ಕರ್ನಾಟಕದ ಐಟಿ ಹಬ್ (Karnataka IT Hub) ಹಾಗೂ ದೇಶದ ಸಿಲಿಕಾನ್ ವ್ಯಾಲಿ ಎಂದೇ ಕರೆಯಲಾಗುವ ನಮ್ಮ ಬೆಂಗಳೂರು ಹಲವಾರು ವಿಷಯಗಳಿಗಾಗಿ ಮಂಚೂಣಿಯಲ್ಲಿರುವ ನಗರ. ಉದ್ಯಾನಗಳ ನಗರಿ ಎಂತಲೂ ಪ್ರಸಿದ್ಧವಾದ ನಗರ ಟ್ರಾಫಿಕ್ ಜಾಮ್ (Traffic Jam) ಗಳಿಗೂ ಹೆಸರುವಾಸಿಯಾಗಿದೆ. ಕೆರೆಗಳ ನಗರ ಎಂಬ ಮನ್ನಣೆಗಳಿಸಿರುವ ಬೆಂಗಳೂರು ಅಕಾಲಿಕ ಮಳೆಗಾಗಿಯೂ ಇತ್ತೀಚಿನ ಕೆಲ ಕಾಲದಿಂದ ಖ್ಯಾತಿಗಳಿಸುತ್ತಿದೆ. ಹೌದು, ಬೆಂಗಳೂರಿನಲ್ಲಿ (Bengaluru) ಯಾವ ಸಮಯದಲ್ಲಿ ಯಾವ ರೀತಿ ಮಳೆ ಬರುತ್ತದೆಯೋ ಗೊತ್ತಾಗುವುದೇ ಇಲ್ಲ. ಇತ್ತೀಚಿನ ಕೆಲ ಸಮಯದಿಂದ ಈ ಐಟಿ ನಗರದಲ್ಲಿ ಬೀಳುತಿರುವ ಮಳೆ ಸಾಕಷ್ಟು ನೆರೆಯ ಅಥವಾ ಪ್ರವಾಹದ ಆತಂಕವನ್ನು ಹಲವೆಡೆ ಸೃಷ್ಟಿ ಮಾಡಿದೆ. ಇನ್ನು, ಇಂತಹ ಸಂದರ್ಭದಲ್ಲಿ ಅದೆಷ್ಟೋ ಜನ ಪ್ರವಾಹದಿಂದಾಗಿ ಮನೆಗಳಲ್ಲಿ ವಾಸಿಸಲು ಪರದಾಡಿರುವ ಘಟನೆಗಳೂ ನಡೆದಿವೆ.
ಸದ್ಯ, ಸರ್ಜಾಪುರ ರಸ್ತೆಯಲ್ಲಿರುವ ರೈನ್ ಬೋವ್ ಡ್ರೈವ್ ಲೇಔಟ್ ನಲ್ಲಿ ಭವ್ಯವಾದ ವಿಲ್ಲಾವೊಂದನ್ನು ಹೊಂದಿರುವ 43ರ ಪ್ರಾಯದ ಟೆಕ್ಕಿಯೊಬ್ಬರು ತಮ್ಮ ಆ ವೈಭವದ ಕೋಟಿ ರೂ. ಮೌಲ್ಯದ ವಿಲ್ಲಾ ತೊರೆದು ಸರ್ಜಾಪುರ-ಮಾರತಹಳ್ಳಿಯ ಮುತನಲ್ಲೂರು ಕ್ರಾಸ್ ಬಳಿಯ ಮನೆಯೊಂದರಲ್ಲಿ ಜೂನ್ ಒಂದರಿಂದ ವಾಸಿಸುವ ಪರಿಸ್ಥಿತಿ ಎದುರಿಸುತ್ತಿದ್ದಾರೆ.
ಹೌದು, ಕಾರ್ಥಿಕ್ ಕೃಷ್ಣನ್ ಎಂಬ ಟೆಕ್ಕಿ ಅಕಾಲಿಕ ಮಳೆ ಹಾಗೂ ಮುಂಬರುವ ಮಾನ್ಸೂನ್ ಮಳೆಯಿಂದಾಗಿ ಪ್ರವಾಹದ ಭೀತಿ ಎದುರಿಸುತ್ತಿದ್ದು ಅದರಿಂದ ಬಚಾವಾಗಲು ಮತ್ತೊಂದು ಮನೆಯನ್ನು ಬಾಡಿಗೆಗೆ ತೆಗೆದುಕೊಂಡು ಅಲ್ಲಿ ವಾಸಿಸಲು ಸನ್ನದ್ಧರಾಗಿದ್ದಾರೆ. ವಿಪರ್ಯಾಸವೆಂದರೆ ಅವರು ತಮ್ಮ ಕೋಟಿ ರೂ. ಮೌಲ್ಯದ ವಿಲ್ಲಾ ತೊರೆದು ಇದೀಗ ಬಾಡಿಗೆ ಮನೆಗೆ ಒಂದು ಲಕ್ಷ ಪಾವತಿಸಬೇಕಾಗುತ್ತದೆ.
ಇದನ್ನೂ ಓದಿ: ಶನಿವಾರ ನಿಮ್ಮ ನಗರದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಎಷ್ಟಿದೆ? ಇಲ್ಲಿದೆ ವಿವರ
ಇದು ಕಾರ್ತಿಕ್ ಅವರೊಬ್ಬರದೇ ಕಥೆಯಲ್ಲ, ಹೊರಮಾವು ಪ್ರದೇಶದ ಶ್ರೀ ಸಾಯಿ ಲೇಔಟಿನ ಅನೇಕ ನಿವಾಸಿಗಳು ಮುಂದೆ ಬೀಳಬಹುದಾದ ಮಳೆ ಹಾಗೂ ಆನಂತರ ಉಂಟಾಗುವ ಪ್ರವಾಹದಿಂದ ತಪ್ಪಿಸಿಕೊಳ್ಳಲು ಈಗಾಗಲೇ ತಮ್ಮ ತಮ್ಮ ಮನೆಗಳಿಂದ ಬೇರೆಡೆ ಶಿಫ್ಟ್ ಆಗಿದ್ದಾರೆ.
ಸೆಪ್ಟೆಂಬರ್ 2022ರ ಪ್ರವಾಹ!
ನಿಮಗೆ ನೆನಪಿರಬಹುದು, ಕಳೆದ ವರ್ಷ ಸೆಪ್ಟೆಂಬರ್ 2022 ರಲ್ಲಿ 25 ವರ್ಷಗಳಷ್ಟು ಹಳೆಯದಾದ ಆರ್.ಬಿ.ಡಿ ಲೇಔಟ್ ಮಳೆಯಿಂದಾಗಿ ಎದುರಿಸಿದಂತಹ ಪ್ರವಾಹದ ಪರಿಸ್ಥಿತಿ. ಸುಮಾರು 35 ಎಕರೆಗಳಷ್ಟು ವಿಸ್ತಾರವಾಗಿರುವ ಈ ಪ್ರದೇಶ ಅತ್ಯಂತ ಹೆಚ್ಚಿನ ಮಟ್ಟದ ಪ್ರವಾಹ ಪರಿಸ್ಥಿತಿ ಎದುರಿಸಿತ್ತು. ಅಲ್ಲಿನ ನಿವಾಸಿಗಳು ಹಲವು ದಿನಗಳ ಕಾಲ ಕಚೇರಿಗೆ ತೆರಳಲು ದೋಣಿಗಳನ್ನು ಬಳಸುವ ಪರಿಸ್ಥಿತಿ ಎದುರಿಸಿದ್ದರು.
ಅಷ್ಟೇ ಅಲ್ಲದೆ, ಅಲ್ಲಿನ ನಿವಾಸಿಗಳು ತಮ್ಮ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಟ್ರ್ಯಾಕ್ಟರ್ ಗಳನ್ನು ಹಲವು ದಿನಗಳ ಕಾಲ ಬಾಡಿಗೆಗೆ ಪಡೆದಿದ್ದರು. ಇಂತಹ ಪರಿಸ್ಥಿತಿಯನ್ನು ಮತ್ತೊಮ್ಮೆ ಎದುರಿಸುವುದೆಂದಾದರೆ ಯಾರಿಗೆ ಆಗಲಿ ಮೈ ಜುಮ್ ಎನ್ನದೆ ಇರಲಾರದು.
ಈ ಘಟನೆ ಘಟಿಸಿ ಈಗಷ್ಟೇ ಸುಮಾರು ಎಂಟು ತಿಂಗಳುಗಳಾಗಿದ್ದರೂ ಅಲ್ಲಿನ ಪರಿಸ್ಥಿತಿ ಈಗಲೂ ಹೇಳಿಕೊಳ್ಳುವಷ್ಟೇನೂ ಸುಧಾರಿಸಿಲ್ಲ, ಆದಾಗ್ಯೂ ಸ್ವಲ್ಪ ಮಟ್ಟಿಗಿನ ಕ್ರಮಗಳನ್ನು ಬಿಬಿಎಂಪಿ ತೆಗೆದುಕೊಂಡಿದೆಯಷ್ಟೆ. ಅಲ್ಲಿನ ರೆಸಿಡೆಂಟ್ಸ್ ವೆಲ್ಫೇರ್ ಅಸೊಸಿಯೇಷನ್ (RWA) ಹಾಗೂ ಬಿಬಿಎಂಪಿ ಮಧ್ಯದ ಜಟಾಪಟಿಯು ಈಗ ನ್ಯಾಯಾಲಯದ ಅಂಗಳದಲ್ಲಿದ್ದು ಅದರಿಂದಾಗಿಯೇ ಸುರಕ್ಷತಾ ಕ್ರಮಗಳು ಇನ್ನು ನೆನೆಗುದಿಗೆ ಬಿದ್ದಿವೆ.
ಸ್ಟೋರ್ಮ್ ವಾಟರ್ ಡ್ರೈನ್
ರೂ. 1.08 ಕೋಟಿಗೆ ವಿಲ್ಲಾ ಖರೀದಿಸಿದ್ದ ಕೃಷ್ಣನ್ ರವರು ಈಗ ಬಾಡಿಗೆ ಮನೆಗೆ ಮಾಸಿಕ 1.2 ಲಕ್ಷ ಪಾವತಿಸಬೇಕಾಗಿದೆ. ಕಳೆದ ಬಾರಿ ಅವರ ವಿಲ್ಲಾ ಭಾಗಶಃ ಮಳೆನೀರಿನಿಂದ ಆವೃತವಾಗಿತ್ತು. ಇದೀಗ ರೆಸಿಡೆಂಟ್ಸ್ ವೆಲ್ಫೇರ್ ಅಸೊಸಿಯೇಷನ್ ನಿರ್ಮಿಸಿರುವ ಕಂಪೌಂಡ್ ಗೋಡೆಯಿಂದಾಗಿ ಈ ಬಾರಿ ಹೆಚ್ಚಿನ ನೀರು ಸಂಗ್ರಹಗೊಳ್ಳುವ ಸಾಧ್ಯತೆಯಿದೆ. ಹಾಗಾಗಿ ಕೃಷ್ಣನ್ ಅವರು RWA ವಿರುದ್ಧ ಗೋಡೆಯನ್ನು ಕೆಡವಬೇಕೆಂದು ಕೋರ್ಟ್ ಮೊರೆ ಹೋಗಿದ್ದಾರೆ. ಅಲ್ಲದೆ, ಬಿಬಿಎಂಪಿ ಸಹ ಈ ಗೋಡೆ ನಿರ್ಮಾಣ ಕಾನೂನುಬಾಹಿರ ಎಂದು ವಾದಿಸಿದೆ.
ಫೆಬ್ರುವರಿ ೨೦೨೩ರಲ್ಲಿ ಬಿಬಿಎಂಪಿ RWAಗೆ ಅದು ನಿರ್ಮಿಸಿರುವ ಗೋಡೆಯನ್ನು ಕೆಡವುವಂತೆ ನೋಟಿಸ್ ಸಹ ಜಾರಿ ಮಾಡಿದೆ. ಬಿಬಿಎಂಪಿ ಪ್ರಕಾರ, RWA ಗೋಡೆಯನ್ನು ಅನಧಿಕೃತವಾಗಿ ಸ್ಟೋರ್ಮ್ ವಾಟರ್ ಡ್ರೈನ್ ಮೇಲೆ ನಿರ್ಮಿಸಿದೆ ಎಂದಾಗಿದೆ.
ಇದನ್ನೂ ಓದಿ: ನಿಮ್ಮ ಬಳಿ ಇಷ್ಟು ಆಸ್ತಿ ಇದ್ದರೆ, ನೀವು ಕೂಡ ದೇಶದ ಶ್ರೀಮಂತರಲ್ಲಿ ಒಬ್ಬರು!
ಈ ಮಧ್ಯೆ ದಿ ಹಿಂದು ಪತ್ರಿಕೆಯೊಂದಿಗೆ ಮಾತನಾಡಿರುವ ಕೃಷ್ಣನ್ ಅವರು, "ಬಿಬಿಎಂಪಿ ಈಗಾಗಲೇ ಇನ್ನೊಂದು ಒಳಚರಂಡಿಯನ್ನು ಲೇಔಟಿನ ಪ್ರವೇಶ ದ್ವಾರದ ಬಳಿ ನಿರ್ಮಿಸಿದೆ. ಇನ್ನು ಹಾಲನಾಯಕನಹಳ್ಳಿಯಿಂದ ಪ್ರಾರಂಭವಾಗುವ ಸ್ಟೋರ್ಮ್ ವಾಟರ್ ಡ್ರೈನ್ ಭಾಗಶಃ ಪೂರ್ಣಗೊಂಡಿದೆ" ಎಂದು ಹೇಳಿದರು. ಇದೀಗ ಅವರ ಯಾವುದೇ ತಪ್ಪೂ ಇಲ್ಲದೆ ಅವರು ಹೆಚ್ಚುವರಿಯಾಗಿ ಹದಿಮೂರು ಲಕ್ಷ ರೂ ಗಳನ್ನು ವ್ಯಯಿಸಬೇಕಾಗಿದೆ, ಏಕೆಂದರೆ 1.2 ಲಕ್ಷ ಮಾಸಿಕ ಬಾಡಿಗೆಯ ಮನೆಯನ್ನು ಅವರು ಪಡೆದಿದ್ದು ಅದರ ಒಪ್ಪಂದ ಹನ್ನೊಂದು ತಿಂಗಳುಗಳವರೆಗೂ ಇದೆ.
ಪ್ರವಾಹ ನಿರ್ವಹಣೆ ಕೆಲಸ
ಇನ್ನು ಸಾಯಿ ಲೇಔಟಿನ ನಿವಾಸಿಯಾದ ನೀಲುಫರ್ ಅಹ್ಮದ್ ಅವರು ಹೇಳುವಂತೆ, ಈ ಪ್ರದೇಶದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಸುಮಾರು 30 ಕುಟುಂಬಗಳು ಮಾನ್ಸೂನ್ ಬರುವ ಮುಂಚೆಯೇ ಇಲ್ಲಿಂದ ಸ್ಥಳಾಂತರಗೊಂಡಿವೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಹಾಗೂ ಬಿಬಿಎಂಪಿ ಪ್ರವಾಹ ತಡೆಯುವ ಸುರಕ್ಷತಾ ಕ್ರಮಗಳನ್ನು ಪೂರ್ಣಗೊಳಿಸುವಲ್ಲಿ ವಿಫಲವಾಗಿರುವುದರಿಂದ ಈ ಬಾರಿಯೂ ಪ್ರವಾಹ ನೀರು ಶೇಖರಣೆಯಾಗಲಿದೆ.
ಅಹ್ಮದ್ ಅವರ ಪ್ರಕಾರ, ಮಳೆಗಾಲದ ಸಮಯದಲ್ಲಿ ಇಲ್ಲಿನ ನಿವಾಸಿಗಳು ತಮ್ಮ ತಮ್ಮ ವಾಹನಗಳನ್ನು ಮುಖ್ಯ ರಸ್ತೆಯ ಮೇಲೆ ಪಾರ್ಕ್ ಮಾಡಬೇಕಾಗಿದೆ, ಏಕೆಂದರೆ ಮನೆ ಸುತ್ತಮುತ್ತಲು ನೀರು ತುಂಬುವುದು ಸಾಮಾನ್ಯವಾಗಿದೆ.
ಸುಮಾರು 23 ವರ್ಷಗಳ ಹಿಂದೆ ಸಾಯಿ ಲೇಔಟಿನಲ್ಲಿ ಮನೆ ನಿರ್ಮಿಸಿಕೊಂಡಿರುವ ಮೊಹ್ಮದ್ ಶಾಹಜಹಾನ್ ಎಂಬ ಇನ್ನೊಬ್ಬ ನಿವಾಸಿ ಇದೀಗ ಹೆಣ್ಣೂರು ಬಸ್ ನಿಲ್ದಾಣದ ಬಳಿ ರೂ. 22,000 ಮಾಸಿಕ ಬಾಡಿಗೆ ಮನೆಯನ್ನು ಹಿಡಿದಿದ್ದು ವಾರಕ್ಕೊಂದು ಬಾರಿ ಸ್ವಚ್ಛತೆಗಾಗಿ ತಮ್ಮ ಮನೆಗೆ ಭೇಟಿ ನೀಡುತ್ತಾರೆ.
ಒಟ್ಟಿನಲ್ಲಿ ಇದು ಬೆಂಗಳೂರಿನ ಕೆಲ ಪ್ರದೇಶಗಳು ಮಳೆ ಬಂದಾಗ ಎದುರಿಸುತ್ತಿರುವ ಪರಿಸ್ಥಿತಿಯಾಗಿದ್ದು ಈಗಲಾದರೂ ಸಂಬಂಧಪಟ್ಟವರು ತಮ್ಮ ಕಣ್ಣು ಹಾಗೂ ಮೂಗು ಎರಡನ್ನೂ ಅರಳಿಸಿ ಪರಿಸ್ಥಿತಿಯನ್ನು ಅವಲೋಕಿಸಿ ಏನಾದರೂ ಕ್ರಮ ತೆಗೆದುಕೊಳ್ಳಬೇಕೆಂಬುದೇ ಇಲ್ಲಿನ ಜನರ ಒತ್ತಾಸೆಯಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ