Mushroom in AC farm: ಎಸಿ ರೂಮ್​ನಲ್ಲಿ ಅಣಬೆ ಕೃಷಿ! ವರ್ಷಕ್ಕೆ 50 ಲಕ್ಷ ಆದಾಯ

ಸಾಂಪ್ರದಾಯಿಕ ಆಲೋಚನಾ ಲಹರಿಯಿಂದ ಹೊರ ಬಂದು ಸೃಜನಾತ್ಮಕವಾಗಿ ಏನಾದರೂ ಮಾಡಲು ಇಚ್ಛಿಸಿದಾಗ ಮಾತ್ರ ಬೇರೆಯವರಿಗಿಂತ ಭಿನ್ನವಾಗಿ ಏನಾದರೂ ಸಾಧಿಸಲು ಸಾಧ್ಯ ಎನ್ನುತ್ತಾರೆ.

ಎಸಿ ರೂಮ್​ನಲ್ಲಿ ಅಣಬೆ ಕೃಷಿ (ಚಿತ್ರಕೃಪೆ: ದಿ ಪ್ರಿಂಟ್)

ಎಸಿ ರೂಮ್​ನಲ್ಲಿ ಅಣಬೆ ಕೃಷಿ (ಚಿತ್ರಕೃಪೆ: ದಿ ಪ್ರಿಂಟ್)

  • Share this:
ಇಂದಿನ ತಂತ್ರಜ್ಞಾನ ಯುಗಕ್ಕೆ ಆಗಾಗ ಅಲ್ಲಲ್ಲಿ ರೈತರು ಅನುರೂಪವಾಗಿ ನಡೆಯುತ್ತಿದ್ದಾರೆನೋ ಅನ್ನುವಂತಹ ಸುದ್ದಿ ಬರುತ್ತಿರುತ್ತದೆ. ಕಡಿಮೆ ಸ್ಥಳದಲ್ಲಿ ಆಧುನಿಕ ತಂತ್ರಜ್ಞಾನ ಅಳವಡಿಸಿ ಇಳುವರಿ ಹೆಚ್ಚಿಸಿಕೊಂಡಿರುವ ಕೆಲವು ರೈತರ ಬಗ್ಗೆ ನಾವು ಈಗಾಗಲೇ ಕೇಳಿರಬಹುದು. ಆದರೆ ಪಂಜಾಬ್ ರಾಜ್ಯದಲ್ಲಿರುವ (Punjab) ಹರ್ಜಿಂದರ್ ಕೌರ್ ಹಾಗೂ ಅವಳ ನಾಲ್ಕು ಜನ ಮಕ್ಕಳು ಹೊಂದಿರುವ ಜಮೀನು ಕೇವಲ 4 ಎಕರೆಗಳಷ್ಟು. ಆದರೆ ಅವರು ಪ್ರದೇಶದಲ್ಲಿ ಬಹು ಜನ ರೈತರು ಬೆಳೆಯುವಂತಹ ಸಾಂಪ್ರದಾಯಿಕ ಬೆಳೆಗಳಾದ ಭತ್ತ-ಗೋಧಿಯಾಗಲಿ (Rice-Wheat) ಬೆಳೆಯುತ್ತಿಲ್ಲ. ಬದಲಾಗಿ ಅವರು ಅಣಬೆ ಕೃಷಿ (Mushroom Farming) ಮಾಡುತ್ತಿದ್ದು ಅದರಿಂದ ಪಡೆಯುತ್ತಿರುವ ಲಾಭ ಮಾತ್ರ ಅಪಾರ. ಹೇಗೆ ಭೂಮಿ ಚಿಕ್ಕದಾಗಿದ್ದರೂ ಸೃಜನಾತ್ಮಕವಾಗಿ ಬೆಳೆ ಬೆಳೆದರೆ ಹೆಚ್ಚಿನ ಲಾಭಗಳಿಸಬಹುದು ಎಂಬುದನ್ನು ಈ ಪಂಜಾಬಿ ಕುಟುಂಬ ತೋರಿಸಿಕೊಟ್ಟಿದೆ

ಪಂಜಾಬಿನ ಅಮೃತಸರ್ ನಗರದ ಬಳಿ ಇರುವ ಬಟಾಲಾ ರಸ್ತೆಯಲ್ಲಿ ಸಾಗುವಾಗ ನಿಮಗೆ ಒಂದೆಡೆ ರಾಂಧ್ವಾ ಮಶ್ರೂಮ್ ಫಾರ್ಮ್ ಎಂಬ ಬೋರ್ಡ್ ಕಾಣಸಿಗುತ್ತದೆ. ಆ ಬೋರ್ಡ್ ಅರಸಿ ನೀವು ಅಲ್ಲಿಗೆ ತೆರಳಿದರೆ ಒಂದು ಕಟ್ಟಡ ಹಾಗೂ ಅಲ್ಲಿ ಹಸಿ ಮಣ್ಣಿನ ವಸನೆ ಎಲ್ಲೆಡೆ ಹರಡಿರುವುದನ್ನು ಗಮನಿಸಬಹುದು. ಇನ್ನಷ್ಟು ಒಳಗೆ ಹೋದರೆ ನೀವು ಅಲ್ಲಿ ಪ್ಲಾಸ್ಟಿಕ್ ಬ್ಯಾಗುಗಗಳಲ್ಲಿ ಅಲ್ಲಲ್ಲಿ ಏನೋ ನೇತು ಹಾಕಿದ್ದನ್ನು ಕಾಣಬಹುದು. ಗಾಬರಿಯಾಗಬೇಡಿ, ಇದು ಅಣಬೆ ಕೃಷಿಗೆ ಸಂಬಂಧಿಸಿದಂತೆ ರೂಪಿಸಲಾದ ಒಂದು ಸೌಕರ್ಯ ಅಷ್ಟೆ.

ಯಾವೆಲ್ಲ ತಳಿಗಳ ಅಣಬೆ ಬೆಳೆಯುತ್ತಾರೆ?
ಇಲ್ಲಿ ನೀವು ಹಲವು ರೀತಿಯ ಭಕ್ಷ್ಯಗಳಿರುವುದನ್ನು ಕಾಣಬಹುದು. ವಿಶೇಷ ಎಂದರೆ ಈ ಭಕ್ಷ್ಯಗಳ ಮೂಲ ಪದಾರ್ಥ ಅಣಬೆ. ಹೌದು, 66 ವರ್ಷದ ಹರ್ಜಿಂದರ್ ಅವರು ಇಲ್ಲಿ ತಮ್ಮ ಮಕ್ಕಳೊಡನೆ ಸೇರಿ ಅಣಬೆ ಫಾರ್ಮ್ ನಡೆಸುತ್ತಾರೆ. ಭಾರತದಲ್ಲಿ ಸಾಮಾನ್ಯವಾಗಿ ದೊರೆಯುವ ಜನಪ್ರೀಯ ಬಟನ್ ಜಾತಿಯಿಂದ ಹಿಡಿದು ಎಕ್ಸಾಟಿಕ್ ಎಂದು ಪರಿಗಣಿಸಲ್ಪಡುವ ಆಯ್ಸ್ಟರ್, ಕಿಂಗ್ ಆಯ್ಸ್ಟರ್, ಪ್ಯಾಡಿ ಸ್ಟ್ರಾ ಇತ್ಯಾದಿ ಅಣಬೆ ತಳಿಗಳನ್ನೂ ಸಹ ಇಲ್ಲಿ ಬೆಳೆಯಲಾಗುತ್ತದೆ.

ಸಾಮಾನ್ಯವಾಗಿ ಚಳಿಗಾಲ ಅಣಬೆ ಕೃಷಿಗೆ ಸೂಕ್ತವಾಗಿದ್ದು ಬಹುತೇಕ ಅಣಬೆ ಬೆಳೆಗಾರರು ಅಕ್ಟೋಬರ್ ನಿಂದ ಫೆಬ್ರುವರಿಯವರೆಗೆ ಇದರ ಕೃಷಿ ಮಾಡುತ್ತಾರೆ. ಆದರೆ ಅಣಬೆಗಳಿಗೆ ವರ್ಷದ ಎಲ್ಲ ಅವಧಿಯಲ್ಲೂ ಡಿಮ್ಯಾಂಡ್ ಇರುವಾಗ ಅದನ್ನು ಉಳಿದ ಸಮಯ ಬೆಳೆಯದೆ ಬಿಟ್ಟರೆ ಹೇಗೆ ಎಂಬ ಪ್ರಶ್ನೆಗೆ ಉತ್ತರವಾಗಿ ಈ ಕುಟುಂಬವು ತನ್ನ ಫಾರ್ಮಿನಲ್ಲೇ ಹವಾ ನಿಯಂತ್ರಣ ವ್ಯವಸ್ಥೆಯನ್ನೂ ಸಹ ಕಲ್ಪಿಸಿದ್ದು ವರ್ಷದ ಎಲ್ಲ ದಿನಗಳಲ್ಲೂ ಅಣಬೆ ಬೆಳೆಯುತ್ತಾರೆ.

ಸೃಜನಾತ್ಮಕವಾಗಿ ಏನಾದರೂ ಮಾಡಬೇಕು ಅಂತಿತ್ತು
ಈ ಮೂಲಕ ರಾಂಧ್ವಾ ಕುಟುಂಬ ಈಗ ಪ್ರದೇಶದಲ್ಲಿ ಪ್ರಗತಿಪರ ರೈತ ಕುಟುಂಬ ಎಂದೆ ಗುರುತಿಸಲ್ಪಡುತ್ತದೆ. ಈ ಬಗ್ಗೆ ಮಾತನಾಡುವ ಹರ್ಜಿಂದರ್ ಸಾಂಪ್ರದಾಯಿಕ ಆಲೋಚನಾ ಲಹರಿಯಿಂದ ಹೊರ ಬಂದು ಸೃಜನಾತ್ಮಕವಾಗಿ ಏನಾದರೂ ಮಾಡಲು ಇಚ್ಛಿಸಿದಾಗ ಮಾತ್ರ ಬೇರೆಯವರಿಗಿಂತ ಭಿನ್ನವಾಗಿ ಏನಾದರೂ ಸಾಧಿಸಲು ಸಾಧ್ಯ ಎನ್ನುತ್ತಾರೆ.

ಮೊದಲಿನಿಂದ ಹವ್ಯಾಸ
ಹರ್ಜಿಂದರ್ ಅವರು ಹೀಗೆ ಸುಮ್ಮನೆ ಅಣಬೆ ಕೃಷಿ ಪ್ರಾರಂಭಿಸಿಲ್ಲ. ಅವರಿಗೆ ಅಣಬೆ ಬೆಳೆಯುವ ಹವ್ಯಾಸ ಮುಂಚಿನಿಂದಲೂ ಇತ್ತು. 1989 ರಲ್ಲೇ ಅವರು ಅಮೃತಸರ್ ಜಿಲ್ಲೆಯ ಧಾರ್ದೇವ್ ಪಟ್ಟಣದ ತಮ್ಮ ಮನೆಯಲ್ಲಿ ವಾಸವಿದ್ದಾಗ ಅಣಬೆ ಕೃಷಿಯನ್ನು ಪ್ರಯತ್ನಿಸಿದ್ದರು. ತದನಂತರ ಅವರು ಪಂಜಾಬ್ ಕೃಷಿ ವಿಶ್ವವಿದ್ಯಾನಿಲ್ಯದಲ್ಲಿ ತರಬೇತಿ ಪೂರ್ಣಗೊಳಿಸಿದರು. ಹೀಗೆ ಅಣಬೆ ಬೆಳೆಯಲ್ಲಿ ಪರಿಣಿತಿ ಪಡೆದ ಹರ್ಜಿಂದರ್ ಈ ಬೆಳೆಯನ್ನು ತಮ್ಮ ಮನೆಯಿಂದ ಮೂರು ಕಿ.ಮೀ ದೂರವಿದ್ದ ತಮ್ಮ ನಾಲ್ಕು ಎಕರೆ ಭೂಮಿಗೆ ವಿಸ್ತರಿಸಿ ಪ್ರಾರಂಭಿಸಿದರು.

ಪ್ರಾರಂಭದಲ್ಲಿ ಇವರು ಹೆಚ್ಚುವರಿಯಾಗಿ ಬೆಳೆಯುತ್ತಿದ್ದ ಅಣಬೆಯನ್ನಷ್ಟೆ ಮಾರಾಟ ಮಾಡುತ್ತಿದ್ದರು. ತದನಂತರ ಅಣಬೆಗೆ ಇರುವ ಡಿಮ್ಯಾಂಡ್ ಕಂಡು ಇದನ್ನು ಪೂರ್ಣ ಪ್ರಮಾಣದಲ್ಲಿ ಬೆಳೆಯಲಾರಂಭಿಸಿದರಾದರೂ ಇದು ಚಳಿಗಾಲದಲ್ಲಷ್ಟೇ ಮಾಡಬಹುದಾಗಿದ್ದ ಕೃಷಿ ಬೆಳೆಯಾಗಿತ್ತು.

ಹವಾನಿಯಂತ್ರಣ ವ್ಯವಸ್ಥೆ
ಇದನ್ನರಿತ ಹರ್ಜಿಂದರ್ ಅವರ ಹಿರಿಯ ಮಗ ಮಂದೀಪ್ ಸಿಂಗ್ ರಾಂಧ್ವಾ ತಮ್ಮ ಜಮೀನಿನಲ್ಲಿ ಅಲ್ಲಲ್ಲಿ ಶೆಡ್ ಹಾಕಿ, ಏರ್ ಕೂಲರ್ ಗಳನ್ನು ಬಳಸಲು ಪ್ರಾರಂಭಿಸಿದರು. ಆದರೆ, ಇದರಿಂದ ಅಷ್ಟೊಂದೇನೂ ಪ್ರಯೋಜನವಾಗದೆ ಅಂತಿಮವಾಗಿ 2020 ರಲ್ಲಿ ರಾಂಧ್ವಾ ಕುಟುಂಬ ತಮ್ಮ ಜಮೀನಿನ 1.5 ಎಕರೆಗಳಷ್ಟು ಸ್ಥಳದಲ್ಲಿ ಹವಾನಿಯಂತ್ರಣದ ವ್ಯವಸ್ಥೆ ಕಲ್ಪಿಸಿದರು. ಇದಕ್ಕಾಗಿ ಅವರಿಗೆ ಮೂರು ಕೋಟಿ ರೂಪಾಯಿಗಳ ವೆಚ್ಚ ತಗುಲಿತು.

50 ಲಕ್ಷ ಆದಾಯ!
ಆದರೆ, ಹೀಗೆ ಎಸಿ ವ್ಯವಸ್ಥೆ ಕಲ್ಪಿಸಿದ ಮೇಲೆ ಅವರ ಅಣಬೆ ಕೃಷಿ ವರ್ಷದ ಎಲ್ಲ ದಿನಗಳಲ್ಲೂ ನಡೆಯತೊಡಗಿತು ಹಾಗೂ ವ್ಯಾಪಾರವು ಹೆಚ್ಚಿತು ಎನ್ನುತ್ತಾರೆ ಮಂದೀಪ್. ಮಂದೀಪ್ ಹೇಳುವಂತೆ ಸದ್ಯ ಅವರ ಅಣಬೆ ವ್ಯಾಪಾರದಲ್ಲಿ ಕೂಲಿ ಶುಲ್ಕ, ವಿದ್ಯುತ್ ಶುಲ್ಕ, ಗೊಬ್ಬರ ಇತ್ಯಾದಿ ಎಲ್ಲ ಶುಲ್ಕಗಳನ್ನು ಕಡಿದರೂ ಅವರು ವರ್ಷಕ್ಕೆ ಏನಿಲ್ಲವೆಂದರೂ 50 ಲಕ್ಷ ರೂಪಾಯಿಗಳಷ್ಟು ಆದಾಯಗಳಿಸುತ್ತಿರುವುದಾಗಿ ಹೇಳಿದ್ದಾರೆ. ಅವರು ತಮ್ಮದೆ ಅಣಬೆಯ ಉತ್ಪನ್ನದ ಫೇಸ್‍ಬುಕ್ ಪುಟ ಹೊಂದಿದ್ದು ಆ ಮೂಲಕ ಗ್ರಾಹಕರಿಗೆ ನೇರವಾಗಿ ಮಾರಾಟ ಮಾಡುತ್ತಿದ್ದಾರೆಂದು ಮಂದೀಪ್ ತಿಳಿಸಿದ್ದಾರೆ.

ಇದನ್ನೂ ಓದಿ: Ranbir-Alia Net Worth: ರಣಬೀರ್ ಕಪೂರ್-ಆಲಿಯಾ ಭಟ್ ನಿವ್ವಳ ಆಸ್ತಿ ಕಂಡು ಬೆಕ್ಕಸ ಬೆರಗಾಗಿ!

ಮಂದೀಪ್ ಅವರು ಹೇಳುವಂತೆ ಅಣಬೆ ಬೆಳೆಯಲು ಮೂರು ಹಂತಗಳಿದ್ದು ಪ್ರತಿ ಹಂತಗಳಲ್ಲೂ ನಿರ್ದಿಷ್ಟ ಪ್ರಮಾಣದ ಬೆಳಕು ಹಾಗೂ ತಾಪಮಾನಗಳು ಇರುವಂತೆ ಪರಿಸರವನ್ನು ಕಾಪಾಡಿಕೊಳ್ಳಬೇಕೆನ್ನುತ್ತಾರೆ. ಅದಕ್ಕಾಗಿ ಅವರು ತಮ್ಮ ಫಾರ್ಮಿನ ಕಟ್ಟಾಡದಲ್ಲಿ ಹನ್ನೆರಡು ಕೋಣೆಗಳನ್ನು ಹೊಂದಿದ್ದು ಅಲ್ಲಿ ಎಸಿ ವ್ಯವಸ್ಥೆ ಮೂಲಕ ನಿರ್ದಿಷ್ಟ ಪ್ರಮಾಣದಲ್ಲಿ ತಾಪಮಾನ ಇರುವಂತೆ ನೋಡಿಕೊಳ್ಳುತ್ತಾರೆ. ಅಲ್ಲಿ ಗೊಬ್ಬರ ಉಣಿಸಲು ವ್ಯವಸ್ಥೆ ಮಾಡಲಾಗಿದ್ದು ಪ್ಲಾಸ್ಟಿಕ್ ಬ್ಯಾಗುಗಳಲ್ಲಿ ಕಡಿಮೆ ಬೆಳಕಿನಲ್ಲೂ ಪ್ರಕಾಶಮಾನವಾಗಿ ಬೆಳ್ಳಗಿನ ಅಣಬೆಗಳು ಅರಳಿರುವುದನ್ನು ಕಾಣಬಹುದು.

ಹಲವೆಡೆ ಅಭಿಯಾನ
ಪಂಜಾಬ್ ಮೊದಲಿನಿಂದಲೂ ಕೃಷಿ ಚಟುವಟಿಕೆಗೆ ಸಂಬಂಧಿಸಿದಂತೆ ಭಾರತದಲ್ಲಿ ಅಗ್ರಗಣ್ಯ ರಾಜ್ಯಗಳ ಪೈಕಿ ಒಂದಾಗಿದೆ. ಆದರೆ ಕಳೆದ ಕೆಲ ವರ್ಷಗಳಿಂದ ನೀರಿನ ಕೊರತೆಯಿಂದಾಗಿ ಸಾಂಪ್ರದಾಯಿಕ ಬೆಳೆಗಳ ಬೆಳೆಯುವಿಕೆ ಕಷ್ಟಕರವಾಗುತ್ತಿದ್ದು ಈಗಾಗಲೇ ಪ್ರಗತಿಪರ ಬೆಳೆ ಬೆಳೆಯುವ ಬಗ್ಗೆ ಎಲ್ಲೆಡೆ ಹಲವು ಅಭಿಯಾನಗಳನ್ನು ಕೈಗೊಳ್ಳಲಾಗುತ್ತಿದ್ದು ಆ ದೃಷ್ಟಿಯಲ್ಲಿ ಅಣಬೆ ಬೆಳೆಗಳಂತಹ ಕೃಷಿ ಚಟುವಟಿಕೆ ರೈತರಿಗೆ ಸಾಕಷ್ಟು ಲಾಭದಾಯಕವಾಗಬಹುದಾಗಿದೆ. 

ಇದನ್ನೂ ಓದಿ: Loan Alert: 10 ಲಕ್ಷ ಸಾಲ ನೀಡುವ ಯೋಜನೆ ಬಂದ್; ಬದಲಿ ಯೋಜನೆ ಇಲ್ಲಿದೆ!

ಇತರೆ ಸಾಂಪ್ರದಾಯಿಕ ಬೆಳೆಗಳಂತೆ ಈ ಕೃಷಿಗೆ ಹೆಚ್ಚಿನ ನೀರಿನ ಅಗತ್ಯವಿಲ್ಲ ಹಾಗೂ ಲಾಭವೂ ಅಧಿಕ. ಆದರೆ, ಅಣಬೆ ಕೃಷಿಗೆ ಪ್ರಾಥಮಿಕವಾಗಿಯೇ ಹೆಚ್ಚಿನ ಬಂಡವಾಳ ಬೇಕಾಗಿರುವುದೇ ಒಂದು ದೊಡ್ಡ ಸವಾಲಾಗಿದೆ.
Published by:guruganesh bhat
First published: