ರಾಧಾ ವೆಂಬು (Radha Vembu)ಈ ಸಾಧಕಿಯ ಬಗ್ಗೆ ಇಂದು ದೇಶವೇ ಮಾತನಾಡುತ್ತಿದೆ. ಅವರ ಸಾಧನೆ ಬಗ್ಗೆ ಅಚ್ಚರಿ ಪಡುತ್ತಿದೆ. ಏಕೆಂದರೆ M3M ಹುರುನ್ ಗ್ಲೋಬಲ್ ರಿಚ್ ಲಿಸ್ಟ್ 2023ರ ಲ್ಲಿ ಶ್ರೀಮಂತ ಸೆಲ್ಫ್ ಮೇಡ್ ವುಮನ್ (Self Made Women) ಆಗಿ ರಾಧಾ ವೆಂಬು ಗುರುತಿಸಲ್ಪಟ್ಟಿದ್ದಾರೆ. ಹೌದು, ಸಾಫ್ಟ್‌ವೇರ್ ಮತ್ತು ಸೇವಾ ಕ್ಷೇತ್ರದಲ್ಲಿ ವಿಶ್ವದ ಎರಡನೇ ಶ್ರೀಮಂತ ಮಹಿಳೆಯಾಗಿ ರಾಧಾ ವೆಂಬು ಹೊರಹೊಮ್ಮಿದ್ದಾರೆ. ಅಲ್ಲದೇ ಹುರುನ್ ಗ್ಲೋಬಲ್ ರಿಚ್ ಲಿಸ್ಟ್‌ನಲ್ಲಿ BYJU'S ಸ್ಥಾಪಕ ಮತ್ತು ಸಿಇಒ ಬೈಜು ರವೀಂದ್ರನ್ ಅವರು ಭಾರತದ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರು ಎಂದು ಹೆಸರಿಸಲಾಗಿದೆ.
ಹಾಗಿದ್ರೆ ರಾಧಾ ವೆಂಬು ಯಾರು? ಜೋಹೊ ಸಂಸ್ಥಾಪಕ ಶ್ರೀಧರ್ ವೆಂಬು ಅವರೊಂದಿಗೆ ಅವರ ಸಂಬಂಧವೇನು? ಅವರ ನಿವ್ವಳ ಆದಾಯವೆಷ್ಟು ಮುಂತಾದ ವಿವರಗಳನ್ನು ತಿಳಿಯೋಣ.
ಝೋಹೋ ಸಹ-ಸ್ಥಾಪಕಿ ಈ ರಾಧಾ ವೆಂಬು
ಹೌದು, ರಾಧಾ ವೆಂಬು ಬೂಟ್‌ಸ್ಟ್ರಾಪ್ಡ್ ಸಾಫ್ಟ್‌ವೇರ್ ಕಂಪನಿ ಜೋಹೊ ಸಹ-ಸ್ಥಾಪಕರಾಗಿದ್ದಾರೆ. ಅವರು ಶ್ರೀಧರ್ ವೆಂಬು ಅವರ ಸಹೋದರಿ. ಜೊಹೊದಲ್ಲಿ 47.8 ಪ್ರತಿಶತ ಪಾಲನ್ನು ಹೊಂದಿರುವ ತಮಿಳುನಾಡು ಮೂಲದ ಕಂಪನಿಯಲ್ಲಿ ಅವರು ಅತಿದೊಡ್ಡ ಪಾಲುದಾರರಾಗಿದ್ದಾರೆ. ಇನ್ನು ಅವರ ಸಹೋದರ ಶ್ರೀಧರ್ ವೆಂಬು ಕಂಪನಿಯಲ್ಲಿ ಕೇವಲ 5 ಪ್ರತಿಶತದಷ್ಟು ಮಾತ್ರ ಹೊಂದಿದ್ದಾರೆ.
ರಾಧಾ ವೆಂಬುವಿನ ಕಂಪನಿ ಜೋಹೊ 2700 ಕೋಟಿ ರೂ.ಗೂ ಹೆಚ್ಚು ಲಾಭ ಗಳಿಸಿದೆ. ಅಂದಹಾಗೆ ವೆಂಬು ಕುಟುಂಬವು ಈ ಕಂಪನಿಯ ಶೇಕಡ 80 ರಷ್ಟು ಷೇರುಗಳನ್ನು ಹೊಂದಿದೆ.
ಐಐಟಿ ಪದವೀಧರೆ ರಾಧಾ ವೆಂಬು
ಅಂದಹಾಗೆ ರಾಧಾ ವೆಂಬು ಅವರ ಶೈಕ್ಷಣಿಕ ಅರ್ಹತೆಯನ್ನು ನೋಡುವುದಾದರೆ ಇವರು ಐಐಟಿಯನ್. ಐಐಟಿ ಮದ್ರಾಸ್‌ನಿಂದ ಕೈಗಾರಿಕಾ ನಿರ್ವಹಣೆಯಲ್ಲಿ ಪದವಿ ಪಡೆದಿದ್ದಾರೆ. ಅವರು ಜನಿಸಿದ್ದು 1972 ರಲ್ಲಿ. ಅವರ ತಂದೆ ಮದ್ರಾಸ್ ಹೈಕೋರ್ಟ್‌ನಲ್ಲಿ ಕೆಲಸ ಮಾಡುತ್ತಿದ್ದರು. ಅವರು ಸ್ಟೆನೋಗ್ರಾಫರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಇನ್ನು, ಅವರ ಮತ್ತೋರ್ವ ಸಹೋದರ ಸೇಕರ್ ಕೂಡ ಜೊಹೊದಲ್ಲಿ ಪಾಲುದಾರರಾಗಿದ್ದಾರೆ. ಇನ್ನು ರಾಧಾ ವೆಂಬು ಚೆನ್ನೈನಲ್ಲಿ ವಾಸಿಸುತ್ತಾರೆ.
ರಾಧಾ ವೆಂಬು ನಿವ್ವಳ ಮೌಲ್ಯ 32,800 ಕೋಟಿ
ಅವರು ಕಂಪನಿಯ ಇಮೇಲ್ ಸೇವೆಯಾದ ಝೋಹೋ ಮೇಲ್ ಅನ್ನು ಮುನ್ನಡೆಸುತ್ತಾರೆ. ಆಕೆಯ ಕಂಪನಿಯು ಪ್ರಸ್ತುತ WhatsApp ಗೆ ಪ್ರತಿಸ್ಪರ್ಧಿಯಾಗಿರುವ ಚಾಟ್ ಸೇವೆಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಅದರ ಹೆಸರು ಅರಟ್ಟೈ ಎಂದು.
ಇದನ್ನೂ ಓದಿ: ಲಕ್ಷಗಳ ಸಂಬಳದ ಜಾಬ್ ಆಫರ್ ತಿರಸ್ಕರಿಸಿ, ಮೊದಲ ಪ್ರಯತ್ನದಲ್ಲೇ UPSC ಪಾಸ್ ಮಾಡಿದ ವರ್ಷಾ
ಇನ್ನು, ರಾಧಾ ಅವರು, 103 ಸ್ಥಾನಗಳನ್ನು ಪಡೆದು ಸಾಫ್ಟ್‌ವೇರ್ ಕ್ಷೇತ್ರದಲ್ಲಿ ಎರಡನೇ ಶ್ರೀಮಂತ ಸ್ವಯಂ ನಿರ್ಮಿತ ಮಹಿಳೆಯಾಗಿದ್ದಾರೆ. ವರದಿಯ ಪ್ರಕಾರ ಅವರ ನಿವ್ವಳ ಮೌಲ್ಯವು, 4 ಬಿಲಿಯನ್ ಯುಎಸ್ ಡಾಲರ್. ಇದು ಸುಮಾರು 32,800 ಕೋಟಿ ರೂ.ಗಳಾಗುತ್ತವೆ.
ರಾಧಾ ವೆಂಬು ಸಹೋದರ ಶ್ರೀಧರ್ ವೆಂಬು ಪದ್ಮಶ್ರೀ ಪುರಸ್ಕೃತರು
ಇನ್ನು ರಾಧಾ ಅವರ ಸಹೋದರ ಶ್ರೀಧರ್ ವೆಂಬು ಪದ್ಮಶ್ರೀ ಪುರಸ್ಕೃತರು. ಅವರು 1989 ರಲ್ಲಿ IIT ಮದ್ರಾಸ್‌ನಿಂದ ತಮ್ಮ ಇಂಜಿನಿಯರಿಂಗ್ ಅನ್ನು ಪೂರ್ಣಗೊಳಿಸಿದ್ದಾರೆ. ಅಲ್ಲದೇ ಪ್ರಿನ್ಸ್‌ಟನ್ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ನಡೆಸಿ ನಂತರ ಕ್ವಾಲ್‌ಕಾಮ್‌ನಲ್ಲಿ ಕೆಲಸ ಮಾಡಿದರು. ಅವರು 2019 ರಿಂದ ಭಾರತದಲ್ಲಿ ವಾಸಿಸುತ್ತಿದ್ದಾರೆ. ಅವರು ತಮ್ಮ ವಾಸಸ್ಥಾನ ಮತ್ತು ತಮ್ಮ ಕಚೇರಿಯನ್ನು ತಮಿಳುನಾಡಿನ ಗ್ರಾಮೀಣ ಪ್ರದೇಶದಲ್ಲಿ ಮಾಡಿಕೊಂಡಿದ್ದಾರೆ.
ಈ ಮಧ್ಯೆ ಇತ್ತೀಚೆಗೆ ಶ್ರೀಧರ್ ವೆಂಬು ಅವರ ವಿಚ್ಛೇದಿತ ಪತ್ನಿ ಪ್ರಮೀಳಾ ಶ್ರೀನಿವಾಸನ್ ಅವರು ಆರೋಪ ಮಾಡಿದ್ದರು. ಶ್ರೀಧರ್, ತಮ್ಮ ಸಹೋದರಿ ಮತ್ತು ಅವರ ಪತಿಗೆ ಹೆಚ್ಚಿನ ಷೇರುಗಳನ್ನು ತನಗೆ ಹೇಳದೆ ವರ್ಗಾಯಿಸಿದ್ದಾರೆ ಎಂದು ಆರೋಪಿಸಿದ್ದರು. ಆದರೆ ಶ್ರೀಧರ್ ವೆಂಬು ಆರೋಪವನ್ನು ತಳ್ಳಿಹಾಕಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ