ಈಗ ಮಾವಿನಹಣ್ಣಿನ ಸೀಸನ್ (Mango Season) ಶುರುವಾಗಿದೆ. ಮಾರುಕಟ್ಟೆಯಲ್ಲಿ ಎಲ್ಲಿ ನೋಡಿದರು ವಿವಿಧ ಜಾತಿಯ ಮಾವಿನಹಣ್ಣಿನದ್ದೇ ಕಾರುಬಾರು. ರಸಪುರಿ, ಸಿಂಧೂರ, ಮಲ್ಲಿಕಾ, ಬಾದಾಮಿ ಹೀಗೆ ತರಹೇವಾರಿ ಮಾವಿನಹಣ್ಣುಗಳನ್ನು ಸವಿಯಬಹುದು. ದರ ಸ್ವಲ್ಪ ಹೆಚ್ಚು ಕಡಿಮೆ ಇದ್ದರೂ ಜನರು ಮಾವಿನಹಣ್ಣುಗಳನ್ನು ಕೊಂಡುಕೊಳ್ಳೋದನ್ನು ಮಾತ್ರ ಕಡಿಮೆ ಮಾಡೋದಿಲ್ಲ. ಇನ್ನು, ಮಾವಿನಹಣ್ಣುಗಳಲ್ಲೇ ದೇವಗಡ ಮತ್ತು ರತ್ನಗಿರಿಯ ಅಲ್ಫಾನ್ಸೋ (Alphonso) ಮಾವು ಅತ್ಯುತ್ತಮ ಜಾತಿ ಎನಿಸಿದ್ದು, ಇದು ಸ್ವಲ್ಪ ದುಬಾರಿ ಕೂಡ. ಪ್ರಸ್ತುತ ಚಿಲ್ಲರೆ ಮಾರಾಟದಲ್ಲಿ ಅಲ್ಪಾನ್ಸೋ ಡಜನ್‌ಗೆ ₹800 ರಿಂದ ₹ 1,300 ರವರೆಗೆ ಮಾರಾಟವಾಗುತ್ತಿದೆ.
ಆಲ್ಪಾನ್ಸೊ ಮಾವಿನಹಣ್ಣಿಗೆ ಇಎಂಐ ಸೌಲಭ್ಯ
ಹೆಚ್ಚುತ್ತಿರುವ ಹಣದುಬ್ಬರದೊಂದಿಗೆ ಪುಣೆಯ ಹಣ್ಣು ಮಾರಾಟಗಾರರೊಬ್ಬರು ಮಾವಿನ ಹಣ್ಣಿನ ಮಾರಾಟ ಹೆಚ್ಚು ಮಾಡಲು ಹೊಸ ಟ್ರಿಕ್ ಉಪಯೋಗಿಸಿದ್ದಾರೆ. ಅದೇ ಇಎಂಐನಲ್ಲಿ ಹಣ್ಣಿನ ಮಾರಾಟ ಮಾಡುವಂಥ ಯೋಜನೆ! ಹೌದು, ಅಲ್ಫೋನ್ಸೊ ಮಾವಿನ ಹಣ್ಣುಗಳನ್ನು ಮಾಸಿಕ ಕಂತುಗಳು ಅಥವಾ EMI ಗಳಲ್ಲಿ ಮಾರಾಟ ಮಾಡಲು ಒಂದು ಪ್ರಯೋಗ ನಡೆಸಿದ್ದಾರೆ.
ಹೌದು, ಗುರುಕೃಪಾ ಟ್ರೇಡರ್ಸ್ ಮತ್ತು ಫ್ರೂಟ್ ಪ್ರಾಡಕ್ಟ್ಸ್‌ನ ಗೌರವ್ ಸನಾಸ್ ಅವರು ಅಲ್ಫೋನ್ಸೋ ಪ್ರೇಮಿಗಳು ತಮ್ಮ ಹಣಕಾಸಿನ ಚಿಂತೆಗಳನ್ನು ದೂರವಿರಿಸಿ ಹಣ್ಣುಗಳ ರಾಜನನ್ನು ಮನಃಪೂರ್ವಕವಾಗಿ ಆನಂದಿಸುವಂತೆ ಹೇಳುತ್ತಿದ್ದಾರೆ. ಅವರ ಪ್ರಕಾರ ಈ ಯೋಜನೆಯಿಂದ ಸಾಮಾನ್ಯವಾಗಿ ಅಲ್ಪಾನ್ಸೊವನ್ನು ಖರೀದಿಸಲು ಸಾಧ್ಯವಾಗದ ಸಾಮಾನ್ಯ ಜನರು ಸಹ ಈ ವರ್ಷ ಅದನ್ನು ಖರೀದಿಸಬಹುದು. ನಂತರ ನಿಧಾನವಾಗಿ ಇಎಂಐ ತುಂಬಬಹುದು ಎಂದು ಹೇಳುತ್ತಿದ್ದಾರೆ.
ಇದನ್ನೂ ಓದಿ: 200 ವಿಧದ ಬೋನ್ಸಾಯ್ ಸಂಗ್ರಹಿಸಿರುವ ವ್ಯಕ್ತಿ, ಲಕ್ಷ ಲಕ್ಷ ಕೊಟ್ಟರೂ ಮಾರಾಟ ಮಾಡಲ್ವಂತೆ
ಮಾದ್ಯಮದ ಜೊತೆಗೆ ಮಾತನಾಡಿದ ಗೌರವ್ ಸನಾಸ್, ರೆಫ್ರಿಜರೇಟರ್‌ಗಳು ಮತ್ತು ಹವಾನಿಯಂತ್ರಣಗಳನ್ನು ಕಂತುಗಳಲ್ಲಿ ಖರೀದಿಸಬಹುದಾದರೆ, ಮಾವಿನಹಣ್ಣನ್ನು ಏಕೆ ಖರೀದಿಸಬಾರದು? ತಮ್ಮ ಕುಟುಂಬದ ಔಟ್‌ಲೆಟ್ ಇಡೀ ದೇಶದಲ್ಲಿ ಇಎಂಐ ಮೇಲೆ ಮಾವಿನ ಹಣ್ಣುಗಳನ್ನು ಮಾರಾಟ ಮಾಡುವ ಮೊದಲ ಸ್ಥಾನದಲ್ಲಿದೆ ಎಂದು ಹೇಳಿದ್ದಾರೆ.
ಕೆಜಿ ಆಲ್ಸಾನ್ಸೊ ಗೆ ರೂ.800 ರಿಂದ 1300 ರೂ.!
ದೇವಗಡ ಮತ್ತು ರತ್ನಗಿರಿಯ ಅಲ್ಫಾನ್ಸೊ ಮಾವು ಅತ್ಯುತ್ತಮ ಜಾತಿಯ ಹಣ್ಣು ಎನಿಸಿದ್ದು, ಪ್ರಸ್ತುತ ಚಿಲ್ಲರೆ ಮಾರಾಟದಲ್ಲಿ ಡಜನ್‌ಗೆ ₹ 800 ರಿಂದ ₹ 1,300 ರವರೆಗೆ ಮಾರಾಟವಾಗುತ್ತಿದೆ.
"ಋತುವಿನ ಆರಂಭದಲ್ಲಿ ಬೆಲೆಗಳು ಯಾವಾಗಲೂ ತುಂಬಾ ಹೆಚ್ಚಿರುತ್ತವೆ. ರೆಫ್ರಿಜರೇಟರ್‌ಗಳು, ಎಸಿಗಳು ಮತ್ತು ಇತರ ಉಪಕರಣಗಳನ್ನು ಇಎಂಐನಲ್ಲಿ ಖರೀದಿಸಬಹುದೇ ಎಂದು ನಾವು ಯೋಚಿಸಿದ್ದೇವೆ, ಏಕೆ ಮಾವಿನಹಣ್ಣುಗಳನ್ನು ಖರೀದಿಸಬಾರದು? ಆಗ ಎಲ್ಲರೂ ಮಾವಿನಹಣ್ಣುಗಳನ್ನು ಖರೀದಿಸಬಹುದು," ಎಂದು ಗೌರವ್ ಸನಾಸ್ ತಿಳಿಸಿದ್ದಾರೆ.
ಇದನ್ನೂ ಓದಿ: ವೀಕೆಂಡ್‌ನಲ್ಲಿ ನಿಮ್ಮ ನಗರದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಎಷ್ಟಿದೆ? ಇಲ್ಲಿದೆ ವಿವರ
ಅಂದಹಾಗೆ ತನ್ನ ಔಟ್‌ಲೆಟ್‌ನಲ್ಲಿ EMIನಲ್ಲಿ ಹಣ್ಣುಗಳನ್ನು ಖರೀದಿಸುವ ವಿಧಾನವು ಮೊಬೈಲ್ ಫೋನ್‌ಗಳನ್ನು ಕಂತುಗಳಲ್ಲಿ ಖರೀದಿಸುವ ವಿಧಾನವನ್ನು ಹೋಲುತ್ತದೆ ಎಂದು ಸನಾಸ್ ವಿವರಿಸುತ್ತಾರೆ. ಅವರು ಪಾಯಿಂಟ್-ಆಫ್-ಸೇಲ್ (ಪಿಒಎಸ್) ಯಂತ್ರಗಳನ್ನು ಕೊಂಡಿದ್ದು ಅದು ಬಿಲ್ ಮೊತ್ತವನ್ನು ಇಎಂಐಗಳಾಗಿ ಪರಿವರ್ತಿಸಲು ಅನುವು ಮಾಡಿಕೊಡುತ್ತದೆ. ಆದರೆ ಗ್ರಾಹಕರು ಕೇವಲ ಕ್ರೆಡಿಟ್ ಕಾರ್ಡ್ ಅನ್ನು ಬಳಸಬೇಕಾಗುತ್ತದೆ. ಅದರ ನಂತರ ಅವರ ಮೊತ್ತವನ್ನು ಮೂರು, ಆರು ಮತ್ತು 12 ತಿಂಗಳ ಕಂತುಗಳಾಗಿ ಪರಿವರ್ತಿಸಲಾಗುತ್ತದೆ.
ಆದಾಗ್ಯೂ, ಈ ಯೋಜನೆಯು ಕನಿಷ್ಠ 5,000 ರೂ ಖರೀದಿಗೆ ಮಾತ್ರ ಲಭ್ಯವಿದೆ. ಇದುವರೆಗೆ ನಾಲ್ವರು ಗ್ರಾಹಕರು ಈ ಯೋಜನೆಯನ್ನು ಪಡೆದುಕೊಂಡಿದ್ದಾರೆ ಎಂದು ಗೌರವ್ ಸನಾಸ್ ಮಾಹಿತಿ ನೀಡಿದರು.
ಒಟ್ಟಾರೆ, ಮಾವಿನ ರುಚಿಗೆ ಮಾರುಹೋಗದವರಿಲ್ಲ. ಹಾಗಾಗಿಯೇ ಅದನ್ನು ಹಣ್ಣುಗಳ ರಾಜ ಅಂತ ಕರೆಯಲಾಗುತ್ತದೆ. ಹಾಗಾಗಿ ಬೆಲೆ ಸ್ವಲ್ಪ ಹೆಚ್ಚು ಕಡಿಮೆ ಇದ್ದರೂ ಮಾವಿನಹಣ್ಣನ್ನು ಖರೀದಿ ಮಾಡದೆಯಂತೂ ಇರೋದಿಲ್ಲ. ಅದರಲ್ಲೂ ಇಂಥ ಸ್ಕೀಮ್‌ಗಳು ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತವೆ ಅನ್ನೋದನ್ನು ಕಾದು ನೋಡಬೇಕಷ್ಟೇ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ