National Family Health Survey: ಭಾರತೀಯರ ಫಲವತ್ತತೆ ದರ ಇಳಿಕೆ! 20 ವರ್ಷಗಳ ನಂತರ ಭಾರತದಲ್ಲಿ ಕೆಲಸಕ್ಕೆ ಜನರೇ ಸಿಗಲ್ವಾ?
ಸರಳವಾಗಿ ವಿವರಿಸುವುದಾದರೆ ಇದು ಹೀಗೇ ಮುಂದುವರೆದರೆ ನಾವು 20 ವರ್ಷಗಳ ನಂತರ ದೇಶದಲ್ಲಿ ದುಡಿಯುವ ಯುವ ವಯಸ್ಸಿನ ಜನರ ಸಂಖ್ಯೆ ಅತ್ಯಂತ ಕಡಿಮೆಯಾಗುವ ಅಪಾಯವಿದೆ. ಈ ಅಪಾಯ ಸಾರುವ ಅಂಕಿ ಅಂಶಗಳು ಇಲ್ಲಿವೆ.
ದೆಹಲಿ: ದೇಶದ 6.37 ಲಕ್ಷಕ್ಕೂ ಹೆಚ್ಚು ಮನೆಗಳಲ್ಲಿ ನಡೆದ ಐದನೇ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯಿಂದ (National Family Health Survey) ಹಲವು ಆಘಾತಕಾರಿ ಸಂಗತಿಗಳು ವರದಿಗೊಂಡಿವೆ. ಭಾರತೀಯರ ಒಟ್ಟು ಫಲವತ್ತತೆ ದರ (TFR) ಕ್ಷೀಣಿಸಿದ್ದು ಈಮುಂಚಿನ ಫಲವತ್ತತೆ ದರವಾಗಿದ್ದ 2.1 ರಿಂದ 2.0 ಕ್ಕೆ ಕುಸಿದಿದೆ. ಕಳೆದ ಐದು ವರ್ಷಗಳಲ್ಲಿ ಈ ಬದಲಾವಣೆಯಾಗಿದ್ದು, ನಗರ ಪ್ರದೇಶಗಳಲ್ಲಿ ಫಲವತ್ತತೆ ದರ ಇನ್ನೂ ಕಡಿಮೆ ಅಂದರೆ, 1.6 ಮಾತ್ರ ಇದೆ ಎಂಬ ಸಂಗತಿ ಸಮೀಕ್ಷೆಯಲ್ಲಿ ವರದಿಯಾಗಿದೆ. ಫಲವತ್ತತೆ ದರದ (Fertility Rate) ಕುರಿತ ಸಮಾಜದ ಮೇಲೆ ಬೀರುವ ಪರಿಣಾಮವನ್ನು ಸರಳವಾಗಿ ವಿವರಿಸುವುದಾದರೆ ಇದು ಹೀಗೇ ಮುಂದುವರೆದರೆ ನಾವು 20 ವರ್ಷಗಳ ನಂತರ ದೇಶದಲ್ಲಿ ದುಡಿಯುವ ಯುವ ವಯಸ್ಸಿನ ಜನರ ಸಂಖ್ಯೆ ಅತ್ಯಂತ ಕಡಿಮೆಯಾಗುವ ಅಪಾಯವಿದೆ.
ಐದನೇ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯಲ್ಲಿ ಬಹಿರಂಗಗೊಂಡಿರುವ ಇನ್ನೊಂದು ಆಘಾತಕಾರಿ ಸಂಗತಿಯೆಂದರೆ ಇದೇ ಐದು ವರ್ಷಗಳಲ್ಲಿ, ಉದ್ಯೋಗ ನಡೆಸುತ್ತಿದ್ದ 2 ಕೋಟಿ ಮಹಿಳೆಯರು ತಮ್ಮ ಕೆಲಸ ತೊರೆದಿದ್ದಾರೆ. ಕೆಲವರು ಕೆಲಸ ಬಿಟ್ಟರೆ ಇನ್ನು ಕೆಲವರು ಕೆಲಸ ಹುಡುಕುವುದನ್ನೇ ನಿಲ್ಲಿಸಿದ್ದಾರೆ.
ಗ್ರಾಮೀಣ-ನಗರ ವಿಭಜನೆ 2019-21ರಲ್ಲಿ ಗ್ರಾಮೀಣ ಪ್ರದೇಶದ ಮಹಿಳೆಯರು 2.1 ಫಲವತ್ತತೆ ದರವನ್ನು ಹೊಂದಿದ್ದಾರೆ. ಅದೇ ನಗರ ಪ್ರದೇಶದಲ್ಲಿ ಫಲವತ್ತತೆ ದರ 1.6. ಹಿಂದಿನ ಅಂಕಿಅಂಶಗಳನ್ನು ನೋಡಿದರೆ ಗ್ರಾಮೀಣ ಪ್ರದೇಶದ ಮಹಿಳೆಯರಲ್ಲಿ TFR ಅಥವಾ ಫಲವತ್ತತೆ ದರ 1992-93ರಲ್ಲಿ 3.7 ಇತ್ತು.
ಹದಿಹರೆಯದಲ್ಲಿ ಗರ್ಭಧಾರಣೆ ಅಂಕಿ ಅಂಶ ಇನ್ನಷ್ಟು ಆತಂಕಕಾರಿ! ಹದಿಹರೆಯದ ಗರ್ಭಧಾರಣೆಯು ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಾಗಿದೆ. 15-19 ವರ್ಷ ವಯಸ್ಸಿನ ಮಹಿಳೆಯರು ಸುಮಾರು ಎಂಟು ಪ್ರತಿಶತ ಹೊಂದಿದ್ದಾರೆ. ಆದರೆ ನಗರಗಳಲ್ಲು ಮಹಿಳೆಯರಿಗೆ ಅದೇ ಹದಿಹರೆಯದಲ್ಲೇ ಗರ್ಭಧಾರಣೆ ಹೊಂದುವವರ ಪ್ರಮಾಣ 3.8 ಪ್ರತಿಶತದಷ್ಟಿದೆ.
20 ವರ್ಷಗಳಲ್ಲಿ ಏನಾಗಲಿದೆ? ನಮ್ಮ ಆರ್ಥಿಕತೆಯ ಬೆಳವಣಿಗೆಯನ್ನು ಹೆಚ್ಚಿಸಲು ಯಾವಾಗಲೂ ಬಳಕೆಯ ವೆಚ್ಚವನ್ನು ಅವಲಂಬಿಸಲಾಗುತ್ತದೆ. ಸರಳವಾಗಿ ಹೇಳುವುದಾದರೆ, ನಮ್ಮ ಆರ್ಥಿಕತೆಯ ಬಳಕೆ ಮತ್ತು ಹೂಡಿಕೆಯ ಭಾಗಗಳನ್ನು ಬೆಳೆಸಲು ನಮಗೆ ಹೆಚ್ಚು ಕೆಲಸ ಮಾಡುವ ಯುವಜನರು ಮತ್ತು ಹೆಚ್ಚು ಜನರು ಗಳಿಸುವ ಮತ್ತು ಖರ್ಚು ಮಾಡುವ ಅಗತ್ಯವಿದೆ. 20 ವರ್ಷಗಳಲ್ಲಿ ಯುವ ಉದ್ಯೋಗಿಗಳ ಸಂಖ್ಯೆಯಲ್ಲಿನ ಕಡಿತದೊಂದಿಗೆ ನಮ್ಮ ಬೃಹತ್ ಗಾತ್ರದ ದೇಶಕ್ಕೆ ಅರ್ಥಪೂರ್ಣ ಬೆಳವಣಿಗೆಯನ್ನು ಉಳಿಸಿಕೊಳ್ಳುವ ಸವಾಲು ಮುಂದಿನ ದಿನಗಳಲ್ಲಿ ಇನ್ನಷ್ಟು ಎದುರಾಗಲಿದೆ ಎಂಬ ಆತಂಕ ಈ ಸಮೀಕ್ಷೆಯಿಂದ ಹೊರಹೊಮ್ಮಿದೆ.
ರಿಸರ್ವ್ ಬ್ಯಾಂಕ್ ಇಂಡಿಯಾ ಇತ್ತೀಚೆಗೆ ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಪ್ರಕಾರ ಮುಂದಿನ ದಶಕದಲ್ಲಿ ನಾವು 7.5 ಪ್ರತಿಶತದಷ್ಟು ಬೆಳವಣಿಗೆ ಸಾಧಿಸಿದರೆ 2034-35 ರ ವೇಳೆಗೆ ಭಾರತದ ಆರ್ಥಿಕತೆಯು COVID-ಸಂಬಂಧಿತ ನಷ್ಟದಿಂದ ಚೇತರಿಸಿಕೊಳ್ಳಲಿದೆ. ಆದರೆ ಹೀಗೆ ಬೆಳವಣಿಗೆ ಸಾಧಿಸಲು ಮಹಿಳೆಯರು ಉದ್ಯೋಗ ಕ್ಷೇತ್ರಕ್ಕೆ ಮಹಿಳೆಯರು ಇನ್ನಷ್ಟು ಸೇರಬೇಕಿದೆ ಎಂದು ರಿಸರ್ವ್ ಬ್ಯಾಂಕ್ ತಿಳಿಸಿತ್ತು.
ಕೆಲಸದಲ್ಲಿ ಮಹಿಳೆಯರ ಭಾಗವಹಿಸುವಿಕೆಯಲ್ಲಿ ತೀವ್ರ ಕುಸಿತವನ್ನು ನಾವು ಈಗ ನೋಡುತ್ತಿದ್ದೇವೆ. ಕಳೆದ ಐದು ವರ್ಷಗಳಲ್ಲಿ 2 ಕೋಟಿ ಮಹಿಳೆಯರು ಉದ್ಯೋಗ ತ್ಯಜಿಸಿದ್ದಾರೆ.
ಹೆಣ್ಣುಮಕ್ಕಳಿಗೆ ಪ್ರಾಥಮಿಕ ಹಂತದಿಂದ ತೃತೀಯ ಹಂತದವರೆಗೆ ಆರೋಗ್ಯ ಮತ್ತು ಶಿಕ್ಷಣದ ದಾಖಲಾತಿ ಕ್ಷೇತ್ರಗಳಲ್ಲಿ ಹಲವು ಉತ್ತಮ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗಿದೆ. ಆದರೂ ಮಹಿಳೆಯರು ಉದ್ಯೋಗ ರಂಗದಲ್ಲಿ ತೀವ್ರವಾಗಿ ಮುಖಮಾಡುತ್ತಿಲ್ಲ ಎಂಬುದು ಆತಂಕಕಾರಿಯಾಗಿದೆ.
Published by:guruganesh bhat
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ