• Home
  • »
  • News
  • »
  • business
  • »
  • Innovation: ಕೈಗೆಟಕುವ ಬೆಲೆಯಲ್ಲಿ ಕೃಷಿಯಂತ್ರ ತಯಾರಿಸಿದ ಮೆಕ್ಯಾನಿಕ್​

Innovation: ಕೈಗೆಟಕುವ ಬೆಲೆಯಲ್ಲಿ ಕೃಷಿಯಂತ್ರ ತಯಾರಿಸಿದ ಮೆಕ್ಯಾನಿಕ್​

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Machine to Cultivate Fields: ಕೃಷಿಯಲ್ಲಿ ಆಧುನೀಕರಣ ಉಂಟಾಗಿದ್ದರೂ ಕೆಲವೊಂದು ಕೆಲಸಗಳಿಗೆ ಕೃಷಿ ಕಾರ್ಮಿಕರ ಅಗತ್ಯ ಇದ್ದೇ ಇದೆ. ಅಡಿಕೆ ಕೊಯ್ಲು ಮಾಡಲು, ಕಳೆಗಳನ್ನು ನಿವಾರಿಸಲು, ಭತ್ತದ ಬೆಳೆಗೆ, ನಾಟಿ ಕೆಲಸಕ್ಕೆ ಹೀಗೆ ಕೆಲವೊಂದು ಸೂಕ್ಷ್ಮ ಕೆಲಸಗಳನ್ನು ನಿರ್ವಹಿಸಲು ಇಂದು  ಕಾರ್ಮಿಕರ ಅಗತ್ಯವಿದೆ.

ಮುಂದೆ ಓದಿ ...
  • Trending Desk
  • 2-MIN READ
  • Last Updated :
  • Share this:

ಇಂದಿನ ಆಧುನಿಕ ಯುಗದಲ್ಲಿ ಕೃಷಿ (Agriculture) ಎಂದರೆ ಮೂಗುಮುರಿಯುವವರೇ ಹೆಚ್ಚು. ಕೋವಿಡ್ (Covid)  ಸಮಯದಲ್ಲಿ ಅದೆಷ್ಟೋ ಯುವಕರು ಐಟಿ (IT) ಉದ್ಯೋಗಗಳನ್ನು ಕಳೆದುಕೊಂಡು ಮರಳಿ ಕೃಷಿಯತ್ತ ಮುಖಮಾಡಿ ಸಾಧನೆಗಳನ್ನು ಮಾಡಿದ್ದರೂ ಈ ಕ್ಷೇತ್ರ ಎಲ್ಲರ ಕೈಹಿಡಿಯಲಿಲ್ಲ ಅದಕ್ಕೆ ಕಾರಣ ಇಂದು ಕೃಷಿ ಕೂಡ ವೆಚ್ಚದಾಯಕ ಎಂದೆನಿಸಿರುವುದಾಗಿದೆ. ಬಹುತೇಕ ಹಳ್ಳಿಗಳಲ್ಲಿ ಇಂದು ಕೃಷಿ ಕೆಲಸಗಳನ್ನು ನಿರ್ವಹಿಸಲು ಯುವಜನರ ಕೊರತೆ ಇದೆ. ಹೆಚ್ಚು ಪರಿಶ್ರಮಪಡದೇ ಇಂದು ಕೃಷಿಗಿಂತ ಹೆಚ್ಚಿನ ದುಡಿತದ ದುಡಿಮೆ ನಗರಗಳಲ್ಲಿ ದೊರೆಯುತ್ತಿರುವುದರಿಂದ ಹಳ್ಳಿಯ (Village) ಯುವಕರು ನಗರಗಳತ್ತ ಮುಖಮಾಡಿದ್ದಾರೆ.


ಕೈಗೆಟಕುವ ಬೆಲೆಯಲ್ಲಿ ಕೃಷಿಯಂತ್ರ ನಿರ್ಮಾಣ


ಅದಾಗ್ಯೂ ಕೃಷಿಯಲ್ಲಿ ಆಧುನೀಕರಣ ಉಂಟಾಗಿದ್ದರೂ ಕೆಲವೊಂದು ಕೆಲಸಗಳಿಗೆ ಕೃಷಿ ಕಾರ್ಮಿಕರ ಅಗತ್ಯ ಇದ್ದೇ ಇದೆ. ಅಡಿಕೆ ಕೊಯ್ಲು ಮಾಡಲು, ಕಳೆಗಳನ್ನು ನಿವಾರಿಸಲು, ಭತ್ತದ ಬೆಳೆಗೆ, ನಾಟಿ ಕೆಲಸಕ್ಕೆ ಹೀಗೆ ಕೆಲವೊಂದು ಸೂಕ್ಷ್ಮ ಕೆಲಸಗಳನ್ನು ನಿರ್ವಹಿಸಲು ಇಂದು  ಕಾರ್ಮಿಕರ ಅಗತ್ಯವಿದೆ. ಆದರೆ ಕಾರ್ಮಿಕರು ಕೇಳುವ ದುಡ್ಡು ದುಪ್ಪಟ್ಟಾಗಿರುವುದರಿಂದ ಕೃಷಿಯಲ್ಲಿ ಪಡೆದ ಲಾಭವೆಲ್ಲಾ ಸಂಬಳಕ್ಕೆ ಸರಿಯಾಗುತ್ತದೆ ಎಂಬುದು ರೈತರ ಅಭಿಪ್ರಾಯವಾಗಿದೆ. ಕಾರ್ಮಿಕರ ದುಬಾರಿ ಮಜೂರಿ ಹಾಗೂ ಕೃಷಿ ಕೆಲಸಗಳಿಗೆ ಕಾರ್ಮಿಕರ ಅಭಾವದ ಸಮಸ್ಯೆಗಳನ್ನೆದುರಿಸಿದ್ದ ಹೈದ್ರಾಬಾದ್ ನಿವಾಸಿ ಕಡವೆಂಡಿ ಮಹಿಪಾಲ್ ಚಾರಿ ಗದ್ದೆಯನ್ನು ಉಳುಮೆ ಮಾಡುವ ಕೈಗೆಟಕುವ ಬೆಲೆಯಲ್ಲಿ ತಯಾರಿಸಲಾದ ಕೃಷಿ ಯಂತ್ರವನ್ನು ಸ್ವತಃ ನಿರ್ಮಿಸಿದ್ದಾರೆ. ಯಂತ್ರದ ನಿರ್ಮಾಣಕ್ಕಾಗಿ ಮಹಿಪಾಲ್ ಚಾರಿಗೆ ರಾಷ್ಟ್ರೀಯ ಮಟ್ಟದ ಪ್ರಶಸ್ತಿ ಕೂಡ ಲಭಿಸಿದೆ.


ಯಂತ್ರ ನಿರ್ಮಾಣಕ್ಕೆ ಸಹಕಾರಿಯಾದ ಮೆಕ್ಯಾನಿಕಲ್ ವೃತ್ತಿ


ಮಹಿಪಾಲ್ ಚಾರಿ ವೃತ್ತಿಯಲ್ಲಿ ಮೆಕ್ಯಾನಿಕ್ ಆಗಿದ್ದರೂ ತಮ್ಮ ಪೂರ್ವಜರಿಂದ ಎರಡು ಎಕರೆ ಕೃಷಿ ಭೂಮಿಯನ್ನು ಪಡೆದುಕೊಂಡಿದ್ದರು. ಅವರ ಪೂರ್ವಜರು ತಮ್ಮ ಕೃಷಿ ಭೂಮಿಯಲ್ಲಿ ಫಸಲನ್ನು ಪಡೆದುಕೊಂಡಿದ್ದರೂ ಆ ಫಸಲಿನ ಲಾಭವೆಲ್ಲಾ ಕಾರ್ಮಿಕರ ವೆಚ್ಚಕ್ಕೆ ಸರಿಹೊಂದಿಸುವುದಕ್ಕೆ ಸರಿಯಾಗುತ್ತಿತ್ತು ಹಾಗೂ ಸ್ವತಃ ಮಹಿಪಾಲ್ ಅವರ ತಂದೆ ಕೂಡ ಕೃಷಿ ಕಾರ್ಮಿಕರ ಅಭಾವ ಹಾಗೂ ದುಬಾರಿ ಸಂಬಳದಿಂದ ಬಳಲಿದ್ದರು. ಆರ್ಥಿಕ ಅಡಚಣೆಯಿಂದ ವಿದ್ಯಾಭ್ಯಾಸ ಪೂರ್ಣಗೊಳಿಸಲು ಸಾಧ್ಯವಾಗದ ಮಹಿಪಾಲ್ ಚಾರಿಗೆ ಕೈಹಿಡಿದಿದ್ದು ಮೆಕ್ಯಾನಿಕ್ ವೃತ್ತಿಯಾಗಿತ್ತು. ಹಳ್ಳಿಯ ಸಮೀಪದ ಪಟ್ಟಣದಲ್ಲಿ ಅವರು ಮೆಕ್ಯಾನಿಕ್ ವೃತ್ತಿಯನ್ನು ಕಲಿತುಕೊಂಡರು. ವಾಹನಗಳನ್ನು ತಾವೇ ದುರಸ್ತಿಮಾಡುವಷ್ಟು ನಿಸ್ಸೀಮರಾಗಿ ಬೆಳೆದರು.


ತಾವೇ ನಿರ್ಮಿಸಿದ ಕೃಷಿ ಯಂತ್ರ


2000 ದ ಇಸವಿಯ ಆರಂಭದಲ್ಲಿ ಮಹಿಪಾಲ್ ಚಾರಿಗೆ ಅವರ ತಂದೆಯಿಂದ ಪಿತ್ರಾರ್ಜಿತ ಆಸ್ತಿ ದೊರಕಿತು. ಹೀಗೆ ಪಟ್ಟಣದ ಮೆಕ್ಯಾನಿಕ್ ವೃತ್ತಿಯನ್ನು ತ್ಯಜಿಸಿ ಹಳ್ಳಿಗೆ ಮರಳಿದ ಮಹಿಪಾಲ್ ಕೃಷಿಯಲ್ಲಿ ಮುಂದುವರಿಯುವ ಯೋಜನೆಯನ್ನು ಮಾಡಿದರು ಆದರೆ ಇವರೂ ಕೂಡ ಅವರ ಪೂರ್ವಜರಂತೆ ದುಬಾರಿ ಕಾರ್ಮಿಕ ವೆಚ್ಚದ ಸಮಸ್ಯೆಯನ್ನು ಎದುರಿಸತೊಡಗಿದರು. ಕೂಲಿ ಬಾಡಿಗೆ ಪಶುಗಳಿಗೆ ಮೇವು ಇನ್ನಿತರ ಖರ್ಚುಗಳಿಗೆ ಕೃಷಿಯ ಲಾಭ ವ್ಯಯಿಸತೊಡಗಿತು. ಇದೇ ಸಮಯದಲ್ಲಿ ಬೇರೆ ಟ್ರ್ಯಾಕ್ಟರ್‌ಗಳ ರಿಪೇರಿಯನ್ನು ಮಹಿಪಾಲ್ ಮಾಡತೊಡಗಿದರು ಜೊತೆಗೆ ತಮ್ಮ ಜಮೀನಿನ ಕೃಷಿ ಕೆಲಸವನ್ನು ಮುಂದುವರಿಸಿದರು.


ಕೃಷಿಯಲ್ಲಿ ಬಂದ ಲಾಭವೆಲ್ಲಾ ಹೀಗೆ ಅನಗತ್ಯ ಖರ್ಚಾಗುತ್ತಿರುವುದನ್ನು ಕಂಡ ಮಹಿಪಾಲ್ ಇದಕ್ಕೆ ಸೂಕ್ತ ವ್ಯವಸ್ಥೆ ಕಲ್ಪಸಬೇಕೆಂಬ ಕೈಂಕರ್ಯವನ್ನು ಮಾಡಿದರು. ತಾವೇ ಕೃಷಿಭೂಮಿ ಉಳುವ ಯಂತ್ರವನ್ನು ನಿರ್ಮಿಸುವ ಪಣ ತೊಟ್ಟರು. ಹೀಗೆ 2011 ರಲ್ಲಿ ಹಳೆಯ ಆಟೋರಿಕ್ಷಾ ಎಂಜಿನ್‌ಗಳನ್ನು ಬಳಸಿ ಪ್ರಯೋಗ ನಡೆಸಲು ಆರಂಭಿಸಿದ ಮಹಿಪಾಲ್ ಹಲವಾರು ವಿಫಲತೆಗಳನ್ನು ಕಂಡುಕೊಂಡರು. ಹೈದ್ರಾಬಾದ್‌ಗೆ ತೆರಳಿ ಚೀನಾದಲ್ಲಿ ತಯಾರಿಸಿದ ಎಂಜಿನ್ ಅನ್ನು ಖರೀದಿಸಿದರು ಉಳಿದ ಪರಿಕರಗಳನ್ನು ತಾವೇ ಖುದ್ದು ತಯಾರಿಸಿದರು ಹಾಗೂ ವರ್ಷಾಂತ್ಯದೊಳಗೆ ಕೃಷಿ ಯಂತ್ರವನ್ನು ಮಹಿಪಾಲ್ ನಿರ್ಮಿಸಿದರು.


ಒಬ್ಬರೇ ಯಂತ್ರವನ್ನು ಸುಲಭವಾಗಿ ನಿರ್ವಹಿಸಬಹುದು


ಯಂತ್ರವು 1 ಲೀಟರ್ ಡೀಸೆಲ್‌ನಲ್ಲಿ ಮೂರುಗಂಟೆಗಳ ಕಾಲ ಕಾರ್ಯನಿರ್ವಹಿಸುತ್ತದೆ ಎಂದು ತಿಳಿಸಿರುವ ಮಹಿಪಾಲ್, 3 ಎಕರೆ ಭೂಮಿಯನ್ನು ಉಳುಮೆ ಮಾಡಬಹುದು ಎಂದು ಹೇಳಿದ್ದಾರೆ. ಈ ಉಪಕರಣವನ್ನು ಒಬ್ಬರೇ ನಿರ್ವಹಿಸಬಹುದು ಎಂದು ತಿಳಿಸಿರುವ ಮಹಿಪಾಲ್, ಸ್ಕೂಟರ್ ಓಡಿಸುವುದಕ್ಕಿಂತಲೂ ಈ ಯಂತ್ರವನ್ನು ಚಲಾಯಿಸುವುದು ತುಂಬಾ ಸುಲಭ ಎಂದು ತಿಳಿಸಿದ್ದಾರೆ. ಎಡಗೈ ಹಿಡಿತದಲ್ಲಿ ಆಕ್ಸಿಲರೇಟ್ ಅನ್ನು ನಿರ್ವಹಿಸಬಹುದಾಗಿದ್ದು, ದ್ವಿಚಕ್ರ ವಾಹನದಂತೆ ಎರಡು ಕೈಗಳನ್ನು ಬಳಸಿಕೊಂಡು ಯಂತ್ರವನ್ನು ಚಲಾಯಿಸಬಹುದು ಎಂದು ಮಹಿಪಾಲ್ ತಿಳಿಸಿದ್ದಾರೆ.


ಇತರ ರೈತರು ಕೃಷಿಭೂಮಿ ಉಳುಮೆಗಾಗಿ ಹಾಗೂ ಕೂಲಿ ಶುಲ್ಕವಾಗಿ ರೂ 1 ಲಕ್ಷಕ್ಕಿಂತ ಹೆಚ್ಚು ಹಣ ಖರ್ಚುಮಾಡಿದ್ದರೆ ಮಹಿಪಾಲ್ ಈ ಯಂತ್ರವನ್ನು ನಿರ್ಮಿಸಲು ಆ ಮೊತ್ತದ ಅರ್ಧದಷ್ಟನ್ನು ಮಾತ್ರ ಖರ್ಚುಮಾಡಿರುವೆ ಎಂದು ತಿಳಿಸಿದ್ದಾರೆ. ಹೆಚ್ಚಿನ ನಿರ್ವಹಣೆಯ ಅಗತ್ಯವಿಲ್ಲದೆಯೇ ಈ ಯಂತ್ರವನ್ನು ಆಗಾಗ್ಗೆ ಬಳಸಬಹುದು ಎಂಬುದು ಮಹಿಪಾಲ್ ಅಭಿಪ್ರಾಯವಾಗಿದೆ. ಇಂತಹುದೇ ಯಂತ್ರಗಳನ್ನು ನಿರ್ಮಿಸಲು ಇವರಿಗೆ ಆರ್ಡರ್‌ಗಳು ದೊರೆಯುತ್ತಿದ್ದು ಸಾಕಷ್ಟು ಯಂತ್ರಗಳನ್ನು ನಿರ್ಮಿಸಿದ್ದೇನೆ ಎಂದು ತಿಳಿಸಿದ್ದಾರೆ.


ಸಾಕಷ್ಟು ಯಂತ್ರಗಳ ನಿರ್ಮಾಣ


2012 ರಲ್ಲಿ ವರುಣ್ ಇಂಜಿನಿಯರಿಂಗ್ ವರ್ಕ್ಸ್ ಹೆಸರಿನ ಸ್ವಂತ ಉದ್ಯಮವನ್ನು ಆರಂಭಿಸಿದ ಮಹಿಪಾಲ್, ರೈತರಿಗೆ ಬಜೆಟ್ ಬೆಲೆಯಲ್ಲಿ ಈ ಯಂತ್ರವನ್ನು ನಿರ್ಮಿಸಿದ್ದಾರೆ. ಇದಲ್ಲದೆ ಕೃಷಿಗೆ ಸಂಬಂಧಿತ ಇನ್ನಿತರ ಯಂತ್ರಗಳನ್ನು ರೈತರಿಗೆ ಕೈಗೆಟಕುವ ದರದಲ್ಲಿ ಪೂರೈಕೆ ಮಾಡುವ ಮಹಿಪಾಲ್, ಆದ್ಯತೆಗಳನ್ನು ಆಧರಿಸಿ ಯಂತ್ರಗಳನ್ನು ಕಸ್ಟಮೈಸ್ ಕೂಡ ಮಾಡುತ್ತಾರೆ ಎಂದು ತಿಳಿಸಿದ್ದಾರೆ.


ಮಹಿಪಾಲ್ ನಿರ್ಮಿಸಿರುವ ಯಂತ್ರದ ಕುರಿತ ಸುದ್ದಿಯು ತೆಲುಗು ಸುದ್ದಿವಾಹಿನಿಯಲ್ಲಿ ಬೆಳಕಿಗೆ ಬಂದ ನಂತರ ಇವರ ಖ್ಯಾತಿ ಇನ್ನಷ್ಟು ಹರಡಿತು ಎಂಬುದು ಮಹಿಪಾಲ್ ಮಾತಾಗಿದೆ. ಆ ಸಮಯದಲ್ಲಿ 12 ಯಂತ್ರಗಳನ್ನು ಮಾರಾಟ ಮಾಡಿದ್ದ ಮಹಿಪಾಲ್ ಇದೀಗ ತಮ್ಮ ಸಂಸ್ಥೆಯಲ್ಲಿ 12 ಉದ್ಯೋಗಿಗಳನ್ನು ಹೊಂದಿರುವುದಾಗಿ ತಿಳಿಸಿದ್ದು, ಇವರೆಲ್ಲರೂ ಕೃಷಿ ಯಂತ್ರೋಪಕರಣಗಳ ತಯಾರಿಯಲ್ಲಿ ತೊಡಗಿದ್ದಾರೆ ಎಂದು ತಿಳಿಸಿದ್ದಾರೆ.


ಇನ್ನಷ್ಟು ಆವಿಷ್ಕಾರಗಳನ್ನು ಮಾಡಿರುವ ಮಹಿಪಾಲ್ ಪವರ್ ವೀಡರ್ ಹಾಗೂ ಮಿನಿ ಟ್ರಾಕ್ಟರ್ ಅನ್ನು ನಿರ್ಮಿಸಿದ್ದಾರೆ ಎಂದು ತಿಳಿಸಿದ್ದಾರೆ. ಮಿನಿ ಟ್ರ್ಯಾಕ್ಟರ್ ಅನ್ನು ಟ್ರಾಲಿಗೆ ಸಂಪರ್ಕಿಸಿ 1 ಟನ್ ತೂಕದ ವಸ್ತುಗಳನ್ನು ಸಾಗಿಸಬಹುದು ಎಂಬುದು ಮಹಿಪಾಲ್ ಮಾತಾಗಿದೆ. 500 ಕೆಜಿ ವರೆಗೆ ಎತ್ತುವ ಹೈಡ್ರಾಲಿಕ್ ಲಿಫ್ಟ್ ಅನ್ನು ಕೂಡ ನಿರ್ಮಿಸಿರುವ ಕೃಷಿಕ ಮಹಿಪಾಲ್, ಅದನ್ನು ಇತರ ಕೈಗಾರಿಕೆಗಳಲ್ಲಿಯೂ ಬಳಸಿಕೊಳ್ಳಬಹುದು, ಎಂದು ಹೇಳುತ್ತಾರೆ.


ಇದನ್ನೂ ಓದಿ: ಬೈಕ್ ಕೊಡಿಸದ್ದಕ್ಕೆ ಮಂಟಪದಿಂದ ಓಡಿಹೋದ ವರ!


ಈ ಕ್ಷೇತ್ರವನ್ನು ಆರಿಸಿಕೊಳ್ಳಲು ಮೂಲ ಕಾರಣ ಭಾರತದ ರೈತರ ದುಸ್ಥಿತಿಯಾಗಿದೆ ಎಂದು ಮಹಿಪಾಲ್ ಹೇಳುತ್ತಾರೆ. ನನ್ನಂತೆಯೇ ಇಂದು ಹಲವಾರು ರೈತರು ಕಾರ್ಮಿಕ ವೆಚ್ಚ ಹಾಗೂ ಯಂತ್ರೋಪಕರಣಗಳ ಅಭಾವದಿಂದ ಬಳಲುತ್ತಿದ್ದಾರೆ ಜೊತೆಗೆ ಬಡತನ ಕೂಡ ಇದರೊಂದಿಗೆ ಕೈಜೋಡಿಸಿದೆ. ಈ ವ್ಯವಸ್ಥೆಯನ್ನು ಬದಲಾಯಿಸಲು ನನ್ನಿಂದಾದ ಪ್ರಯತ್ನವನ್ನು ನಾನು ಮಾಡಲಿರುವೆ ಎಂದು ಮಹಿಪಾಲ್ ತಿಳಿಸುತ್ತಾರೆ. ವರುಣ್ ಇಂಜಿನಿಯರಿಂಗ್ ವರ್ಕ್ಸ್ ಮಹಿಪಾಲ್ ಅವರ ಸ್ಥಳೀಯ ಪ್ರದೇಶವಾದ ಪರ್ಕಲ್‌ನಲ್ಲಿದೆ.




ಕೈಗೆಟಕುವ ಬೆಲೆ ಹಾಗೂ ಬಳಕೆದಾರ ಸ್ನೇಹಿ ಯಂತ್ರ


ಕೊಲ್ಹಾಪುರದಿಂದ ಇಂಜಿನ್‌ಗಳನ್ನು ಮತ್ತು ಹೈದರಾಬಾದ್‌ನಿಂದ ಮೆಟೀರಿಯಲ್ ಮತ್ತು ಗೇರ್‌ಗಳನ್ನು ಜೋಡಿಸಿ ಇದೀಗ ಯಂತ್ರಗಳನ್ನು ನಿರ್ಮಿಸುತ್ತಿರುವುದಾಗಿ ತಿಳಿಸಿರುವ ನವೋದ್ಯಮಿ ಮಹಿಪಾಲ್ ಇಲ್ಲಿಯವರೆಗೆ, 4,000 ಕ್ಕೂ ಹೆಚ್ಚು ಸಾಗುವಳಿದಾರರಿಗೆ ಯಂತ್ರವನ್ನು ರೂ 45,000 ರಿಂದ ರೂ 55,000 ಕ್ಕೆ ಮಾರಾಟ ಮಾಡಿರುವುದಾಗಿ ತಿಳಿಸಿದ್ದಾರೆ.


ಮಹಿಪಾಲ್ ಅವರಿಂದ ಕೃಷಿ ಯಂತ್ರಗಳನ್ನು ಅನೇಕ ರೈತರು ಖರೀದಿಸಿದ್ದು, ಉತ್ತಮ ಲಾಭವನ್ನು ಕೃಷಿಯಲ್ಲಿ ಪಡೆದುಕೊಳ್ಳುತ್ತಿರುವುದಾಗಿ ಅನಿಸಿಕೆ ಹಂಚಿಕೊಂಡಿದ್ದಾರೆ. ಎರಡು ವರ್ಷಗಳ ಹಿಂದೆ ಮಹಿಪಾಲ್ ಅವರಿಂದ ಸಾಗುವಳಿ ಯಂತ್ರ ಖರೀದಿಸಿದ್ದ ರೈತ ವಿಶ್ವೇಶರ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದು, ಈ ಯಂತ್ರದ ಸಹಾಯದಿಂದ ಪ್ರತಿ ಹಂಗಾಮಿನಲ್ಲಿ ಕನಿಷ್ಠ 50 ಸಾವಿರ ರೂ ಗಳಿಸುತ್ತಿರುವುದಾಗಿ ತಿಳಿಸಿದ್ದಾರೆ. ಯಂತ್ರ ಖರೀದಿ ಒಂದೇ ಬಾರಿಯ ಹೂಡಿಕೆ ಎಂದೆನಿಸಿದೆ ಇಲ್ಲಿಯವರೆಗೆ ಯಾವುದೇ ಹೆಚ್ಚಿನ ಖರ್ಚುಗಳನ್ನು ಯಂತ್ರಕ್ಕಾಗಿ ಮಾಡಿಲ್ಲ ಎಂದು ತಿಳಿಸಿರುವ ವಿಶ್ವೇಶರ ನಾನು ಇಲ್ಲಿಯವರೆಗೆ ಯಾವುದೇ ನಿರ್ವಹಣೆ ಮಾಡಿಲ್ಲ ಎಂದು ತಿಳಿಸಿದ್ದಾರೆ. ಯಾರ ಸಹಾಯವೂ ಇಲ್ಲದೆ ಸುಲಭವಾಗಿ ಕೃಷಿ ಕೆಲಸವನ್ನು ನಿಭಾಯಿಸುತ್ತೇನೆ ಎಂದು ತಿಳಿಸಿರುವ ವಿಶ್ವೇಶರ ಕಾರ್ಮಿಕ ಶುಲ್ಕವನ್ನು ಉಳಿಸಿರುವುದಾಗಿ ಹೇಳಿದ್ದಾರೆ. ರೈತರ ಜೀವನವನ್ನು ಉತ್ತಮಗೊಳಿಸಲು ಮಹಿಪಾಲ್ ಹೆಚ್ಚಿನ ಆವಿಷ್ಕಾರಗಳೊಂದಿಗೆ ಆಗಮಿಸುತ್ತಾರೆ ಎಂಬುದು ವಿಶ್ವೇಶರ ಅವರ ನಂಬಿಕೆಯಾಗಿದೆ.


ಪ್ರಸ್ತುತ, ಮಹಿಪಾಲ್ ಬ್ಯಾಟರಿಯಿಂದ ಚಲಿಸುವ ಮಿನಿ ಟ್ರ್ಯಾಕ್ಟರ್‌ನಲ್ಲಿ ಕೆಲಸ ಮಾಡುತ್ತಿದ್ದು, ಪೆಟ್ರೋಲಿಯಂ ಉತ್ಪನ್ನಗಳ ಹೆಚ್ಚಿನ ಬೆಲೆಯನ್ನು ಗಮನಿಸಿದರೆ, ಇತರ ಪರ್ಯಾಯಗಳಿಗೆ ಬದಲಾಯಿಸುವುದು ಉತ್ತಮ ಎಂಬುದು ಅವರ ಸಲಹೆಯಾಗಿದೆ. ಮಹಿಪಾಲ್ ಮಾಡಿರುವ ಆವಿಷ್ಕಾರಗಳಿಗಾಗಿ, ಮಹಿಪಾಲ್ ಅವರಿಗೆ 2015 ರಲ್ಲಿ ಭಾರತದ ರಾಷ್ಟ್ರಪತಿಗಳಿಂದ ರಾಷ್ಟ್ರೀಯ ಗ್ರಾಸ್‌ರೂಟ್ಸ್ ಇನ್ನೋವೇಶನ್ ಪ್ರಶಸ್ತಿ ಮತ್ತು 2018 ರಲ್ಲಿ ರಾಷ್ಟ್ರೀಯ ಉದ್ಯಮಶೀಲತಾ ಪ್ರಶಸ್ತಿಯನ್ನು ನೀಡಲಾಗಿದೆ.


ಇದನ್ನೂ ಓದಿ: ಪಾತ್ರೆ, ಲೋಟ ಬಾರಿಸುತ್ತಾ ಮದುವೆ ಮನೆಯಲ್ಲಿ ದೇಶಿ ಹುಡುಗರ ಕ್ರೇಜಿ ಡ್ಯಾನ್​; ವಿಡಿಯೋ ನೋಡಿ


ಈ ಎರಡೂ ಗೌರವಗಳು ನನ್ನ ಜೀವಮಾನದ ಸಾಧನೆ ಎಂದು ತಿಳಿಸಿರುವ ಮಹಿಪಾಲ್, ನಾನು ಕೂಡ ಜೀವನೋಪಾಯಕ್ಕಾಗಿ ಶ್ರಮಿಸುವ ರೈತ ಎಂಬುದಾಗಿ ನೆನಪಿಸಿಕೊಳ್ಳುತ್ತಾರೆ. ನಾನು ನಿರ್ಮಿಸಿದ ಯಂತ್ರಗಳು ಇಂದು ರೈತರ ಜೀವನವನ್ನು ಸುಗಮಗೊಳಿಸಿದೆ ಈ ಆನಂದ ನನಗಿದೆ ಎಂಬುದು ಮಹಿಪಾಲ್ ಮನದಾಳದ ಮಾತಾಗಿದೆ.

Published by:Sandhya M
First published: