ಇತರ ಟೆಕ್ ಸಂಸ್ಥೆಗಳ (Tech Companies) ಹಾದಿಯಲ್ಲೇ ಗೂಗಲ್ (Google) ಪೋಷಕ ಕಂಪನಿ ಆಲ್ಫಾಬೆಟ್ (Alphabet) ಕೂಡ ತನ್ನ ಸಿಬ್ಬಂದಿಗಳನ್ನು ವಜಾಗೊಳಿಸುವ (Layoffs) ನಿರ್ಧಾರಕ್ಕೆ ಬದ್ಧವಾಗಿದೆ ಎಂಬುದು ತಿಳಿದು ಬಂದಿದೆ. ತನ್ನ ಉದ್ಯೋಗಿ ಸಮೂಹದಲ್ಲಿ 6% ರಷ್ಟು ಅಂದರೆ 10,000 ಉದ್ಯೋಗಿಗಳನ್ನು ಸಂಸ್ಥೆಯಿಂದ ವಜಾಗೊಳಿಸುವ ತೀರ್ಮಾನಕ್ಕೆ ಆಲ್ಭಾಬೆಟ್ ಸಿದ್ಧವಾಗಿದೆ ಎಂಬುದು ವರದಿಗಳಿಂದ ತಿಳಿದುಬಂದಿದೆ. ನಿರೀಕ್ಷೆಗಿಂತ ಕಡಿಮೆ ಸಾಧನೆ ಮಾಡುವವರನ್ನು ಗುರುತಿಸಿದ ನಂತರ ಉದ್ಯೋಗಿ ವಜಾಗೊಳಿಸುವಿಕೆಯನ್ನು ಮಾಡಲಾಗುತ್ತದೆ ಎಂದು ಸಂಸ್ಥೆಯ ವಕ್ತಾರರು ತಿಳಿಸಿರುವುದಾಗಿ ವರದಿ ದೊರೆತಿದೆ.
ಉದ್ಯೋಗಿ ವಜಾಗೊಳಿಸುವ ಪ್ರಕ್ರಿಯೆ
ಟೆಕ್ ನ್ಯೂಸ್ ಪೋರ್ಟಲ್ 'ದಿ ಇನ್ಫಾರ್ಮೇಶನ್', ಜಾಗತಿಕ ಆರ್ಥಿಕ ಪರಿಸ್ಥಿತಿ ಹದಗೆಡುತ್ತಿದ್ದು ಇನ್ನೂ ಕಠಿಣವಾಗುತ್ತಿದೆ ಎಂದು ವರದಿ ಮಾಡಿದೆ. ಶ್ರೇಯಾಂಕ ಹಾಗೂ ಕಾರ್ಯಕ್ಷಮತೆ ಸುಧಾರಣೆ ಯೋಜನೆಯಲ್ಲಿ ಸಿಬ್ಬಂದಿಯನ್ನು ಮೌಲ್ಯಮಾಪನ ಮಾಡಲು ತಂಡದ ವ್ಯವಸ್ಥಾಪಕರಿಗೆ ತಿಳಿಸಲಾಗಿದೆ ಎಂದು ವಕ್ತಾರರು ಹೇಳಿದ್ದು ಇದನ್ನು ಅನುಸರಿಸಿ ಉದ್ಯೋಗಿಗಳನ್ನು ವಜಾಗೊಳಿಸುವ ಪ್ರಕ್ರಿಯೆ 2023 ರ ಆರಂಭದಲ್ಲಿಯೇ ಪ್ರಾರಂಭಗೊಳ್ಳಬಹುದು ಎಂಬುದಾಗಿ ಮಾಹಿತಿ ದೊರಕಿರುವುದಾಗಿ ಹೇಳಿದೆ.
ಹಿಂದಿನ ಕಾರ್ಯಕ್ಷಮತೆ ಪರಿಶೀಲನೆ ವ್ಯವಸ್ಥೆಯಲ್ಲಿ, ನಿರ್ವಾಹಕರು ಆ ಪಟ್ಟಿಯಲ್ಲಿ 2% ದಷ್ಟು ಉದ್ಯೋಗಿಗಳನ್ನು ಇರಿಸಬೇಕೆಂದು ನಿರೀಕ್ಷಿಸಲಾಗಿತ್ತು. ಗೂಗಲ್ ಇಲ್ಲವೇ ಆಲ್ಫಾಬೆಟ್ ವಜಾಗೊಳಿಸುವ ಯಾವುದೇ ಯೋಜನೆಗಳನ್ನು ಇದುವರೆಗೆ ದೃಢೀಕರಿಸಿಲ್ಲ. ಆದರೆ ಮುಖ್ಯ ಕಾರ್ಯನಿರ್ವಾಹಕ ಸುಂದರ್ ಪಿಚೈ ವಜಾಗೊಳಿಸುವ ಬಗ್ಗೆ ಈ ಹಿಂದೆ ಸುಳಿವು ನೀಡಿದ್ದರು.
ಹಿಂದಿಗಿಂತಲೂ ಕಡಿಮೆ ಸಂಪನ್ಮೂಲಗಳನ್ನು ನೀವು ಹೊಂದಿದ್ದಾಗ ಕೆಲಸ ಮಾಡಲು ಎಲ್ಲಾ ಸರಿಯಾದ ವಿಷಯಗಳಿಗೆ ಆದ್ಯತೆ ನೀಡುತ್ತಿದ್ದೀರಿ ಹಾಗೂ ನಿಮ್ಮ ಉದ್ಯೋಗಿಗಳು ನಿಜವಾಗಿಯೂ ಉತ್ಪಾದಕರಾಗಿದ್ದಾರೆ ಎಂದು ಗೂಗಲ್ ಒಂದು ಕಂಪನಿಯಾಗಿ ನಂಬುತ್ತದೆ ಎಂದು ಪಿಚೈ ತಿಳಿಸಿದ್ದರು.
ಉದ್ಯೋಗಿಗಳಿಗೆ ಬೋನಸ್ ನೀಡದಿರಲು ನಿರ್ಧಾರ
ಮಾಹಿತಿಯ ಪ್ರಕಾರ ಸಂಸ್ಥೆಯು ಬೋನಸ್ ಅನ್ನು ನೀಡದಿರಲು ಮ್ಯಾನೇಜರ್ಗಳಿಗೆ ಆದೇಶಿಸಿದೆ, ಇದು ಉದ್ಯೋಗಿ ಕಡಿತದ ಭಾಗವಾಗಿ ತೆಗೆದುಕೊಂಡಿರುವ ಮೊದಲ ನಿರ್ಧಾರವಾಗಿರಬಹುದು ಎಂಬುದಾಗಿ ವರದಿ ತಿಳಿಸಿದೆ.
ಸಿಲಿಕಾನ್ ವ್ಯಾಲಿಯಾದ್ಯಂತ ಉದ್ಯೋಗಿ ಕಡಿತದ ಸುದ್ದಿ ಹರಡುತ್ತಿದ್ದಂತೆ ಇದುವರೆಗೆ ಉದ್ಯೋಗಿಗಳನ್ನು ವಜಾಗೊಳಿಸದೇ ಇರುವ ಸಂಸ್ಥೆಯಾಗಿ ಗೂಗಲ್ ಕಂಡುಬಂದಿದೆ. ಆದರೆ ಕಂಪನಿಯ ಹೊರಗಿನ ಒತ್ತಡದಿಂದಾಗಿ ಕಾರ್ಮಿಕರ ಉತ್ಪಾದನೆಯನ್ನು ಸುಧಾರಿಸಲು ಸಂಸ್ಥೆಗೆ ಒತ್ತಡ ನಿರ್ಮಾಣವಾಗಿರುವುದರಿಂದ ಹೊಸ ಕಾರ್ಯಕ್ಷಮತೆ ನಿರ್ವಹಣಾ ವ್ಯವಸ್ಥೆಯು ಮುಂದಿನ ವರ್ಷದ ಆರಂಭದಲ್ಲಿ ಸಾವಿರಾರು ಕಳಪೆ ಉದ್ಯೋಗಿಗಳನ್ನು (ಉತ್ತಮ ಪ್ರದರ್ಶನ ತೋರದವರು) ಮನೆಗೆ ಕಳುಹಿಸುವ ಯೋಜನೆಯನ್ನು ನಿರ್ವಾಹಕರ ಮುಂದಿಟ್ಟಿದೆ ಎಂದು ವರದಿಯಾಗಿದೆ.
ಉದ್ಯೋಗಿ ವಜಾಗೆ ಮುಂದಾದ ಅತ್ಯುನ್ನತ ಟೆಕ್ ಕಂಪನಿಗಳು
ಸಾಂಕ್ರಾಮಿಕ ರೋಗವು ಕ್ಷೀಣಗೊಂಡ ನಂತರ ಹೆಚ್ಚಿನ ಟೆಕ್ ಕಂಪನಿಗಳು ಲಾಭವನ್ನು ಗಳಿಸುವ ನಿಟ್ಟಿನಲ್ಲಿ ಆನ್ಲೈನ್ ಚಟುವಟಿಕೆಯನ್ನು ಹೆಚ್ಚಿಸುವ ಪಣ ತೊಟ್ಟಿದ್ದವು ಆದರೆ ಅಂದುಕೊಂಡಂತೆ ಈ ಚಟುವಟಿಕೆಗಳು ನಡೆಯಲಿಲ್ಲ ಹಾಗಾಗಿಯೇ ಕಂಪನಿಗಳು ಉದ್ಯೋಗಿ ಕಡಿತದಂತಹ ಮಹತ್ವದ ತೀರ್ಮಾನಕ್ಕೆ ಕಟ್ಟುಬಿದ್ದಿವೆ ಎಂಬುದು ವರದಿಯಾಗಿದೆ.
ಫೇಸ್ಬುಕ್ ಸಂಸ್ಥಾಪಕ ಮತ್ತು ಮೆಟಾ ಮುಖ್ಯಸ್ಥ ಮಾರ್ಕ್ ಜುಕರ್ಬರ್ಗ್ ಅವರು 11,000 ಉದ್ಯೋಗಗಳನ್ನು ಕಡಿತಗೊಳಿಸಿದ್ದು, ಇದು ಕಂಪನಿಯ ಉದ್ಯೋಗಿಗಳ 13% ದಷ್ಟಿದೆ ಎಂಬ ಮಾಹಿತಿ ದೊರಕಿದೆ.
ಟ್ವಿಟರ್ ಅನ್ನು ಹೊಸ ಮಾಲೀಕ ಎಲೋನ್ ಮಸ್ಕ್ ವಶಪಡಿಸಿಕೊಂಡ ನಂತರ 7,000 ಉದ್ಯೋಗಿಗಳು ವಜಾಗೊಂಡಿದ್ದು ಇದು ಉದ್ಯೋಗಿ ಸಮೂಹದ 60% ದಷ್ಟು ಎಂದು ವರದಿಯಾಗಿದೆ. ನಷ್ಟದಲ್ಲಿ ಉದ್ಯಮವನ್ನು ನಡೆಸುವುದಿಲ್ಲ ಎಂದು ತಿಳಿಸಿರುವ ಎಲೋನ್ ಮಸ್ಕ್ ಬಹುತೇಕ ಎಲ್ಲವನ್ನೂ ಪುನರಚಿಸುವ ಅಗತ್ಯವಿದೆ ಎಂದು ತಿಳಿಸಿದ್ದಾರೆ.
ಗೂಗಲ್, ಆಲ್ಫಾಬೆಟ್ ಹೂಡಿಕೆದಾರರಿಂದ ಒತ್ತಡವನ್ನು ಎದುರಿಸುತ್ತಿದೆ. ಆಕ್ಟಿವಿಸ್ಟ್ ಹೂಡಿಕೆದಾರ ಟಿಸಿಐ ಫಂಡ್ ಮ್ಯಾನೇಜ್ಮೆಂಟ್ ಇತ್ತೀಚೆಗೆ ಕಂಪನಿಗೆ ಸಿಬ್ಬಂದಿಯನ್ನು ಕಡಿಮೆ ಮಾಡುವ ಮೂಲಕ ವೆಚ್ಚವನ್ನು ಕಡಿತಗೊಳಿಸುವ ಕರೆ ನೀಡಿದೆ. $6 ಶತಕೋಟಿ ಪಾಲನ್ನು ಸಂಸ್ಥೆಯಲ್ಲಿ ಹೊಂದಿರುವ ಟಿಸಿಐ ಫಂಡ್ 2017 ರಿಂದ ಆಲ್ಭಾಬೆಟ್ನಲ್ಲಿ ಹೂಡಿಕೆದಾರ ಎಂದೆನಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ