Cooking Gas Price: ಅಡುಗೆ ಅನಿಲದ ಬೆಲೆ ಇಳಿಕೆ! ಈ ರಾಜ್ಯಕ್ಕೆ ಮಾತ್ರ ಅನ್ವಯವಾಗುತ್ತೆ!
ನೈಸರ್ಗಿಕ ಅನಿಲದ ಮೇಲಿನ ವ್ಯಾಟ್ ಕಡಿತದಿಂದಾಗಿ ರಾಜ್ಯವು 800 ಕೋಟಿ ರೂಪಾಯಿಗಳ ಆದಾಯವನ್ನು ಕಡಿಮೆಯಾಗಲಿದೆ ಎಂದು ಮಹಾರಾಷ್ಟ್ರದ ಹಣಕಾಸು ಸಚಿವ ಮತ್ತು ಉಪಮುಖ್ಯಮಂತ್ರಿ ಅಜಿತ್ ಪವಾರ್ ತಮ್ಮ ಬಜೆಟ್ ಭಾಷಣದಲ್ಲಿ ಹೇಳಿದ್ದಾರೆ.
ಮುಂಬೈ: ರಷ್ಯಾ ಉಕ್ರೇನ್ ಯುದ್ಧದಿಂದ (Russia vs Ukraine War) ಬೆಲೆ ಏರಿಕೆಯ ಬಿಸಿ ಜನಸಾಮಾನ್ಯರಿಗೆ ತಗುಲಿದ್ದ ಬೆನ್ನಲ್ಲೇ ಒಂದು ಒಳ್ಳೆ ಸುದ್ದಿ ಹೊರಬಿದ್ದಿದೆ. ಸಿಎನ್ಜಿ (CNG) ಅಥವಾ ಕಂಪ್ರೆಸ್ಡ್ ನ್ಯಾಚುರಲ್ ಗ್ಯಾಸ್ ಮತ್ತು ಪಿಎನ್ಜಿ ಅಥವಾ ಪೈಪ್ಡ್ ಕುಕಿಂಗ್ ಗ್ಯಾಸ್ಗಳ ಬೆಲೆ (PNG) ಇಳಿಕೆಯಾಗಲಿದೆ. ಆದರೆ ನೆನಪಿಡಿ, ಇದು ಎಲ್ಲಾ ಭಾರತೀಯರಿಗೂ ಅನ್ವಯವಾಗುವುದಿಲ್ಲ. ಕೇವಲ ಮಹಾರಾಷ್ಟ್ರದ ಜನರಿಗೆ ಮಾತ್ರ ಈ ಬೆಲೆ ಇಳಿಕೆಯ ಹರ್ಷ ದೊರೆಯಲಿದೆ. ಈಮೂಲಕ ಮಹಾರಾಷ್ಟ್ರದ (Maharashtra) ನಿವಾಸಿಗಳು ಈಗ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ಪದೇ ಪದೇ ದಿನನಿತ್ಯದ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿರುವುದು (Price Hike) ಜನಸಾಮಾನ್ಯರ ತಲೆಬಿಸಿ ಹೆಚ್ಚಿಸುವಂತೆ ಮಾಡಿದೆ.
ಮಹಾರಾಷ್ಟ್ರ ರಾಜ್ಯದ ಹಣಕಾಸು ಸಚಿವ ಅಜಿತ್ ಪವಾರ್ ಅವರು ದೇಶೀಯ ಪೈಪ್ಡ್ ಕಂಪ್ರೆಸ್ಡ್ ನ್ಯಾಚುರಲ್ ಗ್ಯಾಸ್ (ಸಿಎನ್ಜಿ) ಮತ್ತು ವಾಹನ ಮಾಲೀಕರ ಮೇಲಿನ ಮೌಲ್ಯವರ್ಧಿತ ತೆರಿಗೆಯಲ್ಲಿ (ವ್ಯಾಟ್) ತೀವ್ರ ಕಡಿತವನ್ನು ಮಾಡುವುದಾಗಿ ಶುಕ್ರವಾರ (ಫೆಬ್ರುವರಿ 11) ಪ್ರಸ್ತಾಪಿಸಿದ್ದಾರೆ.
ಮಹಾ ವಿಕಾಸ್ ಅಗಾಡಿ ಸರ್ಕಾರದ ಪ್ರಸ್ತಾವನೆ! ಮಹಾರಾಷ್ಟ್ರದಲ್ಲಿ ಅಸ್ತಿತ್ವದಲ್ಲಿರುವ ಮಹಾ ವಿಕಾಸ್ ಅಗಾಡಿ (ಎಂವಿಎ) ಸರ್ಕಾರವು ಶುಕ್ರವಾರ 2022-23ರ ರಾಜ್ಯ ಬಜೆಟ್ ಅನ್ನು ಮಂಡಿಸಿದೆ. ಇಂಧನ ಬೆಲೆ ಏರಿಕೆಯ ನಡುವೆ ಮುಂಬೈ ಸೇರಿದಂತೆ ಪ್ರಮುಖ ನಗರಗಳಲ್ಲಿ ಕಾರ್ಪೊರೇಷನ್ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಈ ಕ್ರಮ ಘೋಷಿಸಲಾಗಿದೆ.
ನೈಸರ್ಗಿಕ ಅನಿಲದ ಮೇಲಿನ ಮೌಲ್ಯವರ್ಧಿತ ತೆರಿಗೆಯನ್ನು (ವ್ಯಾಟ್) ಸಿಎನ್ಜಿ ಮೇಲಿನ ಶೇಕಡಾ 13.5 ರಿಂದ ಶೇಕಡಾ 3 ಕ್ಕೆ ಇಳಿಸುವುದಾಗಿ ಸರ್ಕಾರ ಬಜೆಟ್ನಲ್ಲಿ ಘೋಷಿಸಿದೆ. ಇದರಿಂದ ನೈಸರ್ಗಿಕ ಅನಿಲದ ಬೆಲೆ ಇಳಿಕೆ ಆಗಲಿದ್ದು ಸುಮಾರು 3.2 ಲಕ್ಷ ವ್ಯಾಪಾರಿಗಳಿಗೆ ಪ್ರಯೋಜನವಾಗಲಿದೆ.
18 ಲಕ್ಷಕ್ಕೂ ಹೆಚ್ಚು ಕುಟುಂಬಕ್ಕೆ ಲಾಭ ಮುಂಬೈ ಮೆಟ್ರೋಪಾಲಿಟನ್ ಪ್ರದೇಶದಲ್ಲಿ ಹಲವಾರು ಆಟೋ, ಟ್ಯಾಕ್ಸಿ ಮತ್ತು ಬಸ್ ಮಾಲೀಕರು ಸೇರಿದಂತೆ 8 ಲಕ್ಷಕ್ಕೂ ಹೆಚ್ಚು CNG ಗ್ರಾಹಕರಿದ್ದಾರೆ ಮತ್ತು 3 ಲಕ್ಷಕ್ಕೂ ಹೆಚ್ಚು ಖಾಸಗಿ ಕಾರು ಬಳಕೆದಾರರು ಹಸಿರು ಇಂಧನವನ್ನು ಆರಿಸಿಕೊಂಡಿದ್ದಾರೆ. ಏಕೆಂದರೆ ಇದು ಪೆಟ್ರೋಲ್ ಮತ್ತು ಡೀಸೆಲ್ಗಿಂತ ಅಗ್ಗವಾಗಿದೆ. ಜೊತೆಗೆ ಪರಿಸರ ಸ್ನೇಹಿಯಾಗಿದೆ.
ಮುಂಬೈ ಮೆಟ್ರೋಪಾಲಿಟನ್ ಪ್ರದೇಶದಲ್ಲಿ PNG ಬಳಸುವ 18 ಲಕ್ಷ ಕುಟುಂಬಗಳಿವೆ. ನೈಸರ್ಗಿಕ ಅನಿಲದ ಮೇಲಿನ ವ್ಯಾಟ್ ಕಡಿತದಿಂದಾಗಿ ರಾಜ್ಯವು 800 ಕೋಟಿ ರೂಪಾಯಿಗಳ ಆದಾಯವನ್ನು ಕಡಿಮೆಯಾಗಲಿದೆ ಎಂದು ಮಹಾರಾಷ್ಟ್ರದ ಹಣಕಾಸು ಸಚಿವ ಮತ್ತು ಉಪಮುಖ್ಯಮಂತ್ರಿ ಅಜಿತ್ ಪವಾರ್ ತಮ್ಮ ಬಜೆಟ್ ಭಾಷಣದಲ್ಲಿ ಹೇಳಿದ್ದಾರೆ.
ಈ ಕ್ರಮವು CNG ಮತ್ತು PNG (ಪೈಪ್ಡ್ ಅಡುಗೆ ಅನಿಲ) ಗ್ರಾಹಕರಿಗೆ ಸ್ವಲ್ಪ ಮಟ್ಟಿಗಿನ ಖುಷಿ ತರಲಿದೆ ಎಂದು ಹೇಳಲಾಗಿದೆ. ಕಳೆದ ಒಂದು ವರ್ಷದಲ್ಲಿ ಸಿಎನ್ಜಿಯಲ್ಲಿ ರೂ 18 ಬೆಲೆ ಹೆಚ್ಚಳವಾಗಿತ್ತು. ಪ್ರಸ್ತುತ ಮಹಾರಾಷ್ಟ್ರದಲ್ಲಿ ನೈಸರ್ಗಿಕ ಅನಿಲವನ್ನು ಕೆಜಿಗೆ ರೂ 66 ಕ್ಕೆ ಮಾರಾಟ ಮಾಡಲಾಗುತ್ತಿದೆ. ಜೊತೆಗೆ ಇತ್ತೀಚೆಗೆ ಮಹಾರಾಷ್ಟ್ರದಾದ್ಯಂತ ಅಡುಗೆ ಅನಿಲದ ದರವೂ ಹೆಚ್ಚಳವಾಗಿದೆ. ಸದ್ಯ ಪೈಪ್ಡ್ ಅಡುಗೆ ಅನಿಲದ ಬೆಲೆಯು ಪ್ರತಿ ಯೂನಿಟ್ಗೆ 39.50 ರೂ. ಆಗಿದೆ.
ಅಡುಗೆ ಅನಿಲ ಮತ್ತು ನೈಸರ್ಗಿಕ ಅನಿಲದ ಮೇಲಿನ ಬೆಲೆ ಇಳಿಕೆಯು ಮಹಾರಾಷ್ಟ್ರದಲ್ಲಿ ಸದ್ಯ ಅಸ್ತಿತ್ವದಲ್ಲಿರುವ ಮೈತ್ರಿಕೂಟದ ಸರ್ಕಾರಕ್ಕೆ ಹೇಗೆ ವರದಾಯಕವಾಗುತ್ತದೆ ಎಂಬುದನ್ನು ಸಹ ಕಾದುನೋಡಬೇಕಿದೆ.
Published by:guruganesh bhat
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ