ಒಂದು ಕಪ್ ಚಹಾ (One Cup Tea) ಎಂಬ ಮಾತೇ ಕಿವಿಗೆ ಹಿತವಾದ ಅನುಭವವನ್ನು ನೀಡುತ್ತದೆ. ಒತ್ತಡದ ಜೀವನದಲ್ಲಿ ತುಸು ನೆಮ್ಮದಿ (Peace) , ಹೇಳಿಕೊಳ್ಳಲಾಗದ ದುಃಖದಲ್ಲೂ ಕೊಂಚ ಸಮಾಧಾನಕರ ಭಾವನೆ, ಇಲ್ಲವೇ ಬೇಸರದ ಸಮಯದಲ್ಲಿ ನೀಡುವ ಬೆಚ್ಚನೆ ಆಸರೆ ಇರಬಹುದು ಇದೆಲ್ಲವನ್ನೂ ಒಂದು ಕಪ್ ಚಹಾ ನೀಡುತ್ತದೆ ಎಂದರೆ ತಪ್ಪಾಗಲಿಕ್ಕಿಲ್ಲ. ನೀವು ಒಂಟಿಯಾಗಿ ಚಹಾ ಸೇವಿಸಿ ಇಲ್ಲವೇ ಸ್ನೇಹಿತರ (Friends) ಜೊತೆ ಸೇರಿ ಹರಟೆ ಹೊಡೆಯುತ್ತಾ ಚಹಾ ಸೇವಿಸಿ, ಈ ಪೇಯ ಯಾವತ್ತೂ ಯಾರಿಗೂ ಬೇಸರವನ್ನುಂಟು ಮಾಡುವುದೇ ಇಲ್ಲ. ಒಂದು ರೀತಿಯಲ್ಲಿ ಹೇಳುವುದಾದರೆ ಚಹಾ ಎಂಬುದು ಭಾರತೀಯರಿಗೆ (Indians) ಒಂದು ರೀತಿಯಲ್ಲಿ ದುರ್ಬಲತೆಯೂ ಹೌದು.
ಚಹಾವನ್ನೇ ಬಂಡವಾಳವಾಗಿಸಿ ಬದುಕು ಕಟ್ಟಿಕೊಂಡರು
ಚಹಾದ ಮೇಲಿನ ಪ್ರೀತಿಯನ್ನೇ ಬಂಡವಾಳವನ್ನಾಗಿಸಿಕೊಂಡು ಬಾಲ್ಯ ಕಾಲದ ಸ್ನೇಹಿತರು ಕಟ್ಟಿದ ಸಾಮ್ರಾಜ್ಯವೇ ಇಂದು ಚಾಯ್ ಸುಟ್ಟಾ ಬಾರ್ ಆಗಿ ವಿಶ್ವದಾದ್ಯಂತ ಚಹಾದ ಸುವಾನೆಯನ್ನು ಪಸರಿಸಿದೆ. ಚಹಾ ಉದ್ಯಮದಲ್ಲಿ ಈ ಸಂಸ್ಥೆ ವಾರ್ಷಿಕ ರೂ 150 ಕೋಟಿ ಲಾಭವನ್ನು ಗಳಿಸುತ್ತಿದೆ. 2016 ರಲ್ಲಿ ಅನುಭವ್ ದುಬೆ ಹಾಗೂ ಆನಂದ್ ನಾಯಕ್ ಅವರಿಂದ ಆರಂಭವಾದ ಇಂದೋರ್ ಮೂಲದ ಸಂಸ್ಥೆ ದೇಶದ 190 ನಗರಗಳಲ್ಲಿ 400 ಕ್ಕೂ ಹೆಚ್ಚು ಮಳಿಗೆಗಳನ್ನು ಹೊಂದಿದೆ ಹಾಗೂ ದುಬೈನಲ್ಲೂ ಚಾಯ್ ಸುಟ್ಟಾ ಬಾರ್ ತನ್ನ ಘಮಲನ್ನು ಪಸರಿಸಿದೆ.
ಚಾಯ್ ಸುಟ್ಟಾ ಬಾರ್ ದೇಸೀ ಬ್ರ್ಯಾಂಡ್!
ಯಾವುದೇ ಉದ್ಯಮ ಮಾಡುವ ಮುನ್ನ ಅದಕ್ಕೆ ಎದುರಾಗುವ ತೊಡಕುಗಳು ಹಾಗೆಯೇ ಇರುತ್ತವೆ. ಆನಂದ್ ಹಾಗೂ ಅನುಭವ್ ಇದಕ್ಕೆ ಹೊರತಾಗಿಲ್ಲ. ಚಹಾ ಉದ್ಯಮ ನಡೆಸುತ್ತೇವೆ ಎಂದಾಗ ಎಲ್ಲರೂ ಉಡಾಫೆಯ ಮಾತುಗಳನ್ನಾಡಿದ್ದರು ಎಂಬುದು ಇಬ್ಬರೂ ಯುವಕರ ಮಾತಾಗಿದೆ. ಅದರಲ್ಲೂ ಕುಟುಂಬದ ಬೆಂಬಲ ನಮಗೆ ಇರಲೇ ಇಲ್ಲ ಎಂದು ಉದ್ಯಮ ಕಟ್ಟಿಕೊಂಡ ನೆನಪುಗಳನ್ನು ಈ ತರುಣರು ಬಿಚ್ಚಿಟ್ಟಿದ್ದಾರೆ.
ಬಾಲ್ಯದಲ್ಲಿಯೇ ಬ್ಯುಸಿನೆಸ್ ಶುರು ಮಾಡಿದ್ರು!
ಮಧ್ಯಪ್ರದೇಶದ ರೇವಾದವರಾದ 29 ರ ಹರೆಯದ ಅನುಭವ್ 2016 ರಲ್ಲಿ ಯುಪಿಎಸ್‌ಸಿ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದರು. ಅದಾಗ್ಯೂ ಇದರಲ್ಲಿ ಎಳ್ಳಷ್ಟೂ ಆಸಕ್ತಿ ಇರದ ಅನುಭವ್‌ಗೆ ಅವರ ಸ್ನೇಹಿತ ಆನಂದ್‌ನಿಂದ ಕರೆ ಬರುತ್ತದೆ. ಅನುಭವ್ ಒಂಭತ್ತನೇ ತರಗತಿಯಲ್ಲಿದ್ದಾಗಲೇ ಉನ್ನತ ಶಿಕ್ಷಣಕ್ಕಾಗಿ ಪೋಷರು ಅವರನ್ನು ಇಂದೋರ್‌ಗೆ ಕಳುಹಿಸುತ್ತಾರೆ. ಅಲ್ಲಿ ಅವರಿಗೆ ಆನಂದ್ ಭೇಟಿಯಾಗುತ್ತದೆ.
ಅಲ್ಲಿಂದಲೇ ಸಣ್ಣಪುಟ್ಟ ಉದ್ಯಮಗಳನ್ನು ಮಾಡುತ್ತಿದ್ದ ಇಬ್ಬರೂ ಸ್ನೇಹಿತರು ಪಾಕೆಟ್ ಮನಿಯಿಂದ ಸೆಕೆಂಡ್ ಹ್ಯಾಂಡ್ ಫೋನ್ ಖರೀದಿಸಿ ತಮ್ಮ ಸ್ನೇಹಿತರಿಗೆ ಬಾಡಿಗೆಗೆ ನೀಡುತ್ತಿದ್ದರು ಹಾಗೂ ಬಾಡಿಗೆ ಶುಲ್ಕದಿಂದ ಲಾಭ ಗಳಿಸುತ್ತಿದ್ದರು ಎಂದು ಅನುಭವ್ ನೆನಪಿಸಿಕೊಂಡಿದ್ದಾರೆ.
ಕುಟುಂಬಕ್ಕೆ ಮಾಹಿತಿಯೇ ಇರಲಿಲ್ಲ
ಜೊತೆಯಾಗಿ ಉದ್ಯಮವನ್ನು ಪ್ರಾರಂಭಿಸಬೇಕು ಎಂಬುದು ಇಬ್ಬರ ಬಾಲ್ಯದ ಕನಸಾಗಿತ್ತು ಎಂದು ಅನುಭವ್ ಆ ನೆನಪುಗಳನ್ನು ಮೆಲುಕುಹಾಕಿಕೊಂಡಿದ್ದಾರೆ.ಪದವಿಯ ನಂತರ ಯುಪಿಎಸ್‌ಸಿ ಸಿದ್ಧತೆಗಾಗಿ ದೆಹಲಿಗೆ ಹೊರಟ ಅನುಭವ್ ಅಲ್ಲಿಯೇ ಗಾರ್ಮೆಂಟ್ಸ್ ವ್ಯವಹಾರದಲ್ಲಿ ತೊಡಗಿಸಿಕೊಂಡರು. ಇದೇ ಸಮಯದಲ್ಲೇ ಆನಂದ್‌ರಿಂದ ಅನುಭವ್‌ಗೆ ಕರೆಬರುತ್ತದೆ ಹಾಗೂ ಬಾಲ್ಯಕಾಲದಲ್ಲಿ ಕಂಡಿದ್ದ ಕನಸನ್ನು ನನಸಾಗಿಸಿಕೊಳ್ಳುವ ಇರಾದೆಗೆ ಮುಂದಾಗುತ್ತಾರೆ.
ಇದನ್ನೂ ಓದಿ: ಸೆಕೆಂಡ್ ಹ್ಯಾಂಡ್ ಕಾರು ಖರೀದಿಸಬೇಕೆ? ಹಾಗಿದ್ರೆ ಈ ವಿಷಯಗಳನ್ನು ತಿಳಿದುಕೊಳ್ಳಿ
ಹೀಗೆ ಆನಂದ್ ಭೇಟಿಮಾಡಲು ಇಂದೋರ್‌ಗೆ ಹೊರಟ ಅನುಭವ್ ತಮ್ಮ ಯೋಜನೆಯ ಕುರಿತು ಕುಟುಂಬಕ್ಕೆ ಯಾವುದೇ ಮಾಹಿತಿ ನೀಡಿರಲಿಲ್ಲ.
ಸೆಳೆದ ಚಹಾದ ಅಂಗಡಿಗಳು
ಯಾವ ಉದ್ಯಮ ಆರಂಭಿಸುವುದು ಎಂದು ಇಬ್ಬರೂ ಸಮಾಲೋಚನೆ ನಡೆಸುತ್ತಿದ್ದಾಗ ಅವರಿಗೆ ಕಂಡುಬಂದಿದ್ದೇ ತಾಪ್ರಿಯಲ್ಲಿ ಪ್ರತೀ ಮೂಲೆ ಮೂಲೆಯಲ್ಲಿದ್ದ ಚಹಾದ ಅಂಗಡಿ ಎಂಬುದು ಆನಂದ್ ಹಾಗೂ ಅನುಭವ್ ತಿಳಿಸುತ್ತಾರೆ.ಚಹಾ ಸೇವಿಸದವರು ಯಾರೂ ಇರಲಿಕ್ಕಿಲ್ಲ, ಏಕೆಂದರೆ ನೀರಿನ ನಂತರ ಜನರು ಹೆಚ್ಚು ಇಷ್ಟಪಟ್ಟು ಸೇವಿಸುವ ಪೇಯವೆಂದರೆ ಅದು ಚಹಾ ಎಂಬುದು ಈ ಇಬ್ಬರೂ ತರುಣರ ಮಾತು.
ಚಹಾ ಅಂಗಡಿ ಎಷ್ಟೇ ಸಣ್ಣದಾಗಿರಲಿ ಚಹಾ ಅಂಗಡಿಯವರು ಅಷ್ಟೇ ಲಾಭವನ್ನು ಗಳಿಸುತ್ತಾರೆ ಎಂಬುದನ್ನು ಗಮನಿಸಿದ ಇಬ್ಬರೂ ಮೊದಲ ಪ್ರಯತ್ನವೆಂಬಂತೆ ಟೀ ಸ್ಟಾಲ್ ತೆರೆಯುವ ನಿರ್ಧಾರ ಮಾಡುತ್ತಾರೆ. ಸ್ಥಳಕ್ಕಾಗಿ ಇಂದೋರ್ ಸುತ್ತಲೂ ಅಲೆದಾಡಿದ್ದನ್ನು ಅನುಭವ್ ನೆನಪಿಸಿಕೊಳ್ಳುತ್ತಾರೆ.
ಟೀ ಸ್ಟಾಲ್ ಒಳಾಂಗಣ ವಿನ್ಯಾಸ
ಅಂತೂ ಇಂತೂ ಬಾಡಿಗೆಗೆ ಲಭ್ಯವಿರುವ ಸಣ್ಣ ಅಂಗಡಿಯಲ್ಲಿ ಟೀ ಸ್ಟಾಲ್ ಅನ್ನು ಆನಂದ್ ಹಾಗೂ ಅನುಭವ್ ಆರಂಭಿಸಿಯೇ ಬಿಡುತ್ತಾರೆ. ವಿದ್ಯಾರ್ಥಿ ಹಾಸ್ಟೆಲ್ ಯುಎಸ್‌ಪಿ ಮುಂದೆಯೇ ಇವರ ಟೀ ಸ್ಟಾಲ್ ಇತ್ತು. ಇದಕ್ಕಾಗಿ ತಮ್ಮ ಉಳಿತಾಯದಿಂದ ರೂ 3 ಲಕ್ಷ ಹೂಡಿಕೆ ಮಾಡುವ ಆನಂದ್, ಅನುಭವ್ ಜೊತೆಸೇರಿ ಟೀ ಸ್ಟಾಲ್ ಪ್ರಾರಂಭಿಸುತ್ತಾರೆ.
ಹಣ ಉಳಿಸುವ ಉದ್ದೇಶದಿಂದ ಟೀ ಸ್ಟಾಲ್‌ನ ಇಂಟೀರಿಯರ್ (ಒಳಾಂಗಣ) ವಿನ್ಯಾಸವನ್ನು ಈ ಇಬ್ಬರು ತರುಣರೇ ಮಾಡಿದ್ದು ಬಾರ್ ರೀತಿ ಕಂಡುಬರುವಂತೆ ಮಾಡಿದ್ದಾರೆ. ಮಣ್ಣಿನ ಕಪ್‌ಗಳಲ್ಲಿ ಚಹಾದ ವಿತರಣೆಯನ್ನು ಮಾಡಿದ್ದಾರೆ. ಗ್ರಾಹಕರನ್ನು ಆಕರ್ಷಿಸಲು ಮೊದಲ ದಿನ ಉಚಿತ ಚಹಾವನ್ನು ನೀಡಲು ನಿಶ್ಚಯಿಸಿದರು ಆದರೆ ಚಹಾದಂಗಡಿಗೆ ಯಾವುದೇ ಬೋರ್ಡ್ ಇರದ ಕಾರಣ ಆ ದಿನ ಅಂದುಕೊಂಡ ವ್ಯಾಪಾರ ನಡೆಯಲಿಲ್ಲ.
ಆದರೆ ಮರುದಿನ ಇವರುಗಳ ಸ್ನೇಹಿತರು ಬಂದ ಕಾರಣ ಹೆಚ್ಚಿನ ಜನಸಂದಣಿ ಇತ್ತು ಎಂಬುದನ್ನು ಆನಂದ್ ಹಾಗೂ ಅನುಭವ್ ನೆನಪಿಸಿಕೊಂಡಿದ್ದಾರೆ.
ಪ್ರಚಾರಕ್ಕೂ ಯಾವುದೇ ಖರ್ಚುಮಾಡುತ್ತಿರಲಿಲ್ಲ
ನಾವು ಎಲ್ಲೇ ಹೊರಟರೂ ನಮ್ಮ ಅಂಗಡಿಯ ಬಗ್ಗೆಯೇ ಮಾತುಕತೆಗಳನ್ನು ನಡೆಸುತ್ತಿದ್ದೆವು ಹೀಗೆ ನಮ್ಮ ಶಾಪ್‌ನ ಕುರಿತು ಪ್ರಚಾರಗಳನ್ನು ನಾವೇ ಮಾಡುತ್ತಿದ್ದೆವು ಎಂದು ಅನುಭವ್ ನಗುತ್ತಾ ತಿಳಿಸುತ್ತಾರೆ.
ಯುವಕರೇ ಹೆಚ್ಚಾಗಿ ಬರುತ್ತಿದ್ದ ಟೀ ಸ್ಟಾಲ್, ದಿನಗಳೆದಂತೆ ಯಶಸ್ಸಿನ ಮೆಟ್ಟಿಲೆಡೆಗೆ ಪ್ರಯಾಣವನ್ನು ಆರಂಭಿಸುತ್ತದೆ. ಇವರ ಟೀ ಸ್ಟಾಲ್ ಮುಂದೆ ನೆರೆದಿದ್ದ ಗ್ರಾಹಕರನ್ನು ನಿಯಂತ್ರಿಸಲು ಐದು ಜನ ಸಹಾಯಕರನ್ನು ನೇಮಿಸಬೇಕಾಯಿತು ಎಂಬುದು ಅನುಭವ್ ಮಾತಾಗಿದೆ.
ಇದನ್ನೂ ಓದಿ: ಇದೊಂದು ಹೊಸ ಬ್ಯುಸಿನೆಸ್ ಐಡಿಯಾ, ತಿಂಗಳಿಗೆ 1 ಲಕ್ಷ ಆದಾಯ ಮಿಸ್ಸೇ ಇಲ್ಲ!
ಆರೇ ತಿಂಗಳಲ್ಲಿ ನಾಲ್ಕು ಟೀ ಸ್ಟಾಲ್‌ಗಳನ್ನು ತೆರೆಯುತ್ತಾರೆ, ಅದರಲ್ಲೊಂದನ್ನು ಮುಂಬೈನಲ್ಲಿ ಆರಂಭಿಸಿದರು. ಬೇರೆ ಬೇರೆ ಚಹಾದ ವೈವಿಧ್ಯತೆಯನ್ನು ತಮ್ಮ ಚಾಯ್ ಸುಟ್ಟಾ ಬಾರ್‌ನಲ್ಲಿ ಉಣಬಡಿಸಲಾಗುತ್ತದೆ ಎಂದು ತಿಳಿಸುವ ಅನುಭವ್ ಚಾಕಲೇಟ್, ರೋಸ್, ಏಲಕ್ಕಿ ಮೊದಲಾದ ಚಹಾವನ್ನು ವಿತರಿಸಲಾಗುತ್ತದೆ ಎಂದು ಹೇಳಿದ್ದಾರೆ.
400 ಕ್ಕಿಂತಲೂ ಹೆಚ್ಚಿನ ಮಳಿಗೆಗಳು
ಭಾರತದಲ್ಲಿ ಚಾಯ್ ಸುಟ್ಟಾ ಬಾರ್ ಅನ್ನು ಬ್ರ್ಯಾಂಡ್ ಆಗಿ ರೂಪಿಸಬೇಕೆಂಬ ಇಚ್ಛೆ ಹೊಂದಿರುವ ಅನುಭವ್ ಹಾಗೂ ಆನಂದ್ ತಮ್ಮ ಪ್ರಥಮ ಚಹಾದಂಗಡಿಯ ಯಶಸ್ಸಿನ ನಂತರ ಜನರು ಇನ್ನಷ್ಟು ಅಂಗಡಿಗಳಿಗೆ ಬೇಡಿಕೆ ಇಟ್ಟರು. ಹೀಗಾಗಿ ನಾವು ಇದುವರೆಗೆ 400 ಚಾಯ್ ಸುಟ್ಟಾ ಬಾರ್ ಮಳಿಗೆಗಳನ್ನು ಸ್ಥಾಪಿಸಲು ಸಾಧ್ಯವಾಗಿದೆ ಎಂದು ಆನಂದಿತರಾಗಿ ಹೇಳುತ್ತಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ