'ಜಾಯ್ ಅಲುಕ್ಕಾಸ್ ' (Joyalukkas) ಈ ಹೆಸರನ್ನು ನೀವು ಕೇಳಿಯೇ ಇರುತ್ತೀರಿ. ಸಾಕಷ್ಟು ಜನರು ಈ ಚಿನ್ನಾಭರಣಗಳ ಶೋರೂಂ ಗೆ ಭೇಟಿ ನೀಡಿ ಆಭರಣಗಳ ಖರೀದಿಯನ್ನೂ ಮಾಡಿರಬಹುದು. ಆದರೆ ಈ ಚಿನ್ನದ ಸಾಮ್ರಾಜ್ಯದ ಮಾಲೀಕರ ಬಗ್ಗೆ ಬಹಳಷ್ಟು ಜನರಿಗೆ ಕಡಿಮೆ ತಿಳಿದಿರಬಹುದು. ಹಾಗಿದ್ದರೆ ಜಾಯ್ ಅಲುಕ್ಕಾಸ್ ಯಾರು ? ಅವರ ಶಿಕ್ಷಣವೇನು? ಅವರ ಆಸ್ತಿಯ ನಿವ್ವಳ ಮೌಲ್ಯವೆಷ್ಟು ಅನ್ನೋದನ್ನು ತಿಳಿದುಕೊಳ್ಳೋಣ. ಜಾಯ್ ಅಲುಕ್ಕಾಸ್ ಭಾರತದಾದ್ಯಂತ 85 ನಗರಗಳಲ್ಲಿ ಮಳಿಗೆಗಳನ್ನು ಹೊಂದಿದೆ. ಅವರ ಮಗ ಜಾನ್ ಪಾಲ್ ಅಂತರರಾಷ್ಟ್ರೀಯ (international) ಆಭರಣ ವ್ಯವಹಾರದ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. ಅವರ ಪತ್ನಿ ಜಾಲಿ ಜಾಯ್ ಜೋಯಾಲುಕ್ಕಾಸ್ ಫೌಂಡೇಶನ್ (Foundation) ಮುಖ್ಯಸ್ಥರಾಗಿದ್ದಾರೆ.
ಜಾಯ್ ಅಲುಕ್ಕಾಸ್ ವೃತ್ತಿಜೀವನ
ಜಾಯ್ ಅಲುಕ್ಕಾಸ್ ಅವರ ತಂದೆ, ಅಲುಕ್ಕಾಸ್ ಜ್ಯುವೆಲ್ಲರಿಯ ಸಂಸ್ಥಾಪಕರಾದ ಅಲುಕ್ಕಾಸ್ ವರ್ಗೀಸ್ ಅವರು ಚಿನ್ನದ ಸಣ್ಣ ಅಂಗಡಿಯಿಂದ ವ್ಯಾಪಾರ ಆರಂಭಿಸಿದ್ದರು. ಅವರು 1956ರಲ್ಲಿ ಕೇರಳದ ತ್ರಿಶೂರ್‌ನಲ್ಲಿ 200 ಚದರ ಅಡಿಯ ಸಣ್ಣ ಚಿಲ್ಲರೆ ಅಂಗಡಿಯೊಂದಿಗೆ ಚಿನ್ನದ ವ್ಯಾಪಾರವನ್ನು ಪ್ರಾರಂಭಿಸಿದರು.
2000 ರಲ್ಲಿ ಅವರ ಐವರು ಪುತ್ರರು ತಮ್ಮ ಕುಟುಂಬದ ಆಭರಣ ವ್ಯವಹಾರವನ್ನು ವಿಭಜಿಸಲು ನಿರ್ಧರಿಸಿದರು. ಕುಟುಂಬವು ವಿಭಜನೆಯಾಗುವ ಹೊತ್ತಿಗೆ ಅಲುಕ್ಕಾಸ್ ವರ್ಗೀಸ್ ಆರಂಭಿಸಿದ್ದ ಸಣ್ಣ ಚಿಲ್ಲರೆ ಅಂಗಡಿ 11 ರಿಟೇಲ್ ಶೋರೂಮ್‌ಗಳಾಗಿದ್ದವು. ಅಲುಕ್ಕಾಸ್ ವರ್ಗೀಸ್ ಅವರಿಗೆ ಐವರು ಪುತ್ರರಿದ್ದರು. ಜಾಯ್, ಜೋಸ್, ಫ್ರಾನ್ಸಿಸ್, ಪಾಲ್ ಮತ್ತು ಆಂಟೊ. ಅವರು ತಮ್ಮ ತಂದೆಗೆ ವ್ಯಾಪಾರವನ್ನು ಬೆಳೆಸಲು ಸಹಾಯ ಮಾಡಿದ್ದರು.
ಭಾರತದಲ್ಲಿ 85, ವಿದೇಶಗಳಲ್ಲಿ 45 ಶೋರೂಂ
ನಂತರದಲ್ಲಿ ಅವರು ತಮ್ಮದೇ ಆದ ಜಾಯ್ ಅಲುಕ್ಕಾಸ್ ಜ್ಯುವೆಲರಿಯನ್ನು ಸ್ಥಾಪಿಸಿದರು. ಅದು ತ್ರಿಶೂರ್, ಕೇರಳ ಮತ್ತು ದುಬೈನಲ್ಲಿ ನೆಲೆಗೊಂಡಿದ್ದು, ಸದ್ಯ ಜಾಯ್ ಅಲುಕ್ಕಾಸ್ ಭಾರತದಲ್ಲಿ ಒಟ್ಟು 85 ಶೋರೂಂಗಳನ್ನು, ವಿದೇಶಗಳಲ್ಲಿ 45 ಶೋರೂಂಗಳನ್ನು ಹೊಂದಿದೆ.
2012 ರಲ್ಲಿ, ಡಿ ಬೀರ್ಸ್‌ನಿಂದ ಫಾರೆವರ್‌ಮಾರ್ಕ್ ಬ್ರಾಂಡ್ ಡೈಮಂಡ್‌ಗಳನ್ನು ಮಾರಾಟ ಮಾಡಲು ಜಾಯ್ ಅಲುಕ್ಕಾಸ್‌ಗೆ ಅಧಿಕಾರ ನೀಡಲಾಯಿತು. 2007ರಲ್ಲಿ, ಅವರು ವಿಶ್ವದ ಅತಿದೊಡ್ಡ ಚಿನ್ನ ಮತ್ತು ವಜ್ರ ಆಭರಣ ಮಳಿಗೆಯನ್ನು ಮತ್ತು ಚೆನ್ನೈನಲ್ಲಿ ಮೊದಲ ಡೈಮಂಡ್ ಮಳಿಗೆ ತೆರೆದರು.
ಇದನ್ನೂ ಓದಿ: 66 ಕೋಟಿಯ ಬಂಗಲೆ ಖರೀದಿಸಿದ ಡೋಲೋ 650 ಕಂಪನಿ ಓನರ್!
ಇನ್ನು, ಜಾಯ್ ಅಲುಕ್ಕಾಸ್ ನೇತೃತ್ವದ ಇತರ ವ್ಯವಹಾರಗಳಲ್ಲಿ ಮಾಲ್ ಆಫ್ ಜಾಯ್, ಶಾಪಿಂಗ್ ರಿಟೇಲ್ ತಾಣ, ಜಾಲಿ ಸಿಲ್ಕ್ಸ್, ರೇಷ್ಮೆ ಫ್ಯಾಷನ್ ಲೇಬಲ್, ಹಣ ವಿನಿಮಯ ವೇದಿಕೆಯಾದ ಜೋಯಾಲುಕ್ಕಾಸ್ ಎಕ್ಸ್‌ಚೇಂಜ್ ಮತ್ತು ರಿಯಲ್ ಎಸ್ಟೇಟ್ ಕಂಪನಿಯಾದ ಜೋಯಾಲುಕ್ಕಾಸ್ ಲೈಫ್‌ಸ್ಟೈಲ್ ಡೆವಲಪರ್ಸ್ ಸೇರಿವೆ.
ಜಾಯ್ ಅಲುಕ್ಕಾಸ್ ಶಿಕ್ಷಣ
ಜಾಯ್ ಅಲುಕ್ಕಾಸ್ ಅವರು ತ್ರಿಶೂರ್‌ನ ಸೇಂಟ್ ಥಾಮಸ್ ಕಾಲೇಜಿನಲ್ಲಿ ಅಧ್ಯಯನ ಮಾಡಿದ್ದು, ಪದವಿ ಪಡೆದಿದ್ದಾರೆ. ಅವರು ಒಂದು ದಶಕಕ್ಕೂ ಹೆಚ್ಚು ಕಾಲ ಉದ್ಯಮಶೀಲತೆಯ ಕೌಶಲ್ಯಗಳನ್ನು ಕಲಿತರು.
ಇದನ್ನೂ ಓದಿ: ರೈಲಿನಲ್ಲಿ ನೈಟ್ ಜರ್ನಿ ಮಾಡೋರಿಗೆ ಹೊಸ ರೂಲ್ಸ್!
1976ರಲ್ಲಿ, ಜಾಯ್ ಅಲುಕ್ಕಾಸ್ ಅವರು ಕುಟುಂಬ ವ್ಯವಹಾರಕ್ಕೆ ಸೇರಿಕೊಂಡರು. ನಂತರದಲ್ಲಿ ಯುಎಇಯಲ್ಲಿ ಕೂಡ ಚಿನ್ನದ ಅಂಗಡಿಯನ್ನು ತೆರೆದರು. ಇನ್ನು, ಹಣ ವಿನಿಮಯ, ಬಟ್ಟೆಗಳು, ಮಾಲ್‌ಗಳು ಮತ್ತು ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಕೂಡ ಜಾಯ್ ಅಲುಕ್ಕಾಸ್ ಆಸಕ್ತಿ ಹೊಂದಿದ್ದಾರೆ.
ಜಾಯ್ ಅಲುಕ್ಕಾಸ್ ಅವರ ನಿವ್ವಳ ಮೌಲ್ಯ
ಮಾಧ್ಯಮಗಳ ವರದಿ ಪ್ರಕಾರ, ಜಾಯ್ ಅಲುಕ್ಕಾಸ್ $ 2.8 ಬಿಲಿಯನ್ ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ. ಇನ್ನು, ಮೇ 2018 ರಲ್ಲಿ, ಜಾಯ್ ಅಲುಕ್ಕಾಸ್ ಅವರು ಓಖಿ ಚಂಡಮಾರುತದ ಸಂತ್ರಸ್ತರಿಗೆ ಪರಿಹಾರ ನಿಧಿಯಾಗಿ ₹20,000,000 ದೇಣಿಗೆ ನೀಡಿದ್ದಾರೆ.ಸೆಪ್ಟೆಂಬರ್ 2018 ರಲ್ಲಿ ಕೇರಳ ಪ್ರವಾಹದ ನಂತರ, ಜೋಯಾಲುಕ್ಕಾಸ್ ಪ್ರತಿಷ್ಠಾನವು ಮನೆ ಕಳೆದುಕೊಂಡವರಿಗೆ 250 ಮನೆಗಳನ್ನು ನಿರ್ಮಿಸುವುದಾಗಿ ಘೋಷಿಸಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ