ಉದ್ಯೋಗಿ (Employee) ವಜಾಗೊಳಿಸುವಿಕೆ ಎಂಬ ಪೆಡಂಭೂತ ಸದ್ಯಕ್ಕೆ ಅಂತ್ಯಗೊಳ್ಳುವಂತೆ ಕಾಣುತ್ತಿಲ್ಲ. ಟೆಕ್ ವಲಯದಲ್ಲಿ ಒಂದೊಂದೇ ಕಂಪನಿಗಳು ವೆಚ್ಚ ಕಡಿತದ ಹೆಸರಿನಲ್ಲಿ ಉದ್ಯೋಗಿ ವಜಾಗೊಳಿಸುವಿಕೆಗೆ ಮುಂದಾಗಿವೆ. ಮೆಟಾ, ಅಮೆಜಾನ್, ಟ್ವಿಟರ್, ಗೂಗಲ್ (Google) ಹೀಗೆ ಟೆಕ್ ದೈತ್ಯರೆಲ್ಲಾ ಅತ್ಯಂತ ಹೆಚ್ಚು ಪ್ರಮಾಣದಲ್ಲಿ ತಮ್ಮದೇ ಉದ್ಯೋಗಿಗಳನ್ನು ಕರುಣೆಯೇ ಇಲ್ಲದಂತೆ ಮನೆಗೆ ಕಳುಹಿಸಿದ್ದಾರೆ. ಇತ್ತೀಚೆಗೆ ತಾನೇ ಉತ್ತಮ ಸಂಬಳದೊಂದಿಗೆ (Salary) ನೇಮಕಗೊಂಡಿದ್ದ ಹಲವಾರು ಉದ್ಯೋಗಿಗಳು ಕೂಡ ಲೇ-ಆಫ್ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂಬುದು ಖೇದಕರ ಸಂಗತಿಯಾಗಿದೆ.
1,400 ಉದ್ಯೋಗಿಗಳಿಗೆ ಪಿಂಕ್ ಸ್ಲಿಪ್ ನೀಡಲಿರುವ ಮೆಕೆನ್ಸಿ ಸಂಸ್ಥೆ
ಇದೀಗ ಮ್ಯಾನೇಜ್‌ಮೆಂಟ್ ಕನ್ಸಲ್ಟಿಂಗ್ ಕಂಪನಿ ಮೆಕೆನ್ಸಿ ಕೂಡ ಸಿಬ್ಬಂದಿಗಳ ಸಂಖ್ಯೆಯಲ್ಲಿ ಹೆಚ್ಚುವರಿ ಏರಿಕೆಯಾಗಿದೆ ಹಾಗೂ ನಿರ್ವಹಣೆ ಕಷ್ಟ ಎಂಬ ಕಾರಣದಿಂದ ಮುಂದಿನ ವಾರದಿಂದಲೇ ಉದ್ಯೋಗಿಗಳನ್ನು ವಜಾಗೊಳಿಸಲು ಮುಂದಾಗಿದೆ ಎಂದು ವರದಿಯಾಗಿದೆ.
ಇತ್ತೀಚಿನ ವರದಿಯ ಅನ್ವಯ ಸರಿಸುಮಾರು 1,400 ಉದ್ಯೋಗಿಗಳನ್ನು ಒಂದೇ ಬಾರಿಗೆ ಮೆಕಿನ್ಸಿ ತೆಗೆದುಹಾಕುವ ಯೋಜನೆಯಲ್ಲಿದ್ದು ಇದು ಒಟ್ಟು ಉದ್ಯೋಗಿಗಳ 3% ಎಂಬುದಾಗಿ ತಿಳಿದು ಬಂದಿದೆ.
ಸಿಬ್ಬಂದಿಗಳ ಪ್ರಮಾಣದಲ್ಲಿ ಏರಿಕೆ
ಕಳೆದ ಐದು ವರ್ಷಗಳಲ್ಲಿ ಸಂಸ್ಥೆಯ ಉದ್ಯೋಗಿ ಪ್ರಮಾಣವು 28,000 ದಿಂದ 47,000 ಕ್ಕೆ ಏರಿಕೆಯಾಗಿದೆ ಎಂದು ಬ್ಲೂಮ್‌ಬರ್ಗ್ ವರದಿ ಮಾಡಿದೆ. 2012 ರಲ್ಲಿ ಸಿಬ್ಬಂದಿ ಪ್ರಮಾಣ 17,000 ಅಂದಾಜಿನಲ್ಲಿತ್ತು.
ಸಂಸ್ಥೆಯು ಕೆಲವೊಂದು ಬದಲಾವಣೆಗಳನ್ನು ಮಾಡಲು ನಿಶ್ಚಯಿಸಿದ್ದು, ಸಂಸ್ಥೆಯ ಬೆಳವಣಿಗೆ ಹಾಗೂ ಆದ್ಯತೆಗಳಿಗೆ ಅನುಸಾರವಾಗಿ ಹೊಸ ಹುದ್ದೆಗಳನ್ನು ಆಯ್ಕೆಮಾಡುವ ಸಮಯದಲ್ಲಿ ಸಂಸ್ಥೆಯ ಕೆಲವೊಂದು ಸಹೋದ್ಯೋಗಿಗಳಿಗೆ ವಿದಾಯ ಹೇಳುವುದು ಅನಿವಾರ್ಯವಾಗಿದೆ, ಇದು ಅತ್ಯಂತ ನೋವಿನ ಸಂಗತಿಯಾಗಿದೆ ಎಂದು ಜಾಗತಿಕ ವ್ಯವಸ್ಥಾಪಕ ಪಾಲುದಾರ ಬಾಬ್ ಸ್ಟರ್ನ್‌ಫೆಲ್ಸ್ ಮೆಕೆನ್ಸಿ ಸಿಬ್ಬಂದಿಗಳಿಗೆ ಕಳುಹಿಸಿರುವ ಟಿಪ್ಪಣಿಯಲ್ಲಿ ಬರೆದುಕೊಂಡಿದ್ದಾರೆ.
ಸಿಬ್ಬಂದಿಗಳಿಗೆ ಸೂಚನೆ ನೀಡಲಿರುವ ಸಂಸ್ಥೆ
ಈಗಿನಿಂದ, ಸ್ಥಳೀಯ ನಿಯಮಗಳು ಅನುಮತಿಸುವ ಸ್ಥಳದಲ್ಲಿ, ನಮ್ಮ ಸಂಸ್ಥೆಯನ್ನು ತೊರೆಯುವ ಅಥವಾ ಹುದ್ದೆಗಳನ್ನು ಬದಲಾಯಿಸಲು ಆಯ್ಕೆಯಾಗಿರುವ ಸಹೋದ್ಯೋಗಿಗಳಿಗೆ ನಾವು ಸೂಚನೆ ನೀಡಲಾರಂಭಿಸುತ್ತೇವೆ ಎಂಬ ಸ್ಟರ್ನ್‌ಫೆಲ್ಸ್ ಹೇಳಿಕೆಯನ್ನು ಬ್ಲೂಮ್‌ಬರ್ಗ್ ವರದಿ ಮಾಡಿದೆ.
ಕಳೆದ ತಿಂಗಳು, ಕೆಲವು ಮೆಕೆನ್ಸೆ ಉದ್ಯೋಗಿಗಳು ಸಂಸ್ಥೆಯು ಪ್ರಾಜೆಕ್ಟ್ ಮ್ಯಾಗ್ನೋಲಿಯಾ ಅಡಿಯಲ್ಲಿ 2,000 ಉದ್ಯೋಗಗಳನ್ನು ತೆಗೆದುಹಾಕಲು ಚಿಂತಿಸುತ್ತಿದೆ ಎಂದು ತಿಳಿಸಿದ್ದರು.
ಉದ್ಯೋಗಿ ವಜಾಗೊಳಿಸುವಿಕೆ ಕ್ರಮದ ಮೂಲಕ ಸಂಸ್ಥೆ ತನ್ನ ಪಾಲುದಾರರಿಗೆ ಪರಿಹಾರ ನಿಧಿಯನ್ನು ಉಳಿಸಲು ಸಹಾಯ ಮಾಡುತ್ತದೆ ಎಂಬುದಾಗಿ ನಿರೀಕ್ಷಿಸಲಾಗಿದೆ.
19,000 ಉದ್ಯೋಗಿಗಳನ್ನು ವಜಾಗೊಳಿಸಲಿರುವ ಆಕ್ಸೆಂಚರ್
ಐಟಿ ಪ್ರಮುಖ ಆಕ್ಸೆಂಚರ್ ಕಳೆದ ವಾರ ತನ್ನ ಹೆಡ್‌ಕೌಂಟ್ ಅನ್ನು 19,000 ಉದ್ಯೋಗಿಗಳಿಂದ ಕಡಿತಗೊಳಿಸುವುದಾಗಿ ಘೋಷಿಸಿರುವ ಸುದ್ದಿ ಕೂಡ ವರದಿಯಾಗಿದೆ.
ರಾಯಿಟರ್ಸ್ ವರದಿಯ ಅನ್ವಯ ತಂತ್ರಜ್ಞಾನ ಬಜೆಟ್‌ಗಳನ್ನು ಕಡಿತಗೊಳಿಸುವ ನಿಟ್ಟಿನಲ್ಲಿ ಆಕ್ಸೆಂಚರ್ ವಜಾ ಘೋಷಿಸಿದೆ ಎಂಬುದು ತಿಳಿದುಬಂದಿದೆ. ಆಕ್ಸೆಂಚರ್ ತನ್ನ ವಾರ್ಷಿಕ ಆದಾಯ ಮತ್ತು ಲಾಭದ ಅಂಕಿಅಂಶಗಳ ಮೇಲೇ ಮೇಲ್ವಿಚಾರಣೆ ಮಾಡಿದೆ.
ಆರ್ಥಿಕ ಹಿಂಜರಿತ ಕಾರಣವೇ?
ಕಂಪನಿಯು ತನ್ನ ವಾರ್ಷಿಕ ಆದಾಯದ ಬೆಳವಣಿಗೆ ಮತ್ತು ಲಾಭದ ಮುನ್ಸೂಚನೆಗಳನ್ನು ಮುಂದಿಟ್ಟುಕೊಂಡು ಆರ್ಥಿಕ ಹಿಂಜರಿತ ಹಾಗೂ ಉದ್ಯಮದ ಎಚ್ಚರಿಕೆಯ ಸೂಚನೆಗಳನ್ನು ಗಮನದಲ್ಲಿಟ್ಟುಕೊಂಡು ಉದ್ಯೋಗಿ ವಜಾಗೊಳಿಸುವಿಕೆಗೆ ಮುಂದಾಗಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ.
ಸಂಸ್ಥೆಯ ಒಟ್ಟು 2.5% ಸಿಬ್ಬಂದಿಗಳ ಕೆಲಸಕ್ಕೆ ಕತ್ತರಿ
ಸಂಸ್ಥೆಯ ವಜಾಗೊಳಿಸುವಿಕೆಯು ಕ್ಲೈಂಟ್ ಸೇವೆಗೆ ನೇರವಾಗಿ ಸಂಬಂಧಿಸದ ಆಡಳಿತಾತ್ಮಕ ಹೆಚ್ಚುವರಿ ಪ್ರಾಜೆಕ್ಟ್‌ಗಳಲ್ಲಿ ತೊಡಗಿಕೊಂಡಿರುವ 19,000 ಉದ್ಯೋಗಿಗಳ ಮೇಲೆ ಪರಿಣಾಮ ಬೀರಲಿದೆ ಎಂಬುದಾಗಿ ರಾಯಿಟರ್ಸ್ ವರದಿ ಮಾಡಿದೆ.
19,000 ಉದ್ಯೋಗಿಗಳನ್ನು ಸಂಸ್ಥೆಯು ವಜಾಗೊಳಿಸುತ್ತಿದ್ದು ಇದು ಸಂಸ್ಥೆಯ ಒಟ್ಟು ಸಿಬ್ಬಂದಿ ವರ್ಗದ 2.5% ದಷ್ಟನ್ನು ತೆಗೆದುಹಾಕುತ್ತದೆ ಎಂಬುದಾಗಿ ವರದಿಯಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ