Success Story: ಕಷ್ಟಗಳನ್ನೇ ಎದುರಿಸಿ ಸ್ವಂತ ಬ್ರಾಂಡ್ ಕಟ್ಟಿದ ಕರ್ನಾಟಕದ ಮಹಿಳೆ!

ಕಡು ಬಡತನದಲ್ಲಿ ಬದುಕಿ, ಕಠಿಣ ಪರಿಶ್ರಮದ ಮೂಲಕ ಹಂತ ಹಂತವಾಗಿ ಆರ್ಥಿಕ ಸ್ಥಿತಿಯನ್ನು ಉತ್ತಮಗೊಳಿಸಿಕೊಂಡು, ಇನ್ನಷ್ಟು ಬೆಳವಣಿಗೆ ಹೊಂದುವ ಗುರಿ ಇಟ್ಟುಕೊಂಡಿರುವ ಸಾಧಕಿ ಈಕೆ. ಜೊತೆಗೆ ಕಷ್ಟದಲ್ಲಿರುವವರಿಗೂ ಸಹಾಯ ಮಾಡುವ ಆಶಯ ಅವರಿಗಿದೆ.

ಮಹಾದೇವಿ

ಮಹಾದೇವಿ

  • Share this:
ಮಹಾದೇವಿ ಗಣಪತಿ ಅರೇರ್, ಹಾಲಿನ ಸ್ವಂತ ಬ್ರಾಂಡ್ ಅನ್ನು (Milk Brand) ಸ್ಥಾಪಿಸುವ ಕನಸು ಹೊತ್ತ ಕರ್ನಾಟಕದ ಮಹಿಳೆ. ಹಾಗೆಂದ ಮಾತ್ರಕ್ಕೆ ಈಕೆ ಸ್ವಂತ ಬ್ರಾಂಡ್ ಸ್ಥಾಪಿಸಲು ಸಾಕಷ್ಟು ಬಂಡವಾಳ ಹೊಂದಿರುವ ಶ್ರೀಮಂತ ಕುಟುಂಬದ ಮಹಿಳೆ ಎಂದುಕೊಂಡರೆ ನಿಮ್ಮ ಊಹೆ ತಪ್ಪಾದೀತು. ಮಹಾದೇವಿ (Mahadevi) ಎಂದೂ ಸುಲಭದ, ಆರಾಮದಾಯಕ ಬದುಕನ್ನು ಕಂಡವರಲ್ಲ. ಕಡು ಬಡತನದಲ್ಲಿ ಬದುಕಿ, ಕಠಿಣ ಪರಿಶ್ರಮದ ಮೂಲಕ ಹಂತ ಹಂತವಾಗಿ ಆರ್ಥಿಕ ಸ್ಥಿತಿಯನ್ನು (Financial Position) ಉತ್ತಮಗೊಳಿಸಿಕೊಂಡು, ಇನ್ನಷ್ಟು ಬೆಳವಣಿಗೆ (Growth) ಹೊಂದುವ ಗುರಿ ಇಟ್ಟುಕೊಂಡಿರುವ ಸಾಧಕಿ ಈಕೆ. ಜೊತೆಗೆ ಕಷ್ಟದಲ್ಲಿರುವವರಿಗೂ ಸಹಾಯ ಮಾಡುವ ಆಶಯ ಅವರಿಗಿದೆ.

ಒಂದು ಅಪಘಾತ ಜೀವನದ ದಿಕ್ಕನ್ನೇ ಬದಲಿಸಿತು
ಮಹಾದೇವಿ, ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಅರಬೈಲು ಗ್ರಾಮದ ನಿವಾಸಿ. ತಮ್ಮ ಗ್ರಾಮದ ಇತರರಂತೆ ಅಡಿಕೆ ತೋಟಗಳಲ್ಲಿ ದಿನಗೂಲಿಯಾಗಿ ದುಡಿದು ಜೀವನ ನಿರ್ವಹಣೆ ಮಾಡುತ್ತಿದ್ದವರು. ಆದರೆ, ಒಂದು ಅಪಘಾತ ಮಹಾದೇವಿ ಮತ್ತು ಅವರ ಕುಟುಂಬದ ಜೀವನದ ದಿಕ್ಕನ್ನೇ ಬದಲಿಸಿತು. ಕಟ್ಟಡ ಕಾಮಗಾರಿ ಸ್ಥಳದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಅವರ ಪತಿ ಅಪಘಾತಕ್ಕೆ ಈಡಾದರು. ಈ ಘಟನೆಯಿಂದ ಮಹಾದೇವಿಗೆ ತನ್ನ ಜಗತ್ತೇ ಬುಡಮೇಲಾದಂತೆ ಅನಿಸಿತು.

ಈ ಅಪಘಾತದ ಬಳಿಕ, ಮಹಾದೇವಿಯವರ ಪತಿ ಗಣಪತಿ ಅರೆರ್ ಅವರ ಆರೋಗ್ಯ ಹದಗೆಟ್ಟಿತು. ಅವರ ಎರಡು ಲಕ್ಷ ರೂಪಾಯಿಗಳನ್ನು ಚಿಕಿತ್ಸೆಗಾಗಿ ಖರ್ಚು ಮಾಡಿದ ಬಳಿಕ, ಅವರು ಇನ್ನು ಕೆಲಸ ಮಾಡುವುದು ಸಾಧ್ಯವಿಲ್ಲ ಎಂದು ವೈದ್ಯರು ಹೇಳಿದರು. ಹಾಗಾಗಿ, ಕುಟುಂಬ ನಿರ್ವಹಣೆಯ ಜವಾಬ್ದಾರಿಯನ್ನು ತನ್ನ ಹೆಗಲ ಮೇಲೆ ಹೊತ್ತುಕೊಳ್ಳುವುದರ ಹೊರತಾಗಿ ಮಹಾದೇವಿಯ ಬಳಿ ಬೇರೆ ಆಯ್ಕೆ ಇರಲಿಲ್ಲ. ಅವರ ಇಬ್ಬರು ಗಂಡು ಮಕ್ಕಳು ಆಗಿನ್ನೂ ವಿದ್ಯಾರ್ಥಿಗಳಾಗಿದ್ದರು.

ಇದನ್ನೂ ಓದಿ: China Economy Collapsed: ಚೀನಾದಲ್ಲಿ ಕುಸಿಯುತ್ತಿದೆ ಆರ್ಥಿಕ ಚಟುವಟಿಕೆ! ಏನು ಕಾರಣ?

ಪತಿ ಅಪಘಾತಕ್ಕೆ ಈಡಾಗಿ, ಕೆಲಸ ಮಾಡುವುದನ್ನು ನಿಲ್ಲಿಸಿದ ಆರಂಭದ ದಿನಗಳಲ್ಲಿ ಮಹಾದೇವಿ, ಅಡಿಕೆ ತೋಟಗಳಲ್ಲಿ ಕೆಲಸ ಮಾಡುವುದನ್ನು ಮುಂದುವರೆಸಿದರು. ಆದರೆ, ಅದರಿಂದ ಬರುವ ಹಣ ಪತಿಯ ಚಿಕಿತ್ಸೆಯ ವೆಚ್ಚಕ್ಕೆ ಮತ್ತು ಆಕೆಯ ಮಕ್ಕಳ ಓದಿಗೆ ಸ್ವಲ್ಪವೂ ಸಾಲುತ್ತಿರಲಿಲ್ಲ. ಆ ಕಾರಣದಿಂದ ಮಹಾದೇವಿ, ಆದಾಯ ಗಳಿಕೆಯ ಇತರ ಮೂಲಗಳನ್ನು ಕಂಡುಕೊಳ್ಳುವ ನಿರ್ಧಾರ ಮಾಡಿದರು.

“ನಮ್ಮ ಕುಟುಂಬ ಅತ್ಯಂತ ಕಷ್ಟಕರ ಆರ್ಥಿಕ ಪರಿಸ್ಥಿತಿಯನ್ನು ಎದುರಿಸುತ್ತಿತ್ತು ಮತ್ತು ಅಡಿಕೆ ತೋಟದಲ್ಲಿ ಕೆಲಸ ಮಾಡುತ್ತಾ ಇದ್ದರೆ, ಆ ಪರಿಸ್ಥಿತಿಯಿಂದ ಹೊರ ಬರುವುದು ಯಾವತ್ತೂ ಸಾಧ್ಯವಾಗದು ಎಂಬುವುದು ನನಗೆ ಅರ್ಥವಾಯಿತು. ಆಗ, ನಾನು ಸ್ವಂತವಾಗಿ ಏನನ್ನಾದರೂ ಮಾಡಬೇಕು ಎಂದು ಆಲೋಚಿಸತೊಡಗಿದೆ. ಹಾಗಾಗಿ ನಾನು ಒಂದು ಸ್ವ ಸಹಾಯ ಸಂಘಕ್ಕೆ ಸೇರಿದೆ ಮತ್ತು ಎನ್‍ಜಿಓ ಒಂದು ನಮಗೆ ಡೈರಿ ಉತ್ಪಾದನೆಯಲ್ಲಿ ತರಬೇತಿ ನೀಡಿತು. ಕೂಡಲೇ, ನಾನು ಮಾಡಬೇಕಿರುವುದು ಇದನ್ನೇ ಎಂಬುದು ತಿಳಿಯಿತು” ಎನ್ನುತ್ತಾರೆ ಮಹಾದೇವಿ.

ಚಿಕ್ಕ ಆರಂಭ
ಮನುವಿಕಾಸ ಎಂಬ ಒಂದು ಎನ್‍ಜಿಓ ಸಹಾಯದಿಂದ, ಸ್ವಾವಲಂಬಿಯಾಗುವ ಹಾದಿಯಲ್ಲಿ ಮಹಾದೇವಿ ತಮ್ಮ ಮೊದಲ ಹೆಜ್ಜೆಯನ್ನು ಇಟ್ಟರು. ಸ್ವಸಹಾಯ ಸಂಘದಿಂದ 70,000 ರೂ. ಸಾಲ ಪಡೆದು ಅವರು ಒಂದು ಹಸುವನ್ನು ಖರೀದಿಸಿದರು. ಲೀಟರ್‍ಗೆ 20 ರೂ. ನಂತೆ, ದಿನಕ್ಕೆ ನಾಲ್ಕು ಲೀಟರ್ ಹಾಲನ್ನು ಆಕೆ ಮಾರತೊಡಗಿದರು. ಅದರಿಂದ, ಮೊದಲ ತಿಂಗಳ ಅಂತ್ಯದಲ್ಲಿ, ಮಹಾದೇವಿ 3480 ರೂ. ಆದಾಯ ಗಳಿಸಿದರು.

ಇದನ್ನೂ ಓದಿ:  Tata Car Offers: ಟಾಟಾ ಕಾರುಗಳ ಮೇಲೆ ಭರ್ಜರಿ ಡಿಸ್ಕೌಂಟ್! ಯಾವ ಕಾರಿಗೆ ಎಷ್ಟು ರಿಯಾಯಿತಿ ಇಲ್ಲಿದೆ

“ಉದ್ಯಮದ ನಿರ್ವಹಣೆಯ ವೆಚ್ಚವನ್ನು ಕಳೆದ ಬಳಿಕ, ನನ್ನ ಮನೆಯ ಖರ್ಚಿಗಾಗಿ 1,500 ರೂ.ಗಳನ್ನು ಉಳಿಸುವುದು ನನಗೆ ಸಾಧ್ಯವಾಯಿತು” ಎನ್ನುತ್ತಾರೆ ಮಹಾದೇವಿ.

ಕಾಲ ಕಳೆದಂತೆ ಮಹಾದೇವಿ, ತಾನು ಕೂಡಿಡುತ್ತಾ ಬಂದ ಹಣದಲ್ಲಿ ಮತ್ತೊಂದು ಹಸುವನ್ನು ಖರೀದಿಸಿದರು. ಡೈರಿ ಉದ್ಯಮ ಆರಂಭಿಸಿದ ಎರಡು ವರ್ಷಗಳ ಒಳಗಾಗಿ, ಇನ್ನೂ ಎರಡು ಹಾಲು ಕೊಡುವ ಹಸುಗಳನ್ನು ಖರೀದಿಸುವ ಮೂಲಕ ತನ್ನ ಉದ್ಯಮವನ್ನು ವಿಸ್ತರಿಸುವುದು ಸಾಧ್ಯವಾಯಿತು. ಅಷ್ಟೇ ಅಲ್ಲ, ಅವರು ವ್ಯಾಪಾರದಲ್ಲಿನ ಪ್ರಗತಿಯನ್ನು ಗಮನಿಸಿ, ಪೂರ್ಣ ಪ್ರಮಾಣದ, ಪೂರ್ಣಾವಧಿಯ ಉದ್ಯಮವನ್ನು ಆರಂಭಿಸಲು 6,00,000 ರೂ.ಗಳ ವೈಯುಕ್ತಿಕ ಸಾಲವನ್ನು ಪಡೆಯಲು ನಿರ್ಧರಿಸಿದರು.

ಬೆಳವಣಿಗೆಯ ಹಾದಿಯಲ್ಲಿ
45 ವರ್ಷ ವಯಸ್ಸಿನ ಮಹಾದೇವಿ, ಈಗ 12 ಜಾನುವಾರುಗಳ ಒಡತಿ. ಅಂದರೆ ಅವರ ಬಳಿ ಈಗ ಹೈಫೋಲ್ಡ್, ಮಲೆನಾಡುಗಿಡ್ಡ , ಜೆರ್ಸಿ, ಗಿಡ್ಡಗಿರ್ ಇತ್ಯಾದಿ ತಳಿಗಳ ಹತ್ತು ಹಸುಗಳು ಮತ್ತು ಎರಡು ಎಮ್ಮೆಗಳಿವೆ. ದಿನಕ್ಕೆ 100 ಲೀಟರ್ ಹಾಲನ್ನು ಮಾರುವ ಅವರು, ನಿತ್ಯವೂ 3000 ರೂ. ಆದಾಯ ಗಳಿಸುತ್ತಿದ್ದಾರೆ. ಕೇವಲ ಹಸುಗಳಿಂದಲೇ ಬರೋಬ್ಬರಿ 80 ಲೀಟರ್ ಹಾಲನ್ನು ಪಡೆಯುತ್ತಿರುವ ಮಹಾದೇವಿ ಅವರು, ಅದರಲ್ಲಿ 40 ಲೀಟರ್‍ಗಳಷ್ಟು ಹಾಲನ್ನು ಕರ್ನಾಟಕ ಮಿಲ್ಕ್ ಫೆಡರೇಶನ್​ಗೆ (KMF) ಮಾರುತ್ತಾರೆ.

ಇದನ್ನೂ ಓದಿ:  Unicorns of India: ಭಾರತದಲ್ಲಿ ಅತ್ಯಧಿಕ ಉದ್ಯೋಗ ಸೃಷ್ಟಿಸಿದ ಕಂಪನಿಗಳಿವು!

ಮಹಾದೇವಿ ಹಾಲನ್ನು ಮಾತ್ರವಲ್ಲ, ಹಸುಗಳ ಸೆಗಣಿಯನ್ನು ಕೂಡ ಮಾರುತ್ತಾರೆ. ಅದು ಗೊಬ್ಬರವಾಗಿ ಬಳಸ್ಪಡುತ್ತದೆ. “ನಾನು ಪ್ರತಿವರ್ಷ, ಗೊಬ್ಬರ ರೂಪದಲ್ಲಿ 10-15 ಟ್ರಕ್‍ಗಳಷ್ಟು ಸೆಗಣಿಯನ್ನು ಮಾರುತ್ತಿದ್ದೇನೆ. ಒಂದು ಟ್ರಕ್‍ಲೋಡ್ ಗೊಬ್ಬರದ ಬೆಲೆ 9,000 ರೂ. ಮತ್ತು ನಾನು ಎಲ್ಲಾ 15 ಲೋಡ್‍ಗಳನ್ನು ಮಂಜುಗುಣಿ ಗ್ರಾಮದ ಕಾಂಟ್ರ್ಯಾಕ್ಟರ್ ಒಬ್ಬರಿಗೆ ಮಾರುತ್ತೇನೆ” ಎಂದು ಗೊಬ್ಬರದಿಂದ ಬರುವ ಆದಾಯದ ಬಗ್ಗೆ ಮಾಹಿತಿ ನೀಡುತ್ತಾರೆ ಮಹಾದೇವಿ.

ಗೃಹಿಣಿಯಿಂದ ಉದ್ಯಮಿಯಾದ ಸಾಧನೆ
ಮಹಾದೇವಿ ಅವರು ತಮ್ಮ ಡೈರಿ ಉದ್ಯಮದಿಂದ ಬರುವ ಆದಾಯವನ್ನು ಎರಡು ಭಾಗಗಳಾಗಿ ವಿಂಗಡಿಸಿದ್ದಾರೆ. ಬೆಳಗ್ಗೆ ಹಾಲು ಮಾರಿ ಬರುವ ಹಣವನ್ನು ಜಾನುವಾರುಗಳ ಮೇವು ಮತ್ತು ನಿತ್ಯದ ಇತರ ಖರ್ಚುಗಳಿಗೆ ಮೀಸಲು. ಸಂಜೆ ಹಾಲು ಮಾರಿ ಬಂದ ಆದಾಯ, ಸಾಲ ಕಂತು ಕಟ್ಟಲು, ವ್ಯವಹಾರ ವಿಸ್ತರಿಸಲು ಮತ್ತು ಉಳಿತಾಯಕ್ಕೆ ಮೀಸಲು.

ಡೈರಿ ಉದ್ಯಮದಿಂದ ಗಳಿಸಿದ ಆದಾಯದಿಂದ, ಮಹಾದೇವಿ ಅವರು ತಮ್ಮ ಪತಿಗೆ ಸೂಕ್ತ ವೈದ್ಯಕೀಯ ಚಿಕಿತ್ಸೆಯನ್ನು ಕೊಡಿಸುವುದು ಮತ್ತು ಇಬ್ಬರು ಮಕ್ಕಳ ವಿದ್ಯಾಭ್ಯಾಸದ ವೆಚ್ಚವನ್ನು ಭರಿಸುವುದು ಸಾಧ್ಯವಾಗುತ್ತಿದೆ. ಈಗಾಗಲೇ ಸಾಲದ 50 ರಷ್ಟು ಭಾಗವನ್ನು ತೀರಿಸಿರುವ ಮಹಾದೇವಿ ಅವರಲ್ಲಿ, ಉಳಿದ ಭಾಗವನ್ನು ಕೂಡ ತೀರಿಸಬಲ್ಲೆ ಎಂಬ ಆತ್ಮವಿಶ್ವಾಸ ಮೂಡಿದೆ. ಹಾಗೆಂದ ಮಾತ್ರಕ್ಕೆ, ದಿನಗೂಲಿ ಕಾರ್ಮಿಕಳಿಂದ ಹಿಡಿದು ಉದ್ಯಮವನ್ನು ಬೆಳೆಸುವುದರ ವರೆಗೆ ದಾರಿ ಸರಳವಾಗಿರಲಿಲ್ಲ.

ಇದನ್ನೂ ಓದಿ: Explained: ಪ್ರಧಾನ ಮಂತ್ರಿ ಆವಾಸ್ ಯೋಜನೆ ಎಂದರೇನು? ಇದನ್ನು ಯಾರು ಪಡೆಯಬಹುದು?

“ಉದ್ಯಮದ ಆರಂಭದ ದಿನಗಳಲ್ಲಿ, ನನ್ನ ಪತಿ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದ ಕಾರಣದಿಂದ, ನಾನು ಮನೆ ಮತ್ತು ಆಸ್ಪತ್ರೆಯ ನಡುವೆ ಒದ್ದಾಡಬೇಕಿತ್ತು. ನಾನು ಬೆಳಿಗ್ಗೆ ಹಾಲು ಮಾರಿ, ಸಂಜೆಯೊಳಗೆ ಆಸ್ಪತ್ರೆ ವೆಚ್ಚಕ್ಕಾಗಿ ಹಾಗೂ ಮನೆ ನಡೆಸಲು ಹಣವನ್ನು ಸಂಗ್ರಹಿಸಬೇಕಿತ್ತು” ಎಂದು ತನ್ನ ನೋವಿನ ದಿನಗಳ ನೆನಪುಗಳನ್ನು ಮೆಲುಕು ಹಾಕುತ್ತಾರೆ ಆಕೆ. ಈಗಲೂ ಮಹಾದೇವಿಯವರಿಗೆ ಅನಿರೀಕ್ಷಿತ ಸವಾಲುಗಳು ಎದುರಾಗುತ್ತವೆ, ಆದರೆ ಅವರಿಗೀಗ ಅವೆಲ್ಲವನ್ನು ಎದುರಿಸಿ ನಿಲ್ಲುವ ಧೈರ್ಯ ಬಂದಿದೆ.

“ಇತ್ತೀಚೆಗೆ, ನಾನು 60,000 ರೂ.ಗಳನ್ನು ಕೊಟ್ಟು ಖರೀದಿಸಿದ್ದ, 24 ಲೀಟರ್ ಹಾಲು ನೀಡುತ್ತಿದ್ದ ಹಸುವೊಂದು ಮಾಸ್ಟಿಟಿಸ್‍ನಿಂದ ಸತ್ತು ಹೋಯಿತು. ಅದರ ಔಷಧಿ ಮತ್ತು ಚಿಕಿತ್ಸೆಗಾಗಿ ಸುಮಾರು 80,000 ರೂ.ಗಳನ್ನು ಖರ್ಚು ಮಾಡಿದರೂ ಕೂಡ ಅದನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ” ಎನ್ನುತ್ತಾರೆ ಮಹಾದೇವಿ.

ಉದ್ಯಮ ಮತ್ತಷ್ಟು ಬೆಳೆಯಬೇಕು
ಇಂದು ಮಹಾದೇವಿ, ಸುತ್ತಮುತ್ತಲಿನವರಿಗೆ ತನ್ನ ಕೈಲಾದಷ್ಟು ಸಹಾಯ ಮಾಡಬೇಕೆಂಬ ದಿಟ್ಟ ನಿರ್ಧಾರವನ್ನು ಹೊಂದಿರುವ, ಒಬ್ಬ ಪ್ರಬಲ ಮಹಿಳಾ ಉದ್ಯಮಿ. 12 ಜಾನುವಾರುಗಳು ಮತ್ತು ಅವುಗಳ ಕರುಗಳಿಗೆ, ಮಹಾದೇವಿ ಹೊಂದಿರುವ ಪುಟ್ಟ ಜಾಗ ಈಗ ಸಾಲುತ್ತಿಲ್ಲ. ಅದನ್ನು ವಿಸ್ತರಿಸುವ ಕೆಲಸ ಮುಂದಿದೆ. ಅಲ್ಲದೇ, ತನ್ನ ಸ್ವಂತ ಡೈರಿ ಬ್ರಾಂಡ್ ಅನ್ನು ಆರಂಭಿಸಿ, ತನ್ನ ಗ್ರಾಮದ ಕೆಲವು ಮಹಿಳೆಯರಿಗಾದರೂ ಉದ್ಯೋಗಾವಕಾಶ ನೀಡಬೇಕು ಎಂಬ ಆಶಯ ಮಹಾದೇವಿ ಅವರದ್ದು.

ಇದನ್ನೂ ಓದಿ: Work from Home: 90% ಉದ್ಯೋಗಿಗಳಿಗೆ ಪರ್ಮನೆಂಟ್ ವರ್ಕ್​ ಫ್ರಂ ಹೋಂ ಕೊಟ್ಟ ಕಂಪನಿ, ಎಲ್ರೂ ಖುಷ್

“ನನ್ನ ಮುಂದಿನ ಗುರಿ ನನ್ನ ಫಾರ್ಮ್ ಅನ್ನು ವಿಸ್ತರಿಸುವುದು ಮತ್ತು ಆ ಬಳಿಕ ನಮ್ಮ ಸ್ವಂತ ಬ್ರಾಂಡ್‍ನ ಹಾಲನ್ನು ಮತ್ತು ಇತರ ಉತ್ಪನ್ನಗಳನ್ನು ಬಿಡುಗಡೆ ಮಾಡುವುದು. ನಾನು ಗ್ರಾಮದಲ್ಲಿನ ಸಣ್ಣ ಡೈರಿ ವ್ಯಾಪಾರಿಗಳಿಂದ ಹಾಲನ್ನು ಖರೀದಿಸುವ ಮತ್ತು ಅದನ್ನು ಒಂದು ಹೊಸ ಬ್ರಾಂಡ್‍ನ ಅಡಿಯಲ್ಲಿ ಮಾರುವ ಯೋಜನೆಯನ್ನು ಹೊಂದಿದ್ದೇನೆ. ಇದು ಒಂದು ಸವಾಲಿನ ಕೆಲಸವಾಗಲಿದೆ ಎಂಬುವುದು ನನಗೆ ಗೊತ್ತಿದೆ, ಆದು ಒಂದು ದೀರ್ಘ ಅವಧಿಯ ಗುರಿಯಾಗಿದೆ” ಎಂದು ತಮ್ಮ ಸ್ವಂತ ಬ್ರಾಂಡ್ ಕುರಿತ ಕನಸನ್ನು ಹಂಚಿಕೊಳ್ಳುತ್ತಾರೆ ಮಹಾದೇವಿ.
Published by:Ashwini Prabhu
First published: