ಈ ಬಾರಿಯ ಬಜೆಟ್‌ನಲ್ಲಿ (Budget) ಸಿಎಂ ಬಸವರಾಜ ಬೊಮ್ಮಾಯಿ (CM Basavaraj Bommai) ಹಲವಾರು ಪ್ರಮುಖ ಘೋಷಣೆಗಳನ್ನು ಮಾಡಿದ್ದಾರೆ. ಈ ಬಾರಿಯ ರಾಜ್ಯ ಬಜೆಟ್ ನಲ್ಲಿ ಸಿಎಂ ಬೊಮ್ಮಾಯಿ ಭರ್ಜರಿ ಗಿಫ್ಟ್ ನೀಡಿದ್ದಾರೆ. ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ (PMJJBY) ಬಗ್ಗೆಯೂ ಸಿಎಂ ಪ್ರಮುಖ ಘೋಷಣೆ ಮಾಡಿದ್ದಾರೆ. ಈ ಯೋಜನೆಯು ನಾಗರಿಕರಿಗೆ ಅವರ ಕುಟುಂಬಗಳಿಗೆ ಆರ್ಥಿಕ ಭದ್ರತೆಯನ್ನು ಖಾತರಿಪಡಿಸುವ ಮೂಲಕ ಪ್ರಯೋಜನವನ್ನು ನೀಡುತ್ತದೆ. ಈ ಯೋಜನೆಯಡಿಯಲ್ಲಿ ಪಾಲಿಸಿದಾರರ ಕುಟುಂಬಕ್ಕೆ ಭಾರತ ಸರ್ಕಾರವು 2 ಲಕ್ಷ ರೂಪಾಯಿ ನೀಡುತ್ತೆ. ಈ ಯೋಜನೆಗೆ ಅರ್ಜಿ ಸಲ್ಲಿಸುವ ಮೂಲಕ ಎಲ್ಲಾ ಭಾರತೀಯ ನಾಗರಿಕರು PMJJBY ಯಿಂದ ರಕ್ಷಣೆ ಪಡೆಯಬಹುದು. 56 ಲಕ್ಷ ರೈತರಿಗೆ 180 ಕೋಟಿ ರೂ ವೆಚ್ಚದಲ್ಲಿ ಜೀವನ್ ಜ್ಯೋತಿ ವಿಮಾ ಯೋಜನೆ ಮಾಡಿಸುವುದಾಗಿ ಸಿಎಂ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ.
ಫಸಲ್ ಬಿಮಾ ಯೋಜನೆಯಡಿ 86 ಲಕ್ಷ ರೈತರ ಬೆಳೆ ವಿಮೆಗಾಗಿ 4,900 ಕೋಟಿ ರೂಪಾಯಿ ಪ್ರೀಮಿಯಂ ಪಾವತಿಸಲಾಗಿದೆ ಎಂದು ಸಿಎಂ ಹೇಳಿದರು.
ಭೂಸಿರಿ ನೂತನ ಯೋಜನೆ!
ಕಿಸಾನ್ ಕ್ರೆಡಿಟ್ ಕಾರ್ಡ್ ಹೊಂದಿರುವ ರೈತರಿಗೆ ಭೂಸಿರಿ ಎಂಬ ನೂತನ ಯೋಜನೆಯಡಿ 2023-24ನೇ ಸಾಲಿನಿಂದ 10 ಸಾವಿರ ರೂ. ಗಳ ಹೆಚ್ಚುವರಿ ಸಹಾಯ ಧನ ನೀಡಲು ನಿರ್ಧರಿಸಲಾಗಿದೆ. ರೈತರಿಗೆ ಬೀಜ, ತುರ್ತು ರಸಗೊಬ್ಬರ, ಕ್ರಿಮಿನಾಶಕ ಮುಂತಾದ ಪರಿಕರಗಳನ್ನು ಖರೀದಿಸಲು ಇದರಿಂದ ಅನುಕೂಲವಾಗಲಿದೆ. ಈ ಮೊತ್ತದಲ್ಲಿ ರಾಜ್ಯ ಸರ್ಕಾರದ 2,500 ರೂ. ಹಾಗೂ ನಬಾರ್ಡ್‌ನ 7,500 ರೂ. ಸೇರಿದ್ದು, ರಾಜ್ಯದ ಸುಮಾರು 50 ಲಕ್ಷ ರೈತರಿಗೆ ಅನುಕೂಲವಾಗಲಿದೆ.
ಬೆಳೆ ಹಾನಿಯಾದ ರೈತರ ಖಾತೆಗೆ ಹಣ ಜಮೆ!
ರಾಜ್ಯದಲ್ಲಿ ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಪ್ರಥಮ ಬಾರಿಗೆ ಬೆಳೆ ಹಾನಿಗೆ ಕೇಂದ್ರವು ನಿಗದಿ ಪಡಿಸಿರುವ ಪರಿಹಾರವನ್ನು ಹೆಚ್ಚಿಸಿ ರಾಜ್ಯ ಸರ್ಕಾರವು ಪರಿಷ್ಕೃತ ದರದಲ್ಲಿ ದಾಖಲೆಯ ಅವಧಿಯಲ್ಲಿ ರೈತರ ಬ್ಯಾಂಕ್ ಖಾತೆಗೆ ನೇರವಾಗಿ ಪರಿಹಾರವನ್ನು ಜಮೆ ಮಾಡಿದೆ. 2022-23ನೇ ಸಾಲಿನಲ್ಲಿ 13.09 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾದ 14.63 ಲಕ್ಷ ರೈತರ ಬ್ಯಾಂಕ್ ಖಾತೆಗೆ ನೇರವಾಗಿ 2,031 ಕೋಟಿ ರೂ. ಗಳನ್ನು 2 ತಿಂಗಳೊಳಗೆ ಜಮೆ ಮಾಡಲಾಗಿದೆ ಎಂದು ಬಜೆಟ್‌ನಲ್ಲಿ ಸರ್ಕಾರ ತಿಳಿಸಿದೆ.
ಇದನ್ನೂ ಓದಿ: ಸರ್ಕಾರದ ಬೊಕ್ಕಸ ತುಂಬಿದ ಅಬಕಾರಿ ಇಲಾಖೆ; ಆದಾಯದಲ್ಲಿ ಶೇಕಡಾ 10ರಷ್ಟು ಹೆಚ್ಚಳ
ಅಡಿಕೆ ಬೆಳೆಗಾರರಿಗೆ ಗುಡ್ ನ್ಯೂಸ್!
ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಹೆಚ್ಚಾಗಿ ಕೃಷಿಕರು ಅಡಿಕೆ ಬೆಳೆಯನ್ನು ಅವಲಂಬಿಸಿದ್ದು, ವಾಣಿಜ್ಯ ಬೆಳೆಯಾಗಿರುವ ಅಡಿಕೆ ಇತ್ತಿಚಿನ ವರ್ಷಗಳಲ್ಲಿ ಅನೇಕ ರೋಗಗಳಿಗೆ ತುತ್ತಾಗುತ್ತಿದೆ. ಈ ನಿಟ್ಟಿನಲ್ಲಿ ಅಡಿಕೆ ಬೆಳೆಗಾರರ ಬವಣೆ ತಪ್ಪಿಸಲು ಸಿಎಂ ಬೊಮ್ಮಾಯಿ ಅಡಿಕೆ ಬೆಳೆಗಾರರಿಗೆ ಸಂತಸದ ಸುದ್ದಿ ನೀಡಿದ್ದಾರೆ. ಈ ಬಾರಿಯ ಬಜೆಟ್‌ನಲ್ಲಿ ಅಡಿಕೆ ಬೆಳೆಗಾರರ ಕಣ್ಣೀರೊರೆಸಲು ಪ್ರಯತ್ನ ಮಾಡಿರುವ ಅವರು, ಅಡಿಕೆ ಕೃಷಿಗೆ ಬಾಧಿಸಿರುವ ರೋಗಗಳಿಗೆ ಪರಿಹಾರ ಹುಡುಕಲು ಅನುದಾನ ಘೋಷಿಸಿದ್ದಾರೆ.
ಅಡಿಕೆ ರೋಗ ನಿರ್ವಹಣೆಗೆ 10 ಕೋಟಿ ರೂಪಾಯಿ ನಿಗದಿ
ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ಎಲೆ ಚುಕ್ಕಿ ರೋಗ ಸೇರಿದಂತೆ ಇನ್ನಿತರ ಹೊಸ ಹೊಸ ರೋಗಗಳನ್ನು ಅಡಿಕೆ ಕೃಷಿ ಎದುರಿಸುತ್ತಿದ್ದು, ಹೀಗಾಗಿ ಅಡಿಕೆ ಬೆಳೆಯನ್ನು ಬಾಧಿಸುವ ರೋಗಗಳ ನಿರ್ವಹಣೆಗೆ ನೂತನ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸುವ ಜೊತೆಗೆ ಉತ್ಪಾದಕತೆ ಹೆಚ್ಚಿಸುವ ಅಗತ್ಯತೆಯನ್ನು ಮನಗಂಡು ತೀರ್ಥಹಳ್ಳಿಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರಕ್ಕೆ 10 ಕೋಟಿ ರೂಪಾಯಿ ನೆರವನ್ನು ಘೋಷಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ