ಜಾಗತಿಕವಾಗಿ ಉದ್ಯೋಗಿಗಳ ವಜಾಗೊಳಿಸುವಿಕೆ (Employee Layoff) ನಿಲ್ಲದಂತೆ ನಡೆಯುತ್ತಿದೆ. ಗೂಗಲ್ (Google), ಮೆಟಾ, ಟ್ವಿಟರ್ ಮತ್ತು ಮೈಕ್ರೋಸಾಫ್ಟ್‌ನಂತಹ ಪ್ರಮುಖ ಟೆಕ್ ಕಂಪನಿಗಳಲ್ಲಿ ನಡೆದ ಭಾರೀ ವಜಾಗೊಳಿಸುವಿಕೆನಡೆಯುತ್ತಿದೆ. ಇದರ ಅಲೆಯಲ್ಲಿ, ಸುಮಾರು 2 ಲಕ್ಷಕ್ಕೂ ಹೆಚ್ಚು ಐಟಿ ಉದ್ಯೋಗಿಗಳು (IT Employees) ಮೂರು ತಿಂಗಳಿನಿಂದ ಜಾಗತಿಕವಾಗಿ ಉದ್ಯೋಗ ಕಳೆದುಕೊಂಡಿದ್ದಾರೆ ಎಂದು ವರದಿಗಳು ಸೂಚಿಸುತ್ತಿವೆ.
ಇತ್ತೀಚೆಗೆ, ಮೈಕ್ರೋಸಾಫ್ಟ್ ಇಂಡಿಯಾ ಬೆಂಗಳೂರು ಮತ್ತು ಹೈದರಾಬಾದ್‌ನಲ್ಲಿ ಉದ್ಯೋಗಿಗಳನ್ನು ವಜಾಗೊಳಿಸಲು ಪ್ರಾರಂಭಿಸಿದೆ. ಇದರ ಜೊತೆಯಲ್ಲಿ, ಅಮೆಜಾನ್ ಇಂಡಿಯಾ ಸಹ ತನ್ನ ಹೆಡ್‌ಕೌಂಟ್ ಅನ್ನು ಸುಮಾರು 1,000 ರಷ್ಟು ಕಡಿಮೆ ಮಾಡಿದೆ.
ವಸತಿ ಕ್ಷೇತ್ರದ ಮೇಲೆ ಎಫೆಕ್ಟ್
ಒಟ್ಟಾರೆ ವಜಾಗೊಳಿಸುವಿಕೆ ಉದ್ಯೋಗಿಗಳಿಗೆ ಮುಂದೆ ಏನು ಎಂಬುದರ ಜೊತೆ ಈ ವಿದ್ಯಾಮಾನ ವಸತಿ ವಲಯದ ಮೇಲೆ, ಅದರಲ್ಲೂ ವಿಶೇಷವಾಗಿ ಬೆಂಗಳೂರಿನ ಮೇಲೆ ಪರಿಣಾಮ ಬೀರಿದೆ ಎನ್ನುತ್ತಿದ್ದಾರೆ ತಜ್ಞರು.
ಬೆಂಗಳೂರಲ್ಲಿ ದೊಡ್ಡ ದೊಡ್ಡ ಟೆಕ್ ಕಂಪನಿಗಳು ಇರುವುದರಿಂದ ವಜಾಗೊಳಿಸುವಿಕೆಯು ಸಿಲಿಕಾನ್ ಸಿಟಿಯ ರಿಯಲ್ ಎಸ್ಟೇಟ್ ಕ್ಷೇತ್ರದ ಮೇಲೆ ಪರಿಣಾಮ ಬೀರುತ್ತಿದೆ ಎಂದು ಕಾನ್ಫೆಡರೇಶನ್ ಆಫ್ ರಿಯಲ್ ಎಸ್ಟೇಟ್ ಅಸೋಸಿಯೇಟ್ಸ್ ಆಫ್ ಇಂಡಿಯಾ (CREAI) ನ ಬೆಂಗಳೂರು ಶಾಖೆಯ ಅಧ್ಯಕ್ಷ ಪ್ರದೀಪ್ ಜೋ ಹೇಳಿದ್ದಾರೆ.
ವಜಾಗೊಂಡ ನಂತರ ಬೆಂಗಳೂರು ಬಿಡುತ್ತಿರುವ ಉದ್ಯೋಗಿಗಳು
ಹೇಳಿಕೇಳಿ ಬೆಂಗಳೂರು ವಲಸಿಗರಿಗೆ ಆಶ್ರಯ ತಾಣ. ಕೆಲಸ ಅರಸಿ ಪ್ರತಿನಿತ್ಯ ಸಾವಿರಾರು ಜನ ಬರುತ್ತಾರೆ. ಹೀಗೆ ಇಲ್ಲೊಂದು ಕೆಲಸ ಹುಡುಕಿಕೊಂಡು, ಮನೆ ಬಾಡಿಗೆಗೆ ತೆಗೆದುಕೊಂಡು ಆಫೀಸ್, ಮನೆ ಅಂತಾ ಇರುತ್ತಾರೆ.
ಇದನ್ನೂ ಓದಿ: 96 ಬಗೆಯ ಬಿದಿರು ಬೆಳೆದ ರೈತ, ಇದ್ರಿಂದಲೇ ಲಕ್ಷ ಲಕ್ಷ ಆದಾಯ!
ಲಾಕ್‌ಡೌನ್ ಸಂದರ್ಭದಲ್ಲಿ ಬೆಂಗಳೂರು ಬಿಟ್ಟು ತಮ್ಮೂರಿಗೆ ಜನ ಹೋಗಿದ್ದರಿಂದ ಆ ವೇಳೆಯಲ್ಲಿ ಅನೇಕ ಮನೆಗಳು ಖಾಲಿ ಇದ್ದವು. ಮತ್ತೆ ಪರಿಸ್ಥಿತಿ ಸುಧಾರಿಸುತ್ತಿದ್ದ ಹಾಗೆ ಮನೆಗಳು ಭರ್ತಿಯಾದವು.
ಆದರೆ ಈಗ ನಡೆಯುತ್ತಿರುವ ವಜಾಗೊಳಿಸುವಿಕೆ ಉದ್ಯೋಗಿಗಳನ್ನು ಬೆಂಗಳೂರು ಬಿಟ್ಟು ಮತ್ತೆ ತಮ್ಮೂರಿನ ಕಡೆ ಹೋಗಲು ಪ್ರೇರೇಪಿಸಿದೆ. ಇದರಿಂದಾಗಿ ಮತ್ತೆ ಬಾಡಿಗೆ ಮನೆಗಳು ಖಾಲಿ ಬಿದ್ದಿದ್ದು, ರಿಯಲ್ ಎಸ್ಟೇಟ್ ಕ್ಷೇತ್ರದ ಮೇಲೆ ದೊಡ್ಡ ಹೊಡೆತ ಬಿದ್ದಿದೆ.
ಬಾಡಿಗೆ ಮನೆಗಳ ಬೇಡಿಕೆಯಲ್ಲಿ ಕುಸಿತ
ರಿಯಲ್ ಎಸ್ಟೇಟ್ ಪ್ಲಾಟ್‌ಫಾರ್ಮ್ ಇಂಡಿಯಾ ಅಸೆಟ್ಜ್‌ನ ರಾಘವೇಂದ್ರ ರಾವ್, "ಕೋವಿಡ್ ಪ್ರೇರಿತ ಲಾಕ್‌ಡೌನ್ ಸಮಯದಲ್ಲಿ ಉಂಟಾದ ಆರ್ಥಿಕ ಮಂದಗತಿಯು ನಿಧಾನವಾಗಿ ಚೇತರಿಸಿಕೊಳ್ಳುತ್ತಿತ್ತು. ಆದರೆ ಈಗ ನಡೆಯುತ್ತಿರುವ ವಜಾಗೊಳಿಸುವಿಕೆ ಮತ್ತೆ ಇದೇ ಪರಿಸ್ಥಿತಿಯನ್ನು ಎದುರಿಸುವಂತೆ ಮಾಡುತ್ತಿದೆ" ಎಂದಿದ್ದಾರೆ.
ದಕ್ಷಿಣ ಮಾರುಕಟ್ಟೆಗಳಲ್ಲಿ ಸಕ್ರಿಯವಾಗಿರುವ ಚೆನ್ನೈ ಮೂಲದ ರಿಯಲ್ ಎಸ್ಟೇಟ್ ಸಂಸ್ಥೆಯಾದ ಹನು ರೆಡ್ಡಿ ರಿಯಾಲ್ಟಿಯ ಉಪಾಧ್ಯಕ್ಷ ಕಿರಣ್ ಕುಮಾರ್ ಮಾತಾಡಿ, ಹಣಕಾಸು ವರ್ಷದಿಂದ, ಬೆಂಗಳೂರಿನ ರಿಯಲ್ ಎಸ್ಟೇಟ್ ವಲಯವು ಬಾಡಿಗೆ ಅಪಾರ್ಟ್‌ಮೆಂಟ್‌ಗಳ ಬೇಡಿಕೆಯಲ್ಲಿ ಗಮನಾರ್ಹ ಕುಸಿತವನ್ನು ಕಂಡಿದೆ ಎಂದು ಹೇಳಿದ್ದಾರೆ.
ವಿಶೇಷವಾಗಿ ರಿಚ್ಮಂಡ್ ಟೌನ್ ಮತ್ತು ಎಂಜಿ ರಸ್ತೆಗಳಲ್ಲಿ ಬಾಡಿಗೆ ಅಪಾರ್ಟ್ಮೆಂಟ್ಗಳ ಬೇಡಿಕೆಯು ಶೇಕಡಾ 15 ರಷ್ಟು ಕಡಿಮೆಯಾಗಿದ್ದು, ಇಲ್ಲಿ ಪ್ರಸ್ತುತ ಕೈಗೆಟುಕುವ ದರದಲ್ಲಿ ಮನೆಗಳು ಬಾಡಿಗೆಗೆ ಸಿಗುತ್ತಿದೆ ಎಂದು ವಿವರಿಸಿದರು.
ವೈಟ್‌ಫೀಲ್ಡ್, ಸರ್ಜಾಪುರ ಏರಿಯಾಗಳಲ್ಲಿ ಬಾಡಿಗೆ ಇಳಿಮುಖ
ಉದ್ಯೋಗಿಗಳನ್ನು ಕಂಪನಿಗಳು ಕಚೇರಿಗೆ ಬರುವಂತೆ ಆದೇಶ ನೀಡಿದ್ದರಿಂದ ಕಳೆದ ವರ್ಷ ಬೆಂಗಳೂರಲ್ಲಿ ಬಾಡಿಗೆ ಇಳುವರಿಯಲ್ಲಿ 5 ಪ್ರತಿಶತದಿಂದ 7 ಪ್ರತಿಶತಕ್ಕೆ ಏರಿಕೆ ಕಂಡಿತ್ತು.
ಆದರೆ ಈ ವಜಾಗೊಳಿಸುವಿಕೆಯಿಂದಾಗಿ ಈ ಚಕ್ರ ಮತ್ತೆ ತಲೆಕೆಳಗಾದಂತಿದೆ. ಪ್ರಸ್ತುತ ಹಲವು ಮನೆಗಳು ಖಾಲಿ ಇದ್ದು, ವೈಟ್‌ಫೀಲ್ಡ್, ಸರ್ಜಾಪುರ, ಔಟರ್ ರಿಂಗ್ ರೋಡ್, ಮಾನ್ಯತಾ ಟೆಕ್ ಪಾರ್ಕ್ ಮತ್ತು ಹೆಬ್ಬಾಳದಂತಹ ಸ್ಥಳಗಳಲ್ಲಿ ಬಾಡಿಗೆಗೆ, ಡೆವಲಪರ್‌ಗಳು ಮತ್ತು ಮಾಲೀಕರು ಈಗಾಗಲೇ 5-10 ಪ್ರತಿಶತದಷ್ಟು ರಿಯಾಯಿತಿಗಳನ್ನು ನೀಡಲು ಪ್ರಾರಂಭಿಸಿದ್ದಾರೆ.
ಈ ಏರಿಯಾಗಳಲ್ಲಿ 2BHK ಬಾಡಿಗೆ 40,000 ರೂ.ನಿಂದ ಸುಮಾರು 25,000 ರೂ.ಗೆ ಇಳಿದಿದೆ. ಮುಂಬರುವ ದಿನಗಳಲ್ಲಿ ಇದು ಮತ್ತಷ್ಟು ಇಳಿಕೆ ಕಾಣಲಿದೆ ಎಂಸು ವರದಿಗಳು ಹೇಳಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ