PF Money-ಮೊಬೈಲ್​ನಲ್ಲೇ ಆ್ಯಪ್ ಮೂಲಕ ಪಿಎಫ್ ಹಣ ಹಿಂಪಡೆಯುವ ವಿಧಾನ ಇದು

EPFO Service in UMANG App- ನಿಮ್ಮ ಪಿಎಫ್ ಅಕೌಂಟ್​ನಿಂದ ಹಣವನ್ನು ಹಿಂಪಡೆಯುವುದು ಬಹಳ ಸುಲಭ. ಸರ್ಕಾರದ UMANG ಆ್ಯಪ್ ಡೌನ್​ಲೋಡ್ ಮಾಡಿ, ಅಲ್ಲಿಂದ ನೀವು ಪಿಎಫ್ ಖಾತೆಯನ್ನ ನಿರ್ವಹಿಸಲು ಸಾಧ್ಯ.

ಉಮಂಗ್ ಆ್ಯಪ್

ಉಮಂಗ್ ಆ್ಯಪ್

  • News18
  • Last Updated :
  • Share this:
    ಸಂಬಳದಾರರಿಗೆ ಉಳಿತಾಯ ಹಣ ಕ್ರೋಢೀಕರಿಸಲು ನೆರವಾಗುವ ಉದ್ದೇಶದಿಂದ ನೀಡಲಾಗುವ ಪ್ರಾವಿಡೆಂಟ್ ಫಂಡ್ ಯೋಜನೆ ಬಹಳ ಮಹತ್ವದ್ದು. ನಿಮ್ಮ ನಿವೃತ್ತಿಯ ಬಳಿಕ ಬಳಕೆ ಆಗಲೆಂಬುದು ಈ ಯೋಜನೆಯ ಗುರಿ. ಆದರೆ, ಜೀವನದಲ್ಲಿ ಕೆಲ ತುರ್ತು ಸಂದರ್ಭಗಳು ಒದಗಿಯೋ, ಅಥವಾ ಒಳ್ಳೆಯ ಹೂಡಿಕೆ ಅವಕಾಶ ಸಿಕ್ಕೋ ನಿಮಗೆ ಪಿಎಫ್ ಹಣ ವಿತ್​ಡ್ರಾ ಮಾಡಿಕೊಳ್ಳಬೇಕಾಗಬಹುದು. ಕೆಲ ವರ್ಷಗಳ ಹಿಂದೆ ನೀವು ಪಿಎಫ್ ಹಣ ಹಿಂಪಡೆಯಬೇಕೆಂದಿದ್ದರೆ ಇಪಿಎಫ್​ಒ ಕಚೇರಿ ಮತ್ತು ಕಂಪನಿ ಕಚೇರಿಗೆ ಅಲೆದು ಅಲೆದು ಅಲವತ್ತುಕೊಳ್ಳಬೇಕಾಗಿತ್ತು. ಆದರೆ, ಈಗ ಸರ್ಕಾರ ಈ ಇಪಿಎಫ್​ಒ ವ್ಯವಸ್ಥೆಯನ್ನ ಬಹಳ ಸರಳಗೊಳಿಸಿದೆ, ಡಿಜಿಟಲೀಕರಣಗೊಳಿಸಿದೆ. ನೀವು ಕುಳಿತಲ್ಲಿಂದಲೇ ನಿಮ್ಮ ಪಿಎಫ್ ಖಾತೆಯಲ್ಲಿ ಹಣ ಎಷ್ಟಿದೆ ಇತ್ಯಾದಿಯನ್ನ ಮೊಬೈಲ್​ನಿಂದಲೇ ನೋಡಬಹುದು. ನೌಕರಿಯಲ್ಲಿ ಇದ್ದಾಗಲೇ ನಿಮ್ಮ ಪಿಎಫ್ ಹಣದ ಒಂದಷ್ಟು ಭಾಗವನ್ನು ವಿತ್​ಡ್ರಾ ಮಾಡಿಕೊಳ್ಳುವ ಅವಕಾಶವನ್ನೂ ಒದಗಿಸಿದೆ.

    ನೀವು ಸಂಬಳಕ್ಕೆ ಕೆಲಸ ಮಾಡುತ್ತಿದ್ದವರಾದರೆ ಬಹುಶಃ ಕಂಪನಿ ನಿಮಗೆ ಪಿಎಫ್ ಸೌಲಭ್ಯ ಕೊಡುತ್ತಿರಬಹುದು. ನಿಮ್ಮ ಸಂಬಳದ ನಿರ್ದಿಷ್ಟ ಭಾಗದ ಹಣವನ್ನು ನಿಮ್ಮ ಪಿಎಫ್ ಖಾತೆಗೆ ಹಾಕಲಾಗುತ್ತದೆ. ಕಂಪನಿಯೂ ಕೂಡ ಅಷ್ಟೇ ಮೊತ್ತವನ್ನು ಖಾತೆಗೆ ಜಮಾಯಿಸುತ್ತಾ ಹೋಗುತ್ತದೆ. ನೀವು ಕೆಲಸ ಮಾಡುವುದು ಮುಂದುವರಿದಂತೆ ಪ್ರತೀ ತಿಂಗಳು ನಿಮ್ಮ ಪಿಎಫ್ ಖಾತೆಗೆ ಹಣ ಬೀಳುತ್ತಿರುತ್ತದೆ. ಸರ್ಕಾರ ಈಗ ಪ್ರತಿಯೊಂದು ಪಿಎಫ್ ಖಾತೆಗೂ ಯುಎಎನ್ ನಂಬರ್ ಜೋಡಿಸಿದೆ. ಯುಎಎನ್ ನಂಬರ್ ಮೂಲಕ ನಿಮ್ಮ ಪಿಎಫ್ ಹಣ ನಿರ್ವಹಣೆ ಸುಲಭ ಆಗುತ್ತದೆ.

    UMANG ಆ್ಯಪ್:

    ನೀವು ಸರ್ಕಾರಿ ಸ್ವಾಮ್ಯದ UMANG ಆ್ಯಪ್ ಬಗ್ಗೆ ಕೇಳಿರಬಹುದು, ಬಳಸಿರಬಹುದು. ಅನೇಕ ಸರ್ಕಾರಿ ಸೇವೆಗಳು ಈ ಆ್ಯಪ್ ಮೂಲಕ ಲಭ್ಯ ಇವೆ. ಆಧಾರ್ ಕಾರ್ಡ್ ತಿದ್ದುಪಡಿ, ಎಲ್​ಪಿಜಿ ಗ್ಯಾಸ್ ಬುಕಿಂಗ್ ಇತ್ಯಾದಿ ಸೇವೆಗಳನ್ನ ಉಮಂಗ್ ಆ್ಯಪ್​ನಲ್ಲಿ ಬಳಸಬಹುದು. ಹಾಗೆಯೇ, ಪಿಎಫ್ ಖಾತೆಯನ್ನೂ ನೀವು ಇದರಿಂದಲೇ ನಿರ್ವಹಿಸಬಹುದು. ಪಿಎಫ್ ಹಣ ಹಿಂಪಡೆಯಬಹುದು.

    ಇದನ್ನೂ ಓದಿ: Blockchain Technology- ವಿಶ್ವಾಸಾರ್ಹ ಸಮಾಜಕ್ಕೆ ಬ್ಲಾಕ್​ಚೈನ್ ಟೆಕ್ನಾಲಜಿ ಅಗತ್ಯ: ಮುಕೇಶ್ ಅಂಬಾನಿ

    ಆಂಡ್ರಾಯ್ಡ್ ಮತ್ತು ಆ್ಯಪಲ್ ಎರಡರಲ್ಲೂ ಉಮಾಂಗ್ ಆ್ಯಪ್ ಲಭ್ಯ ಇದೆ. ನೀವು ಈ ಆ್ಯಪ್ ಡೌನ್​ಲೋಡ್ ಮಾಡಿಕೊಂಡು ನಿಮ್ಮ ಮೊಬೈಲ್ ಫೋನ್ ಅನ್ನು ನಮೂದಿಸಿರಿ. ಅದಕ್ಕೆ MPIN ಸೆಟ್ ಮಾಡಿ. ಬಳಿಕ ಈ ಆ್ಯಪ್​ಗೆ ನಿಮ್ಮ ಆಧಾರ್ ಸಂಖ್ಯೆ ನಮೂದಿಸಿ ಲಿಂಕ್ ಮಾಡಿ. ಇಷ್ಟಾದರೆ ಅರ್ಧ ಕೆಲಸ ಮುಗಿದಂತೆ. ಅನೇಕ ಸೇವೆಗಳು ನಿಮ್ಮ ಅಂಗೈಲಿದ್ದಂತೆಯೇ.

    ಈಗ ಪಿಎಫ್ ಹಣ ವಿತ್ ಡ್ರಾ ಮಾಡುವುದು ಹೀಗೆ:
    * UMANG ಆ್ಯಪ್ ಓಪನ್ ಮಾಡಿ, ಲಾಗಿನ್ ಆಗಿ.
    * ಅಲ್ಲಿ ನಿಮಗೆ “All Services” ಆಪ್ಷನ್ ಕಾಣಬಹುದು.  ಅದರ ಅಡಿಯಲ್ಲಿ ಸಿಗುವ EPFO ವಿಭಾಗ ಕ್ಲಿಕ್ ಮಾಡಿ.
    * ಆಗ ತೆರೆದುಕೊಳ್ಳುವ ಪಟ್ಟಿಯಲ್ಲಿ ಕಾಣುವ ‘Raise Claim’ ಅನ್ನು ಆಯ್ದುಕೊಳ್ಳಿ
    * ಈಗ ನಿಮ್ಮ ಇಪಿಎಫ್​ಒನ ಯುಎಎನ್ ನಂಬರ್ ಅನ್ನು ನಮೂದಿಸಿರಿ.
    * ನಿಮ್ಮ ಮೊಬೈಲ್ ನಂಬರ್​ಗೆ ಓಟಿಪಿ ಮೆಸೇಜ್ ಬರುತ್ತದೆ. ಆ ಓಟಿಪಿ ನಂಬರ್ ಅನ್ನು ನಮೂದಿಸಿ.
    * ಇಲ್ಲಿದೆ ನೀವು ನಿಮ್ಮ ಹಣ ಹಿಂಪಡೆಯಲು ಅರ್ಜಿ ಸಲ್ಲಿಸಿದಂತೆ. ಕೆಲ ದಿನಗಳಲ್ಲಿ ಪ್ರೋಸಸ್ ಆಗಿ ನಿಮ್ಮ ಹಣ ನಿಮ್ಮ ಅಕೌಂಟ್​ಗೆ ಸಂದಾಯ ಆಗುತ್ತದೆ.
    * ನಿಮ್ಮ ಮೊಬೈಲ್ ಫೋನ್​ಗೆ ಇಪಿಎಫ್​ಒ ಕ್ಲೈಮ್ ರೆಫೆರೆನ್ಸ್ ನಂಬರ್ ಇರುವ ಸಂದೇಶ ಬರುತ್ತದೆ. ಈ ನಂಬರ್ ಬಳಸಿ ನಿಮ್ಮ ಕ್ಲೇಮ್ ಮನವಿಯ ಸ್ಥಿತಿ ಹೇಗಿದೆ ಎಂದು ನೋಡಬಹುದು.

    ಇದನ್ನೂ ಓದಿ: Saving scheme: ಮುಪ್ಪಿನ ಕಾಲಕ್ಕೆ ಹಣದ ಚಿಂತೆ ಬಿಡಿ, ರಾಷ್ಟ್ರೀಯ ಪಿಂಚಣಿ ಪಡೆಯಿರಿ

    UMANG ಆ್ಯಪ್​ನಲ್ಲಿ ಯುಎಎನ್ ನಂಬರ್ ಆ್ಯಕ್ಟಿವೇಟ್ ಮಾಡಲು, ಕೋವಿಡ್ ತುರ್ತು ಬಳಕೆಗೆ ಮುಂಗಡವಾಗಿ ಹಣ ಪಡೆಯುವುದು ಇತ್ಯಾದಿ ಸೌಲಭ್ಯಗಳನ್ನ ಪಡೆಯಬಹುದು.
    Published by:Vijayasarthy SN
    First published: