2022-23ರ ಕೇಂದ್ರ ಬಜೆಟ್ನಲ್ಲಿ ಘೋಷಣೆ ಮಾಡಿದಂತೆ ಸೆಂಟ್ರಲ್ ಬ್ಯಾಂಕ್ (Central Bank) ಡಿಜಿಟಲ್ ಕರೆನ್ಸಿ (Digital Currency) ಅಥವಾ ಇ-ರೂಪಾಯಿ ಪರಿಕಲ್ಪನೆಯನ್ನು ಭಾರತೀಯ ರಿಸರ್ವ್ ಬ್ಯಾಂಕ್ (RBI- Reserve Bank Of India) ಡಿಸೆಂಬರ್ 1 ರಂದು ಪ್ರಾಯೋಗಿಕವಾಗಿ ಜಾರಿಗೆ ತರುವುದಾಗಿ ಘೋಷಿಸಿದೆ. ಎಸ್ಬಿಐ (SBI), ಐಸಿಐಸಿಐ (ICICI) ಸೇರಿ ಈ ಯೋಜನೆ ಜಾರಿಗೆ ನಾಲ್ಕು ಬ್ಯಾಂಕ್ಗಳನ್ನು ಆರ್ಬಿಐ ಗುರುತಿಸಿದ್ದು, ಈ ನಾಲ್ಕು ಬ್ಯಾಂಕ್ಗಳು ಡಿಜಿಟಲ್ ರೂಪಾಯಿಗಳನ್ನು (Digital Rupee) ಬಿಡುಗಡೆ ಮಾಡಲಿವೆ. ಈ ಬ್ಯಾಂಕ್ಗಳು ಒದಗಿಸುವ ಡಿಜಿಟಲ್ ವ್ಯಾಲೆಟ್ (Digital Wallet) ಸಹಾಯದೊಂದಿಗೆ ಜನ ವ್ಯವಹಾರ ನಡೆಸಬಹುದು.
ಮೊದಲಿಗೆ ಬೆಂಗಳೂರು, ಮುಂಬೈ, ದೆಹಲಿ, ಭುವನೇಶ್ವರದಲ್ಲಿ ಈ ಪ್ರಯೋಗ ನಡೆಯಲಿದೆ. ಪ್ರಯೋಗದ ಭಾಗವಾಗಿ ಆಯ್ದ ಪ್ರಾಂತ್ಯಗಳಲ್ಲಿ ಬಳಕೆದಾರರು ಮತ್ತು ವ್ಯಾಪಾರಿಗಳ ನಡುವೆ ಡಿಜಿಟಲ್ ರೂಪಾಯಿ ಮೂಲಕ ವ್ಯವಹಾರ ನಡೆಯಲಿದೆ. ಸದ್ಯ ನೋಟು ಮತ್ತು ನಾಣ್ಯಗಳ ಮೌಲ್ಯದಲ್ಲೇ ಡಿಜಿಟಲ್ ರೂಪಾಯಿಯ ವ್ಯವಹಾರಗಳು ನಡೆಯಲಿದೆ.
ಇಂದಿನಿಂದಲೇ ಬಳಕೆ ಸಾಧ್ಯತೆ
ಡಿಜಿಟಲ್ ರೂಪಾಯಿ ಚಲಾವಣೆ ಬಗ್ಗೆ ನಿರೀಕ್ಷೆ ಹೆಚ್ಚಾಗಿದ್ದು, ಡಿಸೆಂಬರ್ 1 ರಿಂದಲೇ ಕೆಲವು ಬಳಕೆದಾರರು ವಹಿವಾಟು ಮಾಡಲು ಇ-ರೂಪಾಯಿಯನ್ನು ಬಳಸಲು ಸಾಧ್ಯವಾಗುತ್ತದೆ.
ವ್ಯಾಪಾರ-ವಹಿವಾಟಿನ ಸುಲಭತೆಯನ್ನು ಸಮರ್ಥವಾಗಿ ಹೆಚ್ಚಿಸುವ ದೃಷ್ಟಿಯಿಂದ, ನೋಟುಗಳನ್ನು ಮುದ್ರಿಸುವ, ವಿತರಿಸುವ ಮತ್ತು ಸಂಗ್ರಹಿಸುವ ವೆಚ್ಚ ಉಳಿತಾಯ ಮಾಡಲು, ಜಾಗತಿಕ ಸ್ವೀಕಾರ, ಸುಲಭ ಬಳಕೆ, ವಂಚನೆಯಿಂದ ತಪ್ಪಿಸಿಕೊಳ್ಳಲು ಡಿಜಿಟಲ್ ರೂಪಾಯಿ ಒಂದು ದೊಡ್ಡ ಮೈಲಿಗಲ್ಲಾಗಲಿದೆ.
ಡಿಜಿಟಲ್ ರೂಪಾಯಿ ಅಥವಾ ಇ-ರೂಪಾಯಿ ಎಂದರೇನು?
ಡಿಜಿಟಲ್ ರೂಪಾಯಿ ಮೂಲಭೂತವಾಗಿ ಜನರು ಪ್ರತಿದಿನ ಬಳಸುವ ಸಾಂಪ್ರದಾಯಿಕ ಕರೆನ್ಸಿಯ ಡಿಜಿಟಲ್ ಆವೃತ್ತಿಯಾಗಿದೆ. ನೀವು ಹಣವನ್ನು ಸುರಕ್ಷಿತ ಡಿಜಿಟಲ್ ರೂಪದಲ್ಲಿ ಇರಿಸಬಹುದು. ಆರ್ಬಿಐ ವಿವರಿಸಿದಂತೆ, ಇ-ರೂಪಾಯಿ ಡಿಜಿಟಲ್ ಟೋಕನ್ನ ಒಂದು ರೂಪವಾಗಿದ್ದು ಅದು ಕಾನೂನು ಟೆಂಡರ್ ಅನ್ನು ಪ್ರತಿನಿಧಿಸುತ್ತದೆ.
ಪ್ರಸ್ತುತ ಪೇಪರ್ ಕರೆನ್ಸಿ ಮತ್ತು ನಾಣ್ಯಗಳಲ್ಲಿರುವ ಮೌಲ್ಯದಲ್ಲೇ ಡಿಜಿಟಲ್ ಕರೆನ್ಸಿಯನ್ನು ಆರ್ಬಿಐ ವಿತರಿಸಲಿದೆ.
ಡಿಜಿಟಲ್ ರೂಪಾಯಿ ಹೇಗೆ ಕೆಲಸ ಮಾಡುತ್ತದೆ?
ಗ್ರಾಹಕರು ಮತ್ತು ವ್ಯಾಪಾರಿಗಳಿಗೆ ಬ್ಯಾಂಕ್ಗಳಂತಹ ಮಧ್ಯವರ್ತಿಗಳ ಮೂಲಕ ಡಿಜಿಟಲ್ ರೂಪಾಯಿ ಅಥವಾ ಇ-ರೂಪಾಯಿ ವಿತರಿಸಲಾಗುವುದು ಎಂದು ಆರ್ಬಿಐ ವಿವರಿಸಿದೆ.
ಈ ಮೇಲೆ ಹೇಳಿದಂತೆ ಅರ್ಹ ಬ್ಯಾಂಕ್ಗಳು ನೀಡುವ ಮತ್ತು ಮೊಬೈಲ್ ಫೋನ್ಗಳು ಅಥವಾ ಸಾಧನಗಳಲ್ಲಿ ಸಂಗ್ರಹಿಸಲಾದ ಡಿಜಿಟಲ್ ವ್ಯಾಲೆಟ್ ಮೂಲಕ ಬಳಕೆದಾರರು ಇ-ರೂಪಾಯಿಯೊಂದಿಗೆ ವಹಿವಾಟು ನಡೆಸಲು ಸಾಧ್ಯವಾಗುತ್ತದೆ.
ಇದನ್ನೂ ಓದಿ: Amazon: ಶಾಕಿಂಗ್ ನಿರ್ಧಾರ ತೆಗೆದುಕೊಂಡ ಅಮೆಜಾನ್, ಇನ್ಮುಂದೆ ಭಾರತದಲ್ಲಿ ಈ ಸೇವೆಗಳು ಅಲಭ್ಯ!
ಪಿಟುಪಿ ಮತ್ತು ಪಿಟುಎಂ
ಡಿಜಿಟಲ್ ರೂಪಾಯಿಯಲ್ಲಿನ ವಹಿವಾಟು ವ್ಯಕ್ತಿಯಿಂದ ವ್ಯಕ್ತಿಗೆ (P2P) ಮತ್ತು ವ್ಯಕ್ತಿಯಿಂದ ವ್ಯಾಪಾರಿಗೆ (P2M) ನಡುವೆ ನಡೆಯಬಹುದು ಎಂದು ಕೇಂದ್ರ ಬ್ಯಾಂಕ್ ದೃಢಪಡಿಸಿದೆ. ವ್ಯಕ್ತಿಯಿಂದ ವ್ಯಕ್ತಿಯ ನಡುವೆಯೂ ವಹಿವಾಟು ನಡೆಸಬಹುದು.
ಆನ್ಲೈನ್ ವಹಿವಾಟಿನಂತೆ ವ್ಯಾಪಾರದ ಸ್ಥಳಗಳಲ್ಲಿ ಪ್ರದರ್ಶಿಸಲಾದ ಕ್ಯೂಆರ್ ಕೋಡ್ ಬಳಸಿ ರೂಪಾಯಿಗಳನ್ನು ಬಳಸಬಹುದಾಗಿದೆ. ವ್ಯಾಲೆಟ್ನಲ್ಲಿ ಡಿಜಿಟಲ್ ಕರೆನ್ಸಿ ಬ್ಯಾಲೆನ್ಸ್ ಇದ್ದರೂ ಅದಕ್ಕೆ ಯಾವುದೇ ಬಡ್ಡಿ ಬರುವುದಿಲ್ಲ ಎಂದು ಆರ್ಬಿಐ ಅಧಿಕೃತ ಪ್ರಕಟಣೆ ತಿಳಿಸಿದೆ.
ಅರ್ಹ ಬ್ಯಾಂಕ್ಗಳು ಮತ್ತು ನಗರಗಳ ಪಟ್ಟಿ
ಡಿಜಿಟಲ್ ರೂಪಾಯಿಯ ಪ್ರಾಯೋಗಿಕ ಚಾಲನೆ ಹಂತಹಂತವಾಗಿ ನಡೆಯಲಿದೆ, ಮೊದಲ ಹಂತದಲ್ಲಿ ಎಸ್ಬಿಐ, ಐಸಿಐಸಿಐ ಬ್ಯಾಂಕ್, ಯೆಸ್ ಬ್ಯಾಂಕ್, ಮತ್ತು ಐಡಿಎಫ್ಸಿ ಬ್ಯಾಂಕ್ಗಳು ಡಿಜಿಟಲ್ ಹಣ ಒದಗಿಸಲಿವೆ.
ಇದನ್ನೂ ಓದಿ: Layoff News: ಸಿಂಗಾಪುರದಲ್ಲಿ ಟೆಕ್ ಉದ್ಯೋಗಿಗಳ ವಜಾ, ಭಾರತಕ್ಕೆ ಹೇಗೆಲ್ಲಾ ಎಫೆಕ್ಟ್ ಆಗ್ತಿದೆ ಗೊತ್ತೇ?
ನಂತರ ಶೀಘ್ರದಲ್ಲೇ ಬ್ಯಾಂಕ್ ಆಫ್ ಬರೋಡಾ, ಯೂನಿಯನ್ ಬ್ಯಾಂಕ್, ಎಚ್ಡಿಎಫ್ಸಿ, ಕೋಟಕ್ ಮಹೀಂದ್ರ ಬ್ಯಾಂಕ್ಗಳು ಸೇರಿದಂತೆ ಇನ್ನೂ ನಾಲ್ಕು ಬ್ಯಾಂಕ್ಗಳು ಪ್ರಾಯೋಗಿಕ ಯೋಜನೆಗೆ ಸೇರ್ಪಡೆಗೊಳ್ಳಲಿವೆ.
ಕೆಲವೇ ದಿನಗಳಲ್ಲಿ ಎಲ್ಲಾ ಭಾಗಕ್ಕೂ ವಿಸ್ತರಣೆ
ಇನ್ನೂ ಬೆಂಗಳೂರು, ಮುಂಬೈ, ಹೊಸದಿಲ್ಲಿ, ಭುವನೇಶ್ವರದಲ್ಲಿ ಆರಂಭಿಕವಾಗಿ ಪ್ರಾಯೋಗಿಕ ಯೋಜನೆ ಮೊದಲ ಹಂತದಲ್ಲಿ ಜಾರಿಯಾಗಲಿದೆ. ನಂತರದ ದಿನಗಳಲ್ಲಿ ಈ ಸೌಲಭ್ಯವನ್ನು ಅಹಮದಾಬಾದ್, ಗುವಾಹಟಿ, ಹೈದರಾಬಾದ್, ಇಂದೋರ್, ಕೊಚ್ಚಿ, ಲಖನೌ, ಪಾಟ್ನಾ ಮತ್ತು ಶಿಮ್ಲಾಕ್ಕೂ ವಿಸ್ತರಿಸಲಾಗುವುದು ಎಂದು ಆರ್ಬಿಐ ತಿಳಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ