ಚಿನ್ನ ಭಾರತದ ಸಂಪ್ರದಾಯದಲ್ಲಿ ಹಾಸುಹೊಕ್ಕಾಗಿ ಸೇರಿರುವ ಒಂದು ಲೋಹ. ಎರಡು ಕಾರಣಕ್ಕೆ ಚಿನ್ನಕ್ಕಾಗಿ (Gold has great demand in India) ಜನರು ಮುಗಿಬೀಳುತ್ತಾರೆ. ಒಂದು, ಸಭೆ ಸಮಾರಂಭಗಳಿಗೆ ಒಡವೆ ಧರಿಸಿಹೋಗುವುದು ಒಂದು ಪ್ರತಿಷ್ಠೆಯ ವಿಚಾರ, ಜೊತೆಗೆ ಸಂಪ್ರದಾಯದ ವಿಚಾರವೂ ಹೌದು. ಹೀಗಾಗಿ, ಹೆಂಗಳೆಯರು ಸೀರೆಯಂತೆ ಚಿನ್ನಕ್ಕಾಗಿ ಸದಾ ಹಾತೊರೆಯುತ್ತಾರೆ. ಮನೆಯಲ್ಲಿ ಒಡವೆ ಇದ್ದರೆ ಬ್ಯಾಂಕ್ನಲ್ಲಿ ಸಾಲ ಪಡೆಯುವುದು ತೀರಾ ಸುಲಭ. ಚಿನ್ನ ಅಡವಿಟ್ಟರೆ ಸಾಕು ಸಾಲ ಕ್ಷಣಮಾತ್ರದಲ್ಲಿ ಸಿಗುತ್ತದೆ. ಬ್ಯಾಂಕುಗಳಿಗೂ ಇದು ಸೇಫ್ಟಿ. ಯಾವುದೋ ನಕಲಿ ದಾಖಲೆ ಕೊಟ್ಟು ಗ್ರಾಹಕರು ಸಾಲ ಪಡೆದು ಪರಾರಿಯಾಗುವ ಭಯ ಬ್ಯಾಂಕಿಗೆ ಇರಲ್ಲ.
ಚಿನ್ನಕ್ಕೆ ಜನರು ಮುಗಿಬೀಳಲು ಇನ್ನೊಂದು ಕಾರಣ ಹೂಡಿಕೆಯದ್ದು (Gold as investment option). ಚಿನ್ನದ ಬೆಲೆ ಕಳೆದ ಹಲವು ವರ್ಷಗಳಿಂದ ಇಳಿಮುಖವೇ ಆಗಿಲ್ಲ. ಕೆಲ ಸಂದರ್ಭಗಳಲ್ಲಿ ತುಸು ಇಳಿಮುಖಗೊಂಡರೂ ದೀರ್ಘಾವಧಿಯಲ್ಲಿ ಚಿನ್ನದ ಬೆಲೆ ತಗ್ಗಿಯೇ ಇಲ್ಲ. ಎರಡು ವರ್ಷಗಳ ಹಿಂದಿನ ಕಾಲಕ್ಕೆ ಹೋಲಿಸಿದರೆ ಚಿನ್ನದ ಬೆಲೆ ಒಂದೂವರೆ, ಎರಡು ಪಟ್ಟು ಹೆಚ್ಚಳವಾಗಿರುವುದನ್ನ ಕಾಣಬಹುದು.
ಚಿನ್ನ ಒಂದು ಭೌತಿಕ ವಸ್ತು. ಪೆಟ್ರೋಲ್ನಂತೆ ಅದರ ಲಭ್ಯತೆ ಸೀಮಿತವಾದುದು. ಹೀಗಾಗಿ ಅದರ ಬೆಲೆ ಏರಿಕೆ ತೀರಾ ಸಹಜವಾದುದು. ಚಿನ್ನದ ಬೆಲೆ ಅಸಹಜ ಮಟ್ಟಕ್ಕೆ ಏರಿಕೆಯಾದರೆ ಜನರಿಗೆ ಒಡವೆ ಮೇಲಿನ ವ್ಯಾಮೋಹ ಸಹಜವಾಗಿಯೇ ಕಡಿಮೆ ಆಗುತ್ತದೆ. ಅಂದರೆ ಚಿನ್ನಕ್ಕೆ ಸ್ಯಾಚುರೇಶನ್ ಪಾಯಿಂಟ್ ಇರಬಹುದು.
ಈ ಹೊತ್ತಲ್ಲೇ ಕ್ರಿಪ್ಟೋಕರೆನ್ಸಿಗಳ (Cryptocurrencies) ಬಗ್ಗೆ ವಿಶ್ವಾದ್ಯಂತ ಚರ್ಚೆಗಳು ಸದ್ದು ಮಾಡುತ್ತಿವೆ. ಚರ್ಚೆ ಮಾತ್ರವಲ್ಲ, ಬಿಟ್ಕಾಯಿನ್ನಂತಹ (Bitcoins) ಕ್ರಿಪ್ಟೋ ಕರೆನ್ಸಿಗಳು ಸಾಮಾನ್ಯ ಜನರ ಬದುಕಲ್ಲಿ ನುಸುಳಿವೆ. ಇದೂ ಕೂಡ ಹೂಡಿಕೆದಾರರನ್ನ ಸೆಳೆದಿವೆ. ಜನರು ಬಿಟ್ ಕಾಯಿನ್ಗಳನ್ನ ಕೊಳ್ಳಲು ಮುಗಿ ಬೀಳುತ್ತಿದ್ಧಾರೆ. ಒಂದು ವರದಿಯನ್ನ ನಂಬುವುದಾದರೆ ಭಾರತದಲ್ಲಿ ಒಂದೂವರೆ ಕೋಟಿ ಜನರು ಕ್ರಿಪ್ಟೋ ಕರೆನ್ಸಿಯ ಮೇಲೆ ಹೂಡಿಕೆ ಮಾಡಿದ್ದಾರೆ. ಈ ಹೂಡಿಕೆಯ ಒಟ್ಟಾರೆ ಮೊತ್ತ ಅಂದಾಜು 10 ಬಿಲಿಯನ್ ಡಾಲರ್ ಅಂತೆ. ಅಂದರೆ, ಸುಮಾರು 74 ಸಾವಿರ ಕೋಟಿ ರೂಪಾಯಿಯಷ್ಟು ಹಣವನ್ನು ಭಾರತೀಯರು ಕ್ರಿಪ್ಟೋ ಕರೆನ್ಸಿಗಳ ಮೇಲೆ ಹೂಡಿಕೆ ಮಾಡಿದ್ದಾರೆ.
ಕ್ರಿಪ್ಟೋ ಕರೆನ್ಸಿ ಎಂದರೆ ಏನು?
ಡಿಜಿಟಲ್ ಗೋಲ್ಡ್ ಬಗ್ಗೆ ಕೇಳಿರುತ್ತೇವೆ. ಭೌತಿಕವಾಗಿ ಚಿನ್ನ ಇಲ್ಲದೇ ಇದ್ದರೂ ಮಾರುಕಟ್ಟೆ ದರದಲ್ಲಿ ಚಿನ್ನವನ್ನು ಕೊಳ್ಳಬಹುದು. ಅದು ಡಿಜಿಟಲ್ ಆಗಿ ಸಂಗ್ರಹವಾಗುತ್ತದೆ. ಹಾಗೆಯೇ, ಕ್ರಿಪ್ಟೋಕರೆನ್ಸಿ ಡಿಜಿಟಲ್ ಆಗಿ ಸಂಗ್ರಹಿಸಬಹುದಾದ ಹಣ. ಇದು ಯಾವುದೇ ಒಂದು ದೇಶದ ಕರೆನ್ಸಿಯಲ್ಲ. ಇದಕ್ಕೆ ಎಕ್ಸ್ಚೇಂಜ್ ರೇಟ್ ಇರುವುದಿಲ್ಲ. ಭಾರತದಲ್ಲಿ ಒಂದು ಕ್ರಿಪ್ಟೋಕರೆನ್ಸಿ ಕೊಂಡರೆ ವಿದೇಶದಲ್ಲೂ ಅದಕ್ಕೆ ಅಷ್ಟೇ ದರ ಇರುತ್ತದೆ. ಒಂದು ಕ್ರಿಪ್ಟೋಕರೆನ್ಸಿಗೆ ಅದರದ್ದೇ ಪ್ರತ್ಯೇಕ ನೆಟ್ವರ್ಕ್ ಇರುತ್ತದೆ.
ಇದನ್ನೂ ಓದಿ: Gold Price Today: ದೀಪಾವಳಿಗೂ ಮುನ್ನ ಏರಿಕೆಯಾದ ಚಿನ್ನ, ಬೆಳ್ಳಿ ಬೆಲೆ: ಇಲ್ಲಿದೆ ಇವತ್ತಿನ ಹಳದಿ ಲೋಹದ ದರ!
ಮಾಮೂಲಿಯ ಹಣಕಾಸಿನ ವಹಿವಾಟಿನಲ್ಲಿ ಅಮೆರಿಕದಿಂದ ಡಾಲರ್ಗಳ ಹಣ ಪಡೆದು ಬಂದರೆ ಭಾರತದಲ್ಲಿ ರಾಜರಂತೆ ಬದುಕಬಹುದು. ಆದರೆ, ಕ್ರಿಪ್ಟೋಕರೆನ್ಸಿ ಎಲ್ಲಾ ಕಡೆಯೂ ಅದೇ ಮೌಲ್ಯ ಹೊಂದಿರುತ್ತದೆ. ಇದು ಯಾವುದೇ ಸರ್ಕಾರದ ಅಂಕೆಗೆ ಒಳಪಡುವ ಕರೆನ್ಸಿಯಲ್ಲ.
ಬಿಟ್ ಕಾಯಿನ್ ಎಂಬುದು ಜಗತ್ತಿನ ಮೊತ್ತಮೊದಲ ಕ್ರಿಪ್ಟೋ ಕರೆನ್ಸಿ. ಇದು ಆರಂಭವಾಗಿದ್ದು 2009ರಲ್ಲಿ. ಈಗ ಸಾವಿರಾರು ಕ್ರಿಪ್ಟೋಕರೆನ್ಸಿಗಳು ಲಭ್ಯ ಇವೆ.
ಹೂಡಿಕೆ ಮಾಡಬಹುದಾ?
ಕ್ರಿಪ್ಟೋ ಕರೆನ್ಸಿಯನ್ನ ಸುರಕ್ಷಿತವಾಗಿ ಸಂಗ್ರಹಿಸುವುದು ಮತ್ತು ವಹಿವಾಟು ನಡೆಸುವುದು ದಿನೇ ದಿನೇ ಸುಲಭವಾಗುತ್ತಿದೆ. ಅನೇಕ ಕಂಪನಿಗಳು ಕ್ರಿಪ್ಟೋಕರೆನ್ಸಿ ಮೂಲಕ ಪಾವತಿ ಸ್ವೀಕರಿಸಲು ಆರಂಭಿಸಿವೆ. ಇದು ಒಂದು ವಿಚಾರ. ಮತ್ತೊಂದು ವಿಚಾರ ಎಂದರೆ ಕಳೆದ ವರ್ಷ ಲಾಕ್ ಡೌನ್ ಆದ ಬಳಿಕ ಬಿಟ್ ಕಾಯಿನ್ನ ಮೌಲ್ಯ ಗಣನೀಯವಾಗಿ ಹೆಚ್ಚಳವಾಗಿದೆ. ಜನರಿಗೆ ಬಿಟ್ ಕಾಯಿನ್ ಮೇಲೆ ಒಂದು ಹೂಡಿಕೆಯಾಗಿ ವಿಶ್ವಾಸ ಹೆಚ್ಚಳವಾಗಿದೆ ಎನ್ನುತ್ತಾರೆ WazirX ಸಂಸ್ಥೆಯ ಸಂಸ್ಥಾಪಕ ನಿಶ್ಚಲ್ ಶೆಟ್ಟಿ.
ಕ್ರಿಪ್ಟೋಕರೆನ್ಸಿಯನ್ನ ಜನರು ಒಂದು ಪರ್ಯಾಯ ಹೂಡಿಕೆ ಅವಕಾಶವಾಗಿ ನೋಡುತ್ತಿದ್ದಾರೆ. ಶೇರ್ ಮಾರ್ಕೆಟ್ ಇತ್ಯಾದಿ ಹೂಡಿಕೆ ಸ್ಥಳಗಳು ಈಗಲೂ ಜನರ ವಿಶ್ವಾಸ ಪಡೆದುಕೊಂಡಿರುವುದು ಹೌದು. ರಿಯಲ್ ಎಸ್ಟೇಟ್, ಚಿನ್ನ ಮೊದಲಾದವು ಸದ್ಯ ಸೇಫ್ಟಿಯಂತೆ ಇವೆ. ಈಗ ಇವೆಲ್ಲವನ್ನೂ ಮೀರಿಸಿ ಕ್ರಿಪ್ಟೋ ಕರೆನ್ಸಿ ಭವಿಷ್ಯದ ಹೂಡಿಕೆ ಸ್ಥಳವಾಗಿ ಜನರನ್ನು ಸ್ವಲ್ಪಸ್ವಲ್ಪವಾಗಿ ಸೆಳೆಯುತ್ತಿರುವುದು ಸುಳ್ಳಲ್ಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ