ಭಾರತದ ಅತಿದೊಡ್ಡ ವಿಮಾ ಸಂಸ್ಥೆಯಾದ ಭಾರತೀಯ ಜೀವ ವಿಮಾ ನಿಗಮದ (LIC) ಆರಂಭಿಕ ಸಾರ್ವಜನಿಕ ಕೊಡುಗೆ (IPO) ಈ ಹಣಕಾಸು ವರ್ಷದಲ್ಲಿ 2021-22ರಲ್ಲಿ ಬಿಡುಗಡೆಯಾಗುವ ಸಂಭವ ಕಡಿಮೆ ಎಂದ ವರದಿಯಾಗಿದೆ. ರಷ್ಯಾ-ಉಕ್ರೇನ್ ಯುದ್ಧವು (Russia vs Ukraine War) ಇನ್ನೂ ನಿಲ್ಲದೇ ದಿನೆ ದಿನೇ ಉಲ್ಬಣಗೊಳ್ಳುತ್ತಿರುವುದು ಮಾರುಕಟ್ಟೆಯ ಚಂಚಲತೆಗೆ ಕಾರಣವಾಗಿದೆ. ಯುದ್ಧದ ಪರಿಣಾಮ ಭಾರತಕ್ಕೂ ತಗುಲುತ್ತಿದ್ದು ಸರ್ಕಾರವು LIC ಯ ಮೆಗಾ IPO ಬಿಡುಗಡೆಯನ್ನು ಇನ್ನಷ್ಟು ಮುಂದೂಡಬಹುದು (LIC IPO Date) ಎಂದು ಹೇಳಲಾಗಿದೆ. LIC IPO ಕುರಿತು ಕೆಲವು ಹೊಸ ಮತ್ತು ಗಮನಾರ್ಹ ಮಾಹಿತಿಗಳು ಇಲ್ಲಿವೆ.
ಫೆಬ್ರವರಿ 13 ರಂದು, ಸರ್ಕಾರವು IPO ಗಾಗಿ ಕರಡು ರೆಡ್ ಹೆರಿಂಗ್ ಪ್ರಾಸ್ಪೆಕ್ಟಸ್ ಅನ್ನು (DRHP) SEBI ಗೆ ಸಲ್ಲಿಸಿತ್ತು. ಅದು ಕಳೆದ ವಾರ ತನ್ನ ಅನುಮೋದನೆಯನ್ನು ನೀಡಿತು.
ಮೇ 12ರವರೆಗೆ ಸಮಯವಿದೆ ಕೇಂದ್ರ ಸರ್ಕಾರಕ್ಕೆ ಮೇ 12 ರವರೆಗೆ ಮಾರುಕಟ್ಟೆ ನಿಯಂತ್ರಕ ಸೆಬಿಗೆ ಹೊಸದಾಗಿ ಪೇಪರ್ಗಳನ್ನು ಸಲ್ಲಿಸದೆಯೇ ಎಲ್ಐಸಿ ಐಪಿಒ ಪ್ರಾರಂಭಿಸಲು ಸಮಯಾವಕಾಶವಿದೆ. ಷೇರು ಮಾರುಕಟ್ಟೆ ನಿಯಂತ್ರಕ ಸೆಬಿಗೆ ಸಲ್ಲಿಸಿದ ದಾಖಲೆಗಳ ಆಧಾರದ ಮೇಲೆ ಐಪಿಒ ಅನಾವರಣಗೊಳಿಸಲು ಸರ್ಕಾರಕ್ಕೆ ಮೇ 12 ರವರೆಗೆ ಸಮಯವಿದೆ ಎಂದು ಮೂಲಗಳು ತಿಳಿಸಿವೆ. ಆದರೂ ಏಪ್ರಿಲ್ ತಿಂಗಳ ಆರಂಭದಲ್ಲಿ ಪಟ್ಟಿ ಮಾಡುವುದು ಅಸಂಭವವಾಗಿದೆ ಎಂದು ಮೂಲಗಳು ತಿಳಿಸಿವೆ.
60,000 ಕೋಟಿ ಆದಾಯ ಸಂಗ್ರಹ! ಸರ್ಕಾರವು ಸುಮಾರು 31.6 ಕೋಟಿ ಷೇರುಗಳನ್ನು ಅಥವಾ ಎಲ್ಐಸಿಯಲ್ಲಿನ ಕೇವಲ ಶೇಕಡಾ 5 ರಷ್ಟು ಷೇರುಗಳನ್ನು ಮಾರಾಟ ಮಾಡಲು ಯೋಜಿಸಿದೆ. ಇದು ಸರ್ಕಾರದ ಇದು ಬೊಕ್ಕಸಕ್ಕೆ ಸುಮಾರು ₹ 60,000 ಕೋಟಿಗಳಷ್ಟು ಹಣವನ್ನು ಒದಗಿಸಲಿದೆ ಎಂದು ಅಂದಾಜಿಸಲಾಗಿದೆ.
ಇತಿಹಾಸ ಬರೆಯೋದು ಪಕ್ಕಾ! ಎಲ್ಐಸಿ ಸಂಸ್ಥೆಯ ಕೇವಲ 5 ಶೇಕಡಾ ಷೇರುಗಳ LIC IPO ಭಾರತೀಯ ಷೇರು ಮಾರುಕಟ್ಟೆಯ ಇತಿಹಾಸದಲ್ಲಿ ದಾಖಲೆ ಬರೆಯುವುದು ನಿಶ್ಚಿತವಾಗಿದೆ. ಇದುವರೆಗೆ ಬಿಡುಗೊಂಡ ಎಲ್ಲ ಐಪಿಒಗಳಿಗಿಂತ ಎಲ್ಐಸಿ ಐಪಿಒ ಅತಿ ದೊಡ್ಡದಾಗಿರಲಿದೆ. ಒಮ್ಮೆ ಪಟ್ಟಿ ಮಾಡಲಾದ LIC ಯ ಮಾರುಕಟ್ಟೆ ಮೌಲ್ಯಮಾಪನವನ್ನು RIL ಮತ್ತು TCS ನಂತಹ ಉನ್ನತ ಕಂಪನಿಗಳಿಗೆ ಹೋಲಿಸಬಹುದು.
ವಿಮಾ ಕಂಪನಿಯಲ್ಲಿನ ಏಕೀಕೃತ ಷೇರುದಾರರ ಮೌಲ್ಯದ ಅಳತೆಯಾಗಿರುವ ಎಲ್ಐಸಿಯ ಎಂಬೆಡೆಡ್ ಮೌಲ್ಯವು ಸೆಪ್ಟೆಂಬರ್ 30, 2021 ರ ಹೊತ್ತಿಗೆ ಸುಮಾರು ₹ 5.4 ಲಕ್ಷ ಕೋಟಿ ಎಂದು ಅಂತರಾಷ್ಟ್ರೀಯ ವಿಮಾ ಸಂಸ್ಥೆ ಮಿಲಿಮನ್ ಅಡ್ವೈಸರ್ಸ್ ನಿಗದಿಪಡಿಸಿದೆ. LIC ಯ ಮಾರುಕಟ್ಟೆ ಮೌಲ್ಯಮಾಪನವನ್ನು DRHP ಬಹಿರಂಗಪಡಿಸದಿದ್ದರೂ, ಉದ್ಯಮದ ಮಾನದಂಡಗಳ ಪ್ರಕಾರ ಇದು ಎಂಬೆಡೆಡ್ ಮೌಲ್ಯದ ಸುಮಾರು 3 ಪಟ್ಟು ಹೆಚ್ಚಾಗುತ್ತದೆ.
ಯುದ್ಧ ಮುಗಿಯುವವರೆಗೆ ತಾಳ್ಮೆಯಿರಲಿ! ಉಕ್ರೇನ್ ಮೇಲೆ ರಷ್ಯಾದ ಆಕ್ರಮಣದ ಹಿನ್ನೆಲೆಯಲ್ಲಿ ಅಸ್ಥಿರವಾಗಿರುವ ಷೇರು ಮಾರುಕಟ್ಟೆಯು ಎಲ್ಐಸಿಯ ಮೆಗಾ ಐಪಿಒ ಬಿಡುಗಡೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಾಗುತ್ತಿದೆ.
ಹೀಗಾಗಿ ರಷ್ಯಾ ಉಕ್ರೇನ್ ಯುದ್ಧವು ನಿಲ್ಲುವವರೆಗೆ ಎಲ್ಐಸಿ ಐಪಿಒ ಬಿಡುಗಡೆಗೆ ಕೇಂದ್ರ ಸರ್ಕಾರವು ಕಾಯುತ್ತಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಜನರ ಪ್ರಕಾರ, ಸಂಭಾವ್ಯ ಹೂಡಿಕೆದಾರರೊಂದಿಗಿನ LICಯ ಆರಂಭಿಕ ಸಭೆಗಳಲ್ಲಿ ಹೆಚ್ಚಿನ ಆಸಕ್ತಿ ಕಂಡುಬಂದಿಲ್ಲ ಹಾಗೂ ಮಾರುಕಟ್ಟೆಯ ಏರಿಳಿತದ ನಡುವೆ ಅನೇಕ ನಿಧಿ ವ್ಯವಸ್ಥಾಪಕರು ಪ್ರಮುಖ ನಿರ್ಧಾರ ತೆಗೆದುಕೊಳೂವುದಕ್ಕೆ ಸಂಬಂಧಿಸಿದಂತೆ ಅತ್ಯಂತ ಎಚ್ಚರಿಕೆಯಿಂದ ಅಳೆದು ತೂಗಿ ಹೆಜ್ಜೆ ಇಡುತ್ತಿದ್ದಾರೆನ್ನಲಾಗುತ್ತಿದೆ.ಈ ಕುರಿತು ಹಣಕಾಸು ಸಚಿವಾಲಯದ ವಕ್ತಾರರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಹಾಗೂ ಸ್ವತಃ LIC ಸಂಸ್ಥೆಯೇ ಈ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದೆ.
Published by:guruganesh bhat
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ