ಸಾಮಾನ್ಯವಾಗಿ ಈ ಕೋವಿಡ್-19 (Covid) ಸಾಂಕ್ರಾಮಿಕ ರೋಗದ ಹಾವಳಿಯ ಸಮಯದಲ್ಲಿ ನಮ್ಮ ಕರ್ನಾಟಕ ರಾಜ್ಯದಲ್ಲಿ ಅಲ್ಲದೆ, ಅನೇಕ ರಾಜ್ಯಗಳಲ್ಲಿ ಮನೆಗಳ ಮುಂದೆ ‘ಮನೆ ಖಾಲಿ ಇದೆ, ಮನೆ (Home) ಬಾಡಿಗೆಗೆ ಇದೆ’ ಅಂತ ಬೋರ್ಡ್ ನೇತು ಹಾಕಿದ್ದನ್ನು ನಾವೆಲ್ಲಾ ನೋಡಿರುತ್ತೇವೆ. ಕೋವಿಡ್-19 ಸೋಂಕಿನ ಪ್ರಕರಣಗಳು ಕಡಿಮೆ ಆಗುತ್ತಿದ್ದಂತೆ ಮತ್ತು ಎಂದಿನಂತೆ ಜನಜೀವನ ನಡೆಯುವುದಕ್ಕೆ ಶುರುವಾದಾಗ ಮತ್ತೆ ಕೋವಿಡ್ ನಿಂದ ಹಳ್ಳಿ ಸೇರಿದ್ದ ಜನರು ಮತ್ತೆ ನಗರಕ್ಕೆ ಬಂದರು. ಹೀಗೆ ಬಂದವರಿಗೆ ಅನೇಕರಿಗೆ ಈ ಮನೆ ಬಾಡಿಗೆಯ (Rent) ಬಿಸಿ ಗ್ಯಾರೆಂಟಿ ತಟ್ಟಿರುತ್ತದೆ.
ಈಗಂತೂ ಮನೆ ಬಾಡಿಗೆಗಳು ತುಂಬಾನೇ ಜಾಸ್ತಿಯಾಗಿವೆ. ಎಂದರೆ ಮನೆ ಮಾಲೀಕರು ಸಹ ಮೊದಲೆಲ್ಲಾ ವರ್ಷಕ್ಕೆ 500-1000 ರೂಪಾಯಿಯವರೆಗೆ ಜಾಸ್ತಿ ಮಾಡುತ್ತಿದ್ದವರು ಈಗ ದಿಢೀರನೆ ಮನೆ ಬಾಡಿಗೆಯನ್ನು ಎರ್ರಾಬಿರ್ರಿ ಏರಿಸಿದ ಅನೇಕ ಉದಾಹರಣೆಗಳನ್ನು ನಾವು ಕೇಳಿರುತ್ತೇವೆ.
ಒಮ್ಮೆಲೇ 18,000 ರೂಪಾಯಿ ಬಾಡಿಗೆ ಜಾಸ್ತಿ ಮಾಡಿದ್ದಕ್ಕೆ ಮನೆ ಖಾಲಿ ಮಾಡಿದ ಕುಟುಂಬ
ಇಲ್ಲಿಯೂ ಸಹ ಅಂತಹದೇ ಒಂದು ಘಟನೆ ನಡೆದಿದೆ ನೋಡಿ, ಬೆಂಗಳೂರಿನಲ್ಲಿರುವ ಮನೆ ಮಾಲೀಕನೊಬ್ಬ ಮನೆ ಬಾಡಿಗೆಯನ್ನು ಒಂದಲ್ಲ, ಎರಡಲ್ಲ ಬರೋಬ್ಬರಿ 18,000 ರೂಪಾಯಿ ಹೆಚ್ಚಿಸಲು ನಿರ್ಧರಿಸಿದ ನಂತರ ಬೆಳ್ಳಂದೂರಿನಲ್ಲಿರುವ ಫ್ಲ್ಯಾಟ್ ನಲ್ಲಿದ್ದಂತಹ ಬೆಂಗಳೂರಿನ ದಂಪತಿಗಳು ತಮ್ಮ ಫ್ಲ್ಯಾಟ್ ಅನ್ನು ಖಾಲಿ ಮಾಡಬೇಕಾಯಿತು.
ಆ ಕುಟುಂಬಕ್ಕೆ ಮನೆ ಮಾಲೀಕ ಬಿಟ್ಟದ್ದು ಕೇವಲ ಎರಡು ಆಯ್ಕೆಗಳು ಮಾತ್ರ. ಒಂದು ಅಷ್ಟೊಂದು ಬಾಡಿಗೆ ಕೊಟ್ಟು ಅಲ್ಲೇ ಇರುವುದು ಅಥವಾ ಅದನ್ನು ಬೇಗನೆ ಖಾಲಿ ಮಾಡಿ ಬೇರೆ ಫ್ಲ್ಯಾಟ್ ಅನ್ನು ಹುಡುಕಿಕೊಳ್ಳುವುದಾಗಿತ್ತು. ಆ ಕುಟುಂಬವು 3 ಕಿಲೋ ಮೀಟರ್ ದೂರದಲ್ಲಿರುವ ಸಣ್ಣ ಫ್ಲ್ಯಾಟ್ ಗೆ ಶಿಫ್ಟ್ ಆಗಲು ನಿರ್ಧರಿಸಿತು.
ಇದನ್ನೂ ಓದಿ: ATM ನಲ್ಲಿ ಯಾಕೆ 2 AC ಇರುತ್ತೆ? ಕಾರಣ ತಿಳಿದುಕೊಂಡು ನೆಕ್ಸ್ಟ್ ಹೋದಾಗ ಹುಷಾರಾಗಿರಿ!
36 ವರ್ಷದ ಅನ್ವೇಸಾ ಚಕ್ರವರ್ತಿ ಗರ್ಭಿಣಿಯಾಗಿದ್ದಾಗ 2020 ರ ಆಗಸ್ಟ್ ನಲ್ಲಿ ಲಾಕ್ಡೌನ್ ಮಧ್ಯೆ ಬೆಳ್ಳಂದೂರಿನ 3-ಬಿಎಚ್‌ಕೆ ಫ್ಲ್ಯಾಟ್ ಗೆ ಸ್ಥಳಾಂತರಗೊಂಡಿದ್ದರು. ಆಗ ಮನೆಯ ಬಾಡಿಗೆ 25,000 ರೂಪಾಯಿಗಳಾಗಿದ್ದು, ಪ್ರತಿ ವರ್ಷ ಬಾಡಿಗೆಯನ್ನು 1,000 ರೂಪಾಯಿಗೆ ಹೆಚ್ಚಿಸಲು ಮನೆ ಮಾಲೀಕ ಮತ್ತು ಬಾಡಿಗೆದಾರರು ಒಪ್ಪಿಕೊಂಡರು.
ಕೋವಿಡ್ ನಂತರದಲ್ಲಿ ಮನೆ ಬಾಡಿಗೆಯನ್ನು 35,000 ರೂಪಾಯಿಗೆ ಏರಿಸಿದ್ರಂತೆ..
ಆದಾಗ್ಯೂ, 2022 ರ ಆರಂಭದಲ್ಲಿ, ದೇಶದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಕುಸಿಯುತ್ತಿದ್ದಂತೆ ಮತ್ತು ಕಂಪನಿಗಳು ತಮ್ಮ ಉದ್ಯೋಗಿಗಳನ್ನು ಕಚೇರಿಯಿಂದ ಕೆಲಸಕ್ಕೆ ಮಾಡಿ ಬನ್ನಿ ಅಂತ ಕರೆಯಲು ಶುರು ಮಾಡಿದಾಗ, ಚಕ್ರವರ್ತಿಯ ಮನೆ ಮಾಲೀಕರು ಮನೆಯ ಬಾಡಿಗೆಯನ್ನು 35,000 ರೂಪಾಯಿಗೆ ಹೆಚ್ಚಿಸುತ್ತೇವೆ ಅಂತ ಹೇಳಿದರು.
"ನಾವು ವರ್ಷಕ್ಕೆ ನಮ್ಮ ಮಧ್ಯೆ ಆಗಿರುವ ಒಪ್ಪಂದವನ್ನು ನವೀಕರಿಸಿದ ನಂತರ ಮತ್ತು 27,000 ರೂಪಾಯಿಗೆ 5 ಪ್ರತಿಶತದಷ್ಟು ಹೆಚ್ಚುವರಿ ಬಾಡಿಗೆಯನ್ನು ಪಾವತಿಸಲು ಪ್ರಾರಂಭಿಸಿದ ನಂತರ ಇದು ಸಂಭವಿಸಿದೆ" ಎಂದು ಆಡಿಯೊ ಒಟಿಟಿ ಪ್ಲಾಟ್ಫಾರ್ಮ್ ನಲ್ಲಿ ಕೆಲಸ ಮಾಡುವ ಚಕ್ರವರ್ತಿ ಸುದ್ದಿ ಮಾಧ್ಯಮಕ್ಕೆ ತಿಳಿಸಿದರು. "ಈ ಸ್ಥಳದಲ್ಲಿ ಮನೆ ಬಾಡಿಗೆ ಹೆಚ್ಚಾಗಿದೆ ಮತ್ತು ನಾವು ವಾಸಿಸುತ್ತಿದ್ದಂತಹ ಫ್ಲ್ಯಾಟ್ ಗಳನ್ನು ಈಗ 45,000 ರೂಪಾಯಿ ಬಾಡಿಗೆಗೆ ನೀಡಲಾಗುತ್ತಿದೆ” ಎಂದು ಅವರು ಹೇಳಿದರು.
ಹೆಚ್ಚಿನ ಬಾಡಿಗೆ ಪಾವತಿಸಿದರೆ ಇರಿ, ಇಲ್ಲ ಅಂದ್ರೆ ಮನೆಯಿಂದ ಹೊರ ಹೋಗಿ
"ಹೆಚ್ಚಿನ ಬಾಡಿಗೆ ಪಾವತಿಸಿದರೆ ಇರಿ, ಇಲ್ಲ ಅಂದ್ರೆ ಮನೆಯಿಂದ ಹೊರ ಹೋಗಿ ಅಂತ ನಮಗೆ ತಿಳಿಸಲಾಯಿತು" ಎಂದು ಚಕ್ರವರ್ತಿ ಹೇಳಿದರು. ಈ ಫ್ಲ್ಯಾಟ್ ನಲ್ಲಿ ದಂಪತಿಗಳ ಜೊತೆಗೆ ಮಗು, ಅತ್ತೆ ಮತ್ತು ಅನಾರೋಗ್ಯದಿಂದ ಬಳಲುತ್ತಿರುವ 75 ವರ್ಷದ ಮಾವನು ಜೊತೆಗಿದ್ದಾರೆ. ಕುಟುಂಬವು ಈ ಪ್ರದೇಶದಲ್ಲಿ ಮನೆಯನ್ನು ಹುಡುಕಲು ಪ್ರಾರಂಭಿಸಿದಾಗ, ಅವರ ಮನೆ ಮಾಲೀಕರು ಈಗಾಗಲೇ 45,000 ರೂಪಾಯಿಗಳ ಬಾಡಿಗೆಯನ್ನು ಪಾವತಿಸಲು ಒಪ್ಪಿದ ಹೊಸ ಬಾಡಿಗೆದಾರರನ್ನು ಕಂಡು ಕೊಂಡಿದ್ದಾರೆ ಎಂದು ತಿಳಿದು ಬಂದಿದೆ. "ಅವರು ಅದನ್ನು ಹಂಚಿಕೆಯ ಆಧಾರದ ಮೇಲೆ ನೀಡಿದ್ದರು, ಆದ್ದರಿಂದ ಅವರು ಬೇಗನೆ ಬದಲಿಗಳನ್ನು ಕಂಡು ಕೊಂಡರು" ಎಂದು ಚಕ್ರವರ್ತಿ ಹೇಳಿದರು.
ಈ ಕುಟುಂಬ 2-ಬಿಎಚ್‌ಫ್ಲ್ಯಾಟ್ ಗೆ ಶಿಫ್ಟ್ ಆದ್ರಂತೆ..
ಈಗ ಈ ಕುಟುಂಬವು ಹತ್ತಿರದ ಕಾರ್ಮೆಲ್ರಾಮ್ ನಲ್ಲಿರುವ 2-ಬಿಎಚ್‌ಕೆ ಗೆ ಸ್ಥಳಾಂತರಗೊಂಡಿತು, 18,000 ರೂಪಾಯಿ ಜಾಸ್ತಿ ಮಾಡಿದ್ದರ ಬಗ್ಗೆ ಮನೆ ಮಾಲೀಕನನ್ನು ಕೇಳಿದರೆ, ಅವರು ಪ್ರತಿಕ್ರಿಯಿಸಲು ನಿರಾಕರಿಸಿದರಂತೆ. ಕಳೆದ ವರ್ಷದಿಂದ ನಗರದಲ್ಲಿ ಮನೆಯ ಬಾಡಿಗೆಗಳು ದುಪ್ಪಟ್ಟಾಗಿವೆ. ಬಾಡಿಗೆಯ ಬಿಸಿಯನ್ನು ಎದುರಿಸುತ್ತಿರುವ ನೂರಾರು ಜನರಲ್ಲಿ ಚಕ್ರವರ್ತಿ ಕುಟುಂಬವೂ ಸಹ ಒಂದಾಗಿದೆ.
ಪ್ರಾಪರ್ಟಿ ಕನ್ಸಲ್ಟೆನ್ಸಿ ಸಂಸ್ಥೆ ಅನಾರಾಕ್ ನ ಸಂಶೋಧನಾ ಮುಖ್ಯಸ್ಥ ಪ್ರಶಾಂತ್ ಠಾಕೂರ್ "ಕೋವಿಡ್ ಸಮಯದಲ್ಲಿ ಅನೇಕರು ತಮ್ಮ ಊರುಗಳಿಗೆ ಮರಳಿದ್ದರಿಂದ ಅಪಾರ್ಟ್ಮೆಂಟ್ ಗಳನ್ನು ಅತ್ಯಂತ ಕಡಿಮೆ ಬಾಡಿಗೆಗೆ ನೀಡಬೇಕಾಯಿತು. ಈಗ ಜನರು ಕಚೇರಿಗೆ ಮರಳುತ್ತಿರುವುದರಿಂದ, ಮನೆಯ ಮಾಲೀಕರು ಹೆಚ್ಚಿನ ಬಾಡಿಗೆಯನ್ನು ಕೇಳುವುದರೊಂದಿಗೆ ತಮ್ಮ ನಷ್ಟವನ್ನು ಸರಿದೂಗಿಸುತ್ತಿದ್ದಾರೆ" ಎಂದು ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ