ರಾಯಲ್ ಎನ್ಫೀಲ್ಡ್ (Royal Enfield) ಪ್ರತಿಷ್ಠೆಯ ಸಂಕೇತ. ಈ ಬೈಕ್ ಹೊಂದಿರುವವರಿಗೆ ಸಮಾಜದಲ್ಲಿ ವಿಶೇಷ ಸ್ಥಾನ. ಅದರಲ್ಲೂ ಯುವಜನತೆ ರಾಯಲ್ ಎನ್ಫೀಲ್ಡ್ ಎಂದರೆ ಬೆರಗುಗಣ್ಣಿನಿಂದ ನೋಡುತ್ತಾರೆ. ಇವತ್ತಿಗೂ ಹೊಸ ವರ್ಷನ್ಗಳಲ್ಲಿ ಅಪ್ಗ್ರೇಡ್ (Upgrade) ಆಗಿ ಬರುತ್ತಿರುವ ಈ ಮೋಟಾರ್ ಸೈಕಲ್ (Motor Cycle) ಸಾಕಷ್ಟು ಏಳು ಬೀಳು ಕಂಡಿದೆ. ಮಾರುಕಟ್ಟೆಯ ಹೊಡೆತ, ಬೆಲೆ ಈ ಎಲ್ಲಾ ವಿಚಾರಗಳನ್ನು ಮೀರಿ ಇಂದಿಗೂ ರಾಯಲ್ ಪರಂಪರೆ ಮುಂದುವರೆದಿದೆ. ಇದಕ್ಕೆ ಕಾರಣ ರಾಯಲ್ ಕುಟುಂಬದ ಏಕೈಕ ವ್ಯಕ್ತಿ. ಇನ್ನೇನು ರಾಯಲ್ ಗ್ಯಾರೇಜ್ಗೆ ಎನ್ನುವಷ್ಟರಲ್ಲಿ ಮತ್ತೆ ಶೋರೂಂ (Showroom) ದಾರಿಗೆ ಬಂದ ರೋಚಕ ಕಥೆಯೇ ಆಸಕ್ತಿಕರವಾಗಿದೆ.
ರಾಯಲ್ ಲಕ್ ಬದಲಾಯ್ತು!
ಈ ಅತ್ಯಂತ ಹಳೆಯ ಜಾಗತಿಕ ಮೋಟಾರ್ ಬ್ರ್ಯಾಂಡ್ ಒಂದು ಕಾಲದಲ್ಲಿ ತನ್ನ ಪಯಣ ನಿಲ್ಲಿಸಲು ಸಜ್ಜಾಗಿತ್ತು. ಇನ್ನು ಮುಂದೆ ರಾಯಲ್ ಎನ್ಫೀಲ್ಡ್ಗಳು ರಸ್ತೆಗೆ ಇಳಿಯುವುದಿಲ್ಲ ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಆಗಲೇ ನೋಡಿ ರಾಯಲ್ ಎನ್ಫೀಲ್ಡ್ ಲಕ್ ಬದಲಿಸೋ ಸರದಾರನ ಎಂಟ್ರಿಯಾಗಿದ್ದು.
ರಾಯಲ್ ಪರಂಪರೆ ಉಳಿಸಿದರು!
ಸಿದ್ಧಾರ್ಥ್ ಲಾಲ್ ಅವರ ಈ ಕಥೆ ನಿಜಕ್ಕೂ ಇವತ್ತಿನ ಯುವ ಜನತೆಗೆ ಮಾದರಿ ಎನಿಸುವಂಥದ್ದು. ಆಗಲೇ ಮಾರುಕಟ್ಟೆಗೆ ಪ್ರವೇಶ ಪಡೆದಿದ್ದ ಅದ್ಭುತ ದ್ವಿಚಕ್ರವಾಹನಗಳು, ಇಂಧನ ಸಮರ್ಥ ಉತ್ಪನ್ನಗಳು ಇವೆಲ್ಲದರ ನಡುವೆ ರಾಯಲ್ ಎನ್ಫೀಲ್ಡ್ ಮೂಲೆಗುಂಪಾಗಿತ್ತು.
ಇದೇ ಸಮಯದಲ್ಲಿ ತಮ್ಮ ಕುಟುಂಬದ ಮೋಟಾರ್ ಸೈಕಲ್ ನೇಪಥ್ಯಕ್ಕೆ ಸರಿಯುವುದನ್ನು ಒಪ್ಪಿಕೊಳ್ಳದ ಸಿದ್ಧಾರ್ಥ್ ರಾಯಲ್ ಎನ್ಫೀಲ್ಡ್ಗೆ ಹೊಸ ರಾಯಲ್ ಲುಕ್ ನೀಡಿ ಮತ್ತೆ ಮೊದಲಿನ ಸ್ಥಾನಕ್ಕೆ ತಂದರು. ಇದರ ಹಿಂದಿನ ಅವರ ಶ್ರಮ, ಸಂಶೋಧನೆ, ನಿರ್ಣಯಗಳು ನಿಜಕ್ಕೂ ಅದ್ಭುತವೆನಿಸುತ್ತದೆ.
ರಾಯಲ್ ಎನ್ಫೀಲ್ಡ್ ಮುಚ್ಚಿ!
ಅದು 2000 ನೇ ಇಸವಿ, ಅಧ್ಯಕ್ಷ ವಿಕ್ರಮ್ ಲಾಲ್ ಅವರು ರಾಯಲ್ ಎನ್ಫೀಲ್ಡ್ ಅನ್ನು ಮುಚ್ಚುವಂತೆ ಆಡಳಿತ ಮಂಡಳಿಗೆ ಸಲಹೆ ನೀಡಿದರು. ಆದರೆ ಸಿದ್ಧಾರ್ಥ್ ಅವರು ಇದನ್ನು ಒಪ್ಪಲಿಲ್ಲ. ಒಂದಿಷ್ಟು ಬದಲಾವಣೆಗೆ 6 ತಿಂಗಳ ಕಾಲಾವಕಾಶ ಕೇಳಿದರು. ಆಗಲೇ ಸಿದ್ ಲಾಲ್ ಅವರಿಗೆ ರಾಯಲ್ ಎನ್ಫೀಲ್ಡ್ನ ಸಿಇಓ ಜವಾಬ್ದಾರಿ ವಹಿಸಲಾಯಿತು.
ತಿಂಗಳುಗಟ್ಟಲೇ ಸುತ್ತಾಡಿ ಅಭಿಪ್ರಾಯ ಸಂಗ್ರಹ!
ತಿಂಗಳುಗಟ್ಟಲೇ ಮೋಟಾರ್ ಸೈಕಲ್ ಓಡಿಸುತ್ತಾ, ಜನರ ಅಭಿಪ್ರಾಯ ಸಂಗ್ರಹಿಸಲು ಆರಂಭಿಸಿದರು. ಯುವಕರ ಇಷ್ಟಗಳ ಬಗ್ಗೆ ತಿಳಿದುಕೊಂಡರು. ಮೋಟಾರ್ಸೈಕಲ್ ಸುಧಾರಿಸಿದರು. ಬುಲೆಟ್ ನ ಪರಿಚಯ ಮಾಡಿಕೊಟ್ಟರು. ಅಲ್ಲಿಂದ ಇಲ್ಲಿಯತನಕ ರಾಯಲ್ ಎನ್ಫೀಲ್ಡ್ ಮುನ್ನುಗುತ್ತಲೇ ಇದೆ.
ಇದನ್ನೂ ಓದಿ: 18,700 ರುಪಾಯಿಗೆ ಸಿಗುತ್ತೆ ಬುಲೆಟ್ ಬೈಕ್! ವೈರಲ್ ಆಯ್ತು ಬಿಲ್
15 ಸಂಸ್ಥೆಗಳಲ್ಲಿ 13 ಸಂಸ್ಥೆ ಮುಚ್ಚಿದರು!
ರಾಯಲ್ ಎನ್ಫೀಲ್ಡ್ ಅನ್ನು ಮತ್ತೆ ಮೊದಲಿನ ಚಾರ್ಮ್ಗೆ ತರಲು ಸಿದ್ಧಾರ್ಥ್ ಅವರು ಬಹಳ ಫೋಕಸ್ ಮಾಡಬೇಕಿತ್ತು. ಇದೇ ಕಾರಣಕ್ಕೆ 15 ಸಂಸ್ಥೆಗಳಲ್ಲಿ 13 ಸಂಸ್ಥೆಗಳನ್ನು ಮುಚ್ಚಿದರು.
ಆ ಎಲ್ಲಾ ಶಕ್ತಿ, ಸಮಯ ಮತ್ತು ಏಕಾಗ್ರತೆಯನ್ನು ರಾಯಲ್ ಎನ್ಫೀಲ್ಡ್ಗೆ ವಹಿಸಿದರು. ಈ ಎಲ್ಲಾ ನಿರ್ಣಯಗಳ ಪರಿಣಾಮ 2006 ರಲ್ಲಿ ಐಷರ್ ಮೋಟಾರ್ಸ್ನ ಸಿಇಓ ಮತ್ತು ಎಂಡಿ ಆದರು.
ಸಾಧನೆಗಳ ಪರ್ವ
2014 ರಹೊತ್ತಿಗೆ ರಾಯಲ್ ಎನ್ಫೀಲ್ಡ್ ಆದಾಯ ಐಷರ್ ಮೋಟಾರ್ಸ್ ಲಿಮಿಟೆಡ್ ಗ್ರೂಪ್ನ ಆದಾಯ 80 ಪ್ರತಿಶತದಷ್ಟು ಏರಿಸಿತು. 2022ರ ಡಿಸೆಂಬರ್ನಲ್ಲಿ ತ್ರೈಮಾಸಿಕದಲ್ಲಿ ಗ್ರೂಪ್ನ ಲಾಭವು 714 ಕೋಟಿ ರೂಗಳಾಗಿತ್ತು. ಕಳೆದ ಹಣಕಾಸು ವರ್ಷದಲ್ಲಿ ಕಂಪನಿಯು 8,34,895 ಮೋಟಾರ್ಸೈಕಲ್ ಅನ್ನು ಯಶಸ್ವಿಯಾಗಿ ಮಾರಾಟ ಮಾಡಿತ್ತು. 2005 ರಲ್ಲಿ ತಮ್ಮ ಟ್ರ್ಯಾಕ್ಟರ್ ವ್ಯಾಪಾರವನ್ನು ಟ್ರ್ಯಾಕ್ಟರ್ಸ್ ಮತ್ತು ಫಾರ್ಮ್ ಇಕ್ವಿಪ್ಮೆಂಟ್ ಲಿಮಿಟೆಡ್ಗೆ ಮಾರಾಟ ಮಾಡಿದ್ದು ಸಿದ್ಧಾರ್ಥ್ ಅವರ ಅತ್ಯುತ್ತಮ ನಿರ್ಣಯ.
ಗುಂಪಿನ ಹಣಕಾಸಿನ ಉನ್ನತಿಗೆ 2008 ರಲ್ಲಿ ಸ್ವೀಡಿಷ್ ವೋಲ್ವೋ ಗ್ರೂಪ್ಗೆ ತಮ್ಮ ಟ್ರಕ್ ವ್ಯಾಪಾರದ 46 ಪ್ರತಿಶತ ಮಾರಾಟ ಮಾಡಿದರು.
ಬೆಲೆ ವಿಚಾರದಲ್ಲಿ ಆತುರವಿರಲಿಲ್ಲ
ಲೆಸ್ ಇಸ್ ಮೋರ್ ಎನ್ನುವುದು ಸಿದ್ಧಾರ್ಥ್ ಅವರ ಫಿಲಾಸಫಿ. ಕೈಗೆಟುಕುವ ದರ ನಿಗದಿ ಪಡಿಸುವುದರ ಮೂಲಕ ಮೋಟಾರ್ ಸೈಕಲ್ಗಳಿಗೆ ಬೇಡಿಕೆ ಹೆಚ್ಚಿಸಿದರು ಅದನ್ನು ದುರ್ಬಳಕೆ ಮಾಡಿಕೊಳ್ಳಲಿಲ್ಲ.
ಹೆಚ್ಚಿನ ಮಾರಾಟದ ಮೂಲಕ ಮಾರ್ಜಿನ್ ಹೆಚ್ಚಳ ಅವರ ತತ್ವ. ಬುಲೆಟ್350 ಮತ್ತು ಕ್ಲಾಸಿಕ್350 ಮಾತ್ರ ಅಲ್ಲದೇ ಅವಳಿ ಸಿಲಿಂಡರ್ ಎಂಜಿನ್ಗಳು ಭಾರತದಲ್ಲಿ, ವಿದೇಶದಲ್ಲಿ ಬೇಡಿಕೆ ಹೊಂದಿವೆ.
ವಿದ್ಯಾಭ್ಯಾಸ ಏನು?
ಡೂನ್ ಶಾಲೆಯಲ್ಲಿ ವ್ಯಾಸಂಗ, ದೆಹಲಿಯ ಸೇಂಟ್ ಸ್ಟೀಫನ್ ಕಾಲೇಜಿನಲ್ಲಿ ಅರ್ಥಶಾಸ್ತ್ರ ಅಭ್ಯಾಸ, ಕ್ರಾನ್ಫೀಲ್ಡ್ ವಿಶ್ವವಿದ್ಯಾಲಯದಿಂದ ಮೆಕ್ಯಾನಿಕಲ್ ಎಂಜಿನಿಯರಿಂಗ್ನಲ್ಲಿ ಸ್ನಾತಕೋತ್ತರ ಡಿಪ್ಲೋಮಾ ಮಾಡಿದ್ದಾರೆ. ಯುಕೆಯ ಲೀಡ್ಸ್ ವಿಶ್ವವಿದ್ಯಾಲಯದಿಂದ ಆಟೋ ಇಂಜಿನಿಯರಿಂಗ್ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.
45,000 ಕೋಟಿಯ ನಿವ್ವಳ ಮೌಲ್ಯ
2015 ರಿಂದ ಯುಕೆಯಲ್ಲಿ ಕಾರ್ಯ ನಿರ್ವಹಣೆ, 2021 ರಲ್ಲಿ ವಾರ್ಷಿಕ 21,12 ಕೋಟಿ ಪ್ಯಾಕೇಜ್ ವಿವಾದವನ್ನು ಐಷರ್ ಮೋಟಾರ್ಸ್ ನಾಮನಿರ್ದೇಶನ ಮತ್ತು ಸಂಭಾವನೆ ಸಮಿತಿಯು ಬಗೆಹರಿಸಿ 12 ಕೋಟಿಗೆ ಇಳಿಸಿತ್ತು. 2021 ರಲ್ಲಿ 7.38 ಕೋಟಿ ಗಳಿಸಿದ್ದಾರೆ. ಫೋರ್ಬ್ಸ್ ಪ್ರಕಾರ ವಿಕ್ರಮ್ಲಾಲ್ ಕುಟುಂಬದ ನಿವ್ವಳ ಮೌಲ್ಯ 2022 ರಲ್ಲಿ 6.6 ಬಿಲಿಯನ್ ಅಂದರೆ 54,000 ಕೋಟಿಯಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ