Oil Price: ಡಿಸ್ಕೌಂಟ್ ಕೊಟ್ಟದ್ದೇ ತಡ..ರಷ್ಯಾದ ಕಚ್ಚಾ ತೈಲ ಖರೀದಿಗೆ ಭಾರತದ ಕಂಪನಿಗಳ ಸರತಿ ಸಾಲು!

ಪ್ರತಿ ಬ್ಯಾರೆಲ್‌ಗೆ USD 20-25 ರಷ್ಟು ರಿಯಾಯಿತಿಯೊಂದಿಗೆ ರಷ್ಯಾದ ಕಚ್ಚಾ ತೈಲ ದೊರೆಯಲಿರುವ ಕಾರಣ ಭಾರತದ ತೈಲ ಕಂಪನಿಗಳು ರಷ್ಯಾದಿಂದ ತೈಲ ಖರೀದಿ ಮಾಡಲು ಮುಂದಾಗುತ್ತಿದ್ದಾರೆ ಎಂದು ತಿಳಿದುಬಂದಿದೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ರಷ್ಯಾ ಭಾರತಕ್ಕೆ ರಿಯಾಯಿತಿ ದರದಲ್ಲಿ (Russian Discount On Crude Oil) ತೈಲ ಪೂರೈಕೆ ಆಫರ್ ನೀಡಿದ್ದೇ ತಡ, ಭಾರತದ ತೈಲ ಕಂಪನಿಗಳು ರಷ್ಯಾದಿಂದ ಬೃಹತ್ ಮಟ್ಟದ ತೈಲ ಖರೀದಿ (Crude Oil) ಮಾಡತೊಡಗಿವೆ. ಇಂಡಿಯನ್ ಆಯಿಲ್ ಕಾರ್ಪೊರೇಷನ್ (IOC) ನಂತರ, ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (HPCL) ಎರಡು ಮಿಲಿಯನ್ ಬ್ಯಾರೆಲ್ ರಷ್ಯಾದ ಕಚ್ಚಾ ತೈಲವನ್ನು ಖರೀದಿಸಿದೆ. ಜೊತೆಗೆ ಈ ಎರಡು ದೈತ್ಯ ಕಂಪನಿಗಳ ಹೊರತಾಗಿ ಕರ್ನಾಟಕದ ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (MRPL) ಕೂಡ ರಷ್ಯಾದಿಂದ ಒಂದು ಮಿಲಿಯನ್ ಬ್ಯಾರೆಲ್ ಕಚ್ಚಾ ತೈಲವನ್ನು (Russian Crude Oil) ಕೋರಿ ಟೆಂಡರ್ ಸಲ್ಲಿಸಿದೆ ಎಂದು ವರದಿಯಾಗಿದೆ.

ಉಕ್ರೇನ್‌ ಮೇಲೆ ಆಕ್ರಮಣ ಮಾಡಿರುವುದನ್ನು ಕಾರಣವಾಗಿರಿಸಿಕೊಂಡು ರಷ್ಯಾದ ಮೇಲೆ ಪಾಶ್ಚಿಮಾತ್ಯ ದೇಶಗಳು ಹಲವು ನಿರ್ಬಂಧ ಹೇರಿವೆ. ಪಾಶ್ಚಿಮಾತ್ಯ ದೇಶಗಳು ಹೇರಿದ ಈ ನಿರ್ಬಂಧಗಳು ವಿವಿಧ ಕಂಪನಿಗಳು ಮತ್ತು ದೇಶಗಳನ್ನು ರಷ್ಯಾದ ತೈಲ ಖರೀದಿ ಮಾಡದಂತೆ ತಡೆಗಟ್ಟಿವೆ.

ಆಫರ್ ನೀಡಿದ್ದೇ ಕಾರಣ!
ಹೀಗಾಗಿ ರಷ್ಯಾ ಭಾರತಕ್ಕೆ ರಿಯಾಯಿತಿ ದರದಲ್ಲಿ ಕಚ್ಚಾ ತೈಲ ಸರಬರಾಜು ಮಾಡುವ ಆಫರ್ ನೀಡಿದೆ. ಭಾರತೀಯ ರಿಫೈನರ್‌ಗಳು ಅಂತಹ ರಿಯಾಯಿತಿ ತೈಲವನ್ನು ಖರೀದಿಸಲು ಟೆಂಡರ್‌ಗಳನ್ನು ಸಲ್ಲಿಸುತ್ತಿದ್ದು ಅಗ್ಗದ ರಷ್ಯಾದ ತೈಲದ ದಾಸ್ತಾನುಗಳನ್ನು ತಮ್ಮದಾಗಿಸಿಕೊಳ್ಳಲು ಪ್ರಯತ್ನಿಸುತ್ತಿವೆ.

ರಾಷ್ಟ್ರದ ಅಗ್ರ ತೈಲ ಸಂಸ್ಥೆಯಾದ IOC ಕಳೆದ ವಾರದ ಕೊನೆಯಲ್ಲಿ ಬ್ಯಾರೆಲ್‌ಗೆ USD 20-25 ರಷ್ಟು ರಿಯಾಯಿತಿಯಲ್ಲಿ ಮೇ ತಿಂಗಳ ವಿತರಣೆಗಾಗಿ Vitol ಮೂಲಕ ಮೂರು ಮಿಲಿಯನ್ ಬ್ಯಾರೆಲ್‌ಗಳನ್ನು ಖರೀದಿಸಿದೆ ಎಂದು ಮೂಲಗಳು ತಿಳಿಸಿವೆ. HPCL ಈ ವಾರ ಮೇ ತಿಂಗಳಲ್ಲಿ ವಿತರಿಸಲೆಂದು ಎರಡು ಮಿಲಿಯನ್ ಬ್ಯಾರೆಲ್ ಯುರಲ್ಸ್ ಕಚ್ಚಾತೈಲವನ್ನು ಖರೀದಿಸಿದೆ ಎಂದು ಸಹ ತಿಳಿದುಬಂದಿದೆ.

ಪಾಶ್ಚಿಮಾತ್ಯ ರಾಷ್ಟ್ರಗಳಿಂದಲೂ ಪ್ರೆಶರ್!
ಭಾರತವು ಮುಂಬರುವ ದಿನಗಳಲ್ಲಿ ಉಕ್ರೇನ್ ಬಿಕ್ಕಟ್ಟಿನ ಬಗ್ಗೆ ತನ್ನ ನಿಲುವಿನ ಕುರಿತು ಪಾಶ್ಚಿಮಾತ್ಯ ದೇಶಗಳಿಂದ ಹೆಚ್ಚುತ್ತಿರುವ ಒತ್ತಡವನ್ನು ಎದುರಿಸಲಿದೆ ಎಂದು ನಿರೀಕ್ಷಿಸಲಾಗಿದೆ.

ರಷ್ಯಾದಿಂದ ಭಾರತದ ತೈಲ ಆಮದುಗಳು ಅಮೆರಿಕಾದ ನಿರ್ಬಂಧಗಳು ತಡೆಗಟ್ಟಲಾರವು ಎಂದು ಒಪ್ಪಿಕೊಂಡಿರುವ ಶ್ವೇತಭವನವು, ಭಾರತವು ಇತಿಹಾಸದ ಯಾವ ಬದಿಯಲ್ಲಿ ಇರಬೇಕೆಂದು ಆಯ್ಕೆ ಮಾಡುವ ಸಮಯ ಎಂದು ಹೇಳಿದೆ. ಶ್ವೇತಭವನದ ವಕ್ತಾರ ಜೆನ್ ಪ್ಸಾಕಿ ಅವರು ಎಲ್ಲಾ ದೇಶಗಳಿಗೆ ವಾಷಿಂಗ್ಟನ್‌ನ ಸಂದೇಶವೆಂದರೆ ಅವರು ನಿರ್ಬಂಧಗಳಿಗೆ ಬದ್ಧರಾಗಿರಬೇಕು ಮತ್ತು "ಇತಿಹಾಸದ ಪುಸ್ತಕಗಳನ್ನು ಬರೆಯುವಾಗ ನೀವು ಎಲ್ಲಿ ನಿಲ್ಲಲು ಬಯಸುತ್ತೀರಿ ಎಂಬುದರ ಕುರಿತು ಯೋಚಿಸಿ" ಎಂದು ಹೇಳಿದ್ದರು.

2020 ರಿಂದ, IOC ರಷ್ಯಾದ ರಾಸ್​ನೆಫ್​ನಿಂದ ಕಚ್ಚಾ ತೈಲವನ್ನು ಖರೀದಿಸಲು ಒಂದು ಅವಧಿ ಅಥವಾ ಸ್ಥಿರ ಪರಿಮಾಣದ ಒಪ್ಪಂದವನ್ನು ಹೊಂದಿದೆ.  ರಷ್ಯಾದಿಂದ ತೈಲವನ್ನು ಆಮದು ಮಾಡಿಕೊಳ್ಳುವ ವೆಚ್ಚವು ಸದ್ಯದ ಪರಿಸ್ಥಿತಿಯಲ್ಲಿ ಸ್ವಲ್ಪ ಹೆಚ್ಚೇ ದುಬಾರಿಯಾಗಲಿದೆ.

ಇದನ್ನೂ ಓದಿ: War Crimes Law: ಯುದ್ಧಕ್ಕೆ ಕಾರಣವಾಗಿರುವ Russia ಅಧ್ಯಕ್ಷ ಪುಟಿನ್ ಅವರನ್ನು ಬಂಧಿಸಬಹುದೇ?

ಆದರೆ ಪ್ರತಿ ಬ್ಯಾರೆಲ್‌ಗೆ USD 20-25 ರಷ್ಟು ರಿಯಾಯಿತಿಯೊಂದಿಗೆ ರಷ್ಯಾದ ಕಚ್ಚಾ ತೈಲ ದೊರೆಯಲಿರುವ ಕಾರಣ ಭಾರತದ ತೈಲ ಕಂಪನಿಗಳು ರಷ್ಯಾದಿಂದ ತೈಲ ಖರೀದಿ ಮಾಡಲು ಮುಂದಾಗುತ್ತಿದ್ದಾರೆ ಎಂದು ತಿಳಿದುಬಂದಿದೆ.

ಮೇ ತಿಂಗಳಿಗಾಗಿ ಸಿದ್ಧತೆ
HPCL ನಂತೆಯೇ ಸರ್ಕಾರಿ ಸ್ವಾಮ್ಯದ ತೈಲ ಮತ್ತು ನೈಸರ್ಗಿಕ ಅನಿಲ ನಿಗಮದ (ONGC) ಅಂಗಸಂಸ್ಥೆಯಾಗಿರುವ MRPL ಕೂಡ ಮೇ ಅಂತ್ಯದ ಲೋಡಿಂಗ್‌ಗಾಗಿ ಒಂದು ಮಿಲಿಯನ್ ಬ್ಯಾರೆಲ್‌ಗಳಷ್ಟು ಕಚ್ಚಾ ತೈಲವನ್ನು ಬಯಸುತ್ತಿದೆ.  ಶಿಪ್ಪಿಂಗ್ ಮತ್ತು ವಿಮೆಯ ವ್ಯವಸ್ಥೆಯಲ್ಲಿ ನಿರ್ಬಂಧಗಳಿಗೆ ಕಾರಣವಾಗಬಹುದಾದ ಯಾವುದೇ ತೊಡಕುಗಳನ್ನು ತಪ್ಪಿಸಲು ರಿಫೈನರ್‌ಗಳು ರಷ್ಯಾದ ಕಚ್ಚಾ ತೈಲವನ್ನು ವಿತರಿಸಿದ ಆಧಾರದ ಮೇಲೆ ಖರೀದಿ ಮಾಡುತ್ತಿದ್ದಾರೆ.

ಹಣ ಪಾವತಿ ಹೇಗೆ?
ಪಾಶ್ಚಿಮಾತ್ಯ ದೇಶಗಳು ನಿರ್ಬಂಧ ವಿಧಿಸಿದ ಹಿನ್ನೆಲೆಯಲ್ಲಿ ರಷ್ಯಾದ ಜೊತೆ ಅಂತರರಾಷ್ಟ್ರೀಯ ಪಾವತಿ ಕಾರ್ಯವಿಧಾನವನ್ನು ಅನುಸರಿಸಲು ಸಾಧ್ಯವಿಲ್ಲ.

ದೂರವಿರಿಸಿರುವುದರಿಂದ ರಷ್ಯಾದೊಂದಿಗಿನ ವ್ಯಾಪಾರವನ್ನು ಡಾಲರ್‌ಗಳಲ್ಲಿ ಇತ್ಯರ್ಥಗೊಳಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ರಷ್ಯಾದೊಂದಿಗಿನ ವ್ಯಾಪಾರವನ್ನು ನಿಷೇಧಿಸಲಾಗಿಲ್ಲ.

ಇದನ್ನೂ ಓದಿ: Crude Oil: ಪರಿಸ್ಥಿತಿಯ ಲಾಭ ಪಡೆದ ಭಾರತ.. ಕಡಿಮೆ ಬೆಲೆಗೆ ರಷ್ಯಾದಿಂದ ಕಚ್ಚಾ ತೈಲ ಖರೀದಿ!

ಇದರರ್ಥ ಯಾವುದೇ ದೇಶ ಅಥವಾ ಕಂಪನಿಯು ತೈಲ ಮತ್ತು ಇತರ ಇಂಧನ ಸರಕುಗಳನ್ನು ರಷ್ಯಾದಿಂದ ಖರೀದಿಸಲು ಮುಕ್ತವಾಗಿದೆ ಮತ್ತು ವ್ಯಾಪಾರವನ್ನು ಇತ್ಯರ್ಥಗೊಳಿಸಲು ಅಂತರರಾಷ್ಟ್ರೀಯ ಪಾವತಿ ವ್ಯವಸ್ಥೆಯನ್ನು ಬಳಸಬಹುದಾಗಿದೆ.
Published by:guruganesh bhat
First published: