ನಾವು ಅಸಲಿ ಚಿನ್ನದ ಆಭರಣಗಳನ್ನು (Jewellery) ಕೊಳ್ಳುವುದು ಹೇಗೆ ? ಅದರಲ್ಲಿರೋ ಹಾಲ್ ಮಾರ್ಕ್ (Hallmark) ನೋಡಿ ಅಲ್ವಾ? ಈ ಹಾಲ್ ಮಾರ್ಕ್ ಇದ್ದರೆ ಅದು ಪರಿಶುದ್ಧ ಚಿನ್ನ ಅಂತ ಯಾರು ಬೇಕಾದರೂ ನಂಬಬಹುದು. ಆದ್ರೆ ಚಿನ್ನದ ಶುದ್ಧತೆ ಅಳೆಯುವ ಈ ಹಾಲ್ ಮಾರ್ಕ್ ಕೂಡ ನಕಲಿಯಾದ್ರೆ ನಕಲಿಯನ್ನೇ ಅಸಲಿ (Real) ಎಂದುಕೊಂಡು ಖರೀದಿ ಮಾಡುತ್ತೇವೆ. ಇಗ ಅದೇ ಆಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ನಕಲಿ ಹಾಲ್ಮಾರ್ಕ್ ಹೊಂದಿರುವ ಚಿನ್ನವು ಪ್ರವಾಹ ರೀತಿಯಲ್ಲಿ ಮಾರುಕಟ್ಟೆ (Market) ಪ್ರವೇಶಿಸಿದ್ದು ಚಿನ್ನಾಭರಣ (Gold) ವ್ಯಾಪಾರಿಗಳು ಕ್ರಮಕ್ಕೆ ಆಗ್ರಹಿಸಿದ್ದಾರೆ.
ಚಿನ್ನದ ಮೇಲಿನ ಸುಂಕದಿಂದ ಹೆಚ್ಚಿದ ಕಳ್ಳಸಾಗಣೆ
ನಕಲಿ ಹಾಲ್ಮಾರ್ಕ್ ಹೊಂದಿರುವ ಚಿನ್ನವು ಭಾರತೀಯ ಮಾರುಕಟ್ಟೆಯನ್ನು ಆವರಿಸಿದೆ ಎನ್ನಲಾಗಿದ್ದು ಈ ಬಗ್ಗೆ ಪ್ರಮುಖ ಆಭರಣ ವ್ಯಾಪಾರಿಗಳು ಮತ್ತು ಉದ್ಯಮದ ಒಳಗಿನವರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಚಿನ್ನದ ಮೇಲಿನ ಸುಂಕ ಹೆಚ್ಚಿಸಿರುವುದರಿಂದ ಹೆಚ್ಚಿನ ಪ್ರಮಾಣದ ಕಳ್ಳಸಾಗಣೆ ಚಿನ್ನವು ಮಾರುಕಟ್ಟೆ ಪ್ರವೇಶಿಸುತ್ತಿದೆ. ತದನಂತರ ಅನಧಿಕೃತ ಆಭರಣ ತಯಾರಿಕಾ ಕೇಂದ್ರಗಳಲ್ಲಿ ಆಭರಣವಾಗಿ ಪರಿವರ್ತನೆಯಾಗುತ್ತದೆ. ಈ ಪದ್ಧತಿಯಿಂದಾಗಿ ಸರ್ಕಾರವು ಕೋಟ್ಯಂತರ ರೂಪಾಯಿ ತೆರಿಗೆಯನ್ನು ಕಳೆದುಕೊಳ್ಳುತ್ತದೆ ಎಂದು ಹೇಳಲಾಗಿದೆ.
ವಿಶ್ವದ ಎರಡನೇ ಅತಿದೊಡ್ಡ ಚಿನ್ನದ ಮಾರುಕಟ್ಟೆ ಭಾರತವಾಗಿದ್ದು ಇಲ್ಲಿ ಖರೀದಿದಾರರು ವಂಚನೆಗೆ ಬಲಿಯಾಗುವ ಅಪಾಯವಿದೆ ಎಂದು ವ್ಯಾಪಾರಿಗಳು ಎಚ್ಚರಿಸಿದ್ದಾರೆ. ಮಾರುಕಟ್ಟೆಯಲ್ಲಿ ನಕಲಿ ಹಾಲ್ಮಾರ್ಕ್ ಚಿನ್ನದ ಆಭರಣಗಳ ಲಭ್ಯತೆಯನ್ನು ತಡೆಯಲು ಸರ್ಕಾರದ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
"ಅಶುದ್ಧ ಚಿನ್ನದಿಂದ ನಕಲಿ ಆಭರಣ!"
ಅಂದಹಾಗೆ ಆಭರಣಕಾರರು ಹಾಲ್ಮಾರ್ಕ್ ಹೊಂದಿರುವ ವಸ್ತುಗಳನ್ನು ಮಾತ್ರ ಮಾರಾಟ ಮಾಡಬೇಕು ಎಂಬುದನ್ನು ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (ಬಿಐಎಸ್) ಕಡ್ಡಾಯಗೊಳಿಸಿದೆ. ಆದರೆ ನಕಲಿ ಹಾಲ್ಮಾರ್ಕ್ ಆಭರಣಗಳು ಇನ್ನೂ ಮಾರುಕಟ್ಟೆಯಲ್ಲಿವೆ ಎಂದು ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಅಧ್ಯಕ್ಷ ಎಂಪಿ ಅಹಮ್ಮದ್ ಹೇಳಿದ್ದಾರೆ.
ಇದನ್ನೂ ಓದಿ: Anant Ambani-Radhika Merchant: ಬಾಲ್ಯದ ಸ್ನೇಹಿತರಾಗಿದ್ದ ರಾಧಿಕಾ-ಅನಂತ್ ಅಂಬಾನಿ, ಇಲ್ಲಿದೆ ಇಂಟ್ರೆಸ್ಟಿಂಗ್ ಪ್ರೇಮ ಕಹಾನಿ
ನಕಲಿ ಆಭರಣಗಳನ್ನು ಪ್ರತಿ ಗ್ರಾಂಗೆ 200-300 ರೂ ರಿಯಾಯಿತಿಯಲ್ಲಿ ಮಾರಾಟ ಮಾಡಲಾಗುತ್ತದೆ. ನೈತಿಕವಾಗಿ ಮತ್ತು ಕಾನೂನುಬದ್ಧವಾಗಿ ವ್ಯಾಪಾರ ಮಾಡುವ ಆಭರಣಕಾರರಿಗೆ ಇದು ದೊಡ್ಡ ಹೊಡೆತ ನೀಡುತ್ತಿದೆ. ಅಲ್ಲದೇ ಇದರಿಂದಾಗಿ ಸರ್ಕಾರವು ಕೋಟ್ಯಂತರ ರೂಪಾಯಿ ತೆರಿಗೆಯನ್ನು ಕಳೆದುಕೊಳ್ಳುತ್ತದೆಯಲ್ಲದೇ, ನಕಲಿ ಹಾಲ್ಮಾರ್ಕಿಂಗ್ನಿಂದ ಗ್ರಾಹಕರು ಅಶುದ್ಧ ಚಿನ್ನದಿಂದ ಮಾಡಿದ ನಕಲಿ ಆಭರಣಗಳನ್ನು ಖರೀದಿಸುತ್ತಾರೆ ಎಂದು ಅವರು ಹೇಳಿದ್ದಾರೆ.
ಏನಿದು ಹಾಲ್ ಮಾರ್ಕ್?
ಆಭರಣ ವ್ಯಾಪಾರಿಗಳು ಮಾರಾಟ ಮಾಡುವ ಆಭರಣಗಳು ಮತ್ತು ಕಲಾಕೃತಿಗಳ ಹಾಲ್ಮಾರ್ಕ್ ಅನ್ನು ಸರ್ಕಾರವು ಕಡ್ಡಾಯಗೊಳಿಸಿದೆ. ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ ಪ್ರಕಾರ, ಹಾಲ್ಮಾರ್ಕ್ಗಳು ಭಾರತದಲ್ಲಿ ಅಮೂಲ್ಯವಾದ ಲೋಹದ ವಸ್ತುಗಳ ಶುದ್ಧತೆಯ ಖಾತರಿಯಾಗಿ ಬಳಸಲಾಗುವ ಅಧಿಕೃತ ಗುರುತುಗಳಾಗಿವೆ. ಚಿನ್ನಾಭರಣಗಳು ಮತ್ತು ಚಿನ್ನದ ಕಲಾಕೃತಿಗಳ ಹಾಲ್ಮಾರ್ಕಿಂಗ್ ಚಿನ್ನದ ಶುದ್ಧತೆ, ಸೂಕ್ಷ್ಮತೆಯ ಗುರುತಿನ ಜೊತೆಗೆ ಗ್ರಾಹಕರ ರಕ್ಷಣೆಗೂ ಇದು ಅಗತ್ಯವಿದೆ.
ಹಾಲ್ ಮಾರ್ಕ್ ಮಾನ್ಯತೆ
ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (BIS) ನಿಂದ ಮಾನ್ಯತೆ ಪಡೆದ ಹಾಲ್ಮಾರ್ಕಿಂಗ್ ಕೇಂದ್ರಗಳಿಂದ (AHCs) ಹಾಲ್ಮಾರ್ಕಿಂಗ್ ಪ್ರಮಾಣೀಕರಣವನ್ನು ಮಾಡಲಾಗುತ್ತದೆ. BIS-ಮಾನ್ಯತೆ ಪಡೆದ ಹಾಲ್ ಮಾರ್ಕಿಂಗ್ ಕೇಂದ್ರಗಳಲ್ಲಿ ತಮ್ಮ ಆಭರಣಗಳನ್ನು ಹಾಲ್ಮಾರ್ಕ್ ಮಾಡುವ ಮೊದಲು ಆಭರಣ ವ್ಯಾಪಾರಿಯು BIS ನಿಂದ ಪರವಾನಗಿಯನ್ನು ಪಡೆಯಬೇಕು. ಅಂದಹಾಗೆ ಭಾರತದಲ್ಲಿ ಪ್ರಸ್ತುತ ಚಿನ್ನ ಮತ್ತು ಬೆಳ್ಳಿ ಎರಡೂ ಲೋಹಗಳನ್ನು ಹಾಲ್ಮಾರ್ಕಿಂಗ್ ವ್ಯಾಪ್ತಿಗೆ ತರಲಾಗಿದೆ.
ನಕಲಿ ಯಾವುದು, ಅಸಲಿಯಾವುದು ತಿಳಿಯದಾಗಿದೆ
ಆದ್ರೆ ಇತ್ತೀಚಿನ ದಿನಗಳಲ್ಲಿ ನಕಲಿ ಯಾವುದು, ಅಸಲಿಯಾವುದು ಎಂಬುದನ್ನು ಗುರುತಿಸುವುದುದೇ ಕಷ್ಟ. ಅದರಲ್ಲೂ ಜನಸಾಮಾನ್ಯರಿಗೆ ಅದರ ಬಗ್ಗೆ ಯಾವುದೇ ಅರಿವಿರುವುದಿಲ್ಲ. ಆದ್ದರಿಂದ ವಿಶ್ವಾಸಾರ್ಹ ಅಂಗಡಿಗಳಲ್ಲಿ ಇಂಥ ಮೌಲ್ಯಯುತವಾದ್ದನ್ನು ಖರೀದಿ ಮಾಡುವುದೇ ಒಳ್ಳೆಯದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ