ಉದ್ಯೋಗಿಗಳ ಭವಿಷ್ಯ ನಿಧಿ ಸದಸ್ಯರು ಹೆಚ್ಚಿನ ಪಿಂಚಣಿ ಯೋಜನೆಗೆ (EPS) ಅರ್ಜಿ ಸಲ್ಲಿಸುವ ಗಡುವನ್ನು ಜೂನ್ 26ರ ತನಕ ವಿಸ್ತರಿಸಲಾಗಿದೆ. ಈ ಮೊದಲು ಅರ್ಜಿ ಸಲ್ಲಿಸಲು ಮೇ 3 ಕಡೆಯ ದಿನಾಂಕವಾಗಿತ್ತು. ಸದಸ್ಯರ ಒತ್ತಾಯದ ಮೇರೆಗೆ ಮತ್ತೆ ಕಡೆಯ ದಿನಾಂಕವನ್ನು ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆಯು (EPFO) ಮಂಗಳವಾರ ವಿಸ್ತರಣೆ ಮಾಡಿದೆ. ಇಪಿಎಸ್‌ನಿಂದ (EPS) ಹೆಚ್ಚಿನ ಪಿಂಚಣಿಗೆ ಅರ್ಜಿ ಸಲ್ಲಿಸಲು ಇಪಿಎಫ್‌ಒ ಗಡುವನ್ನು ವಿಸ್ತರಿಸಿರುವುದು ಇದು ಎರಡನೇ ಬಾರಿ. ಇದಕ್ಕೂ ಮುನ್ನ, 2022ರ ನವೆಂಬರ್ 4ರ ಸುಪ್ರೀಂ ಕೋರ್ಟ್‌ನ (Supreme Court) ಆದೇಶದ ಪ್ರಕಾರ ಪಿಂಚಣಿದಾರರು / ಪಿಎಫ್ ಸದಸ್ಯರು ಇಪಿಎಸ್‌ಗೆ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಸುಪ್ರಿಂ ಕೋರ್ಟ್ ನಾಲ್ಕು ತಿಂಗಳ ಗಡುವನ್ನು ನಿಗದಿಪಡಿಸಿತು.
ಇದಕ್ಕಾಗಿ ಆನ್‌ಲೈನ್ ಸೌಲಭ್ಯವನ್ನು ಒದಗಿಸಲಾಗಿದೆ. ಇಲ್ಲಿಯವರೆಗೆ 12 ಲಕ್ಷಕ್ಕೂ ಹೆಚ್ಚು ಅರ್ಜಿಗಳು ಬಂದಿವೆ. ಸೆಪ್ಟೆಂಬರ್ 1, 2014 ರ ಮೊದಲು EPF ಸದಸ್ಯರಾಗಿದ್ದ ಮತ್ತು ಸೆಪ್ಟೆಂಬರ್ 2021 ರಂದು ಅಥವಾ ನಂತರ ಸದಸ್ಯರಾಗಿ ಮುಂದುವರಿದ ಅರ್ಹ ಉದ್ಯೋಗಿಗಳಿಗೆ ಹೆಚ್ಚಿನ ಪಿಂಚಣಿಗಾಗಿ ಅರ್ಜಿ ಸಲ್ಲಿಸಲು ಆನ್‌ಲೈನ್ ಅರ್ಜಿಯನ್ನು ಅನುಮತಿಸುವ ಸೌಲಭ್ಯವು ಫೆಬ್ರವರಿ 20, 2023 ರಂದು ಜಾರಿಗೆ ಬಂದಿದೆ. ಅರ್ಜಿ ಸಲ್ಲಿಸಲು ಮಾರ್ಚ್ 3, 2023 ರವರೆಗೆ ಸುಪ್ರಿಂಕೋರ್ಟ್ ಗಡುವನ್ನು ನೀಡಿತ್ತು.
ಆರ್ಥಿಕ ಪರಿಣಿತರು ಏನ್ ಹೇಳ್ತಿದಾರೆ?
"ಹೆಚ್ಚಿನ ಪಿಂಚಣಿ ಯೋಜನೆಗೆ ಅರ್ಜಿ ಸಲ್ಲಿಸಲು EPFO ಸಮಯವನ್ನು ಜೂನ್ 26, 2023 ಕ್ಕೆ ವಿಸ್ತರಣೆ ಮಾಡಿರುವುದು ನಿಜಕ್ಕೂ ಒಂದು ಸ್ವಾಗತಾರ್ಹ ಕ್ರಮವಾಗಿದೆ.
ಹೆಚ್ಚಿನ ಪಿಂಚಣಿ ಯೋಜನೆ ಬಗ್ಗೆ ಉದ್ಯೋಗಿಗಳು ಉತ್ತಮ ಜ್ಞಾನವನ್ನು ಪಡೆದುಕೊಳ್ಳಲು ವಿಸ್ತರಣೆಯನ್ನು ನೀಡಿಲ್ಲ, ಅದನ್ನು ಉದ್ಯೋಗಿಗಳು ನೆನಪಿಟ್ಟುಕೊಂಡು, ಬೇಗನೆ ಅರ್ಜಿ ಸಲ್ಲಿಸಬೇಕು" ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ವಿಸ್ತರಣೆಗೆ ಸೂಕ್ತ ಕಾರಣವೆಂದರೆ - ಒಬ್ಬ ಉದ್ಯೋಗಿ ಹಿಂದಿನ ಉದ್ಯೋಗದ ಸಂಪೂರ್ಣ ಅವಧಿಯ ಸಂಬಳದ ವಿವರಗಳನ್ನು ಹೊಂದಿಲ್ಲದೇ ಇರಬಹುದು ಅಥವಾ ಉದ್ಯೋಗದಾತನು ತನ್ನ ಉದ್ಯೋಗಿಯ ಇಪಿಎಫ್ ಅರ್ಜಿಯನ್ನು ಇನ್ನು ಅನುಮೋದಿಸದೇ ಹೋಗಿರಬಹುದು.
ಇದನ್ನೂ ಓದಿ: ಬಾಡಿಗೆ ಮನೆಯಲ್ಲಿರುವವರು ಈ 6 ರೂಲ್ಸ್ ಬಗ್ಗೆ ತಿಳಿದುಕೊಂಡಿರಲೇ ಬೇಕು, ಇಲ್ಲದಿದ್ರೆ ಓನರ್ ಯಾಮಾರಿಸ್ತಾರೆ!
ಇವೆಲ್ಲ ಕಾರಣಗಳಿಗೆ ಹೆಚ್ಚಿನ ಪಿಂಚಣಿ ಯೋಜನೆಗೆ ಅರ್ಜಿ ಸಲ್ಲಿಸಲು ದಿನಾಂಕವನ್ನು ವಿಸ್ತರಣೆ ಮಾಡಲಾಗಿದೆ” ಎಂದು EY ಇಂಡಿಯಾದ ಪೀಪಲ್ ಅಡ್ವೈಸರಿ ಸರ್ವೀಸಸ್‌ನ ಪಾಲುದಾರ ಪುನೀತ್ ಗುಪ್ತಾ ವಿವರಿಸಿದ್ದಾರೆ. ಯೋಜನೆಗೆ ಅರ್ಹತೆ ಮತ್ತು ಬಾಕಿ ಪಾವತಿ ಸೇರಿದಂತೆ ನಾನಾ ಗೊಂದಲಗಳು ಮೂಡಿದ್ದವು. ಈ ಬಗ್ಗೆ ಇಪಿಎಫ್‌ಒದಿಂದ ಸೂಕ್ತ ವಿವರಣೆಗಳು ಬಂದಿರಲಿಲ್ಲ. ಹೀಗಾಗಿ ಅರ್ಜಿ ಸಲ್ಲಿಸಲು ಕಾಲಾವಕಾಶ ವಿಸ್ತರಿಸುವಂತೆ ಕೋರಿ ನಾನಾ ಕಡೆಗಳಿಂದ ಮನವಿಗಳು ಬಂದಿದ್ದವು.
ಸದಸ್ಯರಿಗೆ ಹೆಚ್ಚಿನ ಅವಕಾಶವನ್ನು ಒದಗಿಸುವ ಸಲುವಾಗಿ ಮತ್ತು ಎಲ್ಲಾ ಅರ್ಹ ವ್ಯಕ್ತಿಗಳೂ ತಮ್ಮ ಅರ್ಜಿಗಳನ್ನು ಸಲ್ಲಿಸಲು ಅನುವು ಮಾಡಿಕೊಡುವ ಸಲುವಾಗಿ ಕಡೆಯ ದಿನಾಂಕವನ್ನು ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆಯು ವಿಸ್ತರಿಸಿದೆ.
ಸಮಯದ ಅಸಮರ್ಪಕತೆಯನ್ನು ಗಮನದಲ್ಲಿಟ್ಟುಕೊಂಡು EPFO ಸಂಸ್ಥೆಯು ಮೇ 3, 2023 ರಿಂದ ಜೂನ್ 26, 2023 ರವೆಗೆ ಅಂದರೆ ಇನ್ನು ಎರಡು ತಿಂಗಳ ಕಾಲ ಗಡುವನ್ನು ವಿಸ್ತರಿಸಬೇಕಾಯಿತು. ಆದರೂ ಸಹ, ಇನ್ನೂ ಸಾಕಷ್ಟು ಬಗೆಹರಿಯದ ಅನೇಕ ಸಮಸ್ಯೆಗಳಿವೆ.
ಹೆಚ್ಚಿನ ಪಿಂಚಣಿ, ಏನಿದು ಯೋಜನೆ?
ಇಪಿಎಸ್‌ಗೆ ಅಂದರೆ ಉದ್ಯೋಗಿಗಳ ಭವಿಷ್ಯ ನಿಧಿ ಯೋಜನೆಗೆ ಸದಸ್ಯರ ಕೊಡುಗೆ ಇರುವುದಿಲ್ಲ. ಕೇವಲ ಉದ್ಯೋಗದಾತರು, ಉದ್ಯೋಗಿಯ ಮೂಲ ವೇತನಕ್ಕೆ (ಬೇಸಿಕ್ ಸ್ಯಾಲರಿ) ಶೇ. 8.33ರ ಕೊಡುಗೆಯನ್ನು ನೀಡುತ್ತಾರೆ.
ಇವೆಲ್ಲದರ ನಡುವೆ ಪಿಂಚಣಿಗೆ ವೇತನಕ್ಕೆ ಪರಿಗಣಿಸುವ ಈ ಮಿತಿಯನ್ನು 15,000 ರೂ.ಗೆ ಮಿತಿಗೊಳಿಸಲಾಗಿತ್ತು. ಅಲ್ಲದೇ, ತಿಂಗಳಿಗೆ 1,250 ರೂಪಾಯಿಗೆಗೆ ಮಿತಿ ಮಾಡಲಾಗಿತ್ತು. ಇದೀಗ ಈ ಮಿತಿಯು ಬದಿಗೆ ಸರಿಯಲಿದೆ. ಅಂದರೆ, ನಿಮ್ಮ ವಾಸ್ತವ ಮೂಲ ವೇತನಕ್ಕೆ ನಿಮ್ಮ ಪಿಂಚಣಿಯನ್ನು ಲಿಂಕ್ ಮಾಡಲು ಸಾಧ್ಯವಾಗಲಿದೆ.
ಇದಲ್ಲದೆ, ಯಾವುದೇ ಉದ್ಯೋಗಿ ತನ್ನ ಮೂಲ ವೇತನ ಮಿತಿಗಿಂತ ಹೆಚ್ಚಿನ ವೇತನ ಹೊಂದಿದ್ದರೆ, ಅದಕ್ಕೆ ಸೂಕ್ತ ಕೊಡುಗೆಯ ಅನುಮೋದನೆಗಾಗಿ ಸಾಕ್ಷಿಯನ್ನು ಸಲ್ಲಿಸಲು EPFO ತನ್ನ ಸದಸ್ಯರನ್ನು ಕೇಳುತ್ತಿದೆ. ಇಪಿಎಫ್‌ಒನಿಂದ ಪೂರ್ವಾನುಮತಿ ಪಡೆಯದೆ ಹೆಚ್ಚಿನ ಕೊಡುಗೆಯನ್ನು ಪಡೆಯುವುದು ಈ ಹಿಂದೆ ಚಾಲ್ತಿಯಲ್ಲಿತ್ತು.
ಇಪಿಎಫ್‌ಒ ವಿರುದ್ಧ ಕೇರಳ ಹೈಕೋರ್ಟ್ ಮೊರೆ ಹೋದ ಇಪಿಎಸ್ ಸದಸ್ಯರು
ಇಪಿಎಫ್‌ಒ ಹಾಕಿರುವ ಹೆಚ್ಚಿನ ಕೊಡುಗೆಯನ್ನು ನೀಡಬೇಕು ಎಂಬ ಈ ಷರತ್ತಿನ ವಿರುದ್ಧ ಇಪಿಎಸ್ ಸದಸ್ಯರು ಕೇರಳ ಹೈಕೋರ್ಟ್‌ಗೆ ಮೊರೆ ಹೋಗಿದ್ದು, ಯಾವುದೇ ಹಿಂದಿನ ಅನುಮೋದನೆ ಪುರಾವೆಗಳಿಲ್ಲದೆ ಹೆಚ್ಚಿನ ಪಿಂಚಣಿ ಪಡೆಯಲು ಉದ್ಯೋಗಿಗಳಿಗೆ ನ್ಯಾಯಾಲಯ ಅನುಮತಿ ನೀಡಿದೆ.
ಆದರೆ, ಕೇರಳ ಹೈಕೋರ್ಟ್ ನೀಡಿರುವ ಈ ತೀರ್ಪಿನ ಅನ್ವಯ ಕೆಲಸ ನಿರ್ವಹಿಸಲು ಮತ್ತು ಹೆಚ್ಚಿನ ಕೊಡುಗೆ ನೀಡಿರುವುದಕ್ಕೆ ಸಾಕ್ಷಿ ಇಲ್ಲದೇ ಅರ್ಜಿಯನ್ನು ಸಲ್ಲಿಸಲು ಉದ್ಯೋಗಿಗೆ ಅವಕಾಶ ನೀಡಲು EPFO ತನ್ನ ಆನ್‌ಲೈನ್ ಅರ್ಜಿ ಸಲ್ಲಿಸಲುವ ಸೌಲಭ್ಯವನ್ನು ಇನ್ನೂ ಸೂಕ್ತವಾಗಿ ಸರಿಪಡಿಸುತ್ತಿಲ್ಲ ಎಂಬುದೇ ಅನೇಕ ಇಪಿಎಸ್ ಸದಸ್ಯರ ಆರೋಪವಾಗಿದೆ.
ಇತ್ತೀಚಿನ ಗಡುವು ವಿಸ್ತರಣೆಯು ಅರ್ಹ ಉದ್ಯೋಗಿಗಳಿಗೆ ಇಪಿಎಸ್‌ನಿಂದ ಹೆಚ್ಚಿನ ಪಿಂಚಣಿಯನ್ನು ಮೌಲ್ಯಮಾಪನ ಮಾಡಲು ಮತ್ತು ಅರ್ಜಿ ಸಲ್ಲಿಸಲು ಹೆಚ್ಚುವರಿ ಸಮಯವನ್ನು ಒದಗಿಸುತ್ತದೆ. ಹೆಚ್ಚಿನ ಪಿಂಚಣಿಗಾಗಿ ಅರ್ಜಿ ಸಲ್ಲಿಸಲು ಅನೇಕ ನೌಕರರು ತೊಂದರೆ ಎದುರಿಸುತ್ತಿರುವುದು ಇಂದಿಗೂ ಸಾಮಾನ್ಯ ಸಂಗತಿ ಆಗಿದೆ.
ಇದಲ್ಲದೆ, ಅರ್ಜಿಯನ್ನು ಸಲ್ಲಿಸುವಾಗ, ಅವರು ತಮ್ಮ ಎಲ್ಲಾ ಇಪಿಎಫ್ ಖಾತೆಗಳನ್ನು ಒಂದು ಯುನಿವರ್ಸಲ್ ಅಕೌಂಟ್ ನಂಬರ್ (UAN) ಗೆ ವಿಲೀನಗೊಳಿಸಲಾಗಿದೆಯೇ? ಮತ್ತು ಅವರ ಸೇವಾ ದಾಖಲೆಗಳು ಇಪಿಎಫ್‌ಒ ಡೇಟಾದೊಂದಿಗೆ ಹೊಂದಾಣಿಕೆಯಾಗುತ್ತವೆಯೇ? ಎಂಬುದನ್ನು ಸೂಕ್ತವಾಗಿ ಪರಿಶೀಲಿಸಿ ಅದನ್ನು ಖಚಿತಪಡಿಸಿಕೊಳ್ಳಬೇಕು.
ನವೆಂಬರ್ 4, 2022 ರ ಸುಪ್ರೀಂ ಕೋರ್ಟ್‌ನ ಆದೇಶದ ಪ್ರಕಾರ, ಉದ್ಯೋಗಿಯು ಹೆಚ್ಚಿನ ಇಪಿಎಸ್ ಪಿಂಚಣಿಗೆ ಅರ್ಹರಾಗಿದ್ದರೆ, ಗಮನದಲ್ಲಿಟ್ಟುಕೊಳ್ಳಬೇಕಾದ ಅಂಶಗಳು:
ಎ) ಸೆಪ್ಟೆಂಬರ್ 1, 2014 ರ ಮೊದಲು ನಿವೃತ್ತರಾಗಿರುವ ಇಪಿಎಸ್ ಸದಸ್ಯರು ತಮ್ಮ EPF ಖಾತೆಗೆ ಈಗಾಗಲೇ ಹೆಚ್ಚಿನ ಕೊಡುಗೆಯನ್ನು ನೀಡುತ್ತಿದ್ದಾರೆ. ಆದರೆ ಇಂತಹ ಸದಸ್ಯರಿಗೆ ಹೆಚ್ಚಿನ ಇಪಿಎಸ್ ಪಿಂಚಣಿ ವಿನಂತಿಯನ್ನು ಇಪಿಎಫ್‌ಒ ತಿರಸ್ಕರಿಸಿದೆ.
ಬಿ) ಆದರೆ, ಸೆಪ್ಟೆಂಬರ್ 1, 2014 ರಂದು ಇಪಿಎಸ್ ಅಥವಾ ಇಪಿಎಫ್‌ನ ಸದಸ್ಯರಾಗಿದ್ದರೆ, ಅವರು ಹೆಚ್ಚಿನ ಇಪಿಎಸ್ ಪಿಂಚಣಿಗೆ ಅರ್ಹರು ಎಂದು ಅಂತಹ ಸದಸ್ಯರನ್ನು ಇಪಿಎಫ್‌ಒ ಸ್ವೀಕರಿಸಿದೆ.
ಈಗಾಗಲೇEPFO ಹೆಚ್ಚಿನ ಪಿಂಚಣಿ ಯೋಜನೆಗೆ ಅರ್ಜಿ ಸಲ್ಲಿಸಲು ಆನ್‌ಲೈನ್ ಲಿಂಕ್ ಅನ್ನು ಒದಗಿಸಿದೆ, ಅಲ್ಲಿ ಅರ್ಹ ಉದ್ಯೋಗಿಗಳು ಹೆಚ್ಚಿನ ಪಿಂಚಣಿ ಜಂಟಿ ಅರ್ಜಿ ನಮೂನೆಯನ್ನು ಸಲ್ಲಿಸಬಹುದು. ಜಂಟಿ ಅರ್ಜಿ ನಮೂನೆಯು ಉದ್ಯೋಗದಾತರಿಂದ ಅನುಮೋದಿಸಲ್ಪಟ್ಟಿರಬೇಕು.
ಪತ್ರಿಕಾ ಪ್ರಕಟಣೆಯಲ್ಲಿ ಇಪಿಎಫ್‌ಒ ಹೇಳಿದ್ದೇನು?
ಹೆಚ್ಚಿನ ಪಿಂಚಣಿ ಯೋಜನೆಗೆ ಅರ್ಜಿ ಸಲ್ಲಿಸಲು ಗಡುವನ್ನು ವಿಸ್ತರಿಸುವಾಗ ಇಪಿಎಫ್‌ಒ ಪತ್ರಿಕಾ ಪ್ರಕಟಣೆಯನ್ನು ಹೊರಡಿಸಿದೆ. ಅದರ ಕೆಲವು ಮುಖ್ಯ ಅಂಶಗಳು ಇಲ್ಲಿವೆ ನೋಡಿ. ದಿನಾಂಕ 04.11.2022 ರ ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಪಿಂಚಣಿದಾರರು / ಸದಸ್ಯರಿಂದ ಮಾಡಿದ ಆಯ್ಕೆ / ಜಂಟಿ ಆಯ್ಕೆಯ ಮೌಲ್ಯೀಕರಣಕ್ಕಾಗಿ ಅರ್ಜಿಗಳನ್ನು ಪಡೆಯಲು EPFO ವ್ಯವಸ್ಥೆ ಮಾಡಿದೆ.
ಈ ಪ್ರಕ್ರಿಯೆಯನ್ನು ಸುಲಭಗೊಳಿಸಲು, ಆನ್‌ಲೈನ್ ಸೌಲಭ್ಯವನ್ನು ಸಂಸ್ಥೆಯು ಒದಗಿಸಲಾಗಿದೆ. ಇಲ್ಲಿಯವರೆಗೆ 12 ಲಕ್ಷಕ್ಕೂ ಹೆಚ್ಚು ಅರ್ಜಿಗಳು ಬಂದಿವೆ. ಆನ್‌ಲೈನ್ ಸೌಲಭ್ಯವು 03.05.2023 ರವರೆಗೆ ಮಾತ್ರ ಲಭ್ಯವಿತ್ತು. ಆದರೆ ಈಗ ಜೂನ್ 26, 2023 ರವರೆಗೆ ವಿಸ್ತರಣೆ ಆಗಿದೆ.
ಈ ನಡುವೆ ಕಾಲಾವಕಾಶ ವಿಸ್ತರಣೆ ಕೋರಿ ನಾನಾ ಕಡೆಗಳಿಂದ ಮನವಿಗಳು ಬಂದಿವೆ. ಈ ಸಮಸ್ಯೆಯನ್ನು ಪರಿಗಣಿಸಿರುವ ಸಂಸ್ಥೆಯು ಹೆಚ್ಚಿನ ಕಾಲಾವಕಾಶವನ್ನು ಸಹ ನೀಡಿದೆ.
ಎಲ್ಲಾ ಅರ್ಹ ವ್ಯಕ್ತಿಗಳು ತಮ್ಮ ಅರ್ಜಿಗಳನ್ನು ಸಲ್ಲಿಸಲು ಅನುವು ಮಾಡಿಕೊಡುವ ಸಲುವಾಗಿ, ಅರ್ಜಿಗಳನ್ನು ಸಲ್ಲಿಸುವ ಸಮಯವನ್ನು ಈಗ 26 ಜೂನ್, 2023 ರವರೆಗೆ ವಿಸ್ತರಣೆ ಮಾಡಲಾಗಿದೆ ಎಂದು ಸಂಸ್ಥೆಯು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಪಿಂಚಣಿದಾರರು/ಸದಸ್ಯರು ಎದುರಿಸುತ್ತಿರುವ ಯಾವುದೇ ತೊಂದರೆಯನ್ನು ನಿವಾರಿಸಲು ಅನುಕೂಲವಾಗುವಂತೆ ಮತ್ತು ಅವರಿಗೆ ಸಾಕಷ್ಟು ಸಮಯಾವಕಾಶವನ್ನು ಒದಗಿಸಲು ಅರ್ಜಿ ಸಲ್ಲಿಸಲುವ ದಿನಾಂಕವನ್ನು ವಿಸ್ತರಿಸಲಾಗುತ್ತಿದೆ.
ನೌಕರರು, ಉದ್ಯೋಗದಾತರು ಮತ್ತು ಅವರ ಸಂಘಗಳಿಂದ ಬಂದ ವಿವಿಧ ಬೇಡಿಕೆಗಳನ್ನು ಸೂಕ್ತವಾಗಿ ಪರಿಗಣಿಸಿ ಈ ತೀರ್ಮಾನಕ್ಕೆ ಬರಲಾಗಿದೆ ಎಂದು ಸಂಸ್ಥೆಯು ತಿಳಿಸಿದೆ.
ಒಂದು ವೇಳೆ ನೀವು ಅಧಿಕ ಪಿಂಚಣಿಗೆ ಅರ್ಜಿ ಸಲ್ಲಿಸಲು ಅರ್ಹತೆ ಹೊಂದಿದ್ದರೆ, ನಿಗದಿತ ಫಾರ್ಮ್ ನಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಹ ಸದಸ್ಯರು ಸಂಬಂಧಪಟ್ಟ ಪ್ರಾದೇಶಿಕ ಇಪಿಎಫ್ ಒ ಕಚೇರಿಗೆ ಭೇಟಿ ನೀಡಿ ಅರ್ಜಿ ಸಲ್ಲಿಕೆ ಮಾಡಬೇಕು. ಜೊತೆಗೆ ಅಗತ್ಯ ದಾಖಲೆಗಳನ್ನು ಕೂಡ ಒದಗಿಸಬೇಕಿದೆ.
ಹೆಚ್ಚು ಪಿಂಚಣಿ ಪಡೆಯಲು ಅರ್ಜಿ ಸಲ್ಲಿಸುವಾಗ ಆಯುಕ್ತರು ಸೂಚಿಸಿದ ವಿಧಾನದಲ್ಲೇ ಅರ್ಜಿ ಸಲ್ಲಿಕೆ ಮಾಡಬೇಕು ಎಂದು ಇಪಿಎಫ್ಒ ಹೊರಡಿಸಿರುವ ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಇನ್ನು ಭವಿಷ್ಯ ನಿಧಿಯಿಂದ ಪಿಂಚಣಿ ನಿಧಿಗೆ ಮರು ಹೊಂದಾಣಿಕೆ ಮಾಡಲು ಪಿಂಚಣಿದಾರರು ಅರ್ಜಿಯಲ್ಲಿ ಆತ/ಆಕೆಯ ಒಪ್ಪಿಗೆ ನೀಡೋದು ಅಗತ್ಯ. ಇನ್ನು ನಿಧಿ ಠೇವಣಿಗೆ ಸಂಬಂಧಿಸಿ ಸಂಬಂಧಪಟ್ಟ ಸುತ್ತೋಲೆಗಳಲ್ಲಿ ಸೂಚಿಸಿರುವ ವಿಧಾನವನ್ನು ಬಳಸಲಾಗುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ