Cheaper EVs- ಶೀಘ್ರದಲ್ಲೇ ಎಲೆಕ್ಟ್ರಿಕ್ ವಾಹನಗಳ ಬೆಲೆಯಲ್ಲಿ ಗಣನೀಯ ಇಳಿಕೆ ಸಾಧ್ಯತೆ

ಇನ್ನೆರಡು ವರ್ಷದಲ್ಲಿ ವಿದ್ಯುತ್ ಚಾಲಿತ ವಾಹನದ ಬೆಲೆ ಪೆಟ್ರೋಲ್ ವಾಹನದ ಬೆಲೆಗೆ ಸಮಾನವಾಗಿರುತ್ತದೆ. ದೇಶಾದ್ಯಂತ ವಿದ್ಯುತ್ ವಾಹನ ಕ್ರಾಂತಿ ಆಗುತ್ತಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ಧಾರೆ.

ವಿದ್ಯುತ್ ಕಾರು

ವಿದ್ಯುತ್ ಕಾರು

 • News18
 • Last Updated :
 • Share this:
  ನವದೆಹಲಿ: ಕೇಂದ್ರ ಸರ್ಕಾರ ಭಾರತದಲ್ಲಿ ವಿದ್ಯುತ್ ಚಾಲಿತ ವಾಹನಗಳಿಗೆ ಭಾರೀ ಪ್ರೋತ್ಸಾಹ ಕೊಡುತ್ತಿದೆ. ಆದರೆ, ಡೀಸೆಲ್ ಮತ್ತು ಪೆಟ್ರೋಲ್ ವಾಹನಗಳ ಭರಾಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳ ಸಂಖ್ಯೆ ಬೆಟ್ಟದ ಮುಂದೆ ಇರುವೆಯಂತಿದೆ. ಸರ್ಕಾರ ಎಷ್ಟೇ ಉತ್ತೇಜನ ಕೊಟ್ಟರೂ ಜನರು ಎಲೆಕ್ಟ್ರಿಕ್ ವಾಹನಗಳ ಖರೀದಿಗೆ ಹೆಚ್ಚು ಮನಸು ಮಾಡುತ್ತಿಲ್ಲ. ಇದಕ್ಕೆ ಕಾರಣ ಹಲವುಂಟು. ಎಲೆಕ್ಟ್ರಿಕ್ ವಾಹನಗಳು ದುಬಾರಿ ಬೆಲೆ ಇರುವುದು, ಬ್ಯಾಟರಿ ರೀಚಾರ್ಜ್ ಮಾಡುವ ಸಮರ್ಪಕ ವ್ಯವಸ್ಥೆ ಇಲ್ಲದಿರುವುದು ಇವು ಪ್ರಮುಖ ಕಾರಣವೆಂದು ಪರಿಗಣಿಸಲಾಗಿದೆ. ಆದರೆ, ಕೇಂದ್ರ ಸರ್ಕಾರ ಈ ಕೊರತೆಯನ್ನು ಬಹಳ ಬೇಗ ನೀಗಿಸಿ ಎಲೆಕ್ಟ್ರಿಕ್ ವಾಹನಗಳ ಕ್ರಾಂತಿ ಮಾಡುವ ವಿಶ್ವಾಸದಲ್ಲಿದೆ. ಕೇಂದ್ರ ಸಚಿವ ನಿತಿನ್ ಗಡ್ಕರ್ ಮಾತನ್ನು ನಂಬುವುದಾದರೆ ಮುಂಬರುವ ದಿನಗಳಲ್ಲಿ ಎಲೆಕ್ಟ್ರಿಕ್ ವಾಹನಗಳ ಬೆಲೆ ಗಣನೀಯವಾಗಿ ತಗ್ಗುತ್ತಾ ಹೋಗಲಿದೆ. ಎರಡು ವರ್ಷದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳ ಮಟ್ಟಕ್ಕೆ ಎಲೆಕ್ಟ್ರಿಕ್ ವಾಹನಗಳ ಬೆಲೆ ಇಳಿಯಲಿದೆ ಎನ್ನುತ್ತಾರೆ ಸಚಿವರು.

  ಎಲೆಕ್ಟ್ರಿಕ್ ವಾಹನಗಳಿಗೆ ಅಗತ್ಯವಾದ ಸೌಕರ್ಯವಾಗಿರುವ ವಿದ್ಯುತ್ ಚಾರ್ಜಿಂಗ್ ವ್ಯವಸ್ಥೆಗೆ ಪುಷ್ಟಿ ಕೊಡಲು ಸರ್ಕಾರ ಯೋಜಿಸುತ್ತಿದೆ. “2023ರಷ್ಟರಲ್ಲಿ ದೇಶಾದ್ಯಂತ ಪ್ರಮುಖ ಹೆದ್ದಾರಿಗಳಲ್ಲಿ 600 ಇವಿ ಚಾರ್ಜಿಂಗ್ ಪಾಯಿಂಟ್​ಗಳನ್ನ ಸ್ಥಾಪಿಸಲಾಗುತ್ತದೆ. ಈ ಚಾರ್ಜಿಂಗ್ ಸ್ಟೇಷನ್​ಗಳಲ್ಲಿ ಸೌರ ವಿದ್ಯುತ್ ಅಥವಾ ವಾಯು ವಿದ್ಯುತ್ ಮುಂತಾದ ಪುನರ್ಬಳಕೆ ಶಕ್ತಿಯನ್ನ ಅಳವಡಿಸಲಾಗುತ್ತದೆ” ಎಂದು ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವರೂ ಆದ ನಿತಿನ್ ಗಡ್ಕರಿ ಹೇಳಿದ್ಧಾರೆ.

  ವಿದ್ಯುತ್ ವಾಹನಗಳ ಬೆಲೆ ಯಾಕೆ ಹೆಚ್ಚು?:

  “ವಿದ್ಯುತ್ ವಾಹನಗಳ ಸಂಖ್ಯೆ ಬಹಳ ಕಡಿಮೆ ಇರುವುದರಿಂದ ಅವುಗಳ ಬೆಲೆ ಸಹಜವಾಗಿ ಹೆಚ್ಚಿದೆ… ಭಾರತದಲ್ಲಿ ಕಡಿಮೆ ಬೆಲೆಗೆ ವಿದ್ಯುತ್ ವಾಹನಗಳನ್ನ ತಯಾರಿಸಬಲ್ಲ ತಂತ್ರಜ್ಞಾನದ ಅಭಿವೃದ್ಧಿಗೆ 250 ಸ್ಟಾರ್ಟಪ್ ವ್ಯವಹಾರಗಳು ನಡೆಯುತ್ತಿವೆ. ಇದರಿಂದ ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳ ಕ್ರಾಂತಿ ನಡೆಯಬಹುದು. ಅಲ್ಲದೇ, ವಾಹನ ತಯಾರಕರ ಇವಿ ಉತ್ಪಾದನೆಯ ವೆಚ್ಚವನ್ನು ತಗ್ಗಿಸಲು ಅತೀವ ಪ್ರಯತ್ನಮಾಡುತ್ತಿದ್ದಾರೆ. ಎಲೆಕ್ಟ್ರಿಕ್ ವಾಹನಗಳ ಮೇಲೆ ಕೇವಲ ಶೇ. 5 ಮಾತ್ರ ಜಿಎಸ್​ಟಿ ತೆರಿಗೆ ಇದೆ. ವಾಹನಗಳಿಗೆ ಶಕ್ತಿ ಕೊಡುವ ಲಿಥಿಯಮ್ ಅಯಾನ್ ಬ್ಯಾಟರಿಗಳ ಬೆಲೆಯೂ ಇಳಿಯುತ್ತಿದೆ” ಎಂದು ನಿತಿನ್ ಗಡ್ಕರಿ ವಿವರಿಸಿದ್ಧಾರೆ.

  ಇದನ್ನೂ ಓದಿ: ಎಟಿಎಂನಿಂದ ಹಣ ಪಡೆದರೆ ವಿಧಿಸುವ ಶುಲ್ಕದಲ್ಲಿ ಹೆಚ್ಚಳ, ಮುಂದಿನ ತಿಂಗಳಿಂದ ಜಾರಿ

  ವಿದ್ಯುತ್ ವಾಹನಗಳಿಂದ ಅರ್ಥವ್ಯವಸ್ಥೆಗೆ ಬಲ:

  ಎಲೆಕ್ಟ್ರಿಕ್ ವಾಹನಗಳು ಭಾರತದ ಆರ್ಥಿಕತೆಗೆ ಅನುಕೂಲಕರವಾಗಲಿವೆ. ಇದರ ಮೈಲೇಜು ಬಹಳ ಹೆಚ್ಚಿರುತ್ತದೆ. ಪ್ರತೀ ಕಿಮೀಗೆ ತಗುಲುವ ವೆಚ್ಚ ಕೇವಲ 1 ರೂ ಮಾತ್ರ. ಪೆಟ್ರೋಲ್ ಕಾರಿಗೆ ಒಂದು ಕಿಮೀಗೆ 10 ರೂ ತಗುಲುತ್ತದೆ, ಡೀಸೆಲ್ ಕಾರಾದರೆ ಕಿಮೀಗೆ 7 ರೂಪಾಯಿ ಆಗುತ್ತದೆ. ಅದೇ ಎಲೆಕ್ಟ್ರಿಕ್ ಕಾರು ಕೇವಲ 1 ರೂ ವೆಚ್ಚ ಆಗುತ್ತದೆ. ಹೀಗಾಗಿ, ಜನರು ವಿದ್ಯುತ್ ವಾಹನಗಳ ಖರೀದಿಗೆ ಮುಗಿಬೀಳುತ್ತಾರೆ ಎಂದು ಗಡ್ಕರಿ ಅಭಿಪ್ರಾಯಪಟ್ಟಿದ್ಧಾರೆ.

  ಇತ್ತೀಚೆಗೆ ನಡೆದ ಇಂಡಿಯನ್ ಚೇಂಬರ್ ಅಫ್ ಕಾಮರ್ಸ್ ಸಂಸ್ಥೆಯ ವಾರ್ಷಿಕ ಮಹಾಸಭೆಯಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದ ನಿತಿನ್ ಗಡ್ಕರಿ ಅವರು ಪೆಟ್ರೋಲ್ ಮತ್ತು ಡೀಸೆಲ್ ಕಾರುಗಳ ಮಾರಾಟವನ್ನು ನಿಲ್ಲಿಸುವುದಿಲ್ಲ ಎಂದು ಭರವಸೆ ನೀಡಿದ್ಧಾರೆ.

  ಇದನ್ನೂ ಓದಿ: ನಿಮ್ಮಲ್ಲಿ 786 ನಂಬರ್ ಇರುವ ನೋಟ್ ಇದ್ದರೆ 3 ಲಕ್ಷ ಲಾಭ; ಇಲ್ಲಿದೆ ವಿವರ

  ಹೊಸ ವಾಹನಗಳನ್ನ ಕೊಳ್ಳುವವರು ಎಲೆಕ್ಟ್ರಿಕ್ ವಾಹನಗಳನ್ನೇ ಕೊಳ್ಳಬೇಕೆಂದೇನಿಲ್ಲ. ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳನ್ನೂ ಖರೀದಿಸಬಹುದು. ನಾವು ಎಲೆಕ್ಟ್ರಿಕ್ ವಾಹನಗಳು ಮತ್ತು ಪರ್ಯಾಯ ಇಂಧನಗಳ ಬಳಕೆಗೆ ಉತ್ತೇಜನ ಕೊಡುತ್ತಿದ್ದೇವಷ್ಟೇ. ಅಂತಿಮವಾಗಿ ಯಾವುದನ್ನು ಬಳಕೆ ಮಾಡಬೇಕೆನ್ನುವುದು ಗ್ರಾಹಕರ ಇಚ್ಛೆಗೆ ಬಿಟ್ಟಿದ್ದು ಎಂದವರು ಸ್ಪಷ್ಟಪಡಿಸಿದ್ದಾರೆ.
  Published by:Vijayasarthy SN
  First published: