ಒನ್ ಡೇ (One day Match) , ಟೆಸ್ಟ್ ಕ್ರಿಕೆಟ್‌ಗಿಂತ (Test Cricket) ಜನಪ್ರಿಯವಾಗಿರುವ ಕ್ರಿಕೆಟ್ ಪಂದ್ಯ ಎಂದರೆ ಐಪಿಎಲ್ (IPL) . ಈ ಐಪಿಎಲ್ ಹೆಸರು ಕೇಳಿದರೇ ಮೊದಲು ನೆನಪಾಗುವುದೇ ಅದರ ಸಂಸ್ಥಾಪಕ, ಸೃಷ್ಟಿಕರ್ತ ಲಲಿತ್ ಮೋದಿ (Lalit Modi) . ಮೂಲತಃ ಉದ್ಯಮದ ಹಿನ್ನೆಲೆಯ ಕುಟುಂಬದಲ್ಲೇ ಜನಿಸಿದ ಲಲಿತ್ ಮೋದಿ, ಓರ್ವ ಯಶಸ್ವಿ ಉದ್ಯಮಿ (Businessmen) . ಇವರು ಹುಟ್ಟು ಹಾಕಿದ ಐಪಿಎಲ್ ಕೂಡ ಸಾವಿರಾರು ಕೋಟಿ ಮೌಲ್ಯದ ಅತ್ಯಂತ ಲಾಭದಾಯಕ ಕ್ರಿಕೆಟ್ ಲೀಗ್ ಆಯಿತು. ಆದರೆ IPL 2010 ಮುಗಿದ ಸ್ವಲ್ಪ ಸಮಯದಲ್ಲೇ ದುರ್ವರ್ತನೆ, ಅಶಿಸ್ತು ಮತ್ತು ಆರ್ಥಿಕ ಅಕ್ರಮಗಳ ಆರೋಪಗಳ ಅಡಿ ಲಲಿತ್ ಕುಮಾರ್ ಮೋದಿ ಅವರನ್ನು ಬಿಸಿಸಿಐನಿಂದಲೇ ಅಮಾನತುಗೊಳಿಸಲಾಯಿತು. ಅಂದಿನಿಂದ ಭಾರತ ಬಿಟ್ಟ ಲಲಿತ್ ಮೋದಿ ಬೇರೆ ದೇಶಗಳಲ್ಲಿ ವಾಸಿಸುತ್ತಿದ್ದಾರೆ.
ಲಲಿತ್ ಮೋದಿಯದ್ದು ಐಷಾರಾಮಿ ಜೀವನ
ಲಲಿತ್ ಮೋದಿ ಐಪಿಎಲ್ ಆರಂಭವಾದಗಿನಿಂದಲೂ ವಿವಾದಗಳಿಂದ, ಆರೋಪಗಳಿಂದ, ವೈಯಕ್ತಿಕ ಬದುಕಿನ ವಿಚಾರಗಳಿಂದ ಸುದ್ದಿಯಲ್ಲಿರುವ ವ್ಯಕ್ತಿ. ಲಲಿತ್ ಮೋದಿ ಬಾಲ್ಯದಿಂದಲೂ ಚಿನ್ನದ ಚಮಚ ಬಾಯಿಯಲ್ಲಿ ಇಟ್ಟುಕೊಂಡು ಬೆಳೆದವರು. ಹೀಗಾಗಿ ಇವರ ಜೀವನ, ಬದುಕು, ವೆಚ್ಚ ಎಲ್ಲವೂ ಲಕ್ಸುರಿಯಾಗಿದೆ.
ಲಂಡನ್‌ನಲ್ಲಿ ಲಲಿತ್ ಮೋದಿ
ಬಿಸಿಸಿಐ ನಿಷೇಧ ಹೇರಿದ ಮೇಲೆ ಲಲಿತ್ ಮೋದಿ ಲಂಡನ್‌ಗೆ ತೆರಳಿದರು. ಲಲಿತ್ ಮೋದಿ ಅವರ ಪತ್ನಿ ಮಿನಲ್ ಮೋದಿ ಅವರು 2018 ರಲ್ಲಿ ಕ್ಯಾನ್ಸರ್ ನಿಂದ ನಿಧನರಾದರು. ಅವರಿಗೆ ಅಲಿಯಾ ಮತ್ತು ರುಚಿರ್ ಎಂಬ ಇಬ್ಬರು ಮಕ್ಕಳಿದ್ದಾರೆ. ಇತ್ತೀಚೆಗೆ ಲಲಿತ್ ಮೋದಿ ಜೊತೆ ಬಾಲಿವುಡ್ ನಟಿ ಸುಶ್ಮಿತಾ ಸೇನ್ ಹೆಸರು ಕೇಳಿ ಬಂದಿತ್ತು ಕೂಡ. ಲಲಿತ್ ಮೋದಿ ಸಹ ಸುಶ್ಮಿತಾ ಸೇನ್ ಅವರೊಂದಿಗೆ ಮಾಲ್ಡೀವ್ಸ್‌ಗೆ ಹೋಗಿದ್ದ ಫೋಟೋಗಳನ್ನು ಹಂಚಿಕೊಂಡಿದ್ದರು.
ಮಗನಿಗೆ ಆಸ್ತಿ ಹಕ್ಕು ವರ್ಗಾವಣೆ
ಸದ್ಯ ಐಪಿಎಲ್‌ನ ಮಾಜಿ ಅಧ್ಯಕ್ಷ ಲಲಿತ್ ಮೋದಿ ಅವರು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಲಂಡನ್‌ನ ಪ್ರಸಿದ್ಧ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಲಲಿತ್ ಮೋದಿ ಅನಾರೋಗ್ಯದ ಹಿನ್ನಲೆ ತಮ್ಮ ಕುಟುಂಬದ ಕೆಕೆ ಮೋದಿ ಫ್ಯಾಮಿಲಿ ಟ್ರಸ್ಟ್‌ನ ಅಧಿಕಾರವನ್ನು ತಮ್ಮ ಪುತ್ರ ರುಚಿರ್ ಮೋದಿ ಅವರಿಗೆ ಹಸ್ತಾಂತರಿಸಿರುವ ವಿಚಾರವನ್ನು ಟ್ವೀಟ್ ಮೂಲಕ ಬಹಿರಂಗಪಡಿಸಿದ್ದಾರೆ. ಲಲಿತ್ ಮೋದಿ ಮೂಲತಃ ಉದ್ಯಮ ಕುಟುಂಬದವರಾದ ಹಿನ್ನೆಲೆ ಸಾವಿರಾರು ಕೋಟಿ ಆಸ್ತಿಯನ್ನು ಹೊಂದಿರುವ ಉದ್ಯಮಿ.
ಲಂಡನ್‌ನಲ್ಲಿ ಭವ್ಯ ಬಂಗಲೆ ಹೊಂದಿರುವ ಲಲಿತ್ ಮೋದಿ
ಲಲಿತ್ ಮೋದಿ ಲಂಡನ್‌ನಲ್ಲಿ ಐದು ಅಂತಸ್ತಿನ ಅದ್ದೂರಿ ಭವನದಲ್ಲಿ ವಾಸಿಸುತ್ತಿದ್ದಾರೆ ಎಂದು ಈ ಹಿಂದೆ ಮಾಧ್ಯಮಗಳು ವರದಿ ಮಾಡಿದ್ದವು. ಮನೆಯು 7000 ಚದರ ಅಡಿಗಳಲ್ಲಿ ಇದ್ದು ಬರೋಬ್ಬರಿ 14 ಕೊಠಡಿಗಳು ಮತ್ತು ಎಲಿವೇಟರ್ ಅನ್ನು ಹೊಂದಿದೆ.ಈ ಭವ್ಯ ಬಂಗಲೆಯಲ್ಲಿ ಎರಡು ಅತಿಥಿ ಕೊಠಡಿಗಳು, ಏಳು ಸ್ನಾನಗೃಹಗಳು, ನಾಲ್ಕು ಸ್ವಾಗತ ಕೊಠಡಿಗಳು ಮತ್ತು ಎರಡು ಅಡುಗೆ ಮನೆ ಸಹ ಇದೆ.
ಇದನ್ನೂ ಓದಿ: 10 ಸಾವಿರಕ್ಕೆ ಸಿಗುತ್ತೆ ಈ ಸ್ಮಾರ್ಟ್ ಟಿವಿ, ತಿಂಗಳಿಗೆ 600 ರೂಪಾಯಿ ಕಟ್ಟಿದ್ರೂ ಸಾಕು!
ಲಕ್ಸುರಿ ಕಾರುಗಳ ಒಡೆಯ
ಲಲಿತ್ ಮೋದಿ ವಿಶ್ವದ ಅತ್ಯಂತ ದುಬಾರಿ ಕಾರುಗಳನ್ನು ಹೊಂದಿದ್ದಾರೆ. ಕಾರ್ದೇಖೋ ವರದಿ ಪ್ರಕಾರ, ಲಲಿತ್ ಮೋದಿ ತನ್ನ ದಿವಂಗತ ಪತ್ನಿ ಮಿನಲ್‌ಗೆ ಆಗ ಆಸ್ಟನ್ ಮಾರ್ಟಿನ್ ರಾಪಿಡ್ ಕಾರನ್ನು ಉಡುಗೊರೆಯಾಗಿ ನೀಡಿದರು.ಕಾರಿನ ಬೆಲೆ ರೂ. 4.4 ಕೋಟಿ. ಮಿನಾಲ್ ಅವರಿಗೆ ಫೆರಾರಿ ಕ್ಯಾಲಿಫೋರ್ನಿಯಾವನ್ನು ಸಹ ಉಡುಗೊರೆಯಾಗಿ ನೀಡಿದ್ದರು. 2021ರಲ್ಲಿ, ಲಲಿತ್ ಮೋದಿ ತಮ್ಮ ಮಗ ರುಚಿರ್‌ಗೆ ಉಡುಗೊರೆಯಾಗಿ ನೀಡಲು ಫೆರಾರಿ 812 GTS ಅನ್ನು ಖರೀದಿಸಿದ್ದರು.
ಐಪಿಎಲ್ ಸೃಷ್ಟಿಕರ್ತ ಲಲಿತ್ ಮೋದಿ
ಕಾರ್ದೇಖೋ ಈ ಕಾರಿನ ಬೆಲೆ ಬರೋಬ್ಬರಿ 5.75 ಕೋಟಿ ಎಂದು ತಿಳಿಸಿದೆ. 2016 ರಲ್ಲಿ, ರುಚಿರ್ ತಂದೆ ಲಲಿತ್ ಮೋದಿಗೆ 5.60 ಕೋಟಿ ರೂ ಬೆಲೆ ಬಾಳುವ ಫೆರಾರಿ ಎಫ್12 ಬರ್ಲಿನೆಟ್ಟಾವನ್ನು ಉಡುಗೊರೆಯಾಗಿ ನೀಡಿದ್ದರು. ಲಲಿತ್ ಮೋದಿ ಕೂಡ ಹಲವು ದುಬಾರಿ ಕಾರುಗಳ ಒಡೆಯ. 4.81 ಕೋಟಿ ರೂಪಾಯಿ ಬೆಲೆಯ ಫೆರಾರಿ 488 ಪಿಸ್ತಾ ಸ್ಪೈಡರ್ ಕಾರನ್ನು ಹೊಂದಿದ್ದಾರೆ.
ಜೊತೆಗೆ BMW 7-ಸರಣಿ 760 ಲೀ (1.95 ಕೋಟಿ), ಮೆಕ್ಲಾರೆನ್ 720 ಎಸ್ (ರೂ. 5.04 ಕೋಟಿ), ಮತ್ತು ಬೆಂಟ್ಲಿ ಮುಲ್ಸಾನ್ನೆ ಸ್ಪೀಡ್ (ರೂ. 4.81 ಕೋಟಿ, ) ಬೆಲೆಬಾಳುವ ಕಾರನ್ನು ಲಲಿತ್ ಮೋದಿ ಹೊಂದಿದ್ದಾರೆ.
ಲಲಿತ್ ಮೋದಿ ಉದ್ಯಮಗಳು
ಲಲಿತ್ ಮೋದಿ ಹಲವಾರು ಉದ್ಯಮಗಳನ್ನು ಸಹ ಹೊಂದಿದ್ದಾರೆ. ಮೋದಿ ಗ್ರೂಪ್ ಫ್ಯಾಷನ್, ಚಿಲ್ಲರೆ ವ್ಯಾಪಾರ, ಟ್ರಾವೆಲ್ಸ್, ಸಲೂನ್, ಮನರಂಜನೆ ಮತ್ತು FMCG ವ್ಯವಹಾರಗಳನ್ನು ಹೊಂದಿದ್ದಾರೆ.
ಕಂಪನಿಯ ಒಡೆತನದ ಬ್ರಾಂಡ್‌ಗಳ ಪಟ್ಟಿಯಲ್ಲಿ ಪಾನ್ ವಿಲಾಸ್ ಪಾನ್ ಮಸಾಲಾ, ಕಲರ್‌ಬಾರ್, ಗಾಡ್‌ಫ್ರೇ ಫಿಲಿಪ್ಸ್, ಮೋದಿಕೇರ್, ಬೀಕನ್ ಟ್ರಾವೆಲ್ಸ್, ಕೆಕೆ ಮೋದಿ ಶಿಕ್ಷಣ ಸಂಸ್ಥೆ ಮತ್ತು ಇಗೋ ಇಟಾಲಿಯನ್ ರೆಸ್ಟೋರೆಂಟ್‌ಗಳನ್ನು ಸಹ ಹೊಂದಿದ್ದಾರೆ.
ನಿವ್ವಳ ಮೌಲ್ಯ
ಲಲಿತ್ ಮೋದಿ ಅವರ ಒಟ್ಟು ನಿವ್ವಳ ಮೌಲ್ಯವು 570 ಮಿಲಿಯನ್ ಡಾಲರ್ (ರೂ. 4,555 ಕೋಟಿ) ಎಂದು ಆಜ್ ತಕ್ ವರದಿ ಮಾಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ