ಈಗೆಲ್ಲಾ ಎಲ್ಲಿ ನೋಡಿದರೂ ಎಲೆಕ್ಟ್ರಿಕ್ ವಾಹನಗಳದ್ದೇ (Electric Vehicle) ಅಬ್ಬರ. ಬೆಂಗಳೂರು (Bengaluru) ಪ್ರತಿ ಮನೆಯಲ್ಲೂ ಒಂದು ಗಾಡಿ ಎಲೆಕ್ಟ್ರಿಕ್ ವಾಹನ ಅಂತೂ ಇದ್ದೇ ಇರುತ್ತೆ. ಡಿಮ್ಯಾಂಡ್ (Demand) ಹೆಚ್ಚಿರೋ ಕಾರಣ ಎಲ್ಲಾ ದೊಡ್ಡ ದೊಡ್ಡ ಕಂಪನಿಗಳು ಕೂಡ ಎಲೆಕ್ಟ್ರಿಕ್ ವಾಹನಗಳನ್ನು ಪರಿಚಯಿಸುತ್ತಿವೆ. ಆದರೆ ಇದರ ಗುಣಮಟ್ಟ ಎಷ್ಟರ ಮಟ್ಟಿಗೆ ಇದೆ ಎಂಬುದು ಇಲ್ಲಿ ಯಕ್ಷ ಪ್ರಶ್ನೆಯಾಗಿದೆ. ಈ ಹಿಂದೆ ಅದೆಷ್ಟೋ ಎಲೆಕ್ಟ್ರಿಕ್ ಸ್ಕೂಟರ್ಗಳು ಸುಟ್ಟು ಕರಕಲಾಗಿದ್ದನ್ನು ನಾವೆಲ್ಲ ನೋಡಿದ್ದೇವೆ. ಇದೀಗ ಇಂಥ ಘಟನೆ ಮರುಕಳಿಸಿದೆ. ತಮಿಳುನಾಡಿನ (Tamilnadu) ವಾಣಿಯಂಬಡುವಿನಲ್ಲಿ ಭಾನುವಾರ ರಾತ್ರಿ ಈ ಘಟನೆ ನಡೆದಿದೆ. ಮನೆಯ ಮುಂಭಾಗದಲ್ಲಿ ಇಟ್ಟಿದ್ದ ಬೈಕ್ ಸುಟ್ಟು ಕರಕಲಾಗಿದೆ. ಹೌದು, ಎಲೆಕ್ಟ್ರಿಕ್ ವಾಹನವನ್ನು ಚಾರ್ಜ್ ಮಾಡುತ್ತಿರುವಾಗಲೇ ಬೆಂಕಿ ಹೊತ್ತಿಗೊಂಡು ಸಂಪೂರ್ಣ ಸುಟ್ಟು ಕರಕಲಾಗಿದೆ.
ಚಾರ್ಜ್ಗೆ ಇಟ್ಟಿದ್ದ ಎಲೆಕ್ಟ್ರಿಕ್ ಸ್ಕೂಟರ್ ಸುಟ್ಟು ಕರಕಲು!
ಪೊಲೀಸರ ಪ್ರಕಾರ, 32 ವರ್ಷದ ಇನ್ಶಾನುಲ್ಲಾ ಶಕೀರಾಬಾದ್‌ನಲ್ಲಿ ಟೀ ಸ್ಟಾಲ್ ನಡೆಸುತ್ತಿದ್ದಾರೆ. ತಮ್ಮ ಮನೆಯ ವರಾಂಡದಲ್ಲಿದ್ದ ವಿದ್ಯುತ್ ಮೀಟರ್ ಬಾಕ್ಸ್ ಬಳಿ ಬೈಕ್ ನಿಲ್ಲಿಸಿದ್ದರು. ರಾತ್ರಿ ಮಲಗುವ ಮುನ್ನ ಬೈಕ್ ಚಾರ್ಜ್ ಮಾಡಿ ಮಲಗಿದ್ದರು. ರಾತ್ರಿ ಒಂದು ಗಂಟೆಗೆ ಬೈಕ್ ನಿಂದ ಮೊದಲ ಹೊಗೆ ಬರಲು ಆರಂಭವಾಗಿತ್ತು. ಸ್ವಲ್ಪ ಹೊತ್ತಿನಲ್ಲೇ ಬೆಂಕಿ ಕಾಣಿಸಿಕೊಂಡಿದೆ.
ಮೀಟರ್ ಬಾಕ್ಸ್ ಕೂಡ ಬೆಂಕಿಗಾಹುತಿ!
ಬೈಕ್ ಜತೆಗೆ ಮೀಟರ್ ಬಾಕ್ಸ್ ಕೂಡ ಬೆಂಕಿಗೆ ಆಹುತಿಯಾಗಿದೆ. ಈ ಸದ್ದು ಕೇಳಿಸಿಕೊಂಡ ನಂತರ, ಇನ್ಶಾನುಲ್ಲಾ ತನ್ನ ಪೋಷಕರನ್ನು ಎಬ್ಬಿಸಿದ್ದಾರೆ. ಅಲ್ಲದೆ.. ಮೊದಲ ಮಹಡಿಯಲ್ಲಿ ತಂಗಿದ್ದ ಅಣ್ಣನ ಕುಟುಂಬ ಸದಸ್ಯರನ್ನೂ ಎಬ್ಬಿಸಿದ್ದಾರೆ. ಎಲ್ಲರೂ ಬೈಕ್ ಮೇಲೆ ನೀರು ಸುರಿದು ಬೆಂಕಿ ನಂದಿಸಲು ಯತ್ನಿಸಿದ್ದಾರೆ. ಆದರೆ ಬೆಂಕಿ ಆರಲಿಲ್ಲ. ನೆಲದ ಮೇಲಿದ್ದ ಮಣ್ಣಿನ ಹೆಂಚುಗಳೂ ಸುಟ್ಟು ಕರಕಲಾಗಿವೆ. ಆ ಮಟ್ಟದಲ್ಲಿ ಬೆಂಕಿ ಕಾಣಿಸಿಕೊಂಡಿದೆ.
ಬಹಳ ಸಮಯ ಚಾರ್ಜ್ ಮಾಡಿದ್ದೇ ತಪ್ಪಾಯ್ತಾ?
ಕೂಡಲೇ ಕುಟುಂಬಸ್ಥರು ಅಗ್ನಿಶಾಮಕ ಸಿಬ್ಬಂದಿಯನ್ನು ಕರೆದಿದ್ದಾರೆ. ಪೊಲೀಸರೂ ಕೂಡ ಸ್ಥಳಕ್ಕೆ ಆಗಮಿಸಿದ್ದರು. ಬೈಕ್, ಮೀಟರ್ ಬಾಕ್ಸ್ ಸಂಪೂರ್ಣ ಸುಟ್ಟು ಕರಕಲಾಗಿದೆ. ಪ್ರಾಥಮಿಕ ತನಿಖೆಯ ಪ್ರಕಾರ, ಇನ್ಶಾನುಲ್ಲಾ ಅವರು ಒಂದು ವರ್ಷದ ಹಿಂದೆ ಎಲೆಕ್ಟ್ರಿಕ್ ಬೈಕ್ ಖರೀದಿಸಿದ್ದರು. ಬಹಳ ಸಮಯದಿಂದ ಚಾರ್ಜ್ ಮಾಡಿದ್ದರಿಂದ ಈ ಘಟನೆ ನಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಇದನ್ನೂ ಓದಿ: ಸೈಬರ್ ಕ್ರೈಮ್ ಎಂದರೇನು? ದೂರು ದಾಲಿಸೋದು ಹೇಗೆ? ಹಣ ಮರಳಿ ಪಡೆಯಲು ಹೀಗೆ ಮಾಡಿ
ಈ ಹಿಂದೆಯೂ ನಡೆದಿತ್ತು ಇದೇ ರೀತಿಯ ಘಟನೆ!
ಎಲೆಕ್ಟ್ರಿಕ್ ಬೈಕ್‌ಗಳು ಮತ್ತು ಸ್ಕೂಟರ್‌ಗಳಿಗೆ ಬೆಂಕಿ ಹಚ್ಚಿರುವುದು ಇದೇ ಮೊದಲಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಮಾರ್ಚ್ 2022 ರಲ್ಲಿ, 49 ವರ್ಷದ ವ್ಯಕ್ತಿಯ ಬೈಕ್‌ಗೆ ಬೆಂಕಿ ಹತ್ತಿಕೊಂಡಿತ್ತು. ಅವರು ಮತ್ತು ಅವರ ಮಗಳು ಹೊಗೆಯಿಂದ ಉಸಿರುಗಟ್ಟಿ ಸಾವನ್ನಪ್ಪಿದರು. ವೆಲ್ಲೂರಿನ ಹಳೇ ಪೇಟೆ ಸಮೀಪದ ಚಿನ್ನ ಅಲ್ಲಾಪುರಂನಲ್ಲಿ ಮನೆಯೊಂದರ ಮುಂದೆ ಇಡಲಾಗಿದ್ದ ಎಲೆಕ್ಟ್ರಿಕ್ ಬೈಕ್‌ನಿಂದ ಬೆಂಕಿ ಕಾಣಿಸಿಕೊಂಡಿತ್ತು ಎಂದು ಪೊಲೀಸರು ಹೇಳಿದರು.
ಕೇಂದ್ರದಿಂದಲೂ ಬಂದಿತ್ತು ಖಡಕ್ ವಾರ್ನಿಂಗ್!
ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಲ್ಲಿ (EV) ಬೆಂಕಿ ಅವಘಡಗಳು ಹೆಚ್ಚುತ್ತಿರುವ ಬೆನ್ನಲ್ಲೇ ಕೇಂದ್ರ ಸರ್ಕಾರ, ಲೋಪದೋಷವಿರುವ ಉತ್ಪನ್ನಗಳನ್ನು ತಯಾರಿಸುವ ಕಂಪನಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿತ್ತು. ಈ ಕುರಿತು ಸರಣಿ ಟ್ವೀಟ್ ಮಾಡಿದ್ದ ಕೇಂದ್ರ ರಸ್ತೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ, ಬೆಂಕಿ ಅವಘಡದ ಯಾವುದೇ ಘಟನೆಗಳಲ್ಲಿ ಕಂಪನಿಗಳು ತಮ್ಮ ಉತ್ಪನ್ನಗಳನ್ನು ತಯಾರಿಸುವಲ್ಲಿ ಸುರಕ್ಷತೆಯ ಮಾನದಂಡ ಅನುಸರಿಸುವಲ್ಲಿ ನಿರ್ಲಕ್ಷ್ಯ ತೋರಿರುವುದು ಕಂಡುಬಂದಲ್ಲಿ, ಅಂತಹ ಕಂಪನಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ