ಈಗಂತೂ ದೊಡ್ಡ ದೊಡ್ಡ ಟೆಕ್ ಕಂಪೆನಿಗಳು (Tech Company) ಆರ್ಥಿಕ ಸಂಕಷ್ಟದ ಕಾರಣವನ್ನು ಹೇಳಿಕೊಂಡು ತಮ್ಮ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಸಾವಿರಾರು ಉದ್ಯೋಗಿಗಳನ್ನು (Employees) ಕೆಲಸದಿಂದ ವಜಾಗೊಳಿಸುತ್ತಿರುವುದನ್ನು ನಾವೆಲ್ಲಾ ನೋಡುತ್ತಲೇ ಇದ್ದೇವೆ. ಈ ದೊಡ್ಡ ದೊಡ್ಡ ಐಟಿ ಕಂಪೆನಿಗಳ (IT Company) ಲೇ-ಆಫ್ (Layoff) ಡ್ರಾಮಾ ಈ ಕಂಪೆನಿಗಳಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಗಳಲ್ಲಿ ತಮ್ಮ ಭವಿಷ್ಯದ ಬಗ್ಗೆ ಒಂದು ರೀತಿಯ ಭಯ ಮತ್ತು ಆತಂಕವನ್ನು ಹುಟ್ಟು ಹಾಕಿದೆ.
ಐಟಿ ಉದ್ಯಮದಲ್ಲಿ ಇತ್ತೀಚಿನ ಈ ಸಾಮೂಹಿಕ ವಜಾಗಳ ಅಲೆಯ ಮಧ್ಯೆ, ಮೆಟಾ ಮತ್ತು ಸೇಲ್ಸ್ ಫೋರ್ಸ್ ನಂತಹ ಕಂಪೆನಿಗಳಲ್ಲಿನ ಉದ್ಯೋಗಿಗಳು ತಮಗೆ ಯಾವುದೇ ಕೆಲಸವನ್ನು ಕೊಡದೆ ಸಂಬಳ ಕೊಟ್ಟಿದ್ದಾರೆ ಅಂತ ಅನೇಕರು ಹೇಳಿಕೊಂಡಿದ್ದಾರೆ.
ಮೆಟಾದ ಮಾಜಿ ಹೆಚ್‌ಆರ್ ತನ್ನ ಕೆಲಸ ಮತ್ತು ಸಂಬಳದ ಬಗ್ಗೆ ಹೇಳಿದ್ದೇನು?
ಈಗ ಇಲ್ಲಿಯೂ ಸಹ ಅಂತಹದೇ ಒಂದು ಘಟನೆ ಬೆಳಕಿಗೆ ಬಂದಿದೆ. ಮೆಟಾದಲ್ಲಿ ಹೆಚ್‌ಆರ್ ಆಗಿದ್ದ ಮಡೆಲಿನ್ ಮಚಾಡೊ ಅವರು ಟಿಕ್‌ಟಾಕ್ ವಿಡಿಯೋದಲ್ಲಿ ಕಂಪೆನಿಯೊಂದಿಗಿನ ತನ್ನ ಆರು ತಿಂಗಳ ಅಧಿಕಾರಾವಧಿಯಲ್ಲಿ ಏನೂ ಕೆಲಸ ಮಾಡದೆ ಇದ್ದರೂ ಸಹ 1,90,000 ಡಾಲರ್ ಎಂದರೆ ಭಾರತೀಯ ಮೌಲ್ಯದಲ್ಲಿ ಸುಮಾರು 1.5 ಕೋಟಿ ರೂಪಾಯಿ ಸಂಬಳವನ್ನು ಪಡೆದಿದ್ದಾರೆ ಎಂದು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ವಿಶ್ವದ ಮೊದಲ ಚಿನ್ನ ಲೇಪಿತ ಹೋಟೆಲ್! ಇಲ್ಲಿ ಟಾಯ್ಲೆಟ್ ಬೇಸಿನ್ ಕೂಡಾ 24 ಕ್ಯಾರೆಟ್ ಗೋಲ್ಡ್ ಗುರೂ!
ಏನೂ ಕೆಲಸ ಇಲ್ಲದೆ ಹೋದರೂ ಅನೇಕ ನೌಕರರು ತಿಂಗಳಿಗೆ ಸರಿಯಾಗಿ ತಮ್ಮ ಸಂಬಳವನ್ನು ಪಡೆಯುವ ಈ ಪ್ರವೃತ್ತಿಯು ಇತರ ಅನೇಕ ಟೆಕ್ ಕಂಪೆನಿಗಳಲ್ಲಿಯೂ ಪ್ರಚಲಿತದಲ್ಲಿದೆ.
ಮಟಾದಿಂದಲೂ ವಜಾ
ಮತ್ತೊಬ್ಬ ಮಾಜಿ ಮೆಟಾ ಉದ್ಯೋಗಿ ಬ್ರಿಟ್ನಿ ಲೆವಿ, ಕಂಪೆನಿಯ ನೇಮಕಾತಿ ಅಭ್ಯಾಸಗಳನ್ನು "ಪೋಕೆಮನ್ ಕಾರ್ಡ್ ಗಳನ್ನು ಸಂಗ್ರಹಿಸುವುದಕ್ಕೆ" ಹೋಲಿಸುತ್ತಾರೆ. ಟಿಕ್‌ಟಾಕ್ ವಿಡಿಯೋದಲ್ಲಿ, ಲೆವಿ ಮೆಟಾದಲ್ಲಿ ಕೆಲಸ ಹುಡುಕಲು ಪಟ್ಟ ಪ್ರಯತ್ನದ ಬಗ್ಗೆ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.
ಈ ವಿದ್ಯಮಾನವು ಕೋವಿಡ್-19 ಸಾಂಕ್ರಾಮಿಕ ರೋಗದ ಸಮಯದಲ್ಲಿ ಟೆಕ್-ಆಧಾರಿತ ಪರಿಹಾರಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಉಳಿಸಿಕೊಳ್ಳಲು ಟೆಕ್ ಕಂಪೆನಿಗಳು ತುಂಬಾ ಜನರನ್ನು ನೇಮಕ ಮಾಡಿಕೊಂಡಿದ್ದರು ಎಂದು ನಂಬಲಾಗಿದೆ.
ಕಳೆದ ನವೆಂಬರ್ ನಲ್ಲಿ ಶುರುವಾಯ್ತು ಈ ಲೇ-ಆಫ್ ಡ್ರಾಮಾ
ಕಳೆದ ನವೆಂಬರ್ ನಲ್ಲಿ ಮೆಟಾ ಕಂಪೆನಿಯ ಸಿಇಒ ಮಾರ್ಕ್ ಜುಕರ್‌ಬರ್ಗ್ ಮೊದಲ ಸುತ್ತಿನಲ್ಲಿ ಸಾವಿರಾರು ಉದ್ಯೋಗಿಗಳನ್ನು ವಜಾಗೊಳಿಸುವುದಾಗಿ ಘೋಷಿಸಿದ್ದರು.
ನಂತರ, ಅವರು ಮತ್ತೆ ಮಾರ್ಚ್ 2023 ರಲ್ಲಿ ಎರಡನೇ ಸುತ್ತಿನ ವಜಾಗೊಳಿಸುವಿಕೆಯನ್ನು ಘೋಷಿಸಿದರು. ಒಟ್ಟಾರೆಯಾಗಿ, ಮೆಟಾ ಭಾರತ ಸೇರಿದಂತೆ ಜಾಗತಿಕವಾಗಿ ತನ್ನ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದಂತಹ 20,000 ಕ್ಕೂ ಹೆಚ್ಚು ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಿದೆ.
ವಜಾ ಘೋಷಿಸುವ ಸಮಯದಲ್ಲಿ, ಜುಕರ್‌ಬರ್ಗ್ ಸಾವಿರಾರು ಉದ್ಯೋಗಿಗಳನ್ನು ತೆಗೆದು ಹಾಕುವ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಂಡರು. ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಕೋವಿಡ್ ಸಾಂಕ್ರಾಮಿಕ ರೋಗದ ಸಮಯದಲ್ಲಿ ಕಂಪನಿಯು ಅತಿಯಾಗಿ ಜನರನ್ನು ಉದ್ಯೋಗಕ್ಕೆ ನೇಮಿಸಿಕೊಂಡಿತ್ತು ಎಂದು ಮೆಟಾ ಸಿಇಒ ಒಪ್ಪಿಕೊಂಡರು.
ಇನ್ನೂ ಮಾರ್ಚ್ ನಲ್ಲಿ ಎರಡನೇ ವಜಾಗೊಳಿಸುವಿಕೆಯನ್ನು ಘೋಷಿಸುವ ಸಮಯದಲ್ಲಿ, ಟೆಕ್ ಗುಂಪುಗಳಲ್ಲಿ ಪುನರ್ ರಚನೆ ಮತ್ತು ವಜಾಗೊಳಿಸುವಿಕೆಗಳನ್ನು ಏಪ್ರಿಲ್ ತಿಂಗಳ ಕೊನೆಯಲ್ಲಿ ಮಾಡಲಾಗುವುದು ಮತ್ತು ಮೇ ಅಂತ್ಯದಲ್ಲಿ ವ್ಯಾಪಾರ ವಹಿವಾಟಿನ ಮೇಲೆ ಪರಿಣಾಮ ಬೀರುತ್ತದೆ ಎಂದು ಜುಕರ್‌ಬರ್ಗ್ ಹೇಳಿದ್ದರು.
ಏನ್ ಹೇಳಿದ್ರು ನೋಡಿ ಲೇ-ಆಫ್ ಇ-ಮೇಲ್ ನಲ್ಲಿ ಜುಕರ್‌ಬರ್ಗ್?
"ಮುಂದಿನ ಎರಡು ತಿಂಗಳುಗಳಲ್ಲಿ, ಕಂಪೆನಿಯ ಮುಖ್ಯಸ್ಥರು ಕಂಪೆನಿಯಲ್ಲಿನ ಕಡಿಮೆ ಆದ್ಯತೆಯ ಯೋಜನೆಗಳನ್ನು ರದ್ದುಗೊಳಿಸುವುದು ಮತ್ತು ನೇಮಕಾತಿ ದರಗಳನ್ನು ಕಡಿಮೆ ಮಾಡುವತ್ತ ಗಮನ ಹರಿಸುವ ಪುನರ್ ರಚನೆ ಯೋಜನೆಗಳನ್ನು ಘೋಷಿಸಲಿದ್ದಾರೆ. ಕಡಿಮೆ ನೇಮಕಾತಿಯೊಂದಿಗೆ, ನಮ್ಮ ನೇಮಕಾತಿ ತಂಡದ ಗಾತ್ರವನ್ನು ಮತ್ತಷ್ಟು ಕಡಿಮೆ ಮಾಡಲು ನಾನು ಕಠಿಣ ನಿರ್ಧಾರವನ್ನು ತೆಗೆದುಕೊಂಡಿದ್ದೇನೆ. ನೇಮಕಾತಿ ತಂಡದ ಸದಸ್ಯರಿಗೆ ಅದು ಪರಿಣಾಮ ಬೀರಿದೆಯೇ ಅಂತ ನಾವು ನಾಳೆ ತಿಳಿಸುತ್ತೇವೆ" ಅಂತ ಅವರು ಉದ್ಯೋಗಿಗಳಿಗೆ ಬರೆದ ಇ-ಮೇಲ್ ನಲ್ಲಿ ಬರೆದಿದ್ದರು.
ವಜಾಗೊಂಡ ಎಲ್ಲಾ ಉದ್ಯೋಗಿಗಳಿಗೆ ಕಂಪೆನಿಯು ಪರಿಹಾರ ನೀಡಲಿದೆ ಎಂದು ಮೆಟಾ ದೃಢಪಡಿಸಿದೆ. ಅದೇ ಇ-ಮೇಲ್ ಗಳಲ್ಲಿ, ಜುಕರ್‌ಬರ್ಗ್ ಪ್ರತಿ ವರ್ಷದ ಸೇವೆಗೆ 16 ವಾರಗಳ ವೇತನ ಮತ್ತು ಎರಡು ಹೆಚ್ಚುವರಿ ವಾರಗಳ ವೇತನವನ್ನು ಸಹ ನೀಡುವುದಾಗಿ ಭರವಸೆ ನೀಡಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ