಗ ತನ್ನಂತೆಯೇ ಕೆಲವು ಜನರಿಗೆ ಕೆಲಸ ನೀಡಿದ್ದಾರೆ.
ಕಷ್ಟದಲ್ಲಿ ನೊಂದು ಬೆಂದಿದ್ದ ದೇಬಿ ಸಿಂಗ್!
ಅಂದಹಾಗೆ ಲಲಿತಾ ದೇಬಿ ಸಿಂಗ್ ಒಡಿಶಾದವರು. ಇಲ್ಲಿನ ರಾಯಗಢದ ನಿವಾಸಿ. ಹುಟ್ಟಿದ ಮನೆಯಲ್ಲಿ ತೀವ್ರ ಬಡತನ. ಹೀಗಾಗಿ ಓದಿದ್ದು ಬರೀ 8 ನೇ ಕ್ಲಾಸ್ ವರೆಗೆ ಮಾತ್ರ. ಜೊತೆಗೆ ಆಗೆಲ್ಲ ಅಲ್ಲಿ ಬಾಲ್ಯವಿವಾಹ ಕಾಮನ್ ಆಗಿತ್ತು. ಹಾಗಾಗಿ 14 ವರ್ಷದವಳಿದ್ದಾಗಲೇ ಮದುವೆ ಮಾಡಿ ಕಳುಹಿಸಿಬಿಟ್ಟಿದ್ದರು. ಆದ್ರೆ ಮುಂದಿನ 10 ವರ್ಷ ಎಲ್ಲವೂ ಚೆನ್ನಾಗಿಯೇ ನಡೆಯಿತು. ಗಂಡನಿಗೆ ಒಳ್ಳೆಯ ಪತ್ನಿಯಾಗಿ, ಒಳ್ಳೆಯ ಗೃಹಿಣಿಯಾಗಿ ಹಾಗೂ ಮೂವರು ಮಕ್ಕಳಿಗೆ ತಾಯಿಯಾಗಿ ಜೀವನ ನಡೆಸಿಕೊಂಡು ಹೋಗುತ್ತಿದ್ದಳು.
ಗಂಡ ತೀರಿಕೊಂಡ ಬಳಿಕ ಎಲ್ಲವೂ ಬದಲಾಯ್ತು
1998ರಲ್ಲಿ ಲಲಿತಾ ಪತಿ ಅನಿರೀಕ್ಷಿತವಾಗಿ ತೀರಿಕೊಳ್ಳುತ್ತಾರೆ. ಅಲ್ಲಿಯವರೆಗೂ ಸರಿಯಾಗಿಯೇ ನಡೆಯುತ್ತಿದ್ದ ಜೀವನ ಒಮ್ಮೆಲೇ ಬಿರುಗಾಳಿಗೆ ಸಿಕ್ಕಂತಾಯಿತು. "ನಾನು ಆಘಾತಕ್ಕೊಳಗಾಗಿದ್ದೆ. ಜೀವನಕ್ಕಿದ್ದ ಒಂದೇ ಆಸರೆಯನ್ನೂ ಕಳೆದುಕೊಂಡೆ. ಮೂವರು ಸಣ್ಣ ಮಕ್ಕಳೊಂದಿಗೆ ಏನು ಮಾಡಬೇಕೆಂದೇ ತಿಳಿಯಲಿಲ್ಲ. ಕುಟುಂಬ ಸದಸ್ಯರು ಕೆಲವು ತಿಂಗಳು ಸಹಾಯ ಮಾಡಿದರೂ, ಅದು ತಾತ್ಕಾಲಿಕವಾಗಿತ್ತು ಎಂದು ನೆನಪಿಸಿಕೊಳ್ಳುತ್ತಾರೆ ಲಲಿತಾ.
ಆದ್ರೆ ಜೀವನಕ್ಕಾಗಿ ಏನಾದರೂ ಮಾಡಲೇ ಬೇಕಲ್ಲ.. ಹಾಗಾಗಿ ಲಲಿತಾ ಹಳ್ಳಿಯೊಳಗೆ ಹಲವಾರು ದೈನಂದಿನ ಕೂಲಿ ಕೆಲಸಗಳನ್ನು ಮಾಡಲು ಪ್ರಾರಂಭಿಸಿದರು. ಕೆಲಸದ ನಂತರ ಹೊಲಿಗೆಯಲ್ಲಿ ತೊಡಗಿದರು. ಆಕೆ ದಣಿದಿದ್ದರೂ ಸಹ, ಕೂರಲಿಲ್ಲ. ತನ್ನ ಮಕ್ಕಳು ತನ್ನಂತೆ ಬಳಲಬಾರದು. ಅವರು ಎಷ್ಟು ಓದುತ್ತಾರೋ.. ಅಷ್ಟು ಓದಿಸಬೇಕು ಎಂಬ ಒಂದೇ ಧ್ಯೇಯವಿಟ್ಟುಕೊಂಡು ಹಗಲು ರಾತ್ರಿ ದುಡಿದರು.
ಕೂಲಿ ಕೆಲಸದಿಂದ ಜೀವನ ನಡೆಸಿದ್ದರು!
ಆದ್ರೆ ಖರ್ಚು ವೆಚ್ಚ ಹೆಚ್ಚಾಗುತ್ತಿದ್ದಂತೆ ಕೂಲಿ ಕೆಲಸದಿಂದ ಜೀವನ ನಡೆಸುವುದು ಕಷ್ಟ ಎಂಬುದನ್ನು ಲಲಿತಾ ಅರ್ಥಮಾಡಿಕೊಂಡರು."ನಾನು ಹೈಸ್ಕೂಲ್ ಅನ್ನು ಪೂರ್ಣಗೊಳಿಸದ ಕಾರಣ ಪೂರ್ಣ ಸಮಯದ ಕೆಲಸವನ್ನು ಪಡೆಯುವ ಅವಕಾಶವಿರಲಿಲ್ಲ. ಮತ್ತೊಮ್ಮೆ ನನ್ನ ಭವಿಷ್ಯವು ಪ್ರಶ್ನಾರ್ಥಕ ಚಿಹ್ನೆಯಾಗಿತ್ತು” ಎಂದು ಅವರು ಹೇಳುತ್ತಾರೆ.
ಲಲಿತಾ ಜೀವನದ ಟರ್ನಿಂಗ್ ಪಾಯಿಂಟ್
2014ರಲ್ಲಿ ಕೆಲವು ತಿಂಗಳುಗಳ ಕಾಲ ಲಲಿತಾ ಪೇಪರ್ ಪ್ಲೇಟ್ ತಯಾರಿಸುವ ಕಾರ್ಖಾನೆಯಲ್ಲಿ ದಿನಗೂಲಿಯಾಗಿ ಕೆಲಸಕ್ಕೆ ಸೇರಿಕೊಂಡರು. ಅಲ್ಲಿ ಅವರು ಕೆಲಸವನ್ನು ಕಲಿತುಕೊಂಡರು. ಕಾರ್ಖಾನೆಯಲ್ಲಿ ಯಂತ್ರಗಳನ್ನು ಹೇಗೆ ನಿರ್ವಹಿಸುವುದನ್ನು ಕಲಿತರು. ಇದಾದ ಬಳಿಕ ಉತ್ತಮ ಆದಾಯವನ್ನು ಪಡೆಯಲು ತನ್ನ ಸ್ವಂತ ಉದ್ಯಮವನ್ನು ಪ್ರಾರಂಭಿಸುವ ಬಗ್ಗೆ ಯೋಚಿಸಿದರು. ಅದರಲ್ಲಿ ಪೇಪರ್ ಪ್ಲೇಟ್ ತಯಾರಿಸುವ ಕಂಪನಿಯು ಒಳ್ಳೆಯ ಆಯ್ಕೆ ಎಂಬುದಾಗಿ ಅವರು ನಿರ್ಧರಿಸಿದರು.
ಇದನ್ನೂ ಓದಿ: ಈ ಹೂವಿಗೆ ವರ್ಷ ಪೂರ್ತಿ ಡಿಮ್ಯಾಂಡ್, ಇದನ್ನು ಬೆಳೆದೆರೆ ಲೈಫ್ ಜಿಂಗಾಲಾಲಾ!
"ಪ್ಲೇಟ್ ಗಳನ್ನು ತಯಾರಿಸಲು ತಾಜಾ ಕಾಗದವನ್ನು ತೆಗೆದುಕೊಳ್ಳುವ ಬದಲು, ಅವುಗಳಿಗೆ ಪತ್ರಿಕೆ ಮತ್ತು ನಿಯತಕಾಲಿಕೆಗಳು ಸೇರಿದಂತೆ ತ್ಯಾಜ್ಯ ಕಾಗದವನ್ನು ಬಳಸಲು ನಾನು ನಿರ್ಧರಿಸಿದೆ. 2016 ರಲ್ಲಿ, ನನ್ನ ಕುಟುಂಬದಿಂದ 15,000 ರೂಪಾಯಿ ಸಾಲ ಪಡೆದ ನಂತರ ನಾನು ರಾಯಗಡದ ಅಮಲಭಟದಲ್ಲಿ ನನ್ನ ಕಂಪನಿ ಜೈ ಹನುಮಾನ್ ಪೇಪರ್ ಪ್ಲೇಟ್ ಅನ್ನು ನೋಂದಾಯಿಸಿದೆ ” ಎಂದು ಲಲಿತಾ ಹೇಳುತ್ತಾರೆ.
ಆದ್ರೆ ಅಷ್ಟು ಹಣ ಸಾಕಾಗುವುದಿಲ್ಲ ಎಂದು ಕೆಲವೇ ತಿಂಗಳುಗಳಲ್ಲಿ ಗೊತ್ತಾಗಿಹೋಯಿತು. ಈ ಬಂಡವಾಳವು ಯಂತ್ರೋಪಕರಣಗಳನ್ನು ಖರೀದಿಸಲು, ಬಾಡಿಗೆಗೆ ನೀಡಲು ಮತ್ತು ಜನರನ್ನು ನೇಮಿಸಿಕೊಳ್ಳಲು ಸಾಕಾಗುವುದಿಲ್ಲ ಎಂದು ಅವರು ಅರಿತುಕೊಂಡರು.
ಲಲಿತಾ ನೆರವಿಗೆ ಬಂದ ಭಾರತೀಯ ಯುವ ಶಕ್ತಿ ಟ್ರಸ್ಟ್
"ನಾನು ಹಲವಾರು ಬ್ಯಾಂಕ್ಗಳಿಂದ ಸಾಲ ಸಿಗುತ್ತಾ ಎಂದು ಹುಡುಕಲು ಪ್ರಾರಂಭಿಸಿದೆ. ಆದರೆ ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವುದು ಹಾಗೂ ಯಾವುದೇ ಬೇರೆ ಆದಾಯವಿಲ್ಲದೇ ಇರೋದ್ರಿಂದ ನನಗೆ ಸಾಲ ಸಿಗಲಿಲ್ಲ. ಬ್ಯಾಂಕ್ ಗಳಲ್ಲಿ ನನ್ನ ವಿನಂತಿಯನ್ನು ತಿರಸ್ಕರಿಸಲಾಯ್ತು. ಆಗ ನಾನು ಸ್ನೇಹಿತನ ಮೂಲಕ ಭಾರತೀಯ ಯುವ ಶಕ್ತಿ ಟ್ರಸ್ಟ್ (BYST) ನೊಂದಿಗೆ ಸಂಪರ್ಕಕ್ಕೆ ಬಂದೆ ಎಂದು ಅವರು ಹೇಳುತ್ತಾರೆ.
BYST ಒಂದು ಲಾಭರಹಿತ ಸಂಸ್ಥೆಯಾಗಿದ್ದು, ಹಣಕಾಸಿನ ಸಹಾಯ ಮತ್ತು ಮಾರ್ಗದರ್ಶನವನ್ನು ನೀಡುವ ಮೂಲಕ ವ್ಯಾಪಾರ ಕಲ್ಪನೆಗಳನ್ನು ಲಾಭದಾಯಕ ಉದ್ಯಮಗಳಾಗಿ ಪರಿವರ್ತಿಸಲು ವೇದಿಕೆಯನ್ನು ಒದಗಿಸುತ್ತದೆ. ಟ್ರಸ್ಟಿಗಳ ಮಂಡಳಿಯಲ್ಲಿ ಸಿ ಕೆ ಬಿರ್ಲಾ ಗ್ರೂಪ್ನ ಅಧ್ಯಕ್ಷ ಸಿ ಕೆ ಬಿರ್ಲಾ ಮತ್ತು ಮಾಜಿ ಅಧ್ಯಕ್ಷ ಆರ್ ವೆಂಕಟರಾಮನ್ ಅವರ ಪುತ್ರಿ ಲಕ್ಷ್ಮಿ ವಿ ವೆಂಕಟೇಶನ್ ಸೇರಿದ್ದಾರೆ.
ದಿನಕ್ಕೆ 10 ಸಾವಿರ ಪ್ಲೇಟ್ ಉತ್ಪಾದನೆ
ಸದ್ಯ ಪೇಪರ್ ಪ್ಲೇಟ್ ತಯಾರಿಸುವ ಘಟಕವು ದಿನಕ್ಕೆ 10,000 ಪ್ಲೇಟ್ಗಳನ್ನು ತಯಾರಿಸುತ್ತದೆ. ಲಲಿತಾ ಅವರ ಘಟಕವು ಜಿಲ್ಲೆಯ ಎಲ್ಲಾ ಹತ್ತಿರದ ಅಂಗಡಿಗಳು ಮತ್ತು ಕಾರ್ಯಕ್ರಮಗಳಿಗೆ ಪ್ಲೇಟ್ಗಳನ್ನು ಪೂರೈಸುತ್ತದೆ. ಅಕ್ಕಪಕ್ಕದ ಜಿಲ್ಲೆಗಳಿಂದಲೂ ಖರೀದಿಗಾಗಿ ಗ್ರಾಹಕರು ಬರುತ್ತಾರೆ. ಹೀಗಾಗಿ ಇಂದು ಜೈ ಹನುಮಾನ್ ಪೇಪರ್ ಪ್ಲೇಟ್ ಲಕ್ಷಾಂತರ ಆದಾಯ ಗಳಿಸುತ್ತದೆ. "ಲಾಕ್ಡೌನ್ ಅವಧಿಯಲ್ಲಿಯೂ ಸಹ, ಈ ಆದಾಯವು ಸ್ಥಿರವಾಗಿ ಉಳಿಯಿತು ಮತ್ತು ಉದ್ಯೋಗಿಗಳು ತಮ್ಮ ಕೆಲಸವನ್ನು ಕಳೆದುಕೊಳ್ಳಲಿಲ್ಲ ಎನ್ನುತ್ತಾರೆ ಲಲಿತಾ.
ತನ್ನಂಥ ಮಹಿಳೆಯರಿಗೆ ಸಹಾಯ ಮಾಡುವ ಗುರಿ
ಈ ಉದ್ಯಮದಲ್ಲಿ ಲಾಭ ಗಳಿಸುವುದರ ಹೊರತಾಗಿ, ತನ್ನಂತಹವರಿಗೆ ಉದ್ಯೋಗ ಒದಗಿಸುವುದು ತನ್ನ ಪ್ರಮುಖ ಉದ್ದೇಶವಾಗಿತ್ತು ಎನ್ನುತ್ತಾರೆ ಲಲಿತಾ. “ನಾನು 24 ನೇ ವಯಸ್ಸಿನಲ್ಲಿ ವಿಧವೆಯಾಗಿದ್ದೆ. ಶಿಕ್ಷಣದ ಕೊರತೆ ಮತ್ತು ಒಂಟಿ ತಾಯಂದಿರಿಗೆ ಅಂಟುವ ಸಾಮಾಜಿಕ ಕಳಂಕ ನಾನು ಜೀವನದಲ್ಲಿ ನಿರಂತರವಾಗಿ ಎದುರಿಸುತ್ತಿರುವ ಸಮಸ್ಯೆಗಳಾಗಿವೆ. ಕಂಪನಿಯನ್ನು ಕಟ್ಟುವಾಗ ಸುತ್ತಮುತ್ತಲಿರುವ ಅಶಿಕ್ಷಿತರನ್ನು ನೇಮಿಸಿಕೊಳ್ಳಬೇಕು ಎಂದೇ ನಿರ್ಧರಿಸಿದ್ದೆ ಎಂಬುದಾಗಿ ಹೇಳಿರುತ್ತಾರೆ 48 ವರ್ಷ ವಯಸ್ಸಿನ ಲಲಿತಾ.
ಇದನ್ನೂ ಓದಿ: ಕೇವಲ 70 ರೂಪಾಯಿಯಲ್ಲಿ ಮನೆಯಲ್ಲಿಯೇ ಮಾಡಿ ಮಶ್ರೂಮ್ ಕೃಷಿ!
ಜೈ ಹನುಮಾನ್ ಪೇಪರ್ ಪ್ಲೇಟ್ಸ್ನ ಪೂರ್ಣ ಸಮಯದ ಉದ್ಯೋಗಿಯೊಬ್ಬರು “ನನಗಿಂತ ಹೆಚ್ಚು ವಯಸ್ಸಾದ ವ್ಯಕ್ತಿಯೊಂದಿಗೆ 15 ನೇ ವಯಸ್ಸಿನಲ್ಲಿ ನನ್ನ ಮದುವೆ ಮಾಡಲಾಯ್ತು. ಮೂರು ವರ್ಷಗಳಲ್ಲಿ, ನಾನು ವಿಧವೆಯಾದೆ. ನನಗೆ ಒಬ್ಬಳು ಮಗಳಿದ್ದಾಳೆ. ನಾನು ಅವಿದ್ಯಾವಂತಳಾದ್ದರಿಂದ ಕೆಲಸ ಸಿಗುವುದು ಕಷ್ಟವಾಗಿತ್ತು. ಜೊತೆಗೆ ಕೊರೋನಾ ಸಮಯದಲ್ಲಿ ಇದು ಇನ್ನೂ ಕಷ್ಟವಾಗಿತ್ತು. 2020 ರಲ್ಲಿ ಲಲಿತಾ ದೀದಿ ಅವರು ನನ್ನನ್ನು ಘಟಕದಲ್ಲಿ ಅರೆಕಾಲಿಕ ಆಧಾರದ ಮೇಲೆ ಮತ್ತು ನಂತರ ಪೂರ್ಣಾವಧಿಯಲ್ಲಿ ನೇಮಿಸಿಕೊಂಡರು. ನಾನು ಇಲ್ಲಿ 12,000 ರೂ.ವರೆಗೆ ಗಳಿಸುತ್ತೇನೆ” ಎಂಬುದಾಗಿ ಹೇಳುತ್ತಾರೆ.
25 ಲಕ್ಷ ವಾರ್ಷಿಕ ವಹಿವಾಟು ನಡೆಸುವ ಮೂಲಕ, ಲಲಿತಾ ಅವರು ಕಾಗದದ ಹಾಳೆ ತಯಾರಿಸುವ ಯಂತ್ರವನ್ನು ಸ್ಥಾಪಿಸಲು ಸಿದ್ಧರಾಗಿದ್ದಾರೆ. ಏಕೆಂದರೆ ಘಟಕವು ಕೆಲವೊಮ್ಮೆ ಗುಣಮಟ್ಟದ ಕಚ್ಚಾ ವಸ್ತುಗಳ ಅಲಭ್ಯತೆಯನ್ನು ಎದುರಿಸುತ್ತಿದೆ. ಮಧ್ಯಮ ಉದ್ಯಮ ವರ್ಗದ ಅಡಿಯಲ್ಲಿ ಘಟಕವನ್ನು ನೋಂದಾಯಿಸಲಾಗಿದೆ. ಈ ಮಧ್ಯೆ 2020 ರಲ್ಲಿ, ಅವರು ಕ್ಷೇತ್ರದಲ್ಲಿನ ಸಾಧನೆಗಾಗಿ ವಿಜಯಲಕ್ಷ್ಮಿ ದಾಸ್ ವಾಣಿಜ್ಯೋದ್ಯಮ ಪ್ರಶಸ್ತಿಯನ್ನು ಪಡೆದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ